ಸತ್ಯ ಹೇಳಿದ ಕಾರಣ ಸಲೀಂ ಅವರನ್ನು ಡಿಕೆಶಿ ಕ್ಷಮಿಸಬಹುದಿತ್ತು!!
ಡಿಕೆ ಶಿವಕುಮಾರ್ ಹೇಳಿದ್ದು ಒಂದು ಮಾತು ರಾಜಕೀಯದಲ್ಲಿ ಪ್ರಸ್ತುತವಾಗಿದೆ. ಅದೇನೆಂದರೆ ರಾಜಕೀಯದಲ್ಲಿ ಚಪ್ಪಾಳೆ ಹೊಡೆಯುವವರು ಇರುತ್ತಾರೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಜೈಕಾರ ಕೂಗುವವರು ಇರುತ್ತಾರೆ. ದಿಕ್ಕಾರ ಕೂಗುವವರು ಇರುತ್ತಾರೆ. ಅದು ನಿಜ. ಅದು ಮಹಾತ್ಮ ಗಾಂಧಿಯವರಿಂದ ಯಡಿಯೂರಪ್ಪನವರ ತನಕ ಎಲ್ಲರಿಗೂ ಆಗಿದೆ. ಆದ್ದರಿಂದ ತಮ್ಮ ವಿರುದ್ಧ ಪರೋಕ್ಷವಾಗಿ ಚಪ್ಪಲಿ ಎಸೆದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ, ಮಾಜಿ ಸಂಸದ, ವಕ್ತಾರ ಉಗ್ರಪ್ಪ ಅವರ ನಿರ್ಲಕ್ಷ್ಯದಿಂದ ಆಗಿರುವ ಮುಜುಗರವನ್ನು ಸರಿಪಡಿಸಲು ಡಿಕೆಶಿ ಹೇಳಿದ ಮಾತು ಅರ್ಥಗರ್ಭಿತ. ಅದು ಒಕೆ. ಅವರಿಬ್ಬರು ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದು ತಪ್ಪಾ, ಸರಿಯಾ ಎನ್ನುವುದನ್ನು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ತೀರ್ಮಾನಿಸುತ್ತದೆ. ವಿಷಯ ಅದಲ್ಲ. ವಿಷಯ ಇರುವುದು ಸಲೀಂ ಗುಟ್ಟಾಗಿ ಹೇಳಿರುವುದು ನಿಜಕ್ಕೂ ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಶಾಹಿ ರಾಜಕಾರಣಿಗಳ ಕಥೆ ಹೇಳುತ್ತದೆ. ಪ್ರಪಂಚದಲ್ಲಿ ಅತೀ ಹೆಚ್ಚು ಸತ್ಯ ಹೊರಗೆ ಬರುವುದು ಬಾರಿನಲ್ಲಿ ಎನ್ನುವ ಮಾತಿದೆ. ಹಾಗೆ ರಾಜಕಾರಣಿಗಳು ಅತೀ ಹೆಚ್ಚು ಸುಳ್ಳು ಹೇಳುವುದು ಮಾಧ್ಯಮಗಳ ಮೈಕಿನ ಎದುರು ಎನ್ನುವುದು ಕೂಡ ಅಷ್ಟೇ ಸತ್ಯ.
