ಕಾಂಗ್ರೆಸ್ ಮುಖಂಡ ಕೈ ಸವರಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಶಾಸಕಿ ದೂರು!
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿಪಿ ರಮೇಶ್ ಅವರು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ವೇದಿಕೆಯಲ್ಲಿ ಪಕ್ಕದಲ್ಲಿ ಕುಳಿತಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯನವರ ಕೈಯನ್ನು ಸವರುತ್ತಿರುವ ದೃಶ್ಯವನ್ನು ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅದಕ್ಕೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಮುಖಂಡರೂ ಆಗಿರುವ ರಮೇಶ್ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹ ಪಡಿಸುತ್ತಿದೆ. ಇಲ್ಲಿರುವ ವಿಷಯ, ಸಾರ್ವಜನಿಕ ವೇದಿಕೆಗಳಲ್ಲಿ ಕುಳಿತುಕೊಳ್ಳುವ ಗಣ್ಯರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಎನ್ನುವುದು. ಹಿಂದಿನ ಕಾಲದಲ್ಲಿ ಮಾಧ್ಯಮಗಳು ಇಷ್ಟು ಬೆಳೆಯದೇ ಇದ್ದ ಸಮಯದಲ್ಲಿ ಗಣ್ಯರು ಬೋರಾಗಿ ಮಲಗಿದರೂ ನಡೆಯುತ್ತಿತ್ತು, ಆಕಳಿಸಿದರೂ ಆಗುತ್ತಿತ್ತು. ಕಾಲುಗಳನ್ನು ಅಲ್ಲಾಡಿಸುತ್ತಾ ಹಾರ್ಮೊನೀಯಂನಂತೆ ಬಾರಿಸಿದರೂ ಆಗುತ್ತಿತ್ತು. ಒಟ್ಟಿನಲ್ಲಿ ಏನು ಮಾಡಿದರೂ ಅದು ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ. ಕೇವಲ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಬಗ್ಗೆ ಮಾತ್ರ ವರದಿಗಾರರು ಬರೆದು ಹೋಗುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಕ್ಯಾಮೆರಾಗಳು ಪತ್ರಕರ್ತರ ಹೆಚ್ಚಿನ ಕೆಲಸಗಳನ್ನು ಮಾಡುತ್ತವೆ. ಸುದ್ದಿಮನೆಗಳು ಏನಾದರೂ ಹೊಸತನ್ನು ತರಲು ವರದಿಗಾರರಿಗೆ ಪ್ರೇರೆಪಿಸುತ್ತವೆ. ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರ ಹುಳಕನ್ನು ಎತ್ತಿ ತೋರಿಸಲು ಆಮಿಷ ಒಡ್ಡುವುದೂ ಇದೆ. ಆದ್ದರಿಂದ ಯಾವುದೇ ಪಕ್ಷದ ನಾಯಕನಾಗಿರಲಿ ಆತ ಬಹಿರಂಗ ವೇದಿಕೆಯಲ್ಲಿ ಕುಳಿತುಕೊಂಡಿರುವಾಗ ಎಷ್ಟು ಸಾಧ್ಯವೋ ಅಷ್ಟು ಸಭ್ಯತನ ತೋರಿಸಬೇಕು. ಅದರಲ್ಲಿಯೂ ಪಕ್ಕದಲ್ಲಿ ಹೆಣ್ಣೊಬ್ಬಳು ಕುಳಿತುಕೊಂಡಾಗ ಮೈಯೆಲ್ಲಾ ಕಣ್ಣಾಗಿರಬೇಕು. ಕಳೆದ ಬಾರಿ ಕೇರಳದಲ್ಲಿ ಸಿನೆಮಾ ನಟಿಯೊಬ್ಬಳು ಭಾಗವಹಿಸಿದ ರಾಜಕೀಯ ಸಮಾವೇಶವೊಂದರಲ್ಲಿ ಅಲ್ಲಿನ ರಾಜಕಾರಣಿಯೊಬ್ಬ ಆಕೆಯ ದೇಹದ ಭಾಗವನ್ನು ಸವರಿದ್ದು ಎಲ್ಲಾ ಕಡೆ ವಿಡಿಯೋ ವೈರಲ್ ಆಗಿತ್ತು.
ಇಲ್ಲಿ ಕೂಡ ಹಾಗೆ ಆಗಿದೆ, ವೀಣಾ ಅಚ್ಚಯ್ಯ, ವಿಡಿಯೋ ವೈರಲ್ ಆದ ನಂತರ ರಮೇಶ್ ಅವರೊಬ್ಬ ಸಂಸ್ಕೃತಿ ಮರೆತ ಮನುಷ್ಯ ಎನ್ನುವ ರೀತಿಯಲ್ಲಿ ನೋವು ತೋಡಿಕೊಂಡಿದ್ದಾರೆ. ಅದೇ ರಮೇಶ್ ಅವರು ವೀಣಾ ಮತ್ತು ತಾನು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಟ್ಟಿಗೆ ಚಿಕಿತ್ಸೆ ಪಡೆದುಕೊಂಡಿದ್ವಿ, ಅವರು ಸಣ್ಣವರಾಗಿದ್ದಾರಾ ಎಂದು ಮುಟ್ಟಿ ನೋಡಿದೆ ಎಂದಿದ್ದಾರೆ. ಅವರು ತನ್ನ ಸಹೋದರಿ ಸಮಾನ ಎಂದಿದ್ದಾರೆ. ಆದರೆ ಸತ್ಯ ಏನೇ ಇರಲಿ, ಟಿಪಿ ರಮೇಶ್ ಅವರು ತನ್ನ ಪಕ್ಕದಲ್ಲಿ ಕುಳಿತುಕೊಂಡದ್ದು ಓರ್ವ ವಿಧಾನ ಪರಿಷತ್ ಸದಸ್ಯೆ ಎನ್ನುವುದು ಮರೆಯಬಾರದಿತ್ತು. ಈಗ ಎಲ್ಲವೂ ಬಹಿರಂಗವಾದ ನಂತರ ಸಹೋದರಿ ಎನ್ನುವ ಅಸ್ತ್ರ ಪ್ರಯೋಗಿಸಿದರೆ ಆಗುತ್ತಾ? ನಮ್ಮ ರಾಜ್ಯದ ಜನರು ಭ್ರಷ್ಟಾಚಾರ ಮಾಡಿದ ರಾಜಕಾರಣಿಯನ್ನಾದರೂ ಕ್ಷಮಿಸುತ್ತಾರೆ, ಆದರೆ ಹೆಣ್ಣಿನ ಬಗ್ಗೆ ಈ ರೀತಿ ಮನಸ್ಥಿತಿ ಇರುವವರನ್ನಲ್ಲ ಎಂದು ಇತಿಹಾಸ ಹೇಳುತ್ತದೆ
Leave A Reply