ಶವರ್ಮ ಸೇವಿಸುವವರೇ ಎಚ್ಚರ, ಈಗಾಗಲೇ ಒಂದು ಡೆತ್ ಆಗಿದೆ!!
ಕೂಲ್ ಬಾರ್ ಎಂಬ ಅಂಗಡಿಯಲ್ಲಿ ಚಿಕನ್ ಶವರ್ಮ ಸೇವಿಸಿದ್ದ ಕೇರಳದ ಕರಿವೆಳ್ಳೂರಿನ ದೇವನಂದಾ ಎನ್ನುವ 16 ವರ್ಷದ ಹೆಣ್ಣುಮಗಳು ಮರುದಿನ ಮೃತಪಟ್ಟ ವಿಷಯ ನಾವೆಲ್ಲ ಕೇಳಿದ್ದೇವೆ. ಪತ್ರಿಕೆಗಳಲ್ಲಿ ಓದಿದ್ದೇವೆ. ಆಕೆ ಸೇವಿಸಿದ್ದ ಚಿಕನ್ ಶವರ್ಮದಲ್ಲಿ ರೋಗಕಾರಕ ಸಾಲ್ಮೊನೆಲ್ಲಾ ಮತ್ತು ಶಿಗೆಲ್ಲಾ ಹಾಗೂ ಕಾಳುಮೆಣಸಿನ ಪುಡಿಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಆಕೆ ಮಾಂಸ ಸೇವಿಸಿದ್ದ ಹೋಟೇಲಿನಿಂದ ಚಿಕನ್ ಶವರ್ಮವನ್ನು ಕಲ್ಲಿಕೋಟೆಯ ಮೆಡಿಕಲ್ ಲ್ಯಾಬಿಗೆ ಉನ್ನತ ಮಟ್ಟದ ತಪಾಸಣೆಗೆ ಕಳುಹಿಸಲಾಗಿತ್ತು. ಇದರಿಂದ ನಾವು ಹೋಟೇಲು, ಬೀದಿಬದಿ ಅಂಗಡಿಗಳಲ್ಲಿ ಶವರ್ಮವನ್ನು ಸೇವಿಸುವುದು ಎಷ್ಟು ಅಪಾಯಕಾರಿ ಎನ್ನುವುದು ಪತ್ತೆಯಾಗಿದೆ. ಈಗ ಸತ್ತ ಹೆಣ್ಣು ಜೀವ ಕಾಸರಗೋಡಿನದ್ದು. ಅದು ನಮ್ಮ ಜಿಲ್ಲೆ ಅಲ್ಲವಲ್ಲ ಎಂದು ನಾವು ಸುಮ್ಮನೆ ಕೂರಿದರೆ ಅಪಾಯ ನಮ್ಮ ಬಾಗಿಲು ಬಡಿಯುತ್ತಿದೆ ಎಂದೇ ಅರ್ಥ. ಮಂಗಳೂರಿನಲ್ಲಿಯೂ ಅಂತಹ ಅನೇಕ ಶವರ್ಮ ಸೆಂಟರ್ ಗಳಿವೆ. ದೂರದಿಂದ ನೋಡುವಾಗ ಮಾಂಸಪ್ರಿಯರ ಬಾಯಲ್ಲಿ ನೀರೂರಬಹುದು. ಆದರೆ ಅವು ಎಷ್ಟು ಅಪಾಯಕಾರಿ ಎನ್ನುವುದನ್ನು ಕೇರಳದ ಆಹಾರ ಭದ್ರತಾ ಇಲಾಖೆ ಅಲ್ಲಿ ಮಾಡಿದ ರೇಡ್ ಗಳಿಂದ ಪತ್ತೆಹಚ್ಚಿದೆ. ಅವರು ಕಾಸರಗೋಡು ಮತ್ತು ಕಲ್ಲಿಕೋಟೆಯಲ್ಲಿ ಮಾಡಿದ ರೇಡ್ ನಲ್ಲಿ ಇಂತಹ ಅನೇಕ ಜೀವ ಕಿತ್ತು ತಿನ್ನಬಲ್ಲ ಬ್ಯಾಕ್ಟಿರೀಯಾಗಳನ್ನು ಹೊಂದಿರುವ ಶವರ್ಮ ಪತ್ತೆಯಾಗಿದೆ. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಶವರ್ಮ ತಯಾರಿಸಲಾಗುತ್ತದೆ. ಅದು ತಾಜಾ ಮಾಂಸ ಅಲ್ಲ ಎನ್ನುವುದು ತಿನ್ನುವವರಿಗೆ ಗೊತ್ತಿದ್ರೆ ಅವರು ಹತ್ತಿರನೇ ಹೋಗಲ್ಲ. ಶುಚಿತ್ವ ಎನ್ನುವುದು ಹೊರಗೆ ಮಾತ್ರ ಕಾಣುತ್ತಿರುತ್ತದೆ. ಯಾವ ಪ್ರಾಣಿಯ ಮಾಂಸ ಎನ್ನುವುದು ಯಾವ ಬುಡುಬುಡಿಕೆಯವನಿಗೂ ಹೇಳುವುದು ಕಷ್ಟ. ತಿನ್ನಲು ಯೋಗ್ಯವಲ್ಲದ ಗ್ರೀಲ್ಡ್ ಚಿಕನ್ ಗಳನ್ನು ಹೋಟೇಲಿನ ಹಿಂಬದಿಯಲ್ಲಿ ರಾಶಿ ಶೇಖರಿಸಿ ಇಟ್ಟಿರುವುದು ಕಾಸರಗೋಡುವಿನಲ್ಲಿ ಇಲಾಖೆ ಪತ್ತೆಯಾಗಿದೆ. ಹೋಟೇಲೊಂದರ ಪೇಂಟ್ ಬಕೆಟಿನಲ್ಲಿ ಮಾಂಸ ಸ್ಟಾಕ್ ಮಾಡಿ ಇಡಲಾಗಿತ್ತು. ಯಾರು ತಾನೆ ಒಳಗೆ ಹೋಗಿ ನೋಡುತ್ತಾರೆ. ಮಂಗಳೂರಿನಲ್ಲಿ ಕೂಡ ಪರಿಸ್ಥಿತಿ ಬಿನ್ನವಾಗಿರಲಿಕ್ಕಿಲ್ಲ. ಆದರೆ ಇಲ್ಲಿಯ ತನಕ ಪತ್ತೆಯಾಗಿಲ್ಲ ಎನ್ನುವುದು ಮಾತ್ರ ಆಶ್ಚರ್ಯ. ಯಾಕೆಂದರೆ ಇದನ್ನು ನೋಡಿಕೊಳ್ಳಬೇಕಾಗಿರುವುದು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ. ಅವರು ಇಲ್ಲಿಯ ತನಕ ಒಂದೇ ಒಂದು ಹೋಟೇಲಿನ ಮೇಲೆ ರೇಡ್ ಮಾಡಿಲ್ಲ. ಅದರ ಅರ್ಥ ರೇಡ್ ಮಾಡುವ ಅವಶ್ಯಕತೆ ಬಂದಿರಲಿಲ್ಲ ಎಂದಲ್ಲ. ಇವರು ಹೋಟೇಲಿನವರೊಂದಿಗೆ ಚೆನ್ನಾಗಿದ್ದಾರೆ ಎನ್ನುವುದೇ ಮುಖ್ಯ ಕಾರಣ. ಒಂದು ವೇಳೆ ಯಾರೋ ಅಮಾಯಕರು ದುರಾದೃಷ್ಟವಶಾತ್ ಆ ವಿಷಯುಕ್ತ ಶವರ್ಮ ಸೇವಿಸಿ ಅವರಿಗೆ ಹೆಚ್ಚು ಕಡಿಮೆ ಆದರೆ ಆಗ ಅದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಆಗ ಇವರು ತೋರಿಕೆಗೆ ನಾಲ್ಕು ಕಡೆ ದಾಳಿ ಮಾಡಿದ ಹಾಗೆ ಮಾಡುತ್ತಾರೆ. ಅದು ಮುಗಿದ ನಂತರ ಎಲ್ಲವೂ ತಣ್ಣಗಾಗುತ್ತದೆ.
