ಕಾಂಗ್ರೆಸ್ ಪ್ರತಿಭಟನೆಯಿಂದ ಈಶು ಸಚಿವಸ್ಥಾನ ಭದ್ರವಾಯಿತು!!
ಮಕ್ಕಳಾಗಿದ್ದಾಗ ನಾವು ಮೈದಾನದಲ್ಲಿಯೋ, ತರಗತಿಗಳಲ್ಲಿಯೋ ಸಹಪಾಠಿಗಳೊಡನೆ ಮುನಿಸಿಕೊಂಡು “ಏ, ಹೋಗೋ ಗ್ರೌಂಡ್ ನಿನ್ನಪ್ಪನದ್ದು ಅಲ್ಲ, ನಾನು ಬರಬಾರದು ಎಂದು ಹೇಳಲು ನೀನು ಯಾರೋ” ಎಂದು ಹೇಳಿರುತ್ತೀವೆ ಅಥವಾ ಹೇಳಿದ್ದು ಕೇಳಿರುತ್ತೇವೆ. ಆಗ ಹುಡುಗು ಮನಸ್ಸು. ನಮ್ಮ ಮಾತಿನ ಗಂಭೀರತೆ ನಮಗೆ ಗೊತ್ತಿರುವುದಿಲ್ಲ. ಯಾರೋ ಹೇಳಿದ್ದು ಕೇಳಿರುತ್ತೇವೆ, ಅದನ್ನೇ ಹೇಳಿಬಿಡ್ತೇವೆ. ಆದರೆ ದೊಡ್ಡವರಾಗುತ್ತಿದ್ದಂತೆ ನಾವು ಮಾನಸಿಕವಾಗಿಯೂ ಪಕ್ವರಾಗುತ್ತೇವೆ. ಹಾಗೆ ಉಢಾಪೆಯಿಂದ ಮಾತನಾಡಲು ಹೋಗುವುದಿಲ್ಲ. ಒಂದು ವೇಳೆ ನಾವು ಮತ್ತೆಯೂ ಅಂತಹುದೇ ರೀತಿಯಲ್ಲಿ ಮಾತನಾಡುತ್ತಿದ್ದೇವೆ ಎಂದರೆ ಒಂದೋ ನಾವು ರಾಜಕಾರಣಿಗಳಾಗಿದ್ದೇವೆ ಅಥವಾ ನಮ್ಮ ಮನಸ್ಸು ಬೆಳೆದಿಲ್ಲ ಎನ್ನುವುದು ಸ್ಪಷ್ಟ. ಹಾಗಾದರೆ ಕರ್ನಾಟಕ ಎಂಬ ಡಿಸೆಂಟ್ ರಾಜ್ಯದಲ್ಲಿ ಮೊಮ್ಮೊಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ವಿಧಾನಸಭೆಯ ಒಳಗೆ ಈಶ್ವರಪ್ಪನವರು ಆಡಿದ ಮಾತುಗಳು ಮತ್ತು ಅದಕ್ಕೆ ಪ್ರತಿಯಾಗಿ ಡಿಕೆಶಿ ಕೊಟ್ಟ ಪ್ರತಿಕ್ರಿಯೆಯನ್ನು ನೋಡುವಾಗ ರಾಜ್ಯದ ಜನತೆಗೆ ಇವರನ್ನು ಕಳುಹಿಸಿದ್ದು ಇದಕ್ಕೆನಾ ಎಂದು ಅನಿಸುತ್ತದೆ. ವಿಧಾನಸಭೆಯ ಒಳಗೆ ಕೇವಲ ಅಭಿವೃದ್ಧಿಯ ಚರ್ಚೆಗಳು ಮಾತ್ರ ಆಗಬೇಕೆ ವಿನ: ಕೆಲಸಕ್ಕೆ ಬಾರದ ಸಂಗತಿಯನ್ನು ಇಟ್ಟುಕೊಂಡು ಜನರ ತೆರಿಗೆಯ ಹಣ ಪೋಲು ಮಾಡುತ್ತಿರುವ ಈ ಮುದಿ ವಯಸ್ಸಿನ ರಾಕಾರಣಿಗಳು ಅದು ಯಾರೇ ಇದ್ದರೂ ಅಂತವರನ್ನು ಮತ್ತೆ ವಿಧಾನಸಭೆಗೆ ಜನ ಆಯ್ಕೆ ಮಾಡಲೇಬಾರದು.