ಹಾಗಾದರೆ ರಾಜಕಾರಣಿಗಳ ಸತ್ಯ ಹೊರಗೆ ಬರುವುದು ಯಾವಾಗ? ಇಂತಹ ಸಂದರ್ಭದಲ್ಲಿ. ಮೈಕು, ಕ್ಯಾಮೆರಾಗಳು ಇರುತ್ತವೆ. ಆದರೆ ಆನ್ ಆಗಿದೆ ಎಂದು ಗೊತ್ತಿರುವುದಿಲ್ಲ. ಹೀಗೆ ಸಲೀಂ, ಉಗ್ರಪ್ಪ ಮಾತನಾಡಿ ಸಿಕ್ಕಿಬಿದ್ದಿರುತ್ತಾರೆ. ಅವರು ಮಾತನಾಡಿದ ಒಂದೊಂದೇ ವಿಷಯದ ಬಗ್ಗೆ ನೋಡೋಣ. ಡಿಕೆಶಿವಕುಮಾರ್ ಕಾಮಗಾರಿಗಳಲ್ಲಿ ಕಮೀಷನ್ ತೆಗೆದುಕೊಳ್ಳುತ್ತಾರೆ ಎನ್ನುವ ಅರ್ಥದ ಮಾತುಗಳು ಹೊರಬಂದಿದೆ. ಹಾಗೆ ಇವರ ಹುಡುಗರ ಹತ್ತಿರ 50-100 ಕೋಟಿ ಇದೆ. ಇವರ ಬಳಿ ಎಷ್ಟಿರಬಹುದು ಎಂದು ಸಲೀಂ-ಉಗ್ರಪ್ಪ ಲೆಕ್ಕ ಹಾಕಲು ಶುರು ಮಾಡಿದಂತಿದೆ. ಮೊನ್ನೆಯಷ್ಟೇ ಡಿಕೆಶಿ ಸಲಗ ಸಿನೆಮಾದ ಕಾರ್ಯಕ್ರಮದಲ್ಲಿ ತಾವು ಹೊಸದಾಗಿ 27 ಸಿನೆಮಾ ಮಂದಿರಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬರುತ್ತದೆ? ಈಡಿ, ಸಿಬಿಐ ರೇಡ್ ಮಾಡಿದ ಬಳಿಕ ತಿಹಾರ್ ಜೈಲಿನಲ್ಲಿ ಇರುವಾಗ ಇದೇ ಕಾಂಗ್ರೆಸ್ಸಿಗರು ಅದು ರಾಜಕೀಯ ಪ್ರೇರಿತ ಎಂದಿದ್ದರಲ್ಲ, ಈಗ ಏನು ಹೇಳುತ್ತಾರೆ? ಅವರದ್ದೇ ಪಕ್ಷದವರು ಕೋಟಿಯ ಬಗ್ಗೆ, ಕಮೀಷನ್ ಬಗ್ಗೆ, ಸ್ಕ್ಯಾಮ್ ಬಗ್ಗೆ ಮಾತನಾಡುತ್ತಿರುವುದು ತಮ್ಮದೇ ರಾಜ್ಯಾಧ್ಯಕ್ಷನ ಬಗ್ಗೆ ಅಲ್ವಾ? ಒಂದು ವೇಳೆ ಉಗ್ರಪ್ಪ ಅಥವಾ ಸಲೀಂ ಕಾಂಗ್ರೆಸ್ಸಿನಿಂದ ಬೇಸರಗೊಂಡು ಬಂಡಾಯಗೊಂಡು ಪಕ್ಷದಿಂದ ಹೊರಗೆ ಬಂದು ಈ ರೀತಿ ಅನುಮಾನ ವ್ಯಕ್ತಪಡಿಸಿದ್ದರೆ ನಂಬುವುದು ಬೀಡುವುದು ಬೇರೆ ವಿಷಯ. ಆದರೆ ಈಗ ಹಾಗಲ್ಲ. ಅವರು ಮುಕ್ತಮನಸ್ಸಿನಿಂದಲೇ ತಮ್ಮ ಒಳಗಿರುವ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಮಾಜಿ ಸಂಸದರಾಗಿರುವ ಉಗ್ರಪ್ಪ ನಗುವ ಮೂಲಕ ಹೌದೆಂದು ಒಪ್ಪಿಕೊಂಡಿದ್ದಾರೆ. ಇನ್ನು ತಕ್ಕಡಿ ಏಳುತ್ತಿಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಒಪ್ಪಿಕೊಂಡಿದ್ದಾರೆ.
