ಕಾಂಗ್ರೆಸ್ ಹೋರಾಟ ಕಮೀಷನ್ ವಿರುದ್ಧ ಅಲ್ಲ, ಕಮೀಷನ್ ಹೆಚ್ಚಾಗಿರುವುದರ ವಿರುದ್ಧ!!
ತುಂಬಾ ದಿನಗಳ ತನಕ ತಿನ್ನಲು ಏನೂ ಇಲ್ಲದೆ ಉಪವಾಸ ಇದ್ದ ಮಾಂಸಹಾರಿಗಳ ಮುಂದೆ ತಟ್ಟೆ ತುಂಬಾ ಚಿಕನ್ ಐಟಂಗಳನ್ನು ಇಟ್ಟು ತಿನ್ನು ಎಂದರೆ ಆ ವ್ಯಕ್ತಿಯ ಖುಷಿ ಹೇಗಿರಬೇಡಾ? ಅಂತದೊಂದು ಸಂಭ್ರಮವನ್ನು ಒಳಗೊಳಗೆ ಅನುಭವಿಸುತ್ತಾ ಕಾಂಗ್ರೆಸ್ಸಿಗರು ಹೋರಾಟ ಮಾಡುತ್ತಿದ್ದಾರೆ. ಅವರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಂತ ಇದು ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟ ಎಂದು ಯಾರೂ ತಪ್ಪು ತಿಳಿದುಕೊಳ್ಳಬಾರದು. ಇದು ಕಮಿಷನ್ ವಿರುದ್ಧದ ಹೋರಾಟವೂ ಅಲ್ಲ. ಇದು ಕಮೀಷನ್ ಪ್ರಮಾಣ ಹೆಚ್ಚಳವಾಗಿದೆ ಎಂದು ಆರೋಪಿಸಿ ಹೋರಾಟ. ಯಾಕೆಂದರೆ ಯಾವ ಸರಕಾರ ಬಂದರೂ ಕಮೀಷನ್, ಭ್ರಷ್ಟಾಚಾರವನ್ನು ಹೋಗಲಾಡಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಕಾಂಗ್ರೆಸ್ ಕೂಡ ಅಲ್ಲಗಳೆಯುವುದಿಲ್ಲ. ನಮ್ಮ ಸಮಯದಲ್ಲಿ ಒಂದೇ ಒಂದು ರೂಪಾಯಿ ಕಮೀಷನ್ ಪಡೆದಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕಾಂಗ್ರೆಸ್ಸಿನ ಸಿಎಂ ಆಗಲು ತಯಾರಾಗಿರುವ ಯಾವ ಫೇಸ್ ಕಟ್ ಕೂಡ ಹೇಳುವ ಧೈರ್ಯ ಮಾಡುವುದಿಲ್ಲ. ಆದರೆ ಹೊರಗಿನಿಂದ ನೋಡುತ್ತಿರುವ ಜನಸಾಮಾನ್ಯರಿಗೆ ಮಾತ್ರ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿದೆ ಎಂದು ಅನಿಸುತ್ತದೆ. ಪ್ರತಿಭಟನೆ, ಹೋರಾಟ ಯಾವುದೇ ರಾಜಕೀಯ ಪಕ್ಷದ ಜನ್ಮಸಿದ್ಧ ಹಕ್ಕು. ಮಾಡಲೇಬೇಕು. ಇಲ್ಲದಿದ್ದರೆ ಜನರೇ ಕೇಳುತ್ತಾರೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಾಯಕರಿಗೆ ತಾವು ಹೋರಾಡುತ್ತಿರುವ ವಿಷಯದಲ್ಲಿ ಸ್ಪಷ್ಟತೆ ಬೇಕು ಮತ್ತು ನೈತಿಕತೆ ಬೇಕು. ಆಗ ಮಾತ್ರ ಪ್ರತಿಭಟನೆ ದಡ ಸೇರುತ್ತದೆ. ಮೊದಲನೇಯದಾಗಿ ಈಗಿರುವ ರಾಜ್ಯ ಸರಕಾರ 40% ಕಮೀಷನ್ ಸರಕಾರ ಎಂದು ಕಾಂಗ್ರೆಸ್ ಹೇಳುತ್ತಿದೆ. ಓಕೆ. ಆದರೆ ಅದಕ್ಕೆ ಇವರ ಬಳಿ ಸಾಕ್ಷ್ಯ ಇದೆಯಾ. ಯಾವ ಸಚಿವ, ಶಾಸಕ, ಸಂಸದ 40% ಕಮೀಷನ್ ಕೇಳಿದ್ದಾರೆ ಎಂದು ಇವರು ಸಾಕ್ಷಿ ಇಟ್ಟು ತೋರಿಸಲಿ. ಒಂದು ವೇಳೆ ಆರೋಪ ಮಾಡಿದ್ದು ನಾವಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಎಂದು ಇವರು ಹೇಳುವುದಾದರೆ ಅವರಾದರೂ ಸಾಕ್ಷ್ಯ ನೀಡಲಿ. ಅವರು ಕೊಡಲ್ಲ, ಇವರು ಕೊಡಲ್ಲ ಎಂದಾದರೆ ಇದು ನಿಮ್ಮದು ಕಳ್ಳ-ಪೊಲೀಸ್ ಆಟವಾ? ಇನ್ನು 40% ಕಮೀಷನ್ ಜಾಸ್ತಿಯಾಯಿತು ಎನ್ನುವುದೇ ಆದರೆ ಎಷ್ಟಕ್ಕೆ ಓಕೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. 10-15 ಶೇಕಡಾ ಆದರೆ ಪರವಾಗಿಲ್ಲವೇ? ಒಂದು ವೇಳೆ ಆಯಿತು ಎಂದಾದರೆ ಅದಕ್ಕೆ ಗುತ್ತಿಗೆದಾರರ ಒಪ್ಪಿಗೆ ಇದೆಯಾ? ಇದಕ್ಕೆ ಕಾನೂನಾತ್ಮಕವಾಗಿಯೂ ಒಪ್ಪಿಗೆ ಕೊಡಬಹುದಲ್ಲಾ? ಇಷ್ಟೇ ಕಮೀಷನ್ ಎಂದು ಪ್ರತಿಯೊಬ್ಬರು ಫಿಕ್ಸ್ ಮಾಡಿಕೊಳ್ಳಬಹುದಲ್ಲ? ಇನ್ನು ಕಮೀಷನ್ ಕೇವಲ ರಾಜಕಾರಣಿಗಳು ಮಾತ್ರ ಪಡೆದುಕೊಳ್ಳುತ್ತಾರೆ ಎಂದು ಯಾರೂ ಭಾವಿಸಬಾರದು.
ಅಧಿಕಾರಿಗಳು ಕೂಡ ಲಂಚವನ್ನು ಪಡೆಯುವುದರಲ್ಲಿ ಹಿಂದೂ ಮುಂದೆ ನೋಡುವುದಿಲ್ಲ. ಪಕ್ಷ ಯಾವುದೇ ಅಧಿಕಾರಕ್ಕೆ ಬರಲಿ, ಅಧಿಕಾರಿಗಳು ಅವರೇ ಇರುತ್ತಾರೆ. ಅವರ ಕಮೀಷನ್ ಕೂಡ ಹಾಗೇ ಇರುತ್ತದೆ. ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಹಿಂದೆ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಾರ್ಟಿ ಆಗಲಿ ಮತ್ತು ಈಗ ಹೋರಾಟ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂದು ಕನಸು ಕಾಣುತ್ತಿರುವ ಕಾಂಗ್ರೆಸ್ ಯಾವ ಸಂದರ್ಭದಲ್ಲಿಯೂ ಜನರಿಗಾಗಲೀ, ಗುತ್ತಿಗೆದಾರರಿಗೆ ಆಗಲಿ ಲಂಚಮುಕ್ತ ರಾಜ್ಯ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಬಾರದು. ಯಾಕೆಂದರೆ ಅದು ಸಾಧ್ಯವಿಲ್ಲ. ಹಾಗಾದರೆ ಅಧಿಕಾರಿಗಳಿಗೆ ಲಂಚ ತೆಗೆದುಕೊಳ್ಳಬೇಡಿ ಎಂದು ಹೇಳುವುದು ಹೇಗೆ? ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿ ಅಧಿಕಾರಿ ಕೂಡ ಆ ಸ್ಥಾನಕ್ಕೆ ಬರಲು ಯಾವುದಾದರೂ ರಾಜಕಾರಣಿಗೆ ಲಕ್ಷ, ಕೋಟಿ ಕೊಟ್ಟೆ ಬಂದಿರುತ್ತಾರೆ. ಹಾಗೆ ಕೊಟ್ಟ ಮೇಲೆ ಅದನ್ನು ವಸೂಲಿ ಮಾಡದೇ ಇರಲು ಆಗುತ್ತದೆಯಾ? ಹಾಗಾದರೆ ಲಂಚ ಕೊಡುವ ಪರಿಸ್ಥಿತಿ ಇಲ್ಲದೇ ಇರುವಂತೆ ಮಾಡುವುದು ಹೇಗೆ? ಅದಕ್ಕೆ ಉತ್ತರ ಇಲ್ಲ. ನಾವು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಪ್ರತಿ ಸಾರ್ವಜನಿಕ ಕಾರ್ಯಕ್ರಮಕ್ಕೂ ದೇಣಿಗೆ ಎಂದು ಕೊಡಬೇಕಾಗುತ್ತೆ, ಹಣ ಬೇಡ್ವಾ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಎಲ್ಲಿಂದ ನಿಲ್ಲಿಸುವುದು ಎಂದು ಯಾರ ಬಳಿಯೂ ಉತ್ತರ ಇಲ್ಲ. ಅವರು ಅಧಿಕಾರಕ್ಕೆ ಬಂದಾಗ ಇವರು, ಇವರು ಅಧಿಕಾರಕ್ಕೆ ಬಂದಾಗ ಅವರು ಪ್ರತಿಭಟನೆ ಮಾಡುತ್ತಾರೆ. ಅಷ್ಟೇ.
ಇನ್ನೊಂದು ತಮಾಷೆಯನ್ನು ಇಂತಹ ಪ್ರತಿಭಟನೆಯಲ್ಲಿ ನೀವು ಗಮನಿಸಬಹುದು. ರಾಜಿನಾಮೆ ಕೊಡುವ ತನಕ ರಾಜಿನಾಮೆ ಕೊಡಿ ಎಂದು ಹಟ, ಕೊಟ್ಟ ಮೇಲೆ ರಾಜಿನಾಮೆ ಕೇಳಿದ್ದಲ್ಲ, ಬಂಧನ ಮಾಡಿ ಎಂದು ಹಟ. ಯಾವುದೇ ಒಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಬೇಕೆ, ಬೇಡ್ವೆ ಎಂದು ನಿರ್ಧರಿಸುವವರು ಆ ಕೇಸಿನ ತನಿಖಾಧಿಕಾರಿಗಳು. ಅವರಿಗೆ ಬಂಧಿಸದಿದ್ದರೆ ತನಿಖೆಯಲ್ಲಿ ಸತ್ಯ ಹೊರಗ ಬರುವುದಿಲ್ಲ ಎಂದು ಗ್ಯಾರಂಟಿ ಇದ್ದರೆ ಬಂಧಿಸಬಹುದು. ಅಗತ್ಯ ಇಲ್ಲ ಎಂದಾದರೆ ಕಾಂಗ್ರೆಸ್ ಒತ್ತಾಯ ಮಾಡುತ್ತಿದ್ದಾರೆ ಎಂದು ಈಶ್ವರಪ್ಪನವರನ್ನು ಬಂಧಿಸಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿಯಲ್ಲಾದರೂ ಈಶ್ವರಪ್ಪ ಆರೋಪಿ 1 ಎಂದು ದಾಖಲಿಸಲಾಗಿದೆ. ಆದರೆ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸ್ವತ: ಗಣಪತಿಯವರು ಬಾಯಿಬಿಟ್ಟು ಹೇಳಿ, ತಮ್ಮ ಕೈಯಿಂದಲೇ ಡೆತ್ ನೋಟ್ ಬರೆದು ಸತ್ತರೂ ಜಾರ್ಜ್ ಎಫ್ ಐಆರ್ ನಲ್ಲಿ ಜಾರ್ಜ್ ಹೆಸರಿರಲಿಲ್ಲ!
Leave A Reply