ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?

ನಮ್ಮದೇನಿದ್ದರೂ ಫಾರಿನ್ ಸ್ಟೈಲ್. ಅಲ್ಲಿ ಏನು ಇದೆಯೋ ಅದನ್ನು ನೋಡಿ ಇಲ್ಲಿ ಮಾಡುವ ಎನ್ನುವುದನ್ನು ನಾವು ಸ್ಮಾರ್ಟ್ ಸಿಟಿ ಎಂದು ಕರೆಯುತ್ತಿದ್ದೇವೆ. ನೀವು ದೇಶದ ಯಾವುದೇ ಭಾಗ ತೆಗೆದುಕೊಳ್ಳಿ. ಅಲ್ಲಿ ರಸ್ತೆಯನ್ನು ಅಗಲ ಮಾಡಲಾಗುತ್ತಿದೆ. ಆದರೆ ಇಡೀ ಭಾರತದಲ್ಲಿ ಮಂಗಳೂರು ಒಂದೇ ಪ್ರದೇಶ ಇರಬೇಕು, ಇಲ್ಲಿ ರಸ್ತೆಯನ್ನು ಕಿರಿದು ಮಾಡಿ, ಫುಟ್ ಪಾತ್ ಅಗಲ ಮಾಡಲಾಗುತ್ತಿದೆ. ಕೇಳಿದ್ರೆ ಫುಟ್ ಪಾತ್ ಅಗಲ ಇದ್ರೆ ತುಂಬಾ ಜನರಿಗೆ ಹೋಗಲು ಆಗುತ್ತದೆ ಎನ್ನುವ ಸಬೂಬು ಸಿಗುತ್ತದೆ. ಅದರೊಂದಿಗೆ ಇವರು ಇನ್ನೊಂದು ಮಾಡುತ್ತಿದ್ದಾರೆ. ಅದನ್ನು ಐಲ್ಯಾಂಡ್ ಎಂದು ಕರೆಯಲಾಗುತ್ತಿದೆ. ರಸ್ತೆಯ ಮಧ್ಯದಲ್ಲಿ ದ್ವೀಪದಂತಹ ವ್ಯವಸ್ಥೆ ಮಾಡಿ ರಸ್ತೆಯನ್ನು ಆಕರ್ಷಕಗೊಳಿಸುವುದು. ಸದ್ಯ ಅದನ್ನು ಮಂಗಳೂರಿನ ಹೃದಯಭಾಗ ಗಡಿಯಾರ ಗೋಪುರ, ಆರ್ ಟಿಒ ಕಚೇರಿ, ಸ್ಟೇಟ್ ಬ್ಯಾಂಕ್ ಎದುರು ಐಲ್ಯಾಂಡ್ ಮಾಡಲಾಗುತ್ತಿದೆ. ಅದರ ವಿರುದ್ಧ ಇತ್ತೀಚೆಗೆ ಎಡಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಏಕೆಂದರೆ ಈ ಐಲ್ಯಾಂಡ್ ಗಳೇ ಅವೈಜ್ಞಾನಿಕವಾಗಿವೆ. ನೀವು ಮಂಗಳೂರಿನವರಾದರೆ ಈ ಐಲ್ಯಾಂಡ್ ಗಳ ಕಿರಿಕಿರಿಯನ್ನು ಅನುಭವಿಸುತ್ತೀರಿ. ರೋಸಾರಿಯೋ ಶಾಲೆಯ ರಸ್ತೆಯಿಂದ ಸ್ಟೇಟ್ ಬ್ಯಾಂಕಿನ ಕಡೆ ಬರುವ ನೀವು ನೆಲ್ಲಿಕಾಯಿ ರಸ್ತೆ ಕಡೆ ಹೋಗಬೇಕಾದರೆ ಹಿಂದಿನ ದಿನಗಳಲ್ಲಿ ಸೀದಾ ಹೋಗಬಹುದಿತ್ತು. ಆದರೆ ಈಗ ಹಾಗಿಲ್ಲ. ಈಗ ಇಲ್ಲಿ ದ್ವೀಪದ ನಿರ್ಮಾಣದಿಂದ ಮೊದಲು ಎಡಕ್ಕೆ ತಿರುಗಿಸಿ ಜಿಲ್ಲಾಧಿಕಾರಿ ಕಚೇರಿ ಬಳಿಯ ಬದ್ರಿಯಾ ಶಾಲೆಗೆ ಹೋಗುವ ರಸ್ತೆಗೆ ಹೋಗಿ ಅಲ್ಲಿ ಯೂ ಟರ್ನ್ ಮಾಡಿ ನಂತರ ಮೇಲೆ ಬಂದು ಅಲ್ಲಿಂದ ರಾವ್ ಅಂಡ್ ರಾವ್ ಸರ್ಕಲ್ ತನಕ ಹೋಗಿ ನೆಲ್ಲಿಕಾಯಿ ರಸ್ತೆಗೆ ಹೋಗಬೇಕಾಗಿದೆ. ಇದರ ಅಗತ್ಯ ಇತ್ತಾ ಎನ್ನುವುದು ಪ್ರಶ್ನೆ. ಯಾಕೆಂದರೆ ವಾಹನಗಳು ಗಡಿಯಾರ ಗೋಪುರದಿಂದ ಆರ್ ಟಿಒ ತನಕ ಬಂದು ಅಲ್ಲಿಂದ ಹ್ಯಾಮಿಲ್ಟನ್ ಸರ್ಕಲ್ ತನಕ ಬಂದು ಅಲ್ಲಿಂದ ರಾವ್ ಅಂಡ್ ರಾವ್ ವೃತ್ತದ ತನಕ ಬಂದು ಅಲ್ಲಿಂದ ಮತ್ತೆ ಗಡಿಯಾರ ಗೋಪುರದ ತನಕ ಬರುವ ದಾರಿ ಇದೆಯಲ್ಲ, ಆ ಯೂ ಶೇಪಿನ ರೂಟ್ ಏಕಮುಖ ಸಂಚಾರ ಆಗಿದೆ. ಹಾಗಿರುವಾಗ ಸ್ಟೇಟ್ ಬ್ಯಾಂಕಿನ ಬಳಿ ದ್ವೀಪ ಯಾಕೆ?
ಐಲ್ಯಾಂಡ್ ನಿಜಕ್ಕೂ ಸ್ಮಾರ್ಟ್ ಹೆಜ್ಜೆ. ಆದರೆ ಎಲ್ಲಿ? ಎಲ್ಲಿ ರಸ್ತೆ ಅಗಲವಿರುತ್ತದೆಯೋ, ರಸ್ತೆಯಲ್ಲಿ ಎಲ್ಲಾ ವ್ಯವಸ್ಥೆ ಇದೆಯೋ ಅಲ್ಲಿ ಐಲ್ಯಾಂಡ್ ಓಕೆ. ಆದರೆ ಮಂಗಳೂರಿನ ಸಿಟಿಯ ಒಳಗೆ ಬೆಳಗಿನ ಹೊತ್ತು ಮೀನಿನ ಲಾರಿಗಳು ಬರುತ್ತವೆ. ಅವುಗಳಿಗೆ ಈ ಐಲ್ಯಾಂಡ್ ದೊಡ್ಡ ಸವಾಲು. ಇನ್ನು ಡಿಸಿ ಆಫೀಸ್ ಗೆ ಬರುವ ವಾಹನಗಳು ಈ ರೋಸಾರಿಯೋ ಶಾಲೆಯ ರಸ್ತೆಯಿಂದ ಬರುವ ವಾಹನಗಳು ಬದ್ರಿಯಾ ರಸ್ತೆಯಲ್ಲಿ ಯೂ ಟರ್ನ್ ತೆಗೆಯಲು ಹೋಗುವಾಗ ಅನಗತ್ಯ ಜಾಮ್ ಆಗಲು ಕಾರಣವಾಗುತ್ತದೆ. ಇದೆಲ್ಲವನ್ನು ಏನೂ ನೋಡದೆ ಐಲ್ಯಾಂಡ್ ಗಳು ನಿರ್ಮಾಣವಾಗಿದೆ. ಅದು ನಮ್ಮ ಗ್ರಹಚಾರ.
ಇನ್ನು ಮಂಗಳೂರು ಮಹಾನಗರ ಪಾಲಿಕೆಯ ಈಗಿನ ಹಾಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ನಿಗದಿತ ಅವಧಿ ಮುಗಿದು ನಾಲ್ಕು ತಿಂಗಳು ಮೇಲಾಗುತ್ತಾ ಬಂದಿದೆ. ಹೊಸ ಮೇಯರ್ ಆಯ್ಕೆಗೆ ಚುನಾವಣೆ ಆಗಿಲ್ಲ. ಯಾವುದೋ ರಾಜ್ಯದ ಯಾವುದೋ ಪಾಲಿಕೆಯಲ್ಲಿ ಮೇಯರ್ ಪ್ರಕರಣ ನ್ಯಾಯಾಲಯದ ಕಟಕಟೆಯಲ್ಲಿರುವುದರಿಂದ ಇಲ್ಲಿ ಚುನಾವಣೆ ಆಗುತ್ತಿಲ್ಲ. ಹಾಗಂತ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ವಿಪಕ್ಷ ಹೇಳಿದರೆ ಅದರಲ್ಲಿ ಸತ್ಯ ಇಲ್ಲ ಎಂದೇ ಅರ್ಥ. ಮೇಯರ್ ಪ್ರೇಮಾನಂದ ಶೆಟ್ಟಿಯವರಿಗೆ ಪರಿಷತ್ ಸಭೆ ನಡೆಸುವ ಅಧಿಕಾರ ಇದೆಯಾ ಎನ್ನುವ ಪ್ರಶ್ನೆಯನ್ನು ಕಾರ್ಪೋರೇಟರ್ ಎಸಿ ವಿನಯರಾಜ್ ಕೇಳಿದ್ದಾರೆ. ಹಾಗೇ ನೋಡಿದರೆ ವಿನಯರಾಜ್ ಅವರಿಗೆ ವಿಪಕ್ಷ ನಾಯಕನ ಚೇಂಬರ್ ನಲ್ಲಿ ಕುಳಿತುಕೊಳ್ಳುವ ಅಧಿಕಾರ ಕೂಡ ಇಲ್ಲ. ಆದರೆ ಅವರು ಕುಳಿತಿಲ್ಲವೇ? ಅವರಿಗೆ ಈಗ ಅಂತ ಅಲ್ಲ, ಹಿಂದೆನೂ ವಿಪಕ್ಷ ನಾಯಕರಾಗುವವರಿಗೆ ಕುಳಿತುಕೊಳ್ಳುವ ಚೇಂಬರ್ ನಲ್ಲಿ ಕುಳಿತುಕೊಂಡು ಫೋಸ್ ಕೊಡುವ ಅವಕಾಶ ಇರಲೇ ಇಲ್ಲ. ಯಾಕೆಂದರೆ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕೃತ ವಿಪಕ್ಷವೇ ಅಲ್ಲ. ವಿನಯರಾಜ್ ಸ್ವಯಂಘೋಷಿತ ವಿಪಕ್ಷ ನಾಯಕ. ಬಹುಶ: ಅವರ ವಿಪಕ್ಷ ನಾಯಕನಾಗುವ ಆಸೆ ಅವರಿಗೂ ಸಿಕ್ಕಿರುವ ಹೆಚ್ಚುವರಿ ಅವಕಾಶದಿಂದ ಸಮಾಧಾನವಾಗಿರಬಹುದು. ಹೌದು, ಮೇಯರ್ ಅವರಿಗೆ ಕರ್ನಾಟಕದಲ್ಲಿ ಒಂದೇ ವರ್ಷ ಅವಕಾಶ. ಯಾವುದೋ ತಾಂತ್ರಿಕ ಕಾರಣದಿಂದ ಅದು ಮೂರ್ನಾಕು ತಿಂಗಳು ಹೆಚ್ಚಾಗಲೂಬಹುದು. ಇಂತಹ ಒಂದು ಅವಕಾಶ ಹಿಂದೆ ಕಾಂಗ್ರೆಸ್ ನಲ್ಲಿದ್ದ ಅಶ್ರಫ್ ಅವರಿಗೂ ಸಿಕ್ಕಿದೆ. ಹೀಗೆ ಐದು ವರ್ಷಗಳ ನಡುವೆ ಹೆಚ್ಚು ಕಡಿಮೆ ಆದರೆ ಅದನ್ನು ಕೊನೆಯ ಐದನೇ ಮೇಯರ್ ಅವಧಿಯನ್ನು ಕಡಿತಗೊಳಿಸಿ ಸರಿ ಮಾಡಲಾಗುತ್ತದೆ. ಇನ್ನು ಸ್ಥಾಯಿ ಸಮಿತಿಗಳ ಅವಧಿ ಮುಕ್ತಾಯವಾಗಿದೆ. ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಈಗ ಪಾಲಿಕೆ ಆಯುಕ್ತರೇ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ವಿಪಕ್ಷ ಅಂದುಕೊಂಡಿದ್ದರೆ ನಗರದಲ್ಲಿ ಆಗುತ್ತಿರುವ ಕಾಮಗಾರಿಗಳು ಅಲ್ಲಲ್ಲಿ ಅರ್ಧಂಬರ್ಧ ಆಗುತ್ತಿದೆ ಎಂದು ಇವರು ಹೇಳುತ್ತಾರೆ ಎಂದರೆ ಕೆಲಸ ಆಗುತ್ತಿದೆ ಎಂದು ಲೆಕ್ಕ ತಾನೆ!
Leave A Reply