ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
ಭಾರತೀಯ ಜನತಾ ಪಾರ್ಟಿಯವರು ಧರ್ಮದ ವಿಷಯ ಬಂದಾಗ ಹೋರಾಡುತ್ತಾರೆ, ಹಿಂದೂಗಳ ರಕ್ಷಣೆಯ ವಿಷಯದಲ್ಲಿ ಕೆಲಸ ಮಾಡುತ್ತಾರೆ ಎಲ್ಲವೂ ಸರಿ. ಆ ವಿಷಯದಲ್ಲಿ ಅವರ ಕಳಕಳಿಯ ಬಗ್ಗೆ ಎರಡು ಮಾತಿಲ್ಲ. ಆದರೆ 4 ಲಕ್ಷ ಕೋಟಿ ರೂಪಾಯಿಯ ವಕ್ಫ್ ಬೋರ್ಡ್ ಆಸ್ತಿಯ ವಿಷಯ ಬಂದಾಗ ಮೌನ ವಹಿಸುತ್ತಾರೆ. ಇಲ್ಲಿ ಬಿಜೆಪಿಯ ರಾಜ್ಯ ಸರಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಬರುತ್ತದೆ. ಬ್ರಹ್ಮಾಂಡ ಭ್ರಷ್ಟಾಚಾರ ಎನ್ನುವ ವಿಷಯಕ್ಕೆ ಸೂಕ್ತ ಉದಾಹರಣೆ ಕೊಡಿ ಎಂದು ಕರ್ನಾಟಕದಲ್ಲಿ ಯಾರಾದರೂ ಕೇಳಿದರೆ ಅದಕ್ಕೆ ಕೊಡಬಹುದಾದ ಮೊದಲ ಶಬ್ದವೇ ವಕ್ಫ್ ಬೋರ್ಡ್ ಆಸ್ತಿ. ಈ ಬಗ್ಗೆ ಒಂದು ಸಮಗ್ರ ವರದಿ ತಯಾರಿಸಿ ಬಿಜೆಪಿ ನಾಯಕರ ಕೈಯಲ್ಲಿ ಕೊಟ್ಟು ಕೃಷ್ಣಾರ್ಪಣಾ ಮಾಡಿದ ವ್ಯಕ್ತಿ ಅನ್ವರ್ ಮಾಣಿಪ್ಪಾಡಿ. ಅವರಿಗೆ ತಮ್ಮ ರಾಜ್ಯ ನಾಯಕರ ಬಗ್ಗೆ ಅಪರಿಮಿತ ವಿಶ್ವಾಸ ಇತ್ತು. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಇದು ಬಿಜೆಪಿಗೆ ಇರುವ ಪ್ರಮುಖ ಅಸ್ತ್ರ ಎನ್ನುವುದರ ಬಗ್ಗೆ ನಂಬಿಕೆಯೂ ಇತ್ತು. ತಾವು ಕೊಡುವ ವರದಿಯಿಂದ ಕಾಂಗ್ರೆಸ್ಸಿನ ಭ್ರಷ್ಟಾತೀಭ್ರಷ್ಟರ ಜಾತಕ ಬೀದಿಗೆ ಬೀಳುತ್ತೆ ಎಂಬ ಭ್ರಮೆ ಇತ್ತು. ಮಾಣಿಪ್ಪಾಡಿ ವರದಿಯ ಪ್ರತಿ ಹಿಡಿದು ಬಿಜೆಪಿಯವರು ವಿಪಕ್ಷದಲ್ಲಿದ್ದಾಗ ಪ್ರತಿಭಟನೆ ಮಾಡಿದ್ದೇ ಬಂತು. ಇದೊಂದೇ ಕಾರಣ ಎಂದಲ್ಲ, ಆದರೆ ವಕ್ಫ್ ಜಾಗಗಳನ್ನು ನುಂಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಾಂಗ್ರೆಸ್ಸಿನ ರಾಜಕಾರಣಿಗಳನ್ನು ನೋಡಿ ಅವರಿಗೆ ಬುದ್ಧಿ ಕಲಿಸಲು ಬಿಜೆಪಿ ಬರಬೇಕು ಎಂದು ಹಿಂದೂಗಳು ಕೂಡ ಆಸೆಪಟ್ಟಿದ್ದರು. ಯಡಿಯೂರಪ್ಪ ಸಿಎಂ ಆದ ಕೂಡಲೇ ಕಾಂಗ್ರೆಸ್ಸಿನ ಬ್ರಹ್ಮಾಂಡ ಭ್ರಷ್ಟರು ಜೈಲಿನ ಕಡೆ ಪೆರೇಡ್ ಮಾಡಬೇಕಾಗುತ್ತದೆ ಎಂದು ಜಾತ್ಯಾತೀತವಾಗಿ ಜನ ಭಾವಿಸಿದರು. ಜನ ಅಧಿಕಾರ ಕೊಟ್ಟರು. ಬಿಜೆಪಿಯಿಂದ ಸಿಎಂ ಆದ ಯಡ್ಡಿ, ನಂತರ ಸದ್ದು, ಆ ಬಳಿಕ ಸಿಎಂ ಆದ ಶೆಟ್ಟರ್ ಯಾರೂ ಕೂಡ ಈ ಬಗ್ಗೆ ಕಿಸಕ್ ಎಂದಿಲ್ಲ. ಇದೆಲ್ಲ ಆಗಿ ಇಷ್ಟು ವರ್ಷಗಳ ಬಳಿಕವೂ ಮಾಣಿಪ್ಪಾಡಿ ಆ ವರದಿಯನ್ನು ಹಿಡಿದು ಭ್ರಷ್ಟರಿಗೆ ಶಿಕ್ಷೆ ಆಗಲು ಹೋರಾಡುತ್ತಿದ್ದಾರೆ, ಶುದ್ಧ ಏಕಾಂಗಿಯಾಗಿ.
ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದರೂ ಏನೂ ಆಗಲಿಲ್ಲ. ಕಾಂಗ್ರೆಸ್ ಸರಕಾರ ಬಂದರೆ ತನಿಖೆ ಆಗುತ್ತೆ ಎನ್ನುವುದನ್ನು ಯಾರೂ ನಿದ್ರೆಯಲ್ಲಿಯೂ ಕಲ್ಪಿಸಲು ಸಾಧ್ಯವಿಲ್ಲ. ಆದರೆ ಕನಿಷ್ಟ ಬಿಜೆಪಿಯವರಾದರೂ ನಾ ಖಾವೂಂಗಾ, ನಾ ಖಾನೇ ದೂಂಗಾ ಎನ್ನುವ ಸ್ಲೋಗನ್ ಅನ್ನು ಹಾಲಿನಲ್ಲಿ ಬೆರೆಸಿ ಕುಡಿದವರು. ಅವರಾದರೂ ಏನಾದರೂ ಮಾಡಬೇಕಲ್ಲ. ಈಗಂತೂ ಯಡ್ಡಿ ಸಿಎಂ ಕೂಡ ಅಲ್ಲ. ಆದರೆ ಅವರ ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ರಾಜ್ಯಾಭಾರ ಮಾಡುವಂತೆ ಕಾಣುತ್ತಿರುವ ಬೊಮ್ಮಾಯಿ ಇದ್ದಾರೆ. ಇವತ್ತು ಬೆಳಿಗ್ಗೆ ಸ್ವಲ್ಪ ನೀರು ಜಾಸ್ತಿ ಕುಡಿದೆ. ಎರಡು ಸಲ ಮೂತ್ರಕ್ಕೆ ಹೋಗಬೇಕಾಯಿತು ಎಂದು ಯಡ್ಡಿಗೆ ವರದಿ ಮಾಡುವಷ್ಟು ಬಾಗಿದ್ದಾರೆ ಎಂದು ಮೇಲ್ನೋಟಕ್ಕೆ ಬೊಮ್ಮಾಯಿ ಕಾಣಿಸುತ್ತಾರಾದರೂ ಹೈಕಮಾಂಡ್ ನಾವಿದ್ದೇವೆ ಎನ್ನುವ ಧೈರ್ಯ ಕೊಟ್ಟರೆ ಧೂಳು ಹಿಡಿದಿರುವ ಮಾಣಿಪ್ಪಾಡಿ ವರದಿಯನ್ನು ಹೊರಗೆ ತೆಗೆಯುವಷ್ಟು ನಿತ್ರಾಣ ಅವರು ಹೊಂದಿಲ್ಲ. ಆದರೆ ಮೋದಿಗೆ ಕೂಡ ಲಿಖಿತ ಮನವಿ ಮಾಡಿದರೂ ಏನೂ ಆಗುತ್ತಾ ಇಲ್ಲ ಎನ್ನುವುದು ಅನ್ವರ್ ಅವರಿಗೆ ಅನಿಸುತ್ತಿರುವುದರಿಂದ ಅವರು ಕಡೆಯದಾಗಿ ಒಂದು ಭಯಂಕರ ಸೌಂಡಿಂಗ್ ಸುದ್ದಿಗೋಷ್ಟಿ ಮಾಡಿ ಹೊರಗೆ ಬರೋಣ ಎಂದು ನಿರ್ಧರಿಸಿದಂತೆ ಆಗಿತ್ತು.
