ಕುಂಬಳಕಾಯಿ ಕಳ್ಳ ಎಂದದ್ದಕ್ಕೆ ಚೆನ್ನಿ ಹೆಗಲು ಮುಟ್ಟಿಕೊಂಡದ್ದೇಕೆ?
ಕುಂಬಳಕಾಯಿ ಕಳ್ಳ ಎಂದರೆ ಪಂಜಾಬಿನ ಹೊಸ ಮುಖ್ಯಮಂತ್ರಿ ಚೆನ್ನಿ ಹೆಗಲು ಮುಟ್ಟಿಕೊಂಡು ನೋಡಿದ್ದಾರೆ. ಅಷ್ಟಕ್ಕೂ ಕುಂಬಳಕಾಯಿ ಕಳ್ಳ ಎಂದು ಕರೆದದ್ದು ಕೇಂದ್ರದ ಗೃಹಸಚಿವಾಲಯ. ಅವರು ಹೇಳಿದಿಷ್ಟೇ, ನಮ್ಮ ದೇಶದಲ್ಲಿ ಗಡಿಭಾಗದಲ್ಲಿರುವ ರಾಜ್ಯಗಳಾದ ಪಂಜಾಬ್, ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ಒಂದು ನಿಯಮ ಬದಲಾವಣೆ ಮಾಡಲು ಇದೆ. ಇಲ್ಲಿಯ ತನಕ ಗಡಿ ಭದ್ರತಾ ಪಡೆಯ ಯೋಧರು ಈ ರಾಜ್ಯಗಳ ಗಡಿಯಿಂದ ಹದಿನೈದು ಕಿಲೋ ಮೀಟರ್ ಒಳಗೆ ತನಕ ಬರುವ ಅವಕಾಶ ಕೊಡಲಾಗಿತ್ತು. ಅಷ್ಟಕ್ಕೂ ಈ ವ್ಯವಸ್ಥೆ ಯಾಕೆಂದರೆ ಈ ಗಡಿ ರಾಜ್ಯಗಳಿಗೆ ಬೇರೆ ದೇಶಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಡ್ರಗ್ಸ್ ಸಹಿತ ವಿದೇಶಿ ವ್ಯಕ್ತಿಗಳು ಬಂದು ಆ ರಾಜ್ಯಗಳ ಶಾಂತಿ, ಸುವ್ಯವಸ್ಥೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಯಲ್ಲಿದೆ. ತಮಗೆ ಸಿಕ್ಕಿರುವ ಈ ಹದಿನೈದು ಕಿಲೋಮೀಟರ್ ಪರಿಧಿಯಲ್ಲಿ ಗಡಿ ಭದ್ರತಾ ಪಡೆಯ ಯೋಧರು ಎಲ್ಲಿಯಾದರೂ ತಮಗೆ ಅನುಮಾನ ಬಂದಲ್ಲಿ ಯಾವುದೇ ಹಿಂಜರಿಕೆ ಅಥವಾ ಕಾನೂನು ತೊಡಕು ಇಲ್ಲದೇ ಸೀದಾ ಆ ಕಟ್ಟಡದ ಒಳಗೆ ನುಗ್ಗಿ ಪರಿಶೀಲನೆ ಮಾಡಬಹುದಾಗಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಯನ್ನು ಕರೆದು ವಿಚಾರಣೆ ಮಾಡಬಹುದಾಗಿದೆ. ಇದಕ್ಕೆ ಆ ರಾಜ್ಯದ ಯಾವುದೇ ಸರಕಾರ ಅಥವಾ ಅಧಿಕಾರಿ ವಿರೋಧ ವ್ಯಕ್ತಪಡಿಸುವಂತಿಲ್ಲ. ಇದು ನಿಜಕ್ಕೂ ಒಳ್ಳೆಯ ನಿಯಮ. ಅಷ್ಟಕ್ಕೂ ಗಡಿ ಭದ್ರತಾ ಯೋಧರು ನಮ್ಮದೇ ದೇಶದವರಲ್ಲವೇ? ಅವರಿಗೆ ಗಡಿಯನ್ನು ಒಪ್ಪಿಸಿ ಆಯಾ ರಾಜ್ಯಗಳು ಆಡಲಿತ ನಡೆಸಬಹುದಲ್ಲ. ಆದರೆ ಪಂಜಾಬಿನ ಹೊಸ ಸಿಎಂಗೆ ಇದರಿಂದ ತೊಂದರೆಯಾಗಿದೆ.
ಅವರಿಗೆ ಈ ಯೋಧರು ಹದಿನೈದು ಕಿಲೋಮೀಟರ್ ತನಕ ಒಳಗೆ ಬರುವುದೇ ಮನಸ್ಸಿರಲಿಲ್ಲ. ಹಾಗಿರುವಾಗ ಇನ್ನು ಮುಂದೆ ಈ ಯೋಧರು 50 ಕಿಲೋ ಮೀಟರ್ ತನಕ ಒಳಗೆ ಹೋಗಬಹುದು ಎಂದು ಕೇಂದ್ರ ಗೃಹ ಇಲಾಖೆ ಹೇಳಿರುವುದು ಟೆನ್ಷನ್ ತಂದಿದೆ. ಅದಕ್ಕಾಗಿ ಇಂತಹ ನಿಯಮ ಬರುತ್ತಿದ್ದಂತೆ ಚೆನ್ನಿ ಸಾಹೇಬ್ರು ತಮ್ಮ ಮನೆಯ ಹಿತ್ತಲಲ್ಲಿ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ. ಇದು ತಮ್ಮ ರಾಜ್ಯದ ಮೇಲೆ ದಾಳಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಇದರಿಂದ ಅವರು ಪರೋಕ್ಷವಾಗಿ ಏನು ಸಾಧಿಸಲು ಹೊರಟಿದ್ದಾರೆ ಎನ್ನುವುದು ಈಗ ಉಳಿದಿರುವ ಪ್ರಶ್ನೆ.ಅಷ್ಟಕ್ಕೂ ಕೇಂದ್ರ ಗೃಹ ಇಲಾಖೆ ಈ ಹಿಂದಿನ 15 ಕಿಲೋ ಮೀಟರ್ ಪರಿಧಿಯನ್ನು 50 ಕಿಲೋ ಮೀಟರ್ ತನಕ ಯಾಕೆ ವಿಸ್ತರಿಸಿತು ಎನ್ನುವುದನ್ನು ಮೊದಲು ನೋಡೋಣ. ಅಕ್ರಮ ಶಸ್ತ್ರಾಸ್ತ್ರ, ಡ್ರಗ್ಸ್, ಇನ್ಯಾವುದೇ ಅಕ್ರಮ ವಸ್ತು ಈ ರಾಜ್ಯದೊಳಗೆ ಸ್ಮಂಗ್ಲಿಂಗ್ ಆಗಿ ಈ ಹಿಂದೆ ಅಲ್ಲಿನ ಗಡಿ ಜಿಲ್ಲೆಯಲ್ಲಿ ಸ್ಮಂಗ್ಲರ್ಸ್ ಮಾಡಿಕೊಂಡಿರುವ ಅಡಗುದಾಣಗಳಲ್ಲಿ ಅಡಗಿಸಲಾಗುತ್ತಿತ್ತು. ಯಾವಾಗ ಗಡಿ ಭದ್ರತಾ ಪಡೆಯ ಯೋಧರು ಹಂತಹಂತವಾಗಿ ಇಂತಹ ಗುಪ್ತ ಅಡಗುದಾಣಗಳ ಮೇಲೆ ಮುಗಿಬಿದ್ದು ಅವುಗಳನ್ನು ನಾಶಪಡಿಸಿಕೊಂಡ ಮೇಲೆ ಈಗ ದೇಶದ್ರೋಹಿಗಳಿಗೆ ಸೂಕ್ತವಾಗಿರುವ ವ್ಯವಸ್ಥೆ ಆಗುತ್ತಿಲ್ಲ. ಅವರ ಎಲ್ಲ ಗುಪ್ತ ಸ್ಥಳಗಳು ನಾಶವಾಗಿವೆ.
