ಕೊರಗಜ್ಜ ದೈವದ ಬಳಿ ಕ್ಷಮೆ ಕೇಳದಿದ್ದರೆ ಆತನ ಆಯಸ್ಸು……
ಕಾಲು ಕೆರೆದು ಜಗಳಕ್ಕೆ ಬರುವುದು ಎಂದರೆ ಇದು. ನಿಮ್ಮ ಮದುವೆ, ನಿಮ್ಮ ಸಂಭ್ರಮ ಓಕೆ. ಆದರೆ ಅದರಲ್ಲಿ ಕೊರಗಜ್ಜದ ದೈವದಂತೆ ಕಾಣುವ ಬಣ್ಣ, ತೊಡುಗೆ ಯಾಕೆ? ಹಿಂದೂಗಳು ಮಾತ್ರವಲ್ಲ ಕೊರಗಜ್ಜ ದೈವದ ಶಕ್ತಿ ಗೊತ್ತಿರುವ ಯಾವುದೇ ಧರ್ಮದವರು ಆರಾಧಿಸುವ ಶಕ್ತಿ ಎನ್ನುವುದು ಇದೆ ಎಂದರೆ ಅದು ಕೊರಗಜ್ಜ ದೈವ. ಕೊರಗಜ್ಜ ದೈವದ ಪವಾಡ, ಕಾರಣಿಕದ ಬಗ್ಗೆ ತುಳುನಾಡಿನಲ್ಲಿ ಅದೆಷ್ಟೋ ಕಥೆಗಳಿವೆ. ಅದನ್ನು ಅನುಭವಿಸಿದವರು ಅಸಂಖ್ಯಾತ ಮಂದಿ ಇದ್ದಾರೆ. ಅದನ್ನು ನೋಡಿದವರು ಲೆಕ್ಕವಿಲ್ಲದಷ್ಟು ಜನರಿದ್ದಾರೆ. ಹೀಗಿರುವಾಗ ಒಂದು ಮದುವೆ ಅದರಲ್ಲಿಯೂ ಮುಸ್ಲಿಂ ಸಮುದಾಯದ ಮದುವೆಯಲ್ಲಿ ಸ್ವತ: ಮದುಮಗ ಹೀಗೆ ಕೊರಗಜ್ಜನ ವೇಷ ಹಾಕಿ ನಲಿಯುವುದು ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಮುಸ್ಲಿಂ ಸಮುದಾಯ ಅಂತ ಅಲ್ಲ, ಯಾವ ಸಮುದಾಯವೂ ಹಿಂದೂ ಸಮುದಾಯವನ್ನು ಸೇರಿ ಕೊರಗಜ್ಜ ದೈವದ ವೇಷ ಹಾಕಿ ಮಜಾ ಉಡಾಯಿಸುವುದೇ ದೊಡ್ಡ ಅಪಚಾರ.
ಆ ವ್ಯಕ್ತಿ ನಂತರ ಎಷ್ಟು ದಿನ ಆರೋಗ್ಯಕರವಾಗಿ ಇರುತ್ತಾನೆ ಎನ್ನುವುದೇ ದೊಡ್ಡ ಸಂಗತಿ. ಯಾಕೆಂದರೆ ಕೊರಗಜ್ಜ ದೈವವನ್ನು ನಂಬಿರುವ ಅದೆಷ್ಟೋ ಭಕ್ತರು ಒಂದು ಸಲ ಒಳಗೊಳಗೆ ಬೇಸರ ವ್ಯಕ್ತಿಪಡಿಸಿದರೂ ಸಾಕು, ದೈವವೇ ನೋಡಿಕೊಳ್ಳುತ್ತದೆ ಎಂದು ಪ್ರಾರ್ಥಿಸಿದರೂ ಸಾಕು. ನಂತರ ಆ ವ್ಯಕ್ತಿಯ ಜೀವನ ಹೇಗೆ ಆಗುತ್ತದೆ ಎಂದು ಈ ತುಳುನಾಡಿಗೆ ಹೇಳಿಕೊಡಬೇಕಾಗಿಲ್ಲ. ಕೊರಗಜ್ಜನ ವೇಷ ಧರಿಸಿ ಹುಚ್ಚುಹುಚ್ಚಾಗಿ ಆಡುತ್ತಿದ್ದ ಆ ವ್ಯಕ್ತಿಗೆ ಏನು ಬೇಕಾದರೂ ಆಗಬಹುದು. ಅದು ಅವನ ಕರ್ಮ ಎಂದು ಅಂದುಕೊಳ್ಳೋಣ. ಆದರೆ ದೈವವನ್ನು ನಂಬಿಕೊಂಡ ಅಸಂಖ್ಯಾತ ಜನರ ಭಾವನೆಗಳಿಗೆ ಇಲ್ಲಿ ಪೆಟ್ಟು ಬಿದ್ದಿದೆ ಅಲ್ಲ, ಅದನ್ನು ಏನು ಮಾಡುವುದು? ಇನ್ನು ಇದು ಅಚಾನಕ್ ಆಗಿ ಆದದ್ದಲ್ಲ. ಇದು ಪೂರ್ವ ನಿರ್ಧರಿತವಾಗಿಯೇ ಆಗಿರುವುದು. ಅದು ಕೂಡ ಯಾವುದೋ ಒಂದು ವಿದೇಶದ ನೆಲದಲ್ಲಿ ಏನೂ ಗೊತ್ತಿಲ್ಲದೇ ಆದ ಅಚಾತುರ್ಯ ಅಲ್ಲ. ಇದು ಇದೇ ತುಳುನಾಡಿನಲ್ಲಿರುವ ವಿಟ್ಲದಲ್ಲಿ ಆದ ಘಟನೆ. ಅದು ಕೂಡ ನೋಡಲು ಕಲಿತಂತೆ ಕಾಣುತ್ತಿರುವ ಯುವಕರ ತಂಡ ಕುಡಿದು ರಂಗಿನಾಟ ಆಡುತ್ತಾ ಹೀಗೆ ಮಾಡಿರುವುದು ನಿಜಕ್ಕೂ ಬಹಳ ಖೇದಕರ ವಿಷಯ. ಅದರೊಂದಿಗೆ ಅದನ್ನು ಅವರದ್ದೇ ಪುಂಡರ ಗುಂಪಿನವರು ವಿಡಿಯೋ ಮಾಡಿ ಗ್ರೂಪುಗಳಿಗೆ ಕಳುಹಿಸಿ ಚೆಂದ ನೋಡುವ ಕೆಲಸಕ್ಕೆ ಕೈ ಹಾಕಿದರಲ್ಲ, ಅದು ಕೊರಗಜ್ಜ ದೈವದ ಸಾಮಾನ್ಯ ಭಕ್ತರಲ್ಲಿಯೂ ರೋಷವನ್ನು ಉಂಟು ಮಾಡುತ್ತದೆ. ಹೀಗೆ ಮಾಡಿದ ಒಬ್ಬ ಮುಸ್ಲಿಂ ಯುವಕ ಇದರಿಂದ ಕೇವಲ ತನ್ನ ಕುಟುಂಬಕ್ಕೆ ಮಾತ್ರ ಅಪಾಯ ತಂದುಕೊಂಡಿಲ್ಲ, ಇಡೀ ಸಮುದಾಯವನ್ನು ಕೂಡ ರಿಸ್ಕಿನಲ್ಲಿ ಹಾಕಿದ್ದಾನೆ. ಇದರಿಂದ ಧರ್ಮಗಳ ನಡುವೆ ಮತ್ತೆ ಕಂದಕ ಬೆಳೆಯುತ್ತಾ ಹೋಗುತ್ತದೆ. ಇದರ ಅಗತ್ಯ ತುಳುನಾಡಿಗೆ ಈಗ ಇರಲೇ ಇಲ್ಲ. ಕೊರೊನಾ, ಒಮಿಕ್ರಾನ್ ನಡುವೆ ಬದುಕು ಹೈರಾಣಾಗಿರುವ ಈ ಹಂತದಲ್ಲಿ ತನ್ನಷ್ಟಕ್ಕೆ ತಾನು ಮದುವೆ ಆಗಿ ಸಂತೋಷದಿಂದ ಇರುವುದು ಬಿಟ್ಟು ಬೇರೆ ಧರ್ಮದ ಆರಾಧ್ಯ ದೈವದ ವಿಷಯಕ್ಕೆ ಕೈ ಹಾಕಲು ಕೆಲವರು ಹೊರಡುತ್ತಾರಲ್ಲ, ಅವರ ಗ್ರಹಚಾರ ಕೆಟ್ಟಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಈ ವಿಷಯದಲ್ಲಿ ಮುಸ್ಲಿಂ ಧರ್ಮಗುರುಗಳು ಏನು ಮಾಡಬಹುದು ಎಂದರೆ ತಮ್ಮ ಮಸೀದಿಗಳಲ್ಲಿ ಶುಕ್ರವಾರ ನಮಾಜಿಗೆ ಬರುವ ಯುವ ಸಮುದಾಯಕ್ಕೆ ತಮ್ಮ ಧರ್ಮ ಮಾತ್ರವಲ್ಲ, ಬೇರೆ ಧರ್ಮವನ್ನು ಕೂಡ ಗೌರವಿಸಲು ಕಲಿಸಬೇಕು. ಹದಿನೈದು ವರ್ಷಗಳ ಹಿಂದೆ ಬಜ್ಪೆಯಲ್ಲಿ ಶಾರದೋತ್ಸವ ಶೋಭಾಯಾತ್ರೆಯ ಟ್ಯಾಬ್ಲೋವೊಂದರಲ್ಲಿ ಬಪ್ಪ ಬ್ಯಾರಿಯ ವೇಷ ತೊಟ್ಟವನನ್ನು ದೇವಿಯ ಪಾದತಳದಲ್ಲಿ ಕುಳ್ಳಿರಿಸಿದ್ದರು ಎನ್ನುವ ಕಾರಣಕ್ಕೆ ಗಲಭೆಯೇ ನಡೆದು ಬಜ್ಪೆ ಬಂದ್ ಆಗಿತ್ತು. ಹೀಗಿರುವಾಗ ಇಂತಹ ಕೃತ್ಯ ಮತ್ತೆ ಬೇಕಿತ್ತಾ?
Leave A Reply