ಸೋನಿಯಾಗೆ ನೋ’ಬೆಲ್’ ಕೊಡಿಸಲು ಖಾದರ್ ತಯಾರ್!
ಸೋನಿಯಾ ಗಾಂಧಿಯವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾನ್ಯ ಶಾಸಕರೂ, ಮಾಜಿ ಆರೋಗ್ಯ ಸಚಿವರೂ ಆದ ಯುಟಿ ಖಾದರ್ ಸಾಹೇಬ್ರು ಹೇಳಿದ್ದಾರೆ ಎನ್ನುವ ಹೇಳಿಕೆ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಅಲ್ಲಿಗೆ ಖಾದರ್ ಎನ್ನುವ ಕಾನೂನು ಪದವಿಧರ ಮಂಗಳೂರಿನಂತಹ ಬುದ್ಧಿವಂತರ ಊರಿನಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು ಎಂದು ಅವರಿಗೆ ಜನ್ಮ ನೀಡಿದ ಪೋಷಕರು, ಬುದ್ಧಿ ಹೇಳಿದ ಹಿರಿಯರು, ವಿದ್ಯೆ ಕಲಿಸಿದ ಗುರುಗಳು ಅಂದುಕೊಂಡಿರಬಹುದು. ಬಹುಶ: ಖಾದರ್ ಈ ಹೇಳಿಕೆ ಕೊಡುವಾಗ ಪಕ್ಕದಲ್ಲಿ ಸೊರಕೆಯವರಂತಹ ಕಾಂಗ್ರೆಸ್ಸಿಗರು ಇದ್ದರು ಎನ್ನುವ ಸುದ್ದಿ ಇದೆ. ಕನಿಷ್ಟ ಅವರಾದರೂ ಅಲ್ಲಿದ್ದ ಮಾಧ್ಯಮದವರಿಗೆ ಹೇಳಿ ಇಂತಹ ಹೇಳಿಕೆ ಪ್ರಿಂಟಾದರೆ ಖಾದರ್ ಮಾನ ಮರ್ಯಾದೆ ಹೋಗಬಹುದು, ಹಾಕಬೇಡಿ ಎಂದಿದ್ದರೂ ಸಾಕಿತ್ತು. ಆದರೆ ಪ್ರಜ್ಞಾವಂತರ ನಾಡಿನಲ್ಲಿ ಖಾದರ್ ಹಣೆಬರಹ ಇಷ್ಟೇನಾ ಎಂದು ಜನ ಆಡಿಕೊಳ್ಳಲಿ ಎಂದು ಅವರು ಕೂಡ ಸುಮ್ಮನಿದ್ದಿರಬಹುದು. ಓಲೈಕೆಗೆ ಒಂದು ಮಿತಿ ಎಂದು ಇರಬೇಕು. ಸೋನಿಯಾ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು ಎಂದು ಹೇಳುವುದೇ ಭಾರತದ ಸಂವಿಧಾನದ ಅವಹೇಳನ ಮತ್ತು ಕಾಂಗ್ರೆಸ್ಸಿಗರು ಆ ತ್ಯಾಗವನ್ನು ಪದೇ ಪದೇ ಹೇಳುವುದೇ ಅತಿ ದೊಡ್ಡ ಓಲೈಕೆ. ಹಾಗಿರುವಾಗ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎನ್ನುವುದು ಅತೀ ದೊಡ್ಡ ಅಣಕ. ಒಂದು ವೇಳೆ ಇದನ್ನು ಸ್ವತ: ಸೋನಿಯಾ ಅವರೇ ಕೇಳಿದ್ರು ” ಹೂ ಸೆಡ್ಡ್ ದೇಟ್ ಪ್ರಿಯಾಂಕಾ?” ಎಂದು ಕೇಳಬಹುದು. ಸಂ ಖಾದರ್ ನೇಮ್ಡ್ ಎಂಎಲ್ ಎ ಮೈಟ್ ಹೇವ್ ಟೊಲ್ಡ್ ಇಟ್, ಬುಲ್ ಶೀಟ್ ಎಂದು ಪ್ರಿಯಾಂಕಾ ಹೇಳಬಹುದು. ಒಂದು ಹೊಗಳಿಕೆ ನಂಬುವಂತಿರಬೇಕು. ಇಂತಹ ಬಾಲಿಶ ಹೇಳಿಕೆಯನ್ನು ಖಾದರ್ ನಂತವರು ಮಾತ್ರವಲ್ಲ, ಉತ್ತರ ಭಾರತದಲ್ಲಿ ಹೇಳುವ ಕಾಂಗ್ರೆಸ್ ಮರಿ ಫುಡಾರಿಗಳು ಇದ್ದಾರೆ. ಅವರನ್ನು ಬಿಟ್ಟರೆ ಸೋನಿಯಾ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಹೇಳಿದರೂ ಹೇಳಬಹುದು. ನನ್ನ ಪ್ರಕಾರ ಒಂದು ವೇಳೆ ಅಪ್ಪಿ ತಪ್ಪಿ ಯುಪಿಎ 3 ಅಧಿಕಾರಕ್ಕೆ ಬಂದರೆ ಸೋನಿಯಾ ಅವರಿಗೆ ಭಾರತ ರತ್ನ ಸಿಕ್ಕಿದರೂ ಸಿಗಬಹುದು. ಯಾಕೆಂದರೆ ಅವರು ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ.
ಇನ್ನು ಖಾದರ್ ಅವರಿಗೆ ಬೀಸುತ್ತಿರುವ ಸಮುದ್ರದ ಗಾಳಿ