ಬಾಯಲ್ಲಿ ಬೆರಳಿಟ್ಟರೆ ಚೀಪಲು ಗೊತ್ತಿಲ್ಲದ ಆರ್ಯನ್ ಬಗ್ಗೆ ಮುಫ್ತಿಗೆ ಸಂಕಟ!!
ಈ ದೇಶದಲ್ಲಿ ರಾಜಕೀಯವಾಗಿ ಹೆಚ್ಚು ಚಲಾವಣೆಯಲ್ಲಿರುವ ಶಬ್ದ ಎಂದರೆ ಅದು ರೈತ ಎನ್ನುವಂತಾಗಿದೆ. ರೈತರ ಹೆಸರಿನಲ್ಲಿ ಪ್ರತಿಭಟನೆಗಳಾದವು. ಅದರಲ್ಲಿ ಖಾಲಿಸ್ತಾನದ ಮುಖಂಡರು ಸೇರಿಕೊಂಡರು. ಪೊಲೀಸರ ಮೇಲೆ ತಲವಾರುಗಳಿಂದ ಹಲ್ಲೆ ನಡೆಸಲಾಯಿತು. ರೈತರ ಪ್ರತಿಭಟನೆಗಳಾದಾಗ ನಮ್ಮ ರಾಜ್ಯದಲ್ಲಿಯೇ ಗೋಲಿಬಾರ್ ನಡೆಸಲಾಯಿತು. ರೈತರ ಹಸಿರು ಶಾಲು ಹಾಕಿ ಮುಖಂಡರು ಮೊಸಳೆ ಕಣ್ಣೀರು ಸುರಿಸಿದರು. ರೈತರನ್ನು ದಾರಿ ತಪ್ಪಿಸಿ ಬಂದ್ ಗೆ ಕರೆ ನೀಡಲಾಯಿತು. ನಿಜವಾದ ರೈತ ಇವತ್ತಿಗೂ ಹೊಲ ಗದ್ದೆಯಲ್ಲಿ ದುಡಿಯುತ್ತಿದ್ದಾನೆ. ಅವನಿಗೆ ತನ್ನ ಪರಿಶ್ರಮದ ಮೇಲೆ ನಂಬಿಕೆ ಇದೆ. ಇನ್ನು ಕೆಲವು ರಾಜಕೀಯ ಪಕ್ಷಗಳಿಗೆ ರೈತರ ಅಮಾಯಕತೆಯ ಮೇಲೆ ನಂಬಿಕೆ ಇದೆ. ಅಂತಹ ಒಂದು ಘಟನೆ ಈಗ ಲಕೀಂಪುರದಲ್ಲಿ ನಡೆದಿದೆ. ರೈತರ ಮೇಲೆ ಜೀಪು ಹಾಯಿಸಿದಂತಹ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ಆರೋಪಿಗಳ ಬಂಧನ, ನ್ಯಾಯಾಲಯದಲ್ಲಿ ಕೇಸ್ ಎಲ್ಲವೂ ನಡೆಯುತ್ತಿದೆ. ಲಕೀಂಪುರದಲ್ಲಿ ಯಾರದ್ದು ಸರಿ ಇದೆ ಮತ್ತು ಯಾರದ್ದು ತಪ್ಪಿದೆ ಎಂದು ನಾನು ಹೇಳಲು ಹೊರಟಿಲ್ಲ.
ಆದರೆ ಈ ವಿಷಯ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯನ್ನು ಒಂದು ಬಿಟ್ಟು ಬೇರೆ ಎಲ್ಲ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸಲು ನಿತ್ಯ ದಂಡಯಾತ್ರೆ ಮಾಡುತ್ತಿವೆಯಲ್ಲ, ಅದಕ್ಕೆ ಏನು ಹೇಳುವುದು. ಹಾಗಂತ ಮೃತ ರೈತರ ಮನೆಗಳಿಗೆ ಯಾರೂ ಹೋಗಬಾರದು, ಯಾವ ರಾಜಕೀಯ ಪಕ್ಷ ಕೂಡ ನೈತಿಕ, ಆರ್ಥಿಕ ಬೆಂಬಲ ಕೊಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೈತರ ಪರವಾಗಿ ಇದ್ದೇವೆ ಎಂದು ಸಾಬೀತುಪಡಿಸಲು ಹೆಣಗುವ ರೀತಿಯಿದೆಯಲ್ಲ ಅದೇ ಅಸಹ್ಯ. ಒಂದು ವೇಳೆ ಸತ್ತವರು ಇಲ್ಲಿ ಅಮಾಯಕರೇ ಆಗಿದ್ದಲ್ಲಿ ಅಲ್ಲಿ ಮೊನ್ನೆ ಕಾಶ್ಮೀರದಲ್ಲಿ ಶಾಲೆಯೊಂದಕ್ಕೆ ನುಗ್ಗಿದ ಉಗ್ರಗಾಮಿಗಳು ಶಿಕ್ಷಕಿಯರನ್ನು ಕರೆದು ನೀವು ಹಿಂದೂಗಳಾ ಎಂದು ಗುರುತಿಸಿ, ಮುಸ್ಲಿಂ ಶಿಕ್ಷಕಿಯರನ್ನು ಪ್ರತ್ಯೇಕ ನಿಲ್ಲಿಸಿ ಅವರ ಕಣ್ಣೇದುರೇ ಹಿಂದೂ ಶಿಕ್ಷಕಿಯರನ್ನು ಶೂಟ್ ಮಾಡಿ ಮಾರಣ ಹೋಮ ಮಾಡಿದರಲ್ಲ, ಅಂತಹ ಶಿಕ್ಷಕಿಯರ ಮನೆಗೆ ಎಷ್ಟು ರಾಜಕೀಯ ಪಕ್ಷಗಳು ಹೋಗಿವೆ. ಯಾಕೆ, ಶಿಕ್ಷಕರು ಮನುಷ್ಯರಲ್ಲವೇ? ಅಲ್ಲಿಯೂ ಅಮಾಯಕ ನಾಗರಿಕರನ್ನು ಭಯೋತ್ಪಾದಕರು ಕೊಲ್ಲುತ್ತಿದ್ದಾರಲ್ಲ, ಅಲ್ಲಿ ಯಾಕೆ ಮೌನ? ಇನ್ನು ಕಾಶ್ಮೀರಿ ಕಣಿವೆಯಲ್ಲಿ ನಿತ್ಯ ಉಗ್ರಗಾಮಿಗಳು ನಮ್ಮ ಯೋಧರ ಮೇಲೆ ಮುಗಿಬಿದ್ದು ಹತ್ಯೆ ಮಾಡುತ್ತಿದ್ದದ್ದು ಯಾವ ವಿಪಕ್ಷಗಳಿಗೂ ಕಾಣುತ್ತಿಲ್ಲವೇ? ಈ ಸಂದರ್ಭದಲ್ಲಿ ದೇಶದ ಆಡಳಿತ ಪಕ್ಷಕ್ಕೆ ನೈತಿಕ ಬೆಂಬಲ ಕೊಟ್ಟು ಶತ್ರು ರಾಷ್ಟ್ರಕ್ಕೆ ಬುದ್ಧಿ ಕಲಿಸಲು ಯಾವ ಪಕ್ಷ ತೀರ್ಮಾನಿಸಿದೆ. ಇಲ್ಲ, ಯಾಕೆಂದರೆ ಕಾಶ್ಮೀರದಲ್ಲಿ ಸದ್ಯ ಚುನಾವಣೆ ಇಲ್ಲ. ಇನ್ನು ಯೋಧರು ವೋಟ್ ಬ್ಯಾಂಕ್ ಅಲ್ಲ. ಶಿಕ್ಷಕರು ರೈತರಷ್ಟು ಸಂಖ್ಯೆಯಲ್ಲಿ ಇಲ್ಲ. ಈಗ ಏನಿದ್ದರೂ ಉತ್ತರ ಪ್ರದೇಶದ ಜಪ. ಅದಕ್ಕಾಗಿ ಪ್ರಿಯಾಂಕಾ ಪೊರಕೆ ಹಿಡಿಯಲು ಕೂಡ ರೆಡಿ. ಇನ್ನು ಹಣೆಗೆ ಅಡ್ಡನಾಮ ಎಳೆಯಲು ಕೂಡ ತಯಾರು. ಈ ಚುನಾವಣೆಗಾಗಿ ಬಹುಶ: ಹೆಚ್ಚುವರಿ ನೈಲಾನ್ ಸೀರೆಗಳನ್ನು ಖರೀದಿ ಮಾಡಿರಬಹುದು. ಯಾಕೆಂದರೆ ಇಲ್ಲದಿದ್ದರೆ ಮಾಮೂಲಾಗಿ ಜೀನ್ಸ್ ಪ್ಯಾಂಟ್, ಶರ್ಟ್, ಶೂ ಹಾಕಿ ಅಭ್ಯಾಸವಾಗಿರುವುದರಿಂದ ಈಗ ಚುನಾವಣೆ ತನಕ ಸೀರೆಗಳು ಎಕ್ಸಟ್ರಾ ಬೇಕಾಗುತ್ತದೆ.
