• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?

Hanumantha Kamath Posted On July 5, 2022


  • Share On Facebook
  • Tweet It

ಕೆಲವರು ಗೆದ್ದರೆ ಆಡಲು ಬಂದಿದ್ವಿ. ಸೋತರೆ ನೋಡಲು ಬಂದಿದ್ವಿ ಎಂದು ಹೇಳುವುದು ವಾಡಿಕೆ. ಮಂಗಳೂರಿನಲ್ಲಿ ಮರಳಿನ ವಿಷಯದಲ್ಲಿ ಇದನ್ನೇ ಸ್ವಲ್ಪ ಬದಲಾಯಿಸಿ ಹೇಳುವುದಾದರೆ ಸಿಕ್ಕಿಬಿದ್ದರೆ ದೋಣಿ ದಡಕ್ಕೆ ತರಲು ಹೋಗಿದ್ವಿ. ಇಲ್ಲದಿದ್ದರೆ ನದಿಯಲ್ಲಿ ಮರಳು ತರಲು ಹೋಗಿದ್ವಿ ಎಂದು ಹೇಳಬಹುದಾಗಿದೆ. ಇತ್ತೀಚೆಗೆ ಬೆರಳೆಣಿಕೆಯ ದಿನಗಳ ಮೊದಲು ಮಂಗಳೂರಿನಲ್ಲಿ ದೋಣಿಯೊಂದು ನೇತ್ರಾವತಿ ನದಿಯಲ್ಲಿ ಮಗುಚಿ ಬಿದ್ದು ಅದರಲ್ಲಿದ್ದ ವ್ಯಕ್ತಿಯೋರ್ವ ನದಿಗೆ ಬಿದ್ದು ಮೃತಪಟ್ಟಿದ್ದ. ಇದು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಗಲೇ ಗೊತ್ತಾಗಿತ್ತು. ಆದರೆ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಏನು ದೂರು ದಾಖಲಿಸಿದ್ದರು ಎಂದರೆ ದೋಣಿಯನ್ನು ದಡಕ್ಕೆ ತರಲು ಹೋಗುವಾಗ ಅದು ಮಗುಚಿ ಬಿದ್ದಿದೆ. ದೋಣಿಯನ್ನು ನದಿಯ ಮಧ್ಯದಲ್ಲಿ ಏನು ಪಾರ್ಕ್ ಮಾಡಲಾಗಿ ಇಡಲಾಗಿತ್ತಾ? ಒಂದು ವೇಳೆ ತರಲು ಹೋಗಿದ್ವಿ ಎನ್ನಲು ಹೋದದ್ದು ಕಾರಿನಲ್ಲಿಯಾ? ಏನಾದರೂ ಕಥೆ ಕಟ್ಟಲು ಒಂದು ತಳಹದಿ ಆದರೂ ಬೇಡ್ವಾ? ಇದನ್ನು ಕಿವಿಯ ಮೇಲೆ ಹೂ ಅಲ್ಲ, ಕದ್ರಿ ಪಾರ್ಕ್ ಇಡುವುದು ಎಂದು ಕರೆಯಬೇಕಾಗುತ್ತದೆ. ಏನೇ ಬ್ಯಾನ್ ಮಾಡಲಾಗಿದೆ ಎಂದು ಹೇಳಿದರೂ ಮಂಗಳೂರಿನಲ್ಲಿ ಅಕ್ರಮ ಮರಳು ಕದಿಯುವ ದಂಧೆ ಜಾರಿಯಲ್ಲಿದೆ. ಇದು ಬಹಿರಂಗ ರಹಸ್ಯವಾಗಿದ್ದರೂ ಈ ಬಗ್ಗೆ ಪೊಲೀಸ್ ಇಲಾಖೆಯಾಗಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಾಗಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಇದು ರಾಜಾರೋಷವಾಗಿ ಮುಂದುವರೆಯುತ್ತದೆ. ಮೊನ್ನೆ ಏನಾಯಿತು ಎಂದರೆ ಮರಳು ತೆಗೆಯಲು ಕಳ್ಳ ದೋಣಿಯೊಂದು ನದಿಗೆ ಇಳಿದಿದೆ.