ಡಿಕೆಶಿ ಬಳಿ ಏನೇ ಹಣ ಇರಲಿ, ಅಂತಸ್ತು ಇರಲಿ ಅವರು ಭ್ರಷ್ಟಾಚಾರದ ವಿಷಯದಲ್ಲಿ ಜೈಲಿಗೆ ಹೋಗಿ ಬಂದವರು. ಅವರ ಮಗಳ ಹೆಸರಿನಲ್ಲಿ ನೂರಾರು ಕೋಟಿ ಆಸ್ತಿ ಇದೆ. ಅದೇನು ಆಕೆ ದುಡಿದು ಸಂಪಾದಿಸಿದ್ದಾ? ಅದರಲ್ಲಿಯೇ ಗೊತ್ತಾಗುವುದಿಲ್ಲವೇ? ಆ ವಿಷಯದಲ್ಲಿ ಸಿದ್ಧುವಿಗೆ ಅಂತಹ ಏನೂ ಕಳಂಕ ಇನ್ನು ಅಂಟಿಕೊಂಡಿಲ್ಲ. ಆದ್ದರಿಂದ ಇವತ್ತಿಗೂ ಕಾಂಗ್ರೆಸ್ ಹೈಕಮಾಂಡ್ ಸಿದ್ದು ಮಾತನ್ನು ಕೇಳುವಷ್ಟು ಡಿಕೆಶಿಯನ್ನು ನಂಬುವುದಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಆದರೆ ನಾವು ತುಂಬಾ ಪ್ರಯತ್ನ ಮಾಡಿ ಹೈಕಮಾಂಡನ್ನು ಒಪ್ಪಿಸಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಎಂದು ಉಗ್ರಪ್ಪ ಅದೇ ಸಂಭಾಷಣೆಯಲ್ಲಿ ಒಂದು ಕಡೆ ಹೇಳುತ್ತಾರೆ. ಅದರ ಅರ್ಥ ಡಿಕೆಶಿ ಅತ್ತು ಕರೆದು ಆದ ಅಧ್ಯಕ್ಷರು. ಕಾಂಗ್ರೆಸ್ಸಿನ ಇವತ್ತಿನ ಪರಿಸ್ಥಿತಿಯಲ್ಲಿ ಹೈಕಮಾಂಡಿಗೆ ಕೋಟಿ ಖರ್ಚು ಮಾಡಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟುವಂತಹ ಮುಖ ಬೇಕು. ಯಾಕೆಂದರೆ ದೆಹಲಿಯಿಂದ ಬಿಡಿಗಾಸು ಬರುವ ಸಾಧ್ಯತೆ ಇಲ್ಲ. ಹಾಗಿರುವಾಗ ಪಕ್ಷಕ್ಕೂ ಹಣ ಕೊಟ್ಟು ಇಲ್ಲಿ ಕೂಡ ಹಣ ದಂಡಿಯಾಗಿ ಹಣ ಖರ್ಚು ಮಾಡುವ ವ್ಯಕ್ತಿ ಕಾಂಗ್ರೆಸ್ಸಿಗೂ ಬೇಕಿತ್ತು. ಆ ನಿಟ್ಟಿನಲ್ಲಿ ಅವರಿಗೆ ಡಿಕೆಶಿ ಸೂಕ್ತವಾಗಿ ಕಾಣಿಸಿರಬಹುದು. ಇನ್ನು ಹಲವು ನಾಯಕರು ರಾಜ್ಯಾದ್ಯಂತ ಓಡಾಡಲು ಆರೋಗ್ಯಕರವಾಗಿ ಇಲ್ಲದೇ ಇರುವುದು ಮತ್ತು ಹಣವನ್ನು ಖರ್ಚು ಮಾಡಲು ಮೇಲೆ ಕೆಳಗೆ ನೋಡುವುದು ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಡಿಕೆಶಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ.
ಇನ್ನು ಡಿಕೆಶಿ ತೊದಲುತ್ತಾರೆ ಎನ್ನುವ ವಿಷಯ. ಡಿಕೆಶಿ ಒಂದಿಷ್ಟು ಸಮಚಿತ್ತವನ್ನು ಹೊಂದುವ ಅವಶ್ಯಕತೆ ಕೂಡ ಇದೆ. ಒಂದು ಕಡೆ ಅವರು ಕುಮಾರಸ್ವಾಮಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಿದ್ಧುವನ್ನು ಟಾರ್ಗೆಟ್ ಮಾಡುವಂತೆ ಕುಮಾರಸ್ವಾಮಿಯವರನ್ನು ಒಪ್ಪಿಸಿರಬಹುದು. ಹಾಗಂತ ಭಾರತೀಯ ಜನತಾ ಪಾರ್ಟಿಯನ್ನು ಅವರು ಎದುರಿಸುವುದು ಅಷ್ಟು ಸುಲಭವಲ್ಲ. ಈ ನಡುವೆ ಸಿದ್ದು ರಾಷ್ಟ್ರೀಯ ರಾಜಕಾರಣಕ್ಕೆ ಹೋಗಲ್ಲ ಎಂದು ಹೇಳಿರುವುದರಿಂದ ಮುಂದೆ ಅಧಿಕಾರಕ್ಕೆ ಬಂದರೂ ಸಿಎಂ ಸ್ಥಾನ ಡೌಟು ಎನ್ನುವುದು ಗ್ಯಾರಂಟಿಯಾಗಿರುವುದರಿಂದ ಡಿಕೆಶಿ ಈಗ ಒಂದಿಷ್ಟು ಹೆಚ್ಚು ಮಾನಸಿಕ ಕ್ಷೊಭೆಗೆ ಒಳಗಾಗಿದ್ದಾರೆ. ಬಹುಶ: ಅದು ನಿಲ್ಲಬೇಕಾದರೆ ಅವರ ಮತ್ತು ಸಿದ್ದು ಜಗಳ ನಿಲ್ಲಬೇಕು. ಆದರೆ ಅದು ನಿಲ್ಲಲ್ಲ. ಸಿದ್ದು ಎರಡನೇ ಬಾರಿ ಸಿಎಂ ಆಗಲು ತಯಾರಾಗಿರುವುದರಿಂದ ಮತ್ತು ಅವರಿಗೆ ಅಲ್ಪಸಂಖ್ಯಾತರ, ಕುರುಬರ ವೋಟ್ ಬ್ಯಾಂಕ್ ಗಟ್ಟಿಯಿರುವುದರಿಂದ ಡಿಕೆಶಿ ಅದೃಷ್ಟವನ್ನು ನಂಬಿ ಈ ಬಾರಿ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಅಧಿಕಾರದ ಸನಿಹಕ್ಕೆ ಬಂದರೂ ಕುಮಾರಸ್ವಾಮಿ ಜೊತೆ ಮೈತ್ರಿ ಬೇಡಾ ಎಂದು ಸಿದ್ಧು ಹಟಕ್ಕೆ ಕುಳಿತುಬಿಟ್ಟರೆ ಅಧಿಕಾರ ಮತ್ತೆ ಮರೀಚಿಕೆಯಾಗಲಿದೆ. ಈ ಎಲ್ಲ ವಿಷಯ ಇರುವುದರಿಂದ ಅಧಿಕಾರದ ದಾಹವನ್ನು ಬಿಟ್ಟು ಮೊದಲು ಅಧಿಕಾರಕ್ಕೆ ಬರಲು ಶುದ್ಧ ಮನಸ್ಸಿನಿಂದ ಎಲ್ಲರೂ ಯಾವ ಪಕ್ಷದಲ್ಲಿ ಕೆಲಸ ಮಾಡುತ್ತಾರೋ ಆ ಪಕ್ಷ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿಯಲ್ಲಿ ಕೂಡ ಇಂತಹ ಘಟನೆ ಹಿಂದೆ ಆಗಿಲ್ಲ ಎಂದಲ್ಲ. ಆಗಿದೆ. ಮಾಧ್ಯಮದವರು ಇರುವಾಗಲೇ ವೇದಿಕೆಯಲ್ಲಿ ಯಡ್ಡಿ-ಅನಂತ್ ಕುಮಾರ್ ಹಣದ ಬಗ್ಗೆ ಮಾತನಾಡಿದ್ದರು. ಈಗ ಡಿಕೆಶಿ ಸರದಿ. ಜನ ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಆದರೆ ತಾವು ಮುಸ್ಲಿಂ ಬಾಂಧವರ ಬ್ರದರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಡಿಕೆಶಿ ತಮ್ಮ ವಿರುದ್ಧ ಮಾತನಾಡಿದ್ರು ಎನ್ನುವ ಒಂದೇ ಕಾರಣಕ್ಕೆ ಸಲೀಂ ಅವರಂತಹ ಮುಸ್ಲಿಂ ಮುಖಂಡನನ್ನು ಕನಿಷ್ಟ ನೋಟಿಸ್ ಕೂಡ ಕೊಡದೇ ಉಚ್ಚಾಟಿಸಬಾರದಿತ್ತು!
Leave A Reply