ಅಷ್ಟಕ್ಕೂ ಕಾಂಗ್ರೆಸ್ ಕೂಡ ವಿಧಾನಪರಿಷತ್ ಒಳಗೆ ಅಹೋರಾತ್ರಿ ಧರಣಿಗೆ ಕುಳಿತುಕೊಂಡಿತ್ತು. ಅದು ಕೂಡ ಯಾವ ಪುರುಷಾರ್ಥಕ್ಕೆ. ಈಶುವನ್ನು ಸಚಿವಸ್ಥಾನದಿಂದ ಕಿತ್ತೊಗೆಯಬೇಕು ಎನ್ನುವ ಕಾರಣಕ್ಕೆ. ಕಿತ್ತೊಗೆಯಬೇಕಾದವರು ಯಾರು? ಅದು ದೆಹಲಿಯ ಹೈಕಮಾಂಡ್. ಅವರು ಕಿತ್ತೊಗೆಯಲು ಯಾವಾಗಲೋ ಸಿದ್ಧತೆ ಮಾಡಿಕೊಂಡಾಗಿತ್ತು. ಆದರೆ ಕಳೆದ ಬಾರಿ ಜಗದೀಶ್ ಶೆಟ್ಟರ್, ಸವದಿ, ಸುರೇಶ್ ಕುಮಾರ್ ಸಹಿತ ಕೆಲವರನ್ನು ಪಕ್ಷಕ್ಕೆ ಬಳಸಿಕೊಳ್ಳಲು ಸಚಿವಸ್ಥಾನದಿಂದ ತೆಗೆದಾಗ ಅದರಲ್ಲಿ ಈಶು ಹೆಸರು ಕೂಡ ಇತ್ತು. ಆದರೆ 73 ರ ಹೊಸ್ತಿಲಲ್ಲಿ ಇರುವ ಈಶು ನೀವು ನನಗೆ ಮುಂದಿನ ಬಾರಿ ಟಿಕೆಟ್ ಕೊಡುವುದು ಡೌಟು. ಇನ್ನು ಚುನಾವಣೆಗೆ ಉಳಿದಿರುವುದು ಒಂದಿಷ್ಟೇ ದಿನ. ಸಚಿವನಾಗಿಯೇ ನಿರ್ಗಮಿಸುತ್ತೇನೆ ಎಂದು ಗೋಗರೆದಾಗ ಕಾರಣ ಬೀಸುವ ದೊಣ್ಣೆಯಿಂದ ಪಾರಾಗಿದ್ದರು. ಈಗ ಮತ್ತೆ ಕೆಲವರನ್ನು ಪಕ್ಷಕ್ಕೆ ಬಳಸಿ ಸಚಿವಸ್ಥಾನದಿಂದ ಕೈಬಿಡುವುದು ಎನ್ನುವ ಚಿಂತನೆ ಜೋರಾದಾಗ ಹೊಸ ಪಟ್ಟಿಯನ್ನು ಹಿಡಿದು ಬಸ್ಸು ಬೊಮ್ಮಾಯಿ ದೆಹಲಿಗೆ ಹೋದರಾದರೂ ನಾವು ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಝಿ ಇದ್ದೇವೆ. ಮಾರ್ಚ್ ನಲ್ಲಿ ಮತ್ತೆ ಬನ್ನಿ. ನಿಮ್ಮ ರಾಜ್ಯದ ಬಜೆಟ್ ನಂತರ ನೋಡೋಣ ಎಂದು ಅಲ್ಲಿ ಅಮಿತ್ ಶಾ ಹೇಳಿ ಕಳುಹಿಸಿದ ಬಳಿಕ ಕೆಲವರು ಸಚಿವರಾಗುವುದು ಮತ್ತು ಕೆಲವರು ಮಾಜಿಗಳಾಗುವುದು ಸದ್ಯಕ್ಕೆ ಮುಂದೂಡಿಕೆ ಆಗಿದೆ. ಈಗ ಕಾಂಗ್ರೆಸ್ ಈಶು ರಾಜೀನಾಮೆಗೆ ಹಟಕ್ಕೆ ಬಿದ್ದಿರುವುದರಿಂದ ಅವರನ್ನು ಇನ್ನೊಂದು ವರ್ಷ ಇಳಿಸಲು ಹೈಕಮಾಂಡ್ ಗ್ಯಾರಂಟಿ ಹೋಗಲ್ಲ. ಯಾಕೆಂದರೆ ಇಳಿಸಿದರೆ ಕಾಂಗ್ರೆಸ್ ಕ್ರೆಡಿಟ್ ತೆಗೆದುಕೊಳ್ಳುತ್ತದೆ. ಅದರೊಂದಿಗೆ ಈಶು ಕೇಸರಿ ಧ್ವಜದ ಹೇಳಿಕೆಯನ್ನು ಕೇಸರಿ ಪಕ್ಷವೇ ತಿರಸ್ಕರಿಸಿದಂತೆ ಆಗುತ್ತದೆ. ಆದ್ದರಿಂದ ಕಾಂಗ್ರೆಸ್ಸಿನ ಹೋರಾಟ ಈಶು ಪಾಲಿಗೆ ಕಲ್ಲುಸಕ್ಕರೆ ಪಾಕದಲ್ಲಿ ಅದ್ದಿದಂತೆ ಆಗಿದೆ.
