ಮಂಗಳೂರಿನ ಮಾನ ಕಳೆಯಲು ಸಚಿವರೇ ಬರಬೇಕಾಯಿತು!!

ಆ ಆಂಟೋನಿಯವರು ಕಳೆದ ಬಾರಿ ತಮ್ಮ ಟೆಂಡರ್ ಅವಧಿ ಮುಗಿಯುವ ಎರಡು ತಿಂಗಳು ಇರುವಾಗಲೇ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹ ನಿಲ್ಲಿಸಿಯಾಗಿತ್ತು. ಈಗ ನಾಲ್ಕು ತಿಂಗಳ ಮೊದಲಿನಿಂದ ಕನಿಷ್ಟ 90% ಮನೆಗಳಿಂದಲಾದರೂ ತ್ಯಾಜ್ಯ ಸಂಗ್ರಹ ಆಗುತ್ತಿತ್ತು. ಈಗ ಅದು ಕೂಡ ಇಲ್ಲ. ಆದ್ದರಿಂದ ಅನೇಕ ಕಡೆ ಜನ ತಾವು ಹಿಂದೆ ಎಲ್ಲಿ ತಂದು ಕಸ ಗುಡ್ಡೆ ಹಾಕುತ್ತಿದ್ದರೋ ಅಲ್ಲಿಯೇ ಮತ್ತೆ ಕಸ ತಂದು ಬಿಸಾಡಿ ಹೋಗುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಈ ಅತೀ ಬುದ್ಧಿವಂತ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಹೊಸ ಉಪಾಯವೊಂದನ್ನು ಮಾಡಿದ್ದಾರೆ.
ಜನರು ಈ ಕಸ ಬಿಸಾಡುವ ಜಾಗಗಳನ್ನು ಬ್ಲ್ಯಾಕ್ ಪಾಯಿಂಟ್ ಎಂದು ಗುರುತಿಸಿ, ಅಲ್ಲಿ ಒಂದಿಷ್ಟು ಸ್ವಚ್ಚ ಮಾಡಿ, ಒಂದು ಬ್ಯಾನರ್ ಹಾಕಿ “ಇಲ್ಲಿ ಕಸ ಹಾಕಿದರೆ ಇಂತಿಷ್ಟು ದಂಡ” ಎಂದು ಬರೆಯಿಸಿ, ಅಲ್ಲೊಂದು ಸಿಸಿಟಿವಿ ಕ್ಯಾಮೆರಾ ಇಟ್ಟು ಕೈತೊಳೆದುಕೊಂಡು ಬಿಟ್ಟಿದ್ದಾರೆ. ಇದಕ್ಕೆ ಇವರು ಇಟ್ಟ ಅನುದಾನ 25 ಲಕ್ಷ ರೂಪಾಯಿಗಳು. ಇಷ್ಟೆಲ್ಲ ಮಾಡಿದ ನಂತರ ಅಲ್ಲಿ ಯಾರಾದರೂ ಬಂದು ಕಸ ಬಿಸಾಡಿದರೆ ಅವರು ಯಾರು, ಎಲ್ಲಿ ಮನೆ ಎಂದು ಹುಡುಕಿ ದಂಡ ಹಾಕುವುದು ಹೇಗೆ? ಯಾರಿಗೆ ಗೊತ್ತಾಗುತ್ತೆ? ಅದರ ಬದಲು ಏನೂ ಖರ್ಚಿಲ್ಲದ ಒಂದು ಉಪಾಯವನ್ನು ನಾನು ಇವರಿಗೆ ಹೇಳಿಕೊಡುತ್ತೇನೆ. ಅದೇನೆಂದರೆ ಆಯಾ ವಾರ್ಡಿನ ಕಾರ್ಪೋರೇಟರ್ ಆ ಕಸ ತಂದು ಬೀಳುತ್ತದೆಯಲ್ಲ, ಆ ರಸ್ತೆಯ ಮನೆಮನೆಗೆ ಹೋಗಿ ನಿಮ್ಮ ಮನೆಯಿಂದ ಕಸ ಸರಿಯಾಗಿ ಸಂಗ್ರಹವಾಗುತ್ತದಾ ಎಂದು ವಿಚಾರಿಸಿದರೆ ಆಯಿತಲ್ಲವೇ? ನೀವು ಹೇಗೂ ಪಕ್ಷದ ಕಾರ್ಯಕ್ರಮ, ಎಂಪಿ, ಎಂಎಲ್ ಎ ಚುನಾವಣೆ, ಅದು ಇದು ಎಂದು ವಾರ್ಡಿನಲ್ಲಿ ಐದು ವರ್ಷಕ್ಕೆ ಕೆಲವು ಸಲ ಎಲ್ಲರ ಮನೆಗಳಿಗೆ ಹೋಗಬೇಕಾಗಿರುತ್ತೀರಿ. ಹಾಗೆ ಒಂದು ಸಲ ಸರಿಯಾಗಿ ಕಸ ಸರಿಯಾಗಿ ಸಂಗ್ರಹವಾಗುತ್ತದಾ ಎಂದು ವಿಚಾರಿಸಲು ಹೋಗಬಹುದಲ್ಲವೇ?ಒಂದು ವೇಳೆ ನಿಮ್ಮ ಕಾರ್ಪೋರೇಟರ್ ಹೀಗೆ ಮಾಡದಿದ್ದರೆ ನಾನು ಜನರಲ್ಲಿ ವಿನಂತಿಸುವುದೇನೆಂದರೆ ತಾವು ಎಲ್ಲೆಲ್ಲಿ ಕಸ ತಂದು ಹಾಕಿ ಅದು ಸಚಿವರಂತವರು ಯಾರೋ ನೋಡಿ ನಮ್ಮ ಮಂಗಳೂರಿನ ಮರ್ಯಾದೆಯನ್ನು ಹರಾಜು ಹಾಕುವ ಬದಲು ಆ ಕಸಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಎದುರು ತಂದು ಗುಡ್ಡೆ ಹಾಕಿ. ಅಲ್ಲಿ ಕಸದ ರಾಶಿ ಬಿದ್ದರೆ ಸಚಿವರು ಎಲ್ಲಿಯೂ ಹೋಗದೇ ಅಲ್ಲಿಯೇ ನಿಂತು ನೋಡಬಹುದು. ಇದರಿಂದ ಮಂಗಳೂರಿನ ಸೌಂದರ್ಯ ಅವರಿಗೆ ಅಲ್ಲಿಯೇ ಅರ್ಥವಾಗುತ್ತದೆ. ಆಂಟೋನಿಯವರು ಈ ಕಾರ್ಪೋರೇಟರ್ ಗಳನ್ನು, ಅಧಿಕಾರಿಗಳನ್ನು ಖರೀದಿಸಿರುವುದು ಗೊತ್ತಾಗುತ್ತದೆ!
Leave A Reply