ನಾನು ಕಾಮಗಾರಿಗಾಗಿ ಒಂದು ರೂಪಾಯಿ ಕೊಡಲ್ಲ ಎಂದು ಗುತ್ತಿಗೆದಾರ ನಿರ್ಧರಿಸಲಿ!!
ಗುತ್ತಿಗೆದಾರರು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ 40% ಕಮೀಷನ್ ಕೊಡಬೇಕಾಗಿರುವ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಕೆಂಪಣ್ಣ ಎನ್ನುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರ ಹಿಡಿದು ಸತ್ಯ ಹರಿಶ್ಚಂದ್ರನ ವಂಶಸ್ಥರಾಗಿರುವ ಕಾಂಗ್ರೆಸ್ ಪಕ್ಷದವರು ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ಮನವಿ ಕೊಟ್ಟು ಬಂದಿದ್ದಾರೆ. ಈ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದರೊಂದಿಗೆ ಈ ವಿಷಯವನ್ನು ಸುಪ್ರೀಂಕೋರ್ಟಿನ ಸಿಟ್ಟಿಂಗ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಗೆ ರಾಜಭವನದಿಂದ ಅಧಿಕೃತ ಚಾಲನೆ ಕೊಟ್ಟಂತೆ ಕಾಣುತ್ತಿದೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯದ ಮೇಲೆ ಏನೇನೋ ನಡೆಯಲಿದೆ ಎನ್ನುವ ಮುನ್ಸೂಚನೆ ಸಿಕ್ಕಂತೆ ಆಗಿದೆ. ಅದೇನೆ ಇರಲಿ, ವಿಪಕ್ಷಗಳ ಮುಖಂಡರು ಮಾಡಬೇಕಾದ ಕಾರ್ಯವನ್ನೇ ಮಾಡಿದ್ದಾರೆ. ಆದರೆ ಇಲ್ಲಿ ಸಮರ್ಪಕ ಚರ್ಚೆ ವಿಧಾನಸಭೆಯಲ್ಲಿ ನಡೆದು ಪ್ರಕರಣ ದಡ ಸೇರಲಿ ಎನ್ನುವುದೇ ಎಲ್ಲರ ಆಶಯ. ಯಾಕೆಂದರೆ ನಿಮ್ಮ ಸಮಯದಲ್ಲಿ 40% ಕಮೀಷನ್ ಎಂದು ಕಾಂಗ್ರೆಸ್ ಬಾಯಿಬಿಡುತ್ತಿದ್ದಂತೆ ನೀವೇನೂ ಸಾಚಾಗಳಾ, ನಿಮ್ಮ ಹಣೆಬರಹ ನಮಗೆ ಗೊತ್ತಿಲ್ಲ, ಎಂದು ಭಾರತೀಯ ಜನತಾ ಪಾರ್ಟಿಯವರು ಮುಗಿಬೀಳುತ್ತಾರೆ. ಅಲ್ಲಿಗೆ ಹಡಗು ಎಲ್ಲಿಯೂ ಹೋಗದೇ ತಳ ಸೇರುತ್ತದೆ. ಹಾಗೆ ಆಗಬಾರದು.
ಇನ್ನು ಇದು ರಾಜಕೀಯ ಆಯಾಮವಾದರೆ, ಇನ್ನೊಂದು ವಿಷಯ ಹೇಳಲೇಬೇಕು. ಕೆಂಪಣ್ಣನವರು ಪ್ರಧಾನಿಗೆ ಪತ್ರ ಬರೆಯುವಷ್ಟು ವಿಷಯ ಗಂಭೀರವಾಗಿದೆ ಎಂದಾದರೆ ಗುತ್ತಿಗೆದಾರರೇ ಸೇರಿ ತಮ್ಮೊಳಗೆ ಒಂದು ನಿರ್ಣಯವನ್ನು ಮಾಡಿಬಿಡಬೇಕು. ಅದೇನೆಂದರೆ ನಾವು ಒಂದು ರೂಪಾಯಿ ಕೂಡ ಲಂಚ ಕೊಡುವುದಿಲ್ಲ. ನೀವು ಲಂಚಕ್ಕಾಗಿ ಪೀಡಿಸಿದರೆ ನಾವು ಅಂತಹ ಕೆಲಸವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದವರಿಗೆ ನೀವು ಕೊಡದೇ ಬೇರೆ ರಾಜ್ಯದವರಿಗೆ ಎಷ್ಟು ಸಮಯ ಎಂದು ಕೊಡುತ್ತೀರಿ. ಪ್ರತಿ ಬಾರಿ ಬೇರೆ ರಾಜ್ಯದವರಿಗೆ ಕೊಡುತ್ತಾ ಹೋದರೆ ಮೋದಿಯವರಿಗೆ ವಿಷಯ ಸ್ಪಷ್ಟವಾಗುತ್ತದೆ ಎಂದು ಈ ಗುತ್ತಿಗೆದಾರರು ನಿರ್ಧರಿಸಬೇಕು. ಅಷ್ಟಕ್ಕೂ ರಾಜ್ಯ ಗುತ್ತಿಗೆದಾರರ ಸಂಘ ಏನು ಚಿಕ್ಕ ಸಂಘಟನೆ ಅಲ್ಲ. ಸುಮಾರು 52 ವಿವಿಧ ಸಂಘಟನೆಗಳು ಮತ್ತು ಅಂದಾಜು ಒಂದು ಲಕ್ಷಗಿಂತಲೂ ಹೆಚ್ಚು ಗುತ್ತಿಗೆದಾರರನ್ನು ಒಳಗೊಂಡ ಬೃಹತ್ ಸಂಘಟನೆ. ಇವರೆಲ್ಲರೂ ಲಂಚ ಕೊಡದೇ ಕೆಲಸ ಮಾಡುತ್ತೇವೆ ಎಂದು ಗಟ್ಟಿ ಮನಸ್ಸು ಮಾಡಿದರೆ ರಾಜ್ಯ ಸರಕಾರಕ್ಕೆ ರಾಜ್ಯ ಸರಕಾರವೇ ಇವರ ಎದುರು ಮಂಡಿಯೂರಬೇಕು. ಹಾಗಿದೆ ಇವರ ಸಾಮರ್ತ್ಯ.
ನಾವು ಏನೂ ಕೊಡುವುದಿಲ್ಲ. ಅದರ ಬದಲಿಗೆ ಇಪ್ಪತ್ತೈದು ಲಕ್ಷ ರೂಪಾಯಿಯ ಕೆಲಸವನ್ನು ಅಷ್ಟೇ ಸದೃಢವಾಗಿ ಮಾಡಿಕೊಡುತ್ತೇವೆ ಎಂದು ನಿಶ್ಚಯ ಮಾಡಲಿ. ಒಂದು ರಸ್ತೆಗೆ ಎಷ್ಟು ಸಿಮೆಂಟ್ ಹಾಕಬೇಕೊ, ಅಷ್ಟು ಹಾಕುತ್ತೇವೆ. ಎಷ್ಟು ಜಲ್ಲಿ ಹಾಕಬೇಕೋ ಅಷ್ಟು ಸುರಿಯುತ್ತೇವೆ ಎಂದು ಮಾಡಿ ತೋರಿಸಲಿ. ಆಗ ಇವರು ನಿಜವಾಗಿಯೂ ಯಾರಿಗೂ ಕೊಡುವ ಹಾಗಿರುವುದಿಲ್ಲ. ಈಗ ಇವರು ಯಾಕೆ ಸ್ಪರ್ಧೆಯಲ್ಲಿ ಬಿದ್ದವರ ಹಾಗೆ ಲಂಚ ಕೊಟ್ಟು ಕೆಲಸದ ಬಿಲ್ ಪಾಸ್ ಮಾಡಿಸುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಯಾಕೆ ಕೆಲವು ಕಾಮಗಾರಿಗಳು ಕೆಲವರಿಗೆ ಮಾತ್ರ ಹೋಗುತ್ತವೆ, ಯಾಕೆ ಕೆಲವು ಕಾಮಗಾರಿಗಳು ಕಳಪೆಯಾದರೂ ಯಾವ ರಾಜಕಾರಣಿ, ಅಧಿಕಾರಿ ಮಾತನಾಡುವುದಿಲ್ಲ. ಇದೇ ಕಾರಣಕ್ಕೆ. ಯಾಕೆಂದರೆ ಎಲ್ಲರೂ ಫಲಾನುಭವಿಗಳು. ಇನ್ನು ಭ್ರಷ್ಟಾಚಾರವನ್ನು ತಪ್ಪಿಸುವುದಕ್ಕಾಗಿ ಕಾಮಗಾರಿಯ ಗುಣಮಟ್ಟ ವೀಕ್ಷಿಸಲು ಥರ್ಡ್ ಪಾರ್ಟಿ ಇಟ್ಟರೂ ಈ ಗುತ್ತಿಗೆದಾರರು ಅವರಿಗೂ ಲಂಚ ಕೊಟ್ಟು ಯಾಕೆ ಕೆಲಸ ಮಾಡಿಸುತ್ತಾರೆ. ಎಲ್ಲಿಯ ತನಕ ಕೊಡುವವರು ಇರುತ್ತಾರೋ ಅಲ್ಲಿಯ ತನಕ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಲಂಚ ತೆಗೆದುಕೊಂಡವರು ಭ್ರಷ್ಟರಾಗಿದ್ದಂತೆ ಕೊಡುವವರು ಕೂಡ ಭ್ರಷ್ಟರೇ ಆಗಿರುತ್ತಾರೆ. ಆದ್ದರಿಂದ ಭ್ರಷ್ಟರು ಭ್ರಷ್ಟರ ವಿರುದ್ಧ ದೂರು ಕೊಟ್ಟ ಹಾಗೆ ಆಗಿದೆ. ಇವರು ಕಾಮಗಾರಿ ಗಿಟ್ಟಿಸಲು ಜೆಇಗೆ 10%, ಎಇಇಗೆ 3%, ಇಂಜಿನಿಯರ್ ಗೆ 2% ಕೊಡುತ್ತಾರೆ. ಇನ್ನು ನಿನ್ನೆ ಮೊನ್ನೆ ಪಾಲಿಕೆಗೆ ಬಂದ ಹೊಸ ಕಾರ್ಪೋರೇಟರ್ ಕೂಡ 10% ಡಿಮಾಂಡ್ ಮಾಡುತ್ತಾರೆ. ಇವರಿಗೆ ಕೊಡಬೇಕು. ಮೇಲೆ ಸಚಿವರಿಗೆ ಕೊಡಬೇಕು. ಹೀಗೆ ಎಲ್ಲರಿಗೆ ಕೊಟ್ಟ ಮೇಲೆ ಕಾಮಗಾರಿ ಹೇಗೆ ಚೆನ್ನಾಗಿ ಆಗುತ್ತದೆ.
ಈಗ ಮೊನ್ನೆಯಿಂದ ಆಗುತ್ತಿರುವ ರೇಡ್ ಗಳನ್ನು ಗಮನಿಸಿದರೆ ಈ ಅಧಿಕಾರಿಗಳು ಎಷ್ಟರ ಮಟ್ಟಿಗೆ ಈ ಗುತ್ತಿಗೆದಾರರನ್ನು ಲೂಟಿ ಮಾಡಿದ್ದರು ಎನ್ನುವುದು ಗೊತ್ತಾಗುತ್ತದೆ. ಅವರೆಲ್ಲರೂ ಮೇಲಿನವರಿಗೆ ಕೊಡಲು ಇದೆ ಎಂದೇ ತೆಗೆದುಕೊಂಡಿರುತ್ತಾರೆ. ಯಾವಾಗ ಮೇಲಿನವರಿಗೆ ಕೊಡುವ ಪಾಲು ಕಡಿಮೆಯಾಗಿ, ಇವರೇ ಹೊಟ್ಟೆ ತುಂಬಿಸಿಕೊಳ್ಳಲು ಶುರುವಾಯಿತೋ ಆಗ ರೇಡ್ ಗ್ಯಾರಂಟಿಯಾಗುತ್ತದೆ. ಈ ರೇಡ್ ಗಳು ಒಂದು ರೀತಿಯಲ್ಲಿ ಭ್ರಷ್ಟರ ವಿರುದ್ಧ ಸರಕಾರದ ಕೈಯಲ್ಲಿ ಚಾಟಿ ಇದ್ದ ಹಾಗೆ. ಯಾವಾಗ ಎಲ್ಲಿ ರೇಡ್ ಮಾಡಿಸಬೇಕು ಎನ್ನುವುದು ಯಾವುದೇ ಸರಕಾರದ ಒಳಗಿರುವ ಕೆಲವು ಕಂಬಗಳಿಗೆ ಗೊತ್ತಿರುತ್ತದೆ. ಇನ್ನು ಈ ಅಧಿಕಾರಿಗಳಿಂದ ವಸೂಲಿ ಮಾಡಿ ಆಡಳಿತ ಪಕ್ಷದ ರಾಜಕಾರಣಿಗಳಿಗೆ ಕಪ್ಪ ತಂದುಕೊಡಲು ಕೆಲವು ಜನರೇ ಇರುತ್ತಾರೆ. ಅವರು ರಾಜಕಾರಣಿಗಳ ನೆರಳಿನಂತೆ ಇರುತ್ತಾರೆ. ಅವರ ಜೊತೆ ಹೆಚ್ಚು ಕಾಣಿಸಿಕೊಂಡಷ್ಟು ಜನಪ್ರತಿನಿಧಿಗಳಿಗೆ ರಿಸ್ಕ್!
Leave A Reply