ಇನ್ನು ಈ ಮುಫ್ತಿ ಇದ್ದಾರಲ್ಲ, ಅವರಿಗೆ ಎಲ್ಲದರಲ್ಲಿಯೂ ಧರ್ಮ ಹುಡುಕುವ ಚಟ. ಆರ್ಯನ್ ಖಾನ್ ಎನ್ನುವ ಪರಮ ಅಮಾಯಕ, ಬಾಯಲ್ಲಿ ಬೆರಳಿಟ್ಟರೂ ಕಚ್ಚಲು ಗೊತ್ತಿಲ್ಲದ ಒಂದು ಮಗು ಜೈಲಿನಲ್ಲಿ ಇದೆಯಲ್ಲ, ಅದು ಖಾನ್ ಎನ್ನುವ ಕಾರಣಕ್ಕೆ ಜೈಲಿಗೆ ಹಾಕಲ್ಪಟ್ಟಿದೆ ಎನ್ನುವುದು ಮುಫ್ತಿ ವಾದ. ಮೈ ನೇಮ್ ಈಸ್ ಖಾನ್, ಐ ಎಂ ನಾಟ್ ಟೆರಿರಿಸ್ಟ್ ಎಂದು ಶಾರುಖ್ ಸಿನೆಮಾ ಒಂದನ್ನು ಮಾಡಿದ್ದರು. ಈಗ ಮುಫ್ತಿ ಅದನ್ನು ಬದಲಾಯಿಸಿ ಹೀ ಈಸ್ ಖಾನ್, ಹೀ ಈಸ್ ನಾಟ್ ಡ್ರಗಿಸ್ಟ್ ಎಂದು ಸಿನೆಮಾ ಮಾಡಲಿ. ಯಾರು ಬೇಡ ಎಂದವರು. ಹಾಗಂತ ಈ ದೇಶದ ಕಾನೂನಿನ ಬಗ್ಗೆ ಹೀಗೆ ಕೇವಲವಾಗಿ ಮಾತನಾಡುವುದು ಅವರಿಗೆ ಶೋಭೆ ತರಲ್ಲ. ಡ್ರಗ್ ಸೇವಿಸುವವರಲ್ಲಿ ಕೇವಲ ಮುಸಲ್ಮಾನರೇ ಇದ್ದಾರೆ ಎಂದು ಯಾರೂ ಹೇಳುವುದಿಲ್ಲ. ಅದರಲ್ಲಿ ಜಾತಿ, ಧರ್ಮದ ಪ್ರಶ್ನೆ ಬರಲ್ಲ. ಆರ್ಯನ್ ಖಾನ್ ಜೊತೆ ಬಂಧಿತರಾದವರಲ್ಲಿ ಹಿಂದೂಗಳು ಕೂಡ ಇದ್ದಾರೆ. ಆದರೆ ಆರ್ಯನ್ ಈ ದೇಶದ ಖ್ಯಾತ ಸಿನೆಮಾ ನಟನೊಬ್ಬನ ಪುತ್ರ ಎನ್ನುವ ಕಾರಣಕ್ಕೆ ಚಾಲ್ತಿಯಲ್ಲಿದ್ದಾನೆ, ಅಷ್ಟೇ. ಅದು ಬಿಟ್ಟರೆ ಆರ್ಯನ್ ನಿತ್ಯ ಮಾಧ್ಯಮಗಳಲ್ಲಿ ಬರುವಷ್ಟು ಘನಂದಾರಿ ಕೆಲಸವನ್ನು ಮಾಡಿಲ್ಲ. ಮಾಡಿದ್ದು ಬರಿ ಮನೆಹಾಳು ಕೆಲಸ ಮಾತ್ರ. ಅದು ಬಿಟ್ಟು ಈ ಮುಫ್ತಿ ಈ ಪ್ರಕರಣದಲ್ಲಿ ತನ್ನ ಬುದ್ಧಿವಂತಿಕೆಯನ್ನು ತೋರಿಸಲು ಹೊರಟಿರುವುದೇ ಆಶ್ಚರ್ಯ. ಅಷ್ಟಕ್ಕೂ ಒಂದು ವೇಳೆ ಮೇಲೆ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಆರ್ಯನ್ ಬಂಧನವೇ ಆಗುತ್ತಿರಲಿಲ್ಲ ಎಂದು ಮುಫ್ತಿಯಂತವರ ಹೇಳಿಕೆಯ ಹಿಂದಿರುವ ಮರ್ಮ ಇರಬಹುದು. ಯಾಕೆಂದರೆ ಕಾಂಗ್ರೆಸ್ಸಿಗೆ ಮಕ್ಕಳ ಭವಿಷ್ಯ ಏನು ಬೇಕಾದರೆ ಆಗಲಿ, ಡ್ರಗ್ಸ್ ವಿಷಯದಲ್ಲಿ ಅದನ್ನು ಮೂಲದಿಂದಲೇ ಕಿತ್ತು ಎಸೆಯಬೇಕೆನ್ನುವ ಯಾವ ಇಚ್ಚಾಶಕ್ತಿಯೂ ಇರಲಿಲ್ಲ. ಆದರೆ ಬಿಜೆಪಿಗೆ ಹಾಗಲ್ಲ. ಈ ದೇಶದ ಮುಂದಿನ ಭವಿಷ್ಯ ಆಗಿರುವ ಯುವಶಕ್ತಿಗಳು ಈ ಡ್ರಗ್ಸ್ ಬಲೆಗೆ ಬೀಳಬಾರದು ಎನ್ನುವ ಗುರಿ ಇದೆ. ಅದನ್ನು ಸೇವಿಸುವವರಿಗೆ ತಿಳಿ ಹೇಳಬೇಕೆನ್ನುವ ಮನಸ್ಸಿದೆ. ಆ ಹಾದಿಯಲ್ಲಿ ಖಾನ್ ಬರಲಿ ಕಾಮತ್ ಬರಲಿ. ಅವರಿಗೆ ಎಲ್ಲಾ ಒಂದೇ!!
Leave A Reply