ಬಿಜೆಪಿಯಲ್ಲಿರುವ ಬೆರಳೆಣಿಕೆಯ ಮುಸ್ಲಿಂ ಮುಖಂಡರ ಬಗ್ಗೆ ಆ ಪಕ್ಷದವರು ಅಪನಂಬಿಕೆ ಹೊಂದಿರಬಾರದು. ಯಾಕೆಂದರೆ ತಮ್ಮ ಸಮುದಾಯದವರನ್ನು, ಕಾಂಗ್ರೆಸ್ಸಿನವರನ್ನು ಮತ್ತು ಕೊನೆಗೆ ತಮ್ಮ ಸಂಬಂಧಿಕರನ್ನು ಕೂಡ ಎದುರಿಗೆ ಹಾಕಿ ಅವರು ಬಿಜೆಪಿಯಲ್ಲಿ ಇರುತ್ತಾರೆ. ಅದರಲ್ಲಿಯೂ ಮೂರು ಸಲ ಹಲ್ಲೆ, ಅಸಂಖ್ಯಾತ ಧಮ್ಕಿ, ಕೋಟ್ಯಾಂತರ ರೂಪಾಯಿ ಆಮಿಷ, ತಮ್ಮದೇ ಪಕ್ಷದವರ ಅಸಡ್ಡೆಯ ನಡುವೆಯೂ ಅನ್ವರ್ ಮಾಣಿಪ್ಪಾಡಿ ಆ ವರದಿ ಅನುಷ್ಟಾನವಾಗಲಿ ಎಂದು ಕಾಯುತ್ತಿರುವುದು ಸ್ವಹಿತಾಸಕ್ತಿಯಿಂದಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಈ ವರದಿ ತಯಾರಿಸಿದ ನಂತರ ಅವರ ಜೀವಕ್ಕೆ ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಅವರಿಗೆ ಸರಕಾರ ಗನ್ ಮ್ಯಾನ್ ನೀಡಿರುವುದು. ಆದರೆ ಈಗ ಪ್ರಾಣ ಇದ್ದರೆಷ್ಟು, ಹೋದರೆಷ್ಟು ಎನ್ನುವ ಮನಸ್ಥಿತಿಯಿಂದ ಅನ್ವರ್ ತಮ್ಮ ಗನ್ ಮ್ಯಾನ್ ಹಿಂದಕ್ಕೆ ಪಡೆದುಕೊಳ್ಳಿ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಇತ್ತೀಚೆಗೆ ಪಕ್ಷದೊಂದಿಗೆ ತಾತ್ವಿಕವಾಗಿ ಸಂಬಂಧವನ್ನು ಕಡಿತಗೊಳಿಸಿ ಧರ್ಮ, ದೇವರು ಎಂದು ಹೆಚ್ಚಾಗಿ ವ್ಯಸ್ತರಾಗಿದ್ದ ಮಾಣಿಪ್ಪಾಡಿ ಆಗಾಗ ತಮ್ಮ ವರದಿಯನ್ನು ಹಿಡಿದು ಸುದ್ದಿಗೋಷ್ಟಿ ಮಾಡುತ್ತಾರೆ. ಅದು ಮರುದಿನ ಪತ್ರಿಕೆ, ಟಿವಿಯಲ್ಲಿ ಸುದ್ದಿ ಆಗುತ್ತೆ ಮತ್ತು ಜನ ನಾಲ್ಕು ದಿನ ಬಿಟ್ಟು ಮರೆಯುತ್ತಾರೆ. ಆದರೆ ಬಿಜೆಪಿಯವರು ಯಾಕೆ ಈ ವರದಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಬಂದಾಗ ಇದು ಜಾರಿಗೆ ಬಂದರೆ ಬಿಜೆಪಿಯ ರಾಜಕಾರಣಿಗಳು ಕೂಡ ಫಲಾನುಭವಿಗಳಾ ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಇನ್ನಾರು ತಿಂಗಳೊಳಗೆ ಈ ವರದಿಯ ಮೇಲೆ ಏನೂ ಕ್ರಮ ಆಗದಿದ್ದರೆ ನಾಲ್ಕು ಲಕ್ಷ ಕೋಟಿಯಲ್ಲಿ ಕೆಲವು ಸೊನ್ನೆಗಳನ್ನು ಕಮಲಪಡೆಯವರು ಕೂಡ ನುಂಗಿ ಕೆಸರು ನೀರು ಕುಡಿದಿದ್ದಾರೆ ಎಂದೇ ಅರ್ಥ!!
Leave A Reply