ಗೃಹ ಸಚಿವರ ಕಠಿಣ ಕ್ರಮ 2000 ಗಿಫ್ಟ್!
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಸಹಜವಾಗಿ ಮತಾಂಧರಿಗೆ ಒಂದು ಭಂಡ ಧೈರ್ಯ ಇತ್ತು. ತಾವು ಏನು ಉಪಟಳ ಮಾಡಿದರೂ ಯಾರೂ ಏನೂ ಮಾಡುವುದಿಲ್ಲ ಎನ್ನುವ ಅತೀ ಆತ್ಮವಿಶ್ವಾಸ ಇತ್ತು. ಹಾಗೆ ಅಂತವರು ಏನಾದರೂ ಕಿರಿಕ್ ಮಾಡಿದಾಗ ಪೊಲೀಸರು ಬಂಧಿಸಿದರೆ ಅಂತವರನ್ನು ಬಿಡಿಸಲು ಕಾಂಗ್ರೆಸ್ ಶಾಸಕರು, ಸಚಿವರು ಪೈಪೋಟಿಗೆ ಬಿದ್ದವರಂತೆ ಸ್ಟೇಶನಿಗೆ ಫೋನ್ ಮಾಡಿ ಮತಾಂಧರನ್ನು ಬಿಡಿಸಲು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದರು. ಆದ್ದರಿಂದ ಅಂತಹ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಕೂಡ ಯಾವುದೇ ಗಲಾಟೆಗೆ ಹೋಗುತ್ತಿರಲಿಲ್ಲ. ಕಾರಣ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸಿಕ್ಕಿಬಿದ್ದರೆ ಅಂತವರನ್ನು ಬಿಡಿಸುವವರು ಕೂಡ ಗತಿ ಇರುತ್ತಿರಲಿಲ್ಲ. ಇನ್ನು ಪೊಲೀಸ್ ಠಾಣೆಗಳಲ್ಲಿ ತಮಗೆ ಸಿಗುತ್ತಿದ್ದ “ಮರ್ಯಾದೆ” ಗೆ ಅಂಜಿ ಹಿಂದೂ ಕಾರ್ಯಕರ್ತರು ಕೂಡ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ ಏನೇ ಇರಲಿ, ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ವಿಷಯ ಬಂದಾಗ ಏನೂ ರಾಜಿ ಮಾಡಿಕೊಳ್ಳದೇ ಸಹಾಯಕ್ಕೆ ಮುಂದಾಗುತ್ತಾರೆ. ಆದರೆ ಅದೇ ಬಿಜೆಪಿ ಸರಕಾರ ಬಂದಾಗ ಏನಾಗುತ್ತದೆ? ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತವೆ, ಕೊಲೆಗಳಾಗುತ್ತವೆ. ಆರೋಪಿಗಳು ಬಂಧನಕ್ಕೆ ಒಳಗಾಗುತ್ತಾರೆ. ಆದರೆ ಜೈಲಿನಲ್ಲಿ ಅವರಿಗೆ ರಾಜೋಪಚಾರ ಸಿಗುತ್ತದೆ. ಅವರು ಮೊಬೈಲಿನಲ್ಲಿ ವಿಡಿಯೋ ಕಾಲ್ ಮಾಡಿ ಮನೆಯವರೊಂದಿಗೆ ಮಾತನಾಡುವ ಅವಕಾಶ ನೀಡಲಾಗುತ್ತದೆ. ಊಟ, ತಿಂಡಿ, ಮೋಜು ಮಸ್ತಿಗೆ ಏನೂ ಕಡಿಮೆ ಇರುವುದಿಲ್ಲ. ಅಪ್ಪಿತಪ್ಪಿ ಮಾಧ್ಯಮಗಳಲ್ಲಿ ಏನಾದರೂ ವಿಷಯ ಹೊರಗೆ ಬಂತು ಎಂದಾದರೆ ಆಗ ಜೈಲಿನ ಸಿಬ್ಬಂದಿಗಳ ವಿರುದ್ಧ ಏನಾದರೂ ಚಿಕ್ಕ ವಿಚಾರಣೆ ಮಾಡಿದಂತೆ ಮಾಡಿ ಕೈತೊಳೆಯುವುದು ನಡೆಯುತ್ತದೆ. ಇದರಿಂದ ಬೇಸತ್ತು ಎಷ್ಟೋ ಹಿಂದೂ ಕಾರ್ಯಕರ್ತರು ಬಿಜೆಪಿಯಿಂದ ಹೊರಹೋಗಿರುವುದು ನಿಜ. ಕೆಲವರು ಬೇರೆ ಬೇರೆ ಸಂಘಟನೆ ಕಟ್ಟಿ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಉಳಿದವರು ತಟಸ್ಥರಾಗಿದ್ದಾರೆ. ಇದರಿಂದ ಏನಾಗುತ್ತೆ?