ಆದ್ದರಿಂದ ಆದಷ್ಟು ಈ ರಾಜ್ಯಗಳ ಗಡಿಜಿಲ್ಲೆಗಳನ್ನು ಬಿಟ್ಟು ಒಳಗಿನ ಜಿಲ್ಲೆಗಳಿಗೆ ಅವರು ತಮ್ಮ ಕಾರ್ಯಸ್ಥಾನಗಳನ್ನು ಶಿಫ್ಟ್ ಮಾಡಿಕೊಂಡಿದ್ದಾರೆ. ಅಲ್ಲಿನ ಸರಕಾರಗಳಿಗೆ ಈ ವಿಷಯ ಗೊತ್ತಿಲ್ಲ ಎಂದಲ್ಲ. ಅವು ಮನಸ್ಸು ಮಾಡಿದರೆ ಇಂತಹ ಗುಪ್ತ ರಹಸ್ಯ ತಾಣಗಳನ್ನು ಉಡೀಸ್ ಮಾಡಿಬಿಡಬಹುದು. ಆದರೆ ಈ ಸ್ಮಂಗ್ಲರ್ಸ್ ಗಳೇ ಅಂತಹ ರಾಜ್ಯಗಳಲ್ಲಿ ಪ್ರಭಾವಿಯಾಗಿರುವುದರಿಂದ ಈ ಪಂಜಾಬ್, ಅಸ್ಸಾಂ, ಪಶ್ಚಿಮ ಬಂಗಾಲದಂತಹ ರಾಜ್ಯಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವಾಗ ಅವು ಮೌನವಾಗಿವೆಯೋ ಕೇಂದ್ರ ಅನಿವಾರ್ಯವಾಗಿ ಮಧ್ಯ ಪ್ರವೇಶಿಸಬೇಕಾಗಿದೆ. ನೀವು 50 ಕಿಲೋ ಮೀಟರ್ ಒಳಗೆ ತನಕ ಹೋಗಿ ಏನು ಬೇಕಾದರೂ ಮಾಡಬಹುದು ಎಂದು ಫ್ರೀ ಹ್ಯಾಂಡ್ ಗಡಿ ಭದ್ರತಾ ಪಡೆಗಳಿಗೆ ನೀಡಿದೆ. ಇದನ್ನು ಪಂಜಾಬ್ ನಿಕಟಪೂರ್ವ ಸಿಎಂ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ. ಬಹುಶ: ಈಗಲೂ ಕಾಂಗ್ರೆಸ್ಸಿನಲ್ಲಿದ್ದರೆ ವಿರೋಧಿಸುತ್ತಿದ್ದರೋ ಏನೋ. ಈಗ ಮಾತ್ರ ಉತ್ತಮ ನಿರ್ಧಾರ ಎಂದಿದ್ದಾರೆ. ಸದ್ಯ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಏನೂ ಕಮೆಂಟ್ ಕೊಟ್ಟಿಲ್ಲ. ಬಹುಶ: ಚೆನ್ನಿ ವಿರೋಧಿಸಿರುವ ಕಾರಣ ಮತ್ತು ಇದನ್ನು ಮೋದಿ ಸರಕಾರ ಜಾರಿಗೆ ತಂದಿರುವುದರಿಂದ ಇವತ್ತಲ್ಲ ನಾಳೆ ವಿರೋಧಿಸಿದರೂ ವಿರೋಧಿಸಬಹುದು. ಆದರೆ ಇದನ್ನು ವಿರೋಧಿಸುವ ಮೂಲಕ ಅವರೆಲ್ಲರು ಒಂದನಂತೂ ಸಾಬೀತುಪಡಿಸಲಿದ್ದಾರೆ, ಅದೇನೆಂದರೆ ತಮ್ಮ ರಾಜ್ಯ ದೇಶದ್ರೋಹಿಗಳಿಗೆ ಮುಕ್ತ ಆಹ್ವಾನ ಮತ್ತು ಗಡಿ ಭದ್ರತಾ ಪಡೆಯ ಯೋಧರಿಗೆ ವಿರೋಧ..ಅವರೆಲ್ಲ ಏನೂ ಹೇಳಿದರೂ ಅಮಿತ್ ಶಾ ಅದಕ್ಕೆ ಸೊಪ್ಪು ಹಾಕಲಿಕ್ಕಿಲ್ಲ. ಯಾಕೆಂದರೆ ಈ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಏನು ನಡೆಯುತ್ತಿದೆ ಎನ್ನುವ ವರದಿ ಬಂದ ಮೇಲೆನೆ ಅವರು ಈ ಕ್ರಮ ಕೈಗೊಂಡಿರಬಹುದು. ಹಾಗೆ ಒಂದು ವೇಳೆ ಕೇರಳದಲ್ಲಿಯೂ ಇದೇ ನಿಯಮ ಜಾರಿಗೆ ಬಂದರೆ ಆಗ ಪಿಣರಾಯಿ ಕೂಡ ವಿರೋಧ ಮಾಡಬಹುದು. ಇಲ್ಲಿ ವಿರೋಧ ಯಾಕೆ ಬೇಕು. ನೀವು ಸರಿಯಾಗಿದ್ದರೆ ಅಲ್ಲಿ ವಿರೋಧ ಮಾಡುವ ಪ್ರಶ್ನೆ ಬರಲ್ಲ. ನೀವು ಸರಿಯಾಗಿಲ್ಲದಿದ್ದರೆ ಅಮಿತ್ ಶಾ ನಿಮ್ಮನ್ನು ಬಿಡಲ್ಲ. ಈಫ್ ಯು ಆರ್ ಬ್ಯಾಡ್, ಐ ಎಂ ಯುವರ್ ಡ್ಯಾಡ್ ಎನ್ನುವುದು ಶಾ ಹಳೆಯ ಸ್ಟೈಲ್!!
Leave A Reply