ಅದೇನೆ ರಾಜಕೀಯ ಆಯಾಮಗಳು ಇದ್ದರೂ ತೀರಾ ಚಿಕ್ಕಮಕ್ಕಳಂತೆ, ಮಾರುಕಟ್ಟೆಯಲ್ಲಿ ಪುಂಡ ರೌಡಿಗಳಂತೆ, ರಸ್ತೆಬದಿಯಲ್ಲಿ ಕಡಿಮೆ ಬೆಲೆಯ ಶರಾಬು ಕುಡಿದವರಂತೆ ಸಚಿವರು, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರುಗಳು ತೋಳೆರಿಸಿಕೊಂಡು ಹೋಗುವುದು ತಪ್ಪು. ಗಂಟೆಗೊಮ್ಮೆ ಸದನದ ಬಾವಿಯಲ್ಲಿ ಇಳಿದು ಕಲಾಪಗಳಿಗೆ ಅಡ್ಡಿ ಮಾಡುವುದು ಕೂಡ ಸರಿಯಲ್ಲ. ಅದು ಕೂಡ ಕ್ಷುಲಕ ವಿಚಾರಗಳಿಗೆ. ಒಂದು ವೇಳೆ ರಾಜ್ಯದ ಕುಡಿಯುವ ನೀರಿನ ವಿಚಾರಕ್ಕೆ ನೀವು ಸದನದಲ್ಲಿ ಪ್ರತಿಭಟನೆ ಮಾಡುತ್ತಿರಾ, ಓಕೆ. ಆರೋಗ್ಯದ ವಿಷಯದಲ್ಲಿ ಹೋರಾಟ ಮಾಡುತ್ತೀರಾ, ಓಕೆ. ಬಡವರ, ಮಧ್ಯಮವರ್ಗದವರ ಪರವಾಗಿ ಧ್ವನಿ ಎತ್ತಿ ಕೆಲಸ ಆಗದೇ ಇದ್ದಾಗ ಪ್ರತಿಭಟಿಸುತ್ತೀರಾ ಓಕೆ. ರಸ್ತೆ, ವಿದ್ಯುತ್, ಉದ್ಯೋಗ ಸಹಿತ ಅನೇಕ ವಿಷಯಗಳಲ್ಲಿ ವಿಪಕ್ಷಗಳು ಮಾಡಬೇಕಾಗಿರುವುದು ತುಂಬಾ ಇದೆ. ಅದರೆ ಅದ್ಯಾವುದೂ ಮಾಡದೇ ಕೇಸರಿ, ಹಿಜಾಬ್ ಎಂದು ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಿದರೆ ಅದರಿಂದ ಆಡಳಿತ ಪಕ್ಷಗಳದ್ದು ಏನೂ ಹೋಗುವುದಿಲ್ಲ.
ಅದರೊಂದಿಗೆ ಈಶುಗೆ ವಿರುದ್ಧವಾಗಿ ದೇಶದ ಧ್ವಜವನ್ನು ತಂದು ಹಾಗೆ ಹಿಡಿಯುವುದೇ ಅಕ್ಷಮ್ಯ ಅಪರಾಧ. ದೇಶದ ಧ್ವಜ ಎಂದರೆ ಅದು ಯಾವುದೋ ಸಂಘಟನೆಯ ಬಾವುಟ ಅಲ್ಲ. ಯಾವುದೇ ಸಂಘ, ಸಂಸ್ಥೆಯ ಬ್ಯಾನರ್ ಅಲ್ಲ. ಪ್ರತಿಭಟನೆಯ ಸಂದರ್ಭ ಹಿಡಿಯುವ ಪ್ಲೇಕಾರ್ಡ್ ಅಲ್ಲ, ಅದು ವಿಮಾನ ನಿಲ್ದಾಣದಲ್ಲಿ ಯಾರಿಗೋ ಕಾಯುವವರು ಹಿಡಿಯುವ ಬೋರ್ಡ್ ಕೂಡ ಅಲ್ಲ. ಅದಕ್ಕೆ ಅದರದ್ದೇ ಆದ ಘನಸ್ಥಿಕೆ ಇದೆ. ಅದನ್ನೆಲ್ಲ ಬಿಟ್ಟು ಒಂದು ವ್ಯಕ್ತಿಗೆ ಇರಿಸುಮುರಿಸು ಮಾಡಲು ದೇಶದ ಧ್ವಜವನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದು ಸದನದ ಬಾವಿಯೊಳಗೆ ನಿಂತರಲ್ಲ, ಇದರಿಂದ ಈಶು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಈ ದೇಶದ ಸಭ್ಯ ನಾಗರಿಕನಿಗೆ ಆ ಧ್ವಜದ ಮೇಲಿನ ಗೌರವವನ್ನು ನೀವೆ ಇಳಿಸಿದರೆ ಹೇಗ್ರಯ್ಯಾ!
Leave A Reply