ಮತಾಂಧರಿಗೆ ಇನ್ನಷ್ಟು ಉತ್ತೇಜನ ನೀಡಿದಂತೆ ಆಗುತ್ತದೆ. ಅವರು ತಮ್ಮ ಪುಂಡಾಟಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಅದರ ಮುಂದುವರೆದ ಭಾಗವಾಗಿ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆಯಾಗಿದೆ. ಈಗೀಗ ಇಂತಹ ಘಟನೆಗಳು ಆದಾಗ ಮಾಧ್ಯಮದವರು ಸಿಎಂ, ಗೃಹ ಸಚಿವರ ಬಳಿ ಪ್ರತಿಕ್ರಿಯೆ ಕೇಳುವ ಅಗತ್ಯ ಇಲ್ಲ. ಯಾಕೆಂದರೆ ರಿಯಾಕ್ಷನ್ ಒಂದೇ ಇರುತ್ತದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಇಲ್ಲಿಯ ತನಕ ಯಾವುದೇ ಪ್ರಕರಣದಲ್ಲಿ ಇವರು ಕಠಿಣ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಮೊನ್ನೆಯಂತೂ ಹರ್ಷ ಸಹೋದರಿ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿಯಾದಾಗ ಅವರು ಆಕೆಗೆ ಏರು ಧ್ವನಿಯಲ್ಲಿ ಮಾತನಾಡಿ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಹರ್ಷ ಕುಟುಂಬಕ್ಕೆ ಶಾಸಕರು, ಸಚಿವರು ಸೇರಿ ಬಿಜೆಪಿ ಪಕ್ಷವನ್ನು ಒಳಗೊಂಡು ಹಿಂದೂ ಸಂಘಟನೆಗಳಿಂದಲೂ ಸಾಕಷ್ಟು ಹಣ ಸಿಕ್ಕಿದೆ. ಆದರೆ ಅಷ್ಟಕ್ಕೆ ರಾಜ್ಯ ಸರಕಾರದ ಜವಾಬ್ದಾರಿ ಮುಗಿಯುತ್ತದೆಯಾ? ಇಲ್ಲ. ಆರೋಪಿಗಳಿಗೆ ಶಿಕ್ಷೆ ಕೊಡುವ ತನಕ ರಾಜ್ಯ ಸರಕಾರ ವಿರಮಿಸಲೇಬಾರದು. ಅದೇ ರೀತಿಯಲ್ಲಿ ಆರೋಪಿಗಳಿಗೆ ಇಂತಹ ಕೊಲೆಯನ್ನು ಮಾಡಿದ ಕಾರಣ ಪಶ್ಚಾತ್ತಾಪ ಉಂಟಾಗುವಂತೆ ಮಾಡಬೇಕೆ ವಿನ: ಅವರಿಗೆ ಜೈಲಿನಲ್ಲಿ ಸಕಲ ಸವಲತ್ತು ನೀಡಿ ಅವರಿಗೆ ಕೊಲೆಯಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆ ಉಂಟಾಗುವಂತೆ ಮಾಡಬಾರದು. ಅದು ಕೂಡ ಮಾಜಿ ಮುಖ್ಯಮಂತ್ರಿಯೊಬ್ಬರ ಜಿಲ್ಲೆ, ಹಾಲಿ ಗೃಹ ಸಚಿವರ ಜಿಲ್ಲೆ, ಅವರ ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ, ಹಿಂದೂ ಕಾರ್ಯಕರ್ತನೊಬ್ಬನ ಕೊಲೆ ನಡೆದು ಆರೋಪಿ ಸಿಕ್ಕಿಬಿದ್ದರೆ ಅವನು ಹೆದರಿಕೆಯಿಂದ ಸಾಯಬೇಕು. ಅಂತಹ ಟ್ರೀಟ್ ಮೆಂಟ್ ಸಿಗುವ ವ್ಯವಸ್ಥೆ ಆಗಬೇಕು. ಅದು ಬಿಟ್ಟು ಸುಮ್ಮನೆ ಕಠಿಣ ಕ್ರಮ ಎಂದು ಬಾಯಿ ಮಾತಿಗೆ ಹೇಳಿದರೆ ಅದರಿಂದ ಏನೂ ಆಗುವುದಿಲ್ಲ. ಅಷ್ಟಕ್ಕೂ ಹರ್ಷಾ ಹಂತಕ ಆರೋಪಿಗಳಿಗೆ ಜೈಲಿನೊಳಗೆ ವೈಭವೋಪೇತ ದಿನಗಳನ್ನು ಕಳೆಯಲು ಅವಕಾಶ ನೀಡಿದ ಜೈಲರ್ ಗೆ ಏನಾಯಿತು? ಸೆಟಲೈಟ್ ವಾಹಿನಿಗಳು ಅದನ್ನು ಎತ್ತಿದ ಕಾರಣ ಬೇರೆ ಕಡೆ ವರ್ಗಾವಣೆ ಆಯಿತೇ ಹೊರತು ಬೇರೆ ಏನೂ ಆಗಿಲ್ಲ. ಹಾಗಾದರೆ ವರ್ಗಾವಣೆ ಆಗುವುದೇ ಕಠಿಣ ಕ್ರಮವೇ? ಅಂತವರನ್ನು ಅಮಾನತುಗೊಳಿಸಿ ಆ ಜೈಲರ್ ಮಾಡಿದ್ದು ತಪ್ಪು ಎಂದು ಸಾಬೀತಾದರೆ ಕೆಲಸದಿಂದ ಕಿತ್ತೊಗೆಯಬೇಕಿತ್ತು. ಆದರೆ ಅಂತದ್ದು ಏನೂ ಆಗಿಲ್ಲ. ಹಾಗಿದ್ದ ಕಾರಣದಿಂದ ಒಬ್ಬ ಸಹೋದರಿಯ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿದೆ. ಯಾಕೆಂದರೆ ಅವಳ ಒಡಹುಟ್ಟಿದವನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದವರು ಜೈಲಿನಲ್ಲಿ ಮೋಜು ಮಸ್ತಿಯಲ್ಲಿದ್ದರೆ ಅವಳಿಗೆ ಊಟ ಸೇರುತ್ತಾ? ಆರೋಪಿಗಳಿಗೆ ಅಂತಹ ಎಂಜಾಯ್ ಮಾಡಲು ಅವಕಾಶ ನೀಡಿದ್ದಕ್ಕಾಗಿ ಇಡೀ ರಾಜ್ಯ ಸರಕಾರ ನಾಚಿಕೆಯಿಂದ ತಲೆಬಗ್ಗಿಸಬೇಕು.
ಈಗ ಗೃಹ ಸಚಿವರು ತಮ್ಮ ಕಠಿಣ ಕ್ರಮದ ಭಾಗವಾಗಿ ಜೈಲಿನೊಳಗೆ ಮದ್ಯ, ಗಾಂಜಾ, ಫೋನ್ ಸರಬರಾಜು ಆಗುವುದನ್ನು ಯಾವುದಾದರೂ ಕೈದಿ ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಅಂತಹ ಕೈದಿಗಳಿಗೆ ಸನ್ನಡತೆಯ ಆಧಾರದಲ್ಲಿ ಶಿಕ್ಷೆಯಲ್ಲಿ ರಿಯಾಯಿತಿ ಇದೆ ಎನ್ನುತ್ತಿದ್ದಾರೆ. ಇನ್ನು ಜೈಲಿನ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ತಿಳಿಸಿದರೆ ಅಂತವರಿಗೆ 2000 ರೂಪಾಯಿ ಅಂತೆ! ಕಾಮಿಡಿ ಚೆನ್ನಾಗಿದೆ. ಒಂದು ವೇಳೆ ಹೀಗೆ ಚಾಡಿ ಹೇಳಿದ ಸಹಕೈದಿ ಯಾರು ಎಂದು ಮಜಾ ಮಾಡುತ್ತಿದ್ದ ಕೈದಿಗಳಿಗೆ ಗೊತ್ತಾದರೆ ಏನಾಗಲಿದೆ? ಇನ್ನು 2000 ಸಿಗುತ್ತೆ ಎಂದು ಯಾವ ಸಿಬ್ಬಂದಿ ಮಾಹಿತಿ ಕೊಡುತ್ತಾರೆ. ಜೈಲಿನೊಳಗೆ ಅದು ಜಸ್ಟ್ ಟಿಪ್ಸ್ !
Leave A Reply