ಪಾದಯಾತ್ರೆಯಿಂದ ಕೆಲವರ ಬಾಯಿಗೆ ನೀರು ಬಿಡುವ ಪರಿಸ್ಥಿತಿ ಬಾರದಿರಲಿ!!
ಡಿಕೆಶಿಯವರ ಅಕ್ಕಪಕ್ಕದಲ್ಲಿದ್ದ ಕಾಂಗ್ರೆಸ್ಸಿಗರಾದ ಅಜಯ್ ಸಿಂಗ್, ಸಿಎಂ ಇಬ್ರಾಹಿಂ, ರೇವಣ್ಣ ಎನ್ನುವವರಿಗೆ ಕೊರೊನಾ ಪಾಸಿಟಿವ್ ಆಗಿರುವ ಸುದ್ದಿ ಬಂದಿದೆ. ಅಜಯ್ ಸಿಂಗ್ ಜೇವರ್ಗಿಯ ಶಾಸಕರು ಮತ್ತು ಮಾಜಿ ಸಿಎಂ ಧರಂ ಸಿಂಗ್ ಮಗ. ಸಿಎಂ ಇಬ್ರಾಹಿಂ ಹಾಲಿ ವಿಧಾನಪರಿತ್ ಸದಸ್ಯರು ಮತ್ತು ಸಿದ್ದು ಬಣ. ರೇವಣ್ಣ ಮಾಜಿ ಸಚಿವರು. ಇವರು ಪಾದಯಾತ್ರೆಯಲ್ಲಿ ಸಕ್ರಿಯರಾಗಿದ್ದರು. ಅವರೀಗ ತಮ್ಮ ತಮ್ಮ ಕ್ಷೇತ್ರಕ್ಕೋ, ಊರಿಗೋ, ಮನೆಗೋ ಹೋಗುವಾಗ ಕೊರೊನಾವನ್ನು ಕೈ, ಕಾಲಿಗೆ ಅಂಟಿಸಿಕೊಂಡೇ ಹೋಗಿರುತ್ತಾರೆ. ನಂತರ ಏನಾಗುತ್ತದೆ ಎಂದು ಹೇಳಬೇಕಾಗಿಲ್ಲ. ಇನ್ನು ಡಿಕೆ ದಾರಿಯಲ್ಲಿ ಶಾಲೆಯೊಂದಕ್ಕೆ ಹೋಗಿ ಅಲ್ಲಿ ಮಕ್ಕಳ ನಡುವೆ ಕುಳಿತುಕೊಂಡು ಫೋಟೋ ತೆಗೆದು ಬಂದಿದ್ದಾರೆ. ಪಾಪ, ಅಲ್ಲಿ ಎಷ್ಟು ಮಕ್ಕಳು ಈಗ ಒದ್ದಾಡುತ್ತಿದ್ದಾರೋ? ಯಾರಿಗೆ ಗೊತ್ತು. ಮೀಡಿಯಾದವರು ಪ್ರತಿ ಮಗುವಿನ ಹಿಂದೆ ಹೋಗೋಕೆ ಆಗುತ್ತಾ? ಒಂದು ವೇಳೆ ಸಾಮೂಹಿಕವಾಗಿ ಅನೇಕರಿಗೆ ಪಾಸಿಟಿವ್ ಆದರೂ ಬಹಿರಂಗಪಡಿಸಬೇಡಿ ಎಂದು ಈಗಾಗಲೇ ಹೇಳಿರಬಹುದು. ಇನ್ನು ಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೆಸ್ ಮುಖಂಡರು ತಮ್ಮ ಶಕ್ತಿ ಸಾಮರ್ತ್ಯ ತೋರಿಸಲು ಡಿಕೆಶಿ ಹಿಂದೆ ಮುಂದೆ ತಮ್ಮ ಬೆಂಬಲಿಗರನ್ನು ಕಟ್ಟಿಕೊಂಡು ಓಡಾಡುತ್ತಿರುತ್ತಾರೆ. ಕರಾವಳಿಯ ಕಾಂಗ್ರೆಸ್ ಮುಖಂಡರು ಇದಕ್ಕೆ ಹೊರತಾಗಿಲ್ಲ. ಒಬ್ಬರು ಡಿಕೆ ಎದುರು ಊರಿನಿಂದ ಚೆಂಡೆಯವರನ್ನು ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಿಸಿದ್ದಾರೆ. ಅದು ಪತ್ರಿಕೆಗಳಲ್ಲಿ ಬರುವ ಹಾಗೆ ನೋಡಿಕೊಂಡಿದ್ದಾರೆ. ಅದರಿಂದ ಮುಂದಿನ ಟಿಕೆಟ್ ಫಿಕ್ಸ್ ಎಂದು ಅಂದುಕೊಂಡಿದ್ದಾರೆ. ಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡುವುದು ಪಕ್ಷದ ಅಧ್ಯಕ್ಷರಲ್ವಾ? ಹಾಗಿದ್ದ ಮೇಲೆ ಈಗ ಅವರ ಪಾದಯಾತ್ರೆಯಲ್ಲಿ ಭಾಗವಹಿಸದಿದ್ದರೆ ಆಗುತ್ತಾ? ಮುಖ ತೋರಿಸದಿದ್ದರೆ ಆಗುತ್ತಾ? ಎಷ್ಟು ಜನರನ್ನು ಕರೆದುಕೊಂಡು ಬಂದಿದ್ದೀರ್ರಿ ಎಂದು ಕೇಳಿದರೆ ನೂರಿನ್ನೂರು ಎಂದು ಹೇಳದಿದ್ದರೆ ಮುಖ ಉಳಿಯುತ್ತಾ? ಹಾಗೆ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆಗೆ ಹೋದವರು ಬರುವಾಗ ತಮ್ಮ ಗೆಳೆಯ ಮತ್ತು ಜನಸಾಮಾನ್ಯರ ಶತ್ರು ಕೊರೊನಾವನ್ನು ತೆಗೆದುಕೊಂಡೇ ಬಂದಿರುತ್ತಾರೆ. ಅಲ್ಲೆಲ್ಲ ಹಂಚಿಕೊಂಡು ಬಿಡುತ್ತಾರೆ. ಆಗ ಪ್ರತಿ ಊರಿನಲ್ಲಿಯೂ ಕೊರೊನಾ 500 ರಿಂದ 600 ಸಂಖ್ಯೆಯಾಗುತ್ತದೆ. ಹಾಗಾದ್ರೆ ಎರಡು ಡೋಸ್ ಲಸಿಕೆ ತೆಗೆದುಕೊಳ್ಳಿ, ಕೊರೊನಾ ಬಂದರೆ ಏನು ಆಗುವುದಿಲ್ಲ ಎಂದು ಹೇಳಿದ್ದಾರಲ್ಲ. ಏನು ಹೆದರಿಕೆ ಎಂದು ಕೇಳಬಹುದು. ಅದಕ್ಕೆ ಉತ್ತರ ಆ “ತಜ್ಞರೇ” ನೀಡಬೇಕು. ಯಾಕೆಂದರೆ ಲಸಿಕೆಯ ಪರಿಣಾಮ ಖಾಲಿಯಾಗಲಿದೆ. ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಎಂದು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹೇಳಲಾಗಿದೆ. ಕೆಲವು ತಿಂಗಳ ಬಳಿಕ ಅದು ಸಾರ್ವಜನಿಕ ಘೋಷಣೆ ಆದ್ರೂ ಆಗಬಹುದು. ಇದರಿಂದ ಮತ್ತೆ ನಾವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೋ, ಲಸಿಕಾ ಶಿಬಿರಗಳಿಗೋ, ಆಸ್ಪತ್ರೆಗಳಿಗೋ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಸರಕಾರಗಳು ಮತ್ತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಲಸಿಕೆಗಳನ್ನು ಉಚಿತವಾಗಿ ಕೊಡಬೇಕಾಗುತ್ತೆ. ನಡುವೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದರೂ ಬರಬಹುದು. ಆಗ ಬಲಿಯಾಗಬೇಕಾಗುವುದು ಮಧ್ಯಮ ವರ್ಗದವರು. ಅತ್ತ ದುಡಿವೆಯೂ ಇಲ್ಲದೆ, ಇತ್ತ ಮನೆ ಸಾಲ, ವಾಹನ ಸಾಲ, ಮಕ್ಕಳ ಮದುವೆಯ ಖರ್ಚು, ವಿದ್ಯಾಭ್ಯಾಸದ ಖರ್ಚು ಕೊಡಲು ಕಷ್ಟವಾಗಿ ಆತ್ಮಹತ್ಯೆ ಮಾಡಿದ ಕುಟುಂಬಗಳು ಇವೆ. ಒಟ್ಟಿನಲ್ಲಿ ಒಂದು ಪಾದಯಾತ್ರೆಯಿಂದ ಎಷ್ಟೋ ಜನ ಈ ಪರಿಸ್ಥಿತಿಗೆ ಬರಲು ಕಾರಣರಾದವರು ಮಾತ್ರ “ನಮ್ಮನ್ನು ಬೇಕಾದರೆ ಬಂಧಿಸಿ, ನಾವು ಕೋವಿಡ್ ಟೆಸ್ಟ್ ಮಾಡಿಸಲ್ಲ” ಎಂದು ಘಂಟಾಘೋಷವಾಗಿ ಹೇಳಿದರೂ ರಾಜ್ಯ ಸರಕಾರ ಏನೂ ಮಾಡುತ್ತಿಲ್ಲ. ಹಾಗಂತ ನಾನು ಕಾಂಗ್ರೆಸ್ಸಿಗೆ ಮಾತ್ರ ಹೇಳುತ್ತಿಲ್ಲ. ಭಾರತೀಯ ಜನತಾ ಪಾರ್ಟಿಯವರು ಜನಾರ್ಶೀದ ಯಾತ್ರೆ ಎಂದು ಮಾಡಿದರು. ಅಲ್ಲಿಯೂ ಹೀಗೆ ಜನ ತಂಡೋಪತಂಡವಾಗಿ ಸೇರಿದರು. ಮೊನ್ನೆಯಂತೂ ಜನಸಾಗರದ ನಡುವೆ ನಿಂತು ರೇಣುಕಾಚಾರ್ಯ ಅದೇನೋ ಕಾರ್ಯಕ್ರಮ ಮುಗಿಸಿ ಮಾಧ್ಯಮದವರು ಕೇಳಿದ್ದಕ್ಕೆ ತಪ್ಪಾಗಿದೆ. ಒಪ್ಪಿಕೊಳ್ತೀನಿ ಎಂದು ಹೇಳಿದ್ದಾರೆ. ಇನ್ನು ಜಾತ್ಯಾತೀತ ಜನತಾದಳದವರು ನಾವೇನೂ ಕಡಿಮೆ ಇಲ್ಲ ಎಂದು ಅವರು ಕೂಡ ನೀರಿನ ಯಾತ್ರೆ ಇಟ್ಟುಕೊಂಡಿದ್ದಾರೆ. ಹೀಗೆ ಎಲ್ಲಾ ಪಕ್ಷಗಳು ಕೂಡ ಬೀದಿಗೆ ಇಳಿದರೆ ಜನಸಾಮಾನ್ಯ ಮನೆಯೊಳಗೆ ಬಂಧಿಯಾಗಬೇಕಾಗುತ್ತದೆ. ಯಾಕೆಂದರೆ ಹೊಟ್ಟೆಪಾಡಿಗೆ ಕೆಲಸಕ್ಕೆ ಹೋದವರಿಗೆ ನೀವು ನಿಲ್ಲಿಸಿ ನಾಲ್ಕು ಬಡಿಯುತ್ತೀರಿ. ರಾತ್ರಿ ಡ್ಯೂಟಿ ಮುಗಿಸಿ ಬರುವವರಿಗೆ ಹೇಳೋರ್ ಕೇಳೋರ್ ಯಾರೂ ಇಲ್ವಾ ಎನ್ನುತ್ತೀರಿ. ಶನಿವಾರ, ಆದಿತ್ಯವಾರದಂದೇ ನಾಲ್ಕು ಕಾಸು ದುಡಿಯುತ್ತಿದ್ದವರಿಗೆ ನೀವು ವೀಕೆಂಡ್ ಕಫ್ಯರ್ೂ ಮಾಡುತ್ತೀರಿ. ಯಕ್ಷಗಾನ, ನಾಟಕ ಕಲಾವಿದರ, ಪ್ರವಾಸಿ ಕ್ಷೇತ್ರದ, ಸಿನೆಮಾ ಕ್ಷೇತ್ರದ ಜನರ ಹೊಟ್ಟೆಗೆ ಪೆಟ್ಟುಬೀಳುತ್ತಿದೆ. ಅದೇ ದೊಡ್ಡ ದೊಡ್ಡ ರಾಜಕಾರಣಿಗಳು ಆರಾಮವಾಗಿ ಏ ಹೋಗ್ರೋ ಮಾಸ್ಕ್ ಬೇಡಾ ಎಂದರೆ ಅವರಿಗೆ ಜೋರು ಮಾಡಿ ಹಾಕಿಸುವ ಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲ. ಕರ್ನಾಟಕ ಬಿಡಿ, ಅಲ್ಲಿ ದೆಹಲಿಯ ಸಿಎಂ ಅರವಿಂದುಗೆ ಕೊರೊನಾ ಪಾಸಿಟಿವ್ ಆಗಿತ್ತು. ಬೇರೆಯವರಿಗಾದರೆ ಎರಡು ದಿನ ಆಸ್ಪತ್ರೆ, ಏಳು ದಿನ ಹೋಂ ಐಸೋಲೇಶನ್. ಆದರೆ ಈ ಮನುಷ್ಯ ನಾಲ್ಕನೇ ದಿನವೇ ಬಹಿರಂಗವಾಗಿದ್ದರು!!.
Leave A Reply