ಯಥಾಪ್ರಕಾರ ಏನೂ ಆಗುವುದಿಲ್ಲ, ಯಾರು ನಮ್ಮನ್ನು ಹಿಡಿಯುತ್ತಾರೆ ಎನ್ನುವ ಭಂಡ ಧೈರ್ಯ ಅದರ ಮಾಲೀಕರಿಗೆ ಇದ್ದೇ ಇತ್ತು. ಅವರಿಗೆ ಏನೂ ಆಗುವುದಿಲ್ಲ, ಹೌದು. ಆದರೆ ಹೀಗೆ ಮರಳು ಕದಿಯಲು ನದಿಗೆ ಇಳಿಯುವ ದೋಣಿಯಲ್ಲಿ ಅವರಿರುವುದಿಲ್ಲವಲ್ಲ. ಅದ್ಯಾವುದೋ ಜಿಲ್ಲೆ ಅಥವಾ ಬೇರೆ ರಾಜ್ಯದ ಅಮಾಯಕ ಶ್ರಮಜೀವಿಗಳು ಇರುತ್ತಾರೆ. ಅವರ ಜೀವಕ್ಕೆ ಯಾವುದೇ ಕವಡೆ ಕಾಸಿನ ಬೆಲೆ ಕೂಡ ಇರುವುದಿಲ್ಲ. ಜೀವ ಉಳಿದರೆ ಆವತ್ತಿನ ಕೂಲಿ. ಸತ್ತರೆ ದೂರದ ರಾಜ್ಯದವರಾದರೆ ಮನೆಯವರಿಗೆ ವಿಷಯ ತಿಳಿಸಲಾಗುತ್ತದೆ ಎನ್ನುವ ಗ್ಯಾರಂಟಿ ಕೂಡ ಇರುವುದಿಲ್ಲ. ಅಂತಹ ಒಂದು ದುರಾದೃಷ್ಟವನ್ನು ಹೊತ್ತುಕೊಂಡಿದ್ದ ವ್ಯಕ್ತಿಯೊಬ್ಬ ಜೋರಾದ ರಭಸಕ್ಕೆ ಬೀಸಿದ ಬಿರುಗಾಳಿಗೆ ದೋಣಿಯೊಂದಿಗೆ ನದಿಗೆ ಬಿದ್ದಿದ್ದಾನೆ. ವಿಷಯ ಬೇರೆಯವರಿಗೆ ಗೊತ್ತಾಗುವಾಗ ಅವನ ಪ್ರಾಣಪಕ್ಷಿ ನೀರಿನಲ್ಲಿಯೇ ಸಮಾಧಿಯಾಗಿತ್ತು. ಬಳಿಕ ಪೊಲೀಸರು ಕ್ರಮಬದ್ಧವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಲ್ಲ. ಅದಕ್ಕೆ ಒಂದು ಅದ್ಭುತ ಚಿತ್ರಕಥೆ ರಚಿಸಿದ್ದಾರೆ. ಅದೇನೆಂದರೆ ನದಿಯಲ್ಲಿ ಮಗುಚಿಬಿದ್ದ ದೋಣಿಯನ್ನು ತರಲು ಹೋಗುವಾಗ ಅವಘಡ ಸಂಭವಿಸಿ ಒಬ್ಬ ಅಸುನೀಗಿದ್ದಾನೆ ಎನ್ನುವ ಅರ್ಥ ಬರುವಂತಹ ಷರಾ ಬರೆದು ಕೇಸ್ ಮುಚ್ಚಿ ಹಾಕಿದ್ದಾರೆ. ಇಡೀ ಪ್ರಥಮ ಮಾಹಿತಿ ವರದಿಯಲ್ಲಿ ಮರಳಿನ ವಿಷಯವೇ ಇಲ್ಲ. ಯಾಕೆಂದರೆ ಪ್ರಕರಣವನ್ನು ಹಳ್ಳ ಹಿಡಿಸಲು ಪೊಲೀಸರಿಗೆ ಆಗಲೇ ತಟ್ಟೆ ತುಂಬಾ ಮರಳು ಬಂದು ಹೊಟ್ಟೆ ತುಂಬಾ ಅದನ್ನು ತಿಂದಾಗಿದೆ. ಹಾಗಿರುವಾಗ ಮರಳಿನ ವಿಷಯ ತೆಗೆದರೆ ಮೆಚ್ಚನಾ ಪರಮಾತ್ಮನು ಎಂದುಕೊಂಡ ಪೊಲೀಸರು ಆ ಕೇಸಿನಲ್ಲಿ ಕಾಗಕ್ಕ, ಗುಬ್ಬಕ್ಕನ ಕಥೆ ಕಟ್ಟಿ ತಾವು ಆರಾಮವಾಗಿದ್ದಾರೆ.