ಈ ಹಿಂದೆ ಇಂತದ್ದೇ ಶವರ್ಮ ಮಾರುವ ಅಂಗಡಿ ಮಂಗಳೂರಿನ ಕರಂಗಲಪಾಡಿಯಲ್ಲಿ ಇತ್ತು. ಅದನ್ನು ಸಾರ್ವಜನಿಕ ಸುರಕ್ಷಾ ದೃಷ್ಟಿಯಿಂದ ಬಂದ್ ಮಾಡಲಾಗಿತ್ತು. ನಂತರ ಯಾವುದೋ ರಾಜಕಾರಣಿಯ ಕೃಪಾಕಟಾಕ್ಷದಿಂದ ಮತ್ತೊಮ್ಮೆ ತೆರೆಯಲ್ಪಟ್ಟಿತ್ತು. ಇಂತದ್ದೇ ಅಂಗಡಿಗಳು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಮಣ್ಣಗುಡ್ಡೆ, ಉರ್ವಾ ಹೀಗೆ ನಗರ ಭಾಗದಲ್ಲಿ ಹಲವು ಕಡೆ ಇದೆ. ಆದರೆ ಅನಾರೋಗ್ಯ ಪೀಡಿತ ಆರೋಗ್ಯ ವಿಭಾಗ ಇದನ್ನು ಕಣ್ಣೆತ್ತಿ ಕೂಡ ನೋಡುತ್ತಿಲ್ಲ. ಇದು ಎಲ್ಲಿಯ ತನಕ ರಿಸ್ಕ್ ಎಂದರೆ ಹೋಟೇಲುಗಳಲ್ಲಿ ಅಥವಾ ಇಂತಹ ಅಂಗಡಿಗಳಲ್ಲಿ ನೀರು ಎಲ್ಲಿಂದ ಪೂರೈಕೆ ಆಗುತ್ತದೆ ಎಂದು ಕೂಡ ನೋಡಬೇಕು. ಹೋಟೇಲಿನ ನೀರು ಸಂಗ್ರಹಣಾ ಸಂಪುಗಳನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಚ ಮಾಡಬೇಕು. ಆದರೆ ಎಲ್ಲಿ ಮಾಡಲಾಗುತ್ತೆ. ಯಾರು ನೋಡಿದ್ದಾರೆ? ನಾಳೆ ಆ ನೀರಿನ ತೊಟ್ಟಿಯಿಂದ ಗ್ರಾಹಕರಿಗೆ ಅನಾರೋಗ್ಯ ಆದರೆ ಯಾರು ಜವಾಬ್ದಾರರು. ಯಾರಿಗೂ ಬೇಕಾಗಿಲ್ಲ. ಯಾಕೆಂದರೆ ಈ ಬಗ್ಗೆ ಹೋಟೆಲಿನ ವಿರುದ್ಧ ದೂರು ಕೊಡುವ ಗ್ರಾಹಕರು ಇಲ್ಲ. ಹೋಟೇಲಿನಿಂದಲೇ ತಮ್ಮ ಆರೋಗ್ಯ ಏರುಪೇರಾಯಿತು ಎಂದು ಜಾಗೃತಗೊಳ್ಳುವವರು ಕಡಿಮೆ. ಆದ್ದರಿಂದ ಹೋಟೇಲಿನವರು, ಇಂತಹ ಶವರ್ಮ ಸೆಂಟರ್ ನವರು ಕೂಲ್ ಆಗಿದ್ದಾರೆ. ಆದರೆ ಚೆರ್ವತ್ತೂರಿನ ಐಡಿಯಲ್ ಕೂಲ್ ಶವರ್ಮ ಸೆಂಟರ್ ನವರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಇದು ಕೇವಲ ಹೋಟೇಲುಗಳಿಗೆ ಮಾತ್ರವಲ್ಲ, ಆಸ್ಪತ್ರೆಯ ಕ್ಯಾಂಟಿನ್ ಗಳಿಗೂ, ಹಾಸ್ಟೆಲ್ ಮೆಸ್ ಗಳಿಗೂ ಅನ್ವಯವಾಗುತ್ತದೆ. ಅಲ್ಲಿ ಕೂಡ ಆರೋಗ್ಯ ವಿಭಾಗದ ಜವಾಬ್ದಾರಿ ಇದೆ. ಕಾಸರಗೋಡುವಿನಲ್ಲಿ ಇಂತಹ ಕಡೆಗಳಿಂದಲೂ ಹಳಸಿದ ಆಹಾರ ವಶಪಡಿಸಿಕೊಳ್ಳಲಾಗಿದೆ. ಇನ್ನು ಆಹಾರ ತಯಾರಿಕೆಗೆ ಬಳಸುವ ಅಡುಗೆ ಎಣ್ಣೆ ಮತ್ತು ಪರೋಟ ತಯಾರಿಸುವ ವಿಧಾನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಣ್ಣೆ ದುಬಾರಿಯೆಂದು ಹೋಟೇಲಿನವರು ಹಳೆಯ ಎಣ್ಣೆಗಳನ್ನೇ ಮತ್ತೆ ಮತ್ತೆ ಬಳಸುತ್ತಾರೆ. ಇದು ಕೂಡ ದೇಹಕ್ಕೆ ಅಪಾಯಕಾರಿಯಾಗಿದೆ. ನಮ್ಮ ಮೇಯರ್ ಈಗ ಏನು ಮಾಡಬೇಕು ಎಂದರೆ ಕಾಸರಗೋಡುವಿನ ಆ ವಿದ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಬೇಕು. ಜಡ್ಡುಗಟ್ಟಿದ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಬಿಸಿ ಮುಟ್ಟಿಸಬೇಕು. ಆಹಾರ, ನೀರು, ಎಣ್ಣೆ ಮತ್ತು ಅಲ್ಲಿ ಬಳಸಲಾಗುವ ಬೆಲ್ಲವನ್ನು ಕೂಡ ಪರಿಶೀಲನೆಗೆ ಒಳಪಡಿಸಬೇಕು. ಅದರೊಂದಿಗೆ ಶವರ್ಮ ತಿನ್ನಲು ಹೊರಡುವ ನಾಗರಿಕರು ಕೂಡ ಎಚ್ಚರಿಕೆ ವಹಿಸಬೇಕು. ನೀವು ತಿನ್ನುವ ಮಾಂಸ ಎಷ್ಟು ದಿನದ್ದೋ ನಿಮಗೇನು ಗೊತ್ತು? ಬೇರೆ ಐಟಂ ಆದರೆ ನೀವು ಏಕ್ಸಪೈರಿ ಡೇಟ್ ನೋಡುತ್ತೀರಿ. ಇದು ಹಾಗಲ್ಲ. ಸೀದಾ ಹೊಟ್ಟೆಗೆ ಹೋದ ಮೇಲೆಯೇ ಅದು ಎಕ್ಸಪೈರಿ ಆಗಿದೆಯಾ ಅಥವಾ ನೀವು ಎಕ್ಸಪೈರಿ ಆಗುತ್ತೀರಾ, ಗೊತ್ತಾಗುತ್ತದೆ!
Leave A Reply