ಹಿಜಾಬ್, ಹಲಾಲ್, ಕಾಶ್ಮೀರ್ ಫೈಲ್ಸ್ ಇಷ್ಟನ್ನೇ ನಂಬಬೇಡಿ ಎಂದರಂತೆ ಶಾ!
ಈಗ ಕರ್ನಾಟಕದಲ್ಲಿ ಇರುವ ರಾಜಕೀಯ ವಾತಾವರಣ ನೋಡಿದರೆ ಇದು ಭಾರತೀಯ ಜನತಾ ಪಾರ್ಟಿಯ ಪರವಾಗಿದೆ ಎನ್ನುವುದು ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು. ಕಳೆದ ಡಿಸೆಂಬರ್ ಅಂತ್ಯದ ತನಕ ರಾಜಕೀಯ ಗಾಳಿ ಕಾಂಗ್ರೆಸ್ ಪರವಾಗಿಯೇ ಬೀಸುತ್ತಿತ್ತು. ಯಾವಾಗ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಪರ ಹಟಕ್ಕೆ ಕುಳಿತರೋ ಕಾಂಗ್ರೆಸ್ ಭವಿಷ್ಯ ತೂಗುಯ್ಯಾಲೆಗೆ ಬಂದು ನಿಂತಿತು. ಎನ್ ಎಸ್ ಯುಐ ಮತ್ತು ಯುವ ಕಾಂಗ್ರೆಸ್ ಎಲ್ಲರಿಗಿಂತ ಮೊದಲಿಗೆ ಹೋಗಿ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಪ್ರಯತ್ನಿಸಿದರೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಬೇಡಾ, ಇದು ಬಿಜೆಪಿ ಎಸೆದಿರುವ ಗಾಳ, ಬೀಳಬೇಡಿ ಎಂದು ಸೂಚನೆ ಕೊಟ್ಟ ಪರಿಣಾಮ ಕಾಂಗ್ರೆಸ್ ಮೊತ್ತಮೊದಲ ಬಾರಿಗೆ ಮುಸ್ಲಿಮರ ವಿಷಯದಲ್ಲಿ ದೂರ ನಿಂತದ್ದು ನೋಡಿ ಮುಸ್ಲಿಮರು ಛೀ, ಥೂ ಎನ್ನತೊಡಗಿದರು. ಆ ವಿಷಯ ಒಂದು ಹಂತಕ್ಕೆ ಬರುತ್ತಿದ್ದಂತೆ ಹರ್ಷ ಕೊಲೆಯಾಗಿ ಹೋದ. ಅವನದ್ದೇ ಫೇಸ್ ಬುಕ್ ಸ್ಟೇಟಸ್ ನಲ್ಲಿ ಆತ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತಿಗೆ ಇನ್ನೊಂದು ಹೆಸರು ಎಂದು ಬರೆದಿದ್ದನಾದರೂ ಕೇಸರಿ ಪಾಳಯ ಆತನನ್ನು ತಮ್ಮವ ಎಂದು ಹೇಳಲು ಒಂದು ಕ್ಷಣವೂ ತಡಮಾಡಲಿಲ್ಲ. ಹೀಗಿರುವಾಗ ಮುಸ್ಲಿಮರ ಕರ್ನಾಟಕ ಬಂದ್, ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಂದ್, ಭಗವದ್ಗೀತೆ ಅಳವಡಿಕೆ, ಟಿಪ್ಪು ಪಠ್ಯದಿಂದ ಔಟ್, ಹಲಾಲ್ ಒಂದಾ, ಎರಡಾ ಎಲ್ಲವನ್ನು ಕೊನೆಯ ವರ್ಷಕ್ಕೆ ತೆಗೆದಿಟ್ಟು ಎಕ್ಸಪೈರಿ ಡೇಟ್ ಆಗುವ ಮೊದಲೇ ಖಾಲಿ ಮಾಡುವ ಗಡಿಬಿಡಿಗೆ ಬಿದ್ದವರಂತೆ ಬಿಜೆಪಿ ತನ್ನ ಭತ್ತಳಿಕೆಯ ಎಲ್ಲಾ ಬಾಣಗಳನ್ನು ಬಿಡುತ್ತಿದೆ. ಇದರಿಂದ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿ ಹೋಗಿದೆ. ಈ ನಡುವೆ ಬಂದ ಕಾಶ್ಮೀರಿ ಫೈಲ್ಸ್ ಬ್ರಹ್ಮಾಸ್ತ್ರದಂತೆ ಕಾಂಗ್ರೆಸ್ ಕಿರೀಟವನ್ನು ಧರೆಗೆ ಬೀಳಿಸುವುದರೊಂದಿಗೆ ಅಧಿಕಾರಕ್ಕೆ ಬರುವ ಕೊನೆಯ ಆಸೆಯನ್ನು ಕೂಡ ಕಾಂಗ್ರೆಸ್ ಕೈಬಿಟ್ಟಿತು. ಅಷ್ಟಕ್ಕೂ ಕಾಶ್ಮೀರ್ ಫೈಲ್ಸ್ ಗೂ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ. ಕಾಶ್ಮೀರದಲ್ಲಿ ಜಿಹಾದಿಗಳು ಕಾಶ್ಮೀರಿ ಪಂಡಿತರನ್ನು ಕೊಂದದ್ದಕ್ಕೂ, ಕಾಂಗ್ರೆಸ್ಸಿಗೂ ಏನೂ ಸಂಬಂಧ ಇಲ್ಲ. ಆಗ ಕೇಂದ್ರದಲ್ಲಿ ಆಗಲಿ, ಕಾಶ್ಮೀರದಲ್ಲಿ ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲೇ ಇಲ್ಲ. ಆದರೆ ಪಕ್ಕದ ಮನೆಯ ಮಗುವನ್ನು ಕರೆದು ತಮ್ಮ ಮನೆಯಲ್ಲಿ ಬಿಸ್ಕಿಟ್ ಕೊಟ್ಟು ಮುದ್ದು ಮಾಡಿದ ಫೀಲಿಂಗ್ ನಲ್ಲಿ ಕಾಂಗ್ರೆಸ್ ಯಾಕೆ ಹತಾಶೆಗೆ ಒಳಪಟ್ಟಿತು ಎಂದು ಅದರ ರಾಜ್ಯ ನಾಯಕರಿಗೆ ಗೊತ್ತಾಗಿಲ್ಲ.
ಈ ನಡುವೆ ಸಿದ್ದು ಒಂದು ಕಾಲದ ಬಿಜೆಪಿಯ ಯತ್ನಾಳರಂತೆ ಎಲ್ಲದಕ್ಕೂ ಕೊಂಕು ಮಾತನಾಡುತ್ತಾ ಕಾಂಗ್ರೆಸ್ ಅನ್ನು ಇಬ್ಬಂದಿಗೆ ಸಿಲುಕಿಸುತ್ತಲೇ ಇದ್ದರು. ಯಾವಾಗ ಸಂತರನ್ನು ಕೂಡ ಹಿಜಾಬ್ ವಿಷಯಕ್ಕೆ ಸಿದ್ದು ಎಳೆದು ತಂದರೋ ಕಾಂಗ್ರೆಸ್ ಗೆಲ್ಲುವ ಕೊನೆಯ ಆಶಾಕಿರಣವನ್ನು ಕೂಡ ಕಳೆದುಕೊಂಡು ಬಿಟ್ಟಿದೆ. ಈಗ ಅವರ ಬಳಿ ಇರುವುದು ಬಿಜೆಪಿ ಗುತ್ತಿಗೆಯಲ್ಲಿ 40% ಕಮೀಷನ್ ಹೊಡೆಯುತ್ತೆ ಎನ್ನುವ ಆರೋಪ. ಮೇಲ್ನೋಟಕ್ಕೆ ವಿಷಯ ಸತ್ಯ ಮತ್ತು ಆಕರ್ಷಕ ಎಂದು ಕಾಣಿಸುತ್ತಿದ್ದರೂ ಇಂತಹ ಆರೋಪಕ್ಕೆ ಒಂದೆರಡು ತಿಂಗಳೊಳಗೆ ಸಾಲಿಡ್ ಸಾಕ್ಷಿ ಕೊಡದೇ ಹೋದರೆ ಅದನ್ನು ಜನ ರಬ್ಬರ್ ಹಾವು ಎಂದೇ ಅಂದುಕೊಂಡು ಬಿಡುತ್ತಾರೆ. ಸಾಕ್ಷಿ ಕೊಡೋಣ ಎಂದರೆ ಆರೋಪ ಮಾಡಿದ್ದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು. ಅವರೇ ಸಾಕ್ಷಿ ಕೊಡುತ್ತಿಲ್ಲ ಎಂದ ಮೇಲೆ ಕಾಂಗ್ರೆಸ್ ದೇವರೇ ಇಲ್ಲದ ಪಲ್ಲಂಕಿಯನ್ನು ಹೊತ್ತುಕೊಂಡಂತೆ ಆಗಿದೆ. ಪರಿಸ್ಥಿತಿ ಹೀಗೆ ಆಶಾದಾಯಕವಾಗಿ ಇರುವಾಗಲೇ ಏಳು ತಿಂಗಳಿಗೆ ಹುಟ್ಟಿದವರಂತೆ ಬಿಜೆಪಿ ಚುನಾವಣೆಗೆ ಹೋಗುವ ಆತುರತೆಯನ್ನು ತೋರಿಸುತ್ತಿರುವುದು. ಹೇಗೂ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಇದೆ. ಅದೇ ಹೊತ್ತಿಗೆ ನಾವು ಕೂಡ ಪೇಟಾ ಕಟ್ಟಿಸಿಕೊಂಡು ಹಸೆಮಣೆ ಏರೋಣ ಎಂದು ಬೊಮ್ಮಾಯಿ ಅಂದುಕೊಂಡಿದ್ದರೆ ಇತಿಹಾಸವನ್ನು ನೋಡಿದ ರಾಜಕೀಯ ತಜ್ಞರು ಅದು ಅಷ್ಟು ಒಳ್ಳೆಯದಲ್ಲ ಎಂದು ಹೇಳುತ್ತಿದ್ದಾರೆ. ಹಿಂದೆ ಎಸ್ ಎಂ ಕೃಷ್ಣ, ಪಿ.ವಿ. ನರಸಿಂಹ ರಾಯರು, ಚಂದ್ರಬಾಬು ನಾಯ್ಡು ಅವಧಿಪೂರ್ವ ಚುನಾವಣೆಗೆ ಹೋಗಿ ಕೈಸುಟ್ಟುಕೊಂಡಿದ್ದರು. ಯಾಕೆಂದರೆ ಹಿಂದೂತ್ವವನ್ನು ಒಂದೇ ಇಟ್ಟುಕೊಂಡು ಚುನಾವಣೆಗೆ ಹೋಗುವುದು ಅಷ್ಟು ಸಮಂಜಸವಲ್ಲ ಎನ್ನುವುದು ಅಮಿತ್ ಶಾ ಅಭಿಪ್ರಾಯ. ಊಟಕ್ಕೆ ತಕ್ಕಂತೆ ಪದಾರ್ಥಗಳು ಇರಬೇಕೆ ವಿನ: ಅದೇ ಊಟವಾಗುವುದಿಲ್ಲ. ಕರಾವಳಿ, ಮಲೆನಾಡಿನಲ್ಲಿ ಅದು ನಡೆಯಬಹುದು. ಆದರೆ ಹಳೆ ಮೈಸೂರು, ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಅನೇಕ ಕಡೆ ಜನ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ? ಸರಿಯಾಗಿ ನೋಡಿದರೆ ತೋರಿಸಬಹುದಾದ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆ ಕಾಣಿಸುವುದಿಲ್ಲ. ಡಿಕೆಶಿ, ಸಿದ್ದು ಹಟಕ್ಕೆ ಬಿದ್ದು ಬೈದುಕೊಳ್ಳುತ್ತಿರುವುದು ಬಿಜೆಪಿಗೆ ಲಾಭವಾಗುತ್ತಿದೆಯಾದರೂ ಅದು ಗೆಲುವಿನ ಸನಿಹಕ್ಕೆ ತರದೇ ಹೋದರೆ? ಆದ್ದರಿಂದ ಒಂದು ವರ್ಷದಲ್ಲಿ ಏನಾದರೂ ಗಟ್ಟಿ ಅಭಿವೃದ್ಧಿ ತೋರಿಸಿ ಅದರೊಂದಿಗೆ ಹಿಂದೂತ್ವವನ್ನು ಸೇರಿಸಿ ಚುನಾವಣೆಗೆ ಹೋಗೋಣ ಎಂದು ಶಾ ಹೇಳಿರುವುದು ಹೌದಾದರೂ ಡಿಸೆಂಬರ್ ನಲ್ಲಿ ಮುಹೂರ್ತ ಇಡಲು ಅವಕಾಶ ಕೇಳುವ ಗಡಿಬಿಡಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ. ಅತ್ತ ಇಬ್ರಾಹಿಂ, ಹೊರಟ್ಟಿ ಜೆಡಿಎಸ್ ಬಿಟ್ಟು ಹೋಗಿರುವುದು ಆ ಪಕ್ಷಕ್ಕೆ ಹೊಡೆತ ನೀಡಿದ ನಡುವೆ ಆಪ್ ಒಂದಿಷ್ಟು ಗರಿಮುರಿಯಾಗಿ ಹೋರಾಟಕ್ಕೆ ಇಳಿದರೆ ಬಿಜೆಪಿಗೆ ಗೆಲುವು ಚಿನ್ನದ ತಟ್ಟೆಯಲ್ಲಿ ಸಿಗುವುದು ಡೌಟು!!
Leave A Reply