ಒಂದು ಕಡೆಯಲ್ಲಿ ನದಿಯಿಂದ ಮರಳು ಎತ್ತುವುದು ನಿಷೇಧ ಇದೆ ಎಂದು ಹೇಳಿದರೂ ಅಕ್ರಮ ಮರಳು ತೆಗೆಯುವವರು ಕಾಲಕಾಲಕ್ಕೆ ಪೊಲೀಸ್ ಠಾಣೆಗಳಿಗೆ ಕಪ್ಪ ಕಳುಹಿಸುತ್ತಾ ತಾವು ಅದರ ನೂರು ಪಟ್ಟು ಮರಳು ತೆಗೆದು ಆರಾಮವಾಗಿದ್ದಾರೆ. ಇಂತಹ ದಿನಗಳಲ್ಲಿಯೇ ಇಂತಹದೊಂದು ಘಟನೆ ನಡೆದು ಒಬ್ಬ ವಿಧಿವಶನಾಗಿದ್ದಾನೆ. ಹೀಗಿರುವಾಗ ಮರಳು ತೆಗೆಯುವಾಗ ಸತ್ತ ಎಂದು ಬರೆದರೆ ಅಲ್ಲಿ ಪೊಲೀಸರು ಕೂಡ ಸಿಕ್ಕಿಬೀಳುತ್ತಾರೆ. ಯಾಕೆಂದರೆ ಅವರ ಕಣ್ಣಿಗೆ ಮಣ್ಣೆರಚಿ ನದಿಯಲ್ಲಿ ಇಳಿಯುವ ಧಮ್ ಯಾರಿಗೆ ಇದೆ. ಈಗ ಇರುವ ವಿಷಯವೇನೆಂದರೆ ಮಂಗಳೂರಿನ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಮರಳಿನ ವಿಷಯದಲ್ಲಿ ಬಹಳ ಸ್ಟಿಕ್ಟ್ ಎಂದು ಹೇಳುವವರಿದ್ದಾರೆ. ಅವರು ಈಗ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆಯೋ ಅಲ್ಲಿನ ಪೊಲೀಸ್ ಇನ್ಸಪೆಕ್ಟರ್ ಅವರನ್ನು ಕರೆಸಿ ವರದಿ ಕೇಳಬೇಕು. ಆ ಇನ್ಸಪೆಕ್ಟರ್ ಏನೇ ಹೇಳಲಿ, ಅದು ಮರಳು ಕದಿಯುವಾಗ ನಡೆದ ದುರ್ಘಟನೆ ಎಂದು ಪೊಲೀಸ್ ಕಮೀಷನರ್ ಅವರಿಗೆ ಮನವರಿಕೆ ಆದರೆ ಆ ಇನ್ಸಪೆಕ್ಟರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಬ್ ಇನ್ಸಪೆಕ್ಟರ್ ಮಣ್ಣು ತಿನ್ನುವ ಕೆಲಸ ಮಾಡಿದ್ದರೆ ಅವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಪೊಲೀಸ್ ಕಮೀಷನರ್ ಅವರು ಇದ್ಯಾವುದನ್ನೂ ಮಾಡದಿದ್ದರೆ ಕಮೀಷನರ್ ಕೂಡ ಈ ಮರಳು ಹಫ್ತಾ ದಂಧೆಯಲ್ಲಿ ಭಾಗಿಯಾಗಿದ್ದಾರೋ ಎನ್ನುವ ಸಂಶಯ ಜನಸಾಮಾನ್ಯರಲ್ಲಿ ಮೂಡುವ ಸಾಧ್ಯತೆ ಇದೆ.
ಇನ್ನು ಜಿಲ್ಲಾಧಿಕಾರಿಯವರು ಕೂಡ ಇಲ್ಲಿ ಬಹಳ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಪೊಲೀಸ್ ಕಮೀಷನರ್ ಅವರನ್ನು ಕರೆಸಿ ಸೂಕ್ತ ಸಮಜಾಯಿಷಿಕೆ ಕೇಳುವ ಎಲ್ಲಾ ಅವಕಾಶಗಳು ಅವರಿಗೆ ಇವೆ. ಅದರೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕರೆದು ಅವರಿಂದ ಉತ್ತರ ಕೇಳಬೇಕು. ಯಾಕೆಂದರೆ ತಮ್ಮ ಜಿಲ್ಲೆಯಲ್ಲಿ ಹೀಗೆ ಕಾನೂನು ಮೀರಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅವರು ಸುಮ್ಮನೆ ಕುಳಿತುಕೊಂಡು ನೋಡಬಾರದು.

  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Hanumantha Kamath June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Hanumantha Kamath June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search