ಮಂಗಳೂರು: ತಲವಾರು ತೋರಿಸಿ ದನ ಕದ್ದೊಯ್ದ ನಾಲ್ವರು ಅರೆಸ್ಟ್!
ಮಂಗಳೂರು: ಮನೆಯವರಿಗೆ ತಲವಾರು ತೋರಿಸಿ ಬೆದರಿಕೆ ಒಡ್ಡಿ, ಮನೆ ಪಕ್ಕದಲ್ಲಿಯೇ ಕಟ್ಟಿ ಹಾಕಿದ್ದ 3 ದನಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿ ಕದ್ದೊಯ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಉಳ್ಳಾಲ ನಿವಾಸಿ ಮೊಹಮ್ಮದ್ ಸಲೀಂ(32), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ತಂಝಿಲ್(25), ಉಳ್ಳಾಲ ಕೋಡಿ ನಿವಾಸಿ ಮೊಹಮ್ಮದ್ ಇಕ್ಬಾಲ್(24) ಹಾಗೂ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ಅಫ್ರಿನ್ ಬಂಧಿತರು.
ನಗರದ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿ ಬಳಿ ನಿನ್ನೆ ಮುಂಜಾವ 4.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಕೂಳೂರಿನ ಶ್ರೀ ಮಲರಾಯ ದೈವಸ್ಥಾನದ ಬಳಿ ನಿವಾಸಿ ಉಮೇಶ್ ಎಂಬವರಿಗೆ ಸೇರಿರುವ 3 ದನಗಳನ್ನು ದುಷ್ಕರ್ಮಿಗಳು ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬಂದು ಬಲವಂತವಾಗಿ ವಾಹನದೊಳಗೆ ತುಂಬಿಸಿ ಕದ್ದೊಯ್ದಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿರುವ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳೆಲ್ಲರೂ ದನ ಕಳ್ಳತನವನ್ನೇ ದಂಧೆಯಾಗಿ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply