ಓವೈಸಿ, ಸಿದ್ದು ಅಂತವರ ಹೇಳಿಕೆಗಳಿಂದ ಪೊಲೀಸರು ವಿಚಲಿತರಾಗಬಾರದು!!

ರಾಜಕೀಯ ನಾಯಕರು ಹೇಳಿಕೆ ಕೊಟ್ಟು ಅದು ವಿವಾದಕ್ಕೆ ತಿರುಗಿದ ಬಳಿಕ ತಮ್ಮ ಇಮೇಜಿಗೆ ತೊಂದರೆಯಾದರೆ ಅದನ್ನು ಒಂದೋ ಹಿಂದಕ್ಕೆ ಪಡೆದುಕೊಂಡು ಕ್ಷಮೆಯಾಚಿಸುತ್ತೇನೆ ಎನ್ನುತ್ತಾರೆ ಅಥವಾ ನಾನು ಹಾಗೆ ಹೇಳಿದ್ದೇ ಅಲ್ಲ, ನಾನು ಹೇಳಿದ್ದು ಹೀಗೆ ಎಂದು ಹೇಳುತ್ತಾರೆ. ಅದು ಉಡುಪಿಯಲ್ಲಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಂದ ಹಿಡಿದು ಉತ್ತರ ಪ್ರದೇಶದಲ್ಲಿ ಚುನಾವಣಾ ಭಾಷಣದಲ್ಲಿ ಮಾತನಾಡಿದ ಓವೈಸಿ ತನಕ ಎಲ್ಲರಿಗೂ ಅನ್ವಯಿಸುತ್ತದೆ. ಮೋದಿ ಮತ್ತು ಯೋಗಿ ಶಾಶ್ವತರಲ್ಲ, ಸ್ವಲ್ಪ ಕಾಲದ ನಂತರ ಮೋದಿ ಬೆಟ್ಟಕ್ಕೆ ಮರಳುತ್ತಾರೆ, ಯೋಗಿ ಮಠಕ್ಕೆ ಹಿಂತಿರುಗುತ್ತಾರೆ, ಆ ಮೇಲೆ ನಿಮ್ಮನ್ನು ರಕ್ಷಿಸುವವರು ಯಾರು ಎಂದು ಓವೈಸಿ ಕೇಳಿದ್ದರು. ಅದರ ತುಣುಕು ವೈರಲ್ ಆಗಿ ನಂತರ ವಿವಾದಕ್ಕೆ ಯಾವಾಗ ಕಾರಣವಾಯಿತೋ ಓವೈಸಿ ಉಲ್ಟಾ ಹೊಡೆದಿದ್ದಾರೆ. ಅದನ್ನು ತಾವು ಹೇಳಿದ್ದು ಹಿಂದೂಗಳಿಗೆ ಅಲ್ಲ, ಉತ್ತರ ಪ್ರದೇಶದ ಪೊಲೀಸರಿಗೆ ಎಂದು ಹೇಳಿದ್ದಾರೆ. ಓವೈಸಿ ನಿಜವಾಗಿಯೂ ಹೆಚ್ಚು ಹೆದರುವುದು ಪೊಲೀಸರಿಗೆ ಎನ್ನುವುದು ಈಗ ಎರಡನೇಯ ಸಲ ಸಾಬೀತಾಗಿದೆ. ಕೆಲವು ವರ್ಷಗಳ ಹಿಂದೆ ಕೂಡ ಅವರು ಇಂತಹ ಒಂದು ಮಾತನ್ನು ಹೇಳಿದ್ದರು. ಭಾರತದ ಪೊಲೀಸರು 15 ನಿಮಿಷ ಸುಮ್ಮನೆ ಕುಳಿತರೆ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಹೇಳಿದ್ದರು. ಅಂತಹ ಓವೈಸಿ ಈಗ ಮತ್ತೆ ಪೊಲೀಸರಿಗೆ ಪರೋಕ್ಷವಾಗಿ ಬೆದರಿಕೆ ನೀಡಿದ್ದಾನೆ. ಇದರ ಅರ್ಥ ಅಷ್ಟೇ, ಮೋದಿ ಮತ್ತು ಯೋಗಿ ಆಡಳಿತ ಮುಗಿದರೆ ಮತ್ತೆ ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಶುರುವಾಗುತ್ತದೆ ಎಂದು ಹೇಳಿದ್ದಾನೆ.
ಅಲ್ಲಿ ಓವೈಸಿಯ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಆದ್ದರಿಂದ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಸಮಾಜವಾದಿ ಪಾರ್ಟಿಯ ಅಥವಾ ಸಜ್ಜಿಗೆಬಜಿಲ್ ಸರಕಾರ ಅಧಿಕಾರ ಹಿಡಿಯಬಹುದು. ಆ ಪಕ್ಷಗಳ ಸರಕಾರ ಅಧಿಕಾರ ಹಿಡಿದರೆ ಜಂಗಲ್ ರಾಜ್ ಬರುತ್ತದೆ ಎಂದು ಓವೈಸಿ ಒಪ್ಪಿಕೊಂಡಂತೆ ಆಗಿದೆ. ಆಗ ಪೊಲೀಸರಿಗೆ ಏನು ತೊಂದರೆ? ಏನಿಲ್ಲ, ಈಗ ಅಲ್ಲಿ ಗೂಂಡಾರಾಜ್ ಬಾಯಿ ಮುಚ್ಚಿ ಕುಳಿತುಕೊಂಡಿದೆ. ಹಿಂದೆ ಉತ್ತರ ಪ್ರದೇಶದಿಂದ ಉದ್ಯಮಿಗಳು ಓಡಿ ಹೋಗುತ್ತಿದ್ದರು. ಅಲ್ಲಿ ಕಿಡ್ನಾಪ್, ಹಫ್ತಾ, ಹತ್ಯೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಯೋಗಿ ಆದಿತ್ಯನಾಥ ಸರಕಾರ ಬಂದ ಬಳಿಕ ಗೂಂಡಾಗಳು ಓಡಿಹೋಗಲು ಶುರು ಮಾಡಿದರು. ಉದ್ಯಮಿಗಳು ಆರಾಮವಾಗಿ ವ್ಯವಹಾರ ಮಾಡಲು ಆರಂಭಿಸಿದರು. ಆದ್ದರಿಂದ ಮುಂದಿನ ಬಾರಿ ಮತ್ತೆ ಯೋಗಿ ಆದಿತ್ಯನಾಥ ಸರಕಾರವೇ ಬರಲಿ ಎಂದು ಪರೋಕ್ಷವಾಗಿ ಓವೈಸಿ ಹಿಂಟ್ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಅವರ ಹೇಳಿಕೆಗಳು ಮೇಲ್ನೋಟಕ್ಕೆ ಕೋಮುವಾದಿಯಂತೆ ಕಂಡು ಬಂದರೂ ಅದರಿಂದ ಬಿಜೆಪಿಗೆ ಲಾಭ ಆಗುತ್ತದೆ. ಹಿಂದೂ ಮತಗಳು ಕ್ರೋಢಿಕರಣವಾಗುತ್ತದೆ. ಹಾಗಂತ ಓವೈಸಿ ವಿಷಯುಕ್ತ ಹಾವು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಂತ ಬಿಜೆಪಿಯವರು ಅವಕಾಶ ಕೊಟ್ಟರೆ ಹೆಗಲ ಮೇಲೆ ಕುಳಿತು ಕಿವಿಯೊಳಗೆ ಹುಚ್ಚೆ ಹೊಯ್ಯುವಂತಹ ಯೋಜನೆ ಓವೈಸಿಯದ್ದು. ಆ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು.
ಆದರೆ ಬಿಜೆಪಿಯನ್ನು ನಖಾಶಿಖಾಂತ ವಿರೋಧಿಸುವ ಮತ್ತೊಬ್ಬ ಬಾಯಿಚಪಲಗಾರ ಸಿದ್ದು ಯಾನೆ ನವಜ್ಯೋತ್ ಸಿಂಗ್ ಸಿದ್ದು ಪಂಜಾಬ್ ಚುನಾವಣೆಯ ಹೊಸ್ತಿಲಲ್ಲಿ ಪೊಲೀಸರನ್ನು ಹೀಯಾಳಿಸಲು ಹೋಗಿ ತಮ್ಮ ಮೇಲೆಯೇ ಕೆಸರು ಬೀಳಿಸಿಕೊಂಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳೂ, ಶಾಸಕರೂ ಆಗಿರುವವರ ಪರ ಪ್ರಚಾರದಲ್ಲಿ ಭಾಗವಹಿಸಿದ ಸಿದ್ದು “ಇವರು ಮನಸ್ಸು ಮಾಡಿದರೆ ಪೊಲೀಸರ ಪ್ಯಾಂಟುಗಳನ್ನು ಒದ್ದೆ ಮಾಡಬಲ್ಲರು” ಎಂದಿದ್ದಾರೆ. ಇವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಅದು ಅವರಿಗೆ ಬಿಟ್ಟಿದ್ದು. ಆದರೆ ಯಾವುದೇ ಅರ್ಥದಲ್ಲಿ ಹೇಳಲಿ, ಪೊಲೀಸರ ವಿಷಯ ಬಂದಾಗ ಗೌರವ ಇಟ್ಟುಕೊಂಡೇ ಮಾತನಾಡಬೇಕು. ಯಾಕೆಂದರೆ ಸಿದ್ದು ಈಗ ಪಂಜಾಬ್ ನಲ್ಲಿ ಸುತ್ತಾಡಬೇಕಾದರೆ ಅವರ ಜೊತೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರ ಅವಶ್ಯಕತೆ ಇದೆ. ಸಿದ್ದು ಒಬ್ಬರೇ ನಾಲ್ಕು ದಿನ ಪಂಜಾಬ್ ನಲ್ಲಿ ಸುತ್ತಾಡಲು ಹೋದರೆ ಏನು ಆಗಬಾರದೋ ಅದೇ ಆಗಿಬಿಡಲೂ ಬಹುದು. ಯಾಕೆಂದರೆ ಒಂದು ಕಡೆ ಉಗ್ರವಾದ ಮತ್ತೊಂದೆಡೆ ಡ್ರಗ್ಸ್ ಪೆಡ್ಲರ್ ಗಳ ಮಾಫಿಯಾವನ್ನು ಹೊದ್ದು ಮಲಗಿರುವ ಪಂಜಾಬ್ ಯಾವತ್ತಿದ್ದರೂ ಡೇಂಜರ್ ಆಗಿಯೇ ಇದೆ. ಯಾವ ನಾಯಕನಿಗೆ ಯಾವ ಸಮಯದಲ್ಲಿ ಯಾರು ಬಾಂಬ್ ಇಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಹಾಗಿರುವಾಗ ಸಿದ್ದು ತಮ್ಮ ಸುತ್ತಲೂ ಪೊಲೀಸರ ಸುಪರ್ದಿಯಲ್ಲಿಯೇ ನಡೆಯಬೇಕಾಗುತ್ತದೆ. ಸಿದ್ದು ಹೇಳಿಕೆಯಿಂದ ಅಲ್ಲಿನ ಪೊಲೀಸರು ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದು ಎಂದಾದರೆ ಸಿದ್ದು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ರಾಜಕೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಆದರೆ ಅಲ್ಲಿ ಕಾಂಗ್ರೆಸ್ ಸರಕಾರವೇ ಇರುವುದರಿಂದ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆ ಎಂದು ನಂಬಲು ಸಾಧ್ಯವಿಲ್ಲ. ಇತ್ತ ಓವೈಸಿ ಅಂತವರ ವಿರುದ್ಧ ಯುಪಿ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಇಲ್ಲಿ ತಾಂಟ್ರೆ ಬಾ ತಾಂಟ್ ಎಂದು ಹೇಳಿದ ಎಸ್ ಡಿಪಿಐ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲಿಸಿಲ್ಲ. ಒಟ್ಟಿನಲ್ಲಿ ಈ ಮತಾಂಧರು ಏನು ಹೇಳಿದರೂ ಬಿಜೆಪಿಗೆ ಲಾಭ ಆಗುತ್ತೆ ಎಂದು ಬಿಜೆಪಿ ಸರಕಾರ ಸುಮ್ಮನಿದೆಯಾ ಅಥವಾ ಪೊಲೀಸರನ್ನು ಅವರ ಪಾಡಿಗೆ ಬೇಕಾದರೆ ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಬಿಟ್ಟಿದೆಯಾ? ಯಾಕೆಂದರೆ ಮಂಗಳೂರಿನಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸುತ್ತಿರುವುದು ಪಾಪದವರ ಮೇಲೆ!
Leave A Reply