ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ: 3 ಮಂದಿ ಆರೋಪಿಗಳು ಉರ್ವ ಪೊಲೀಸರಿಗೆ ಶರಣು!
ಮಂಗಳೂರು: ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರವಣ್ ಎಂಬಾತನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ದಾಳಿ ಪ್ರಕರಣದ ಆರೋಪಿಗಳ ಪೈಕಿ ಮೂವರು ಉರ್ವ ಪೋಲಿಸ್ ಠಾಣೆಯಲ್ಲಿ ಶರಣಾಗಿದ್ದು, ಅವರನ್ನು ನವನೀತ, ಹೇಮಂತ್ ಪೂಜಾರಿ ಹಾಗೂ ದೀಕ್ಷಿತ್ ಎಂದು ಗುರುತಿಸಲಾಗಿದೆ. ಹಳೆಯ ಕೊಲೆಯೊಂದರ ವೈಷಮ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ರೌಡಿಗಳ ಗ್ಯಾಂಗ್ ವಾರ್ ನಡೆದಿತ್ತು.
2020ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಇಂದ್ರಜಿತ್ ಎಂಬಾತನ ಕೊಲೆ ಪ್ರಕರಣದ ಸೇಡಿಗಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಅಳಕೆ ಗ್ಯಾಂಗ್ ತಂಡದ 8 ಮಂದಿ ರೌಡಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡಿರುವಾತ ಅಂಕಿತ್ ಎಂಬಾತನ ಸ್ನೇಹಿತ. ಅಂಕಿತ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಓರ್ವನ ಸಹೋದರನಾಗಿದ್ದ. ಆರಂಭದಲ್ಲಿ ಇದೊಂದು ಕೊಲೆ ಯತ್ನದ ಕೃತ್ಯವೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಇದೊಂದು ಗ್ಯಾಂಗ್ ವಾರ್ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ.
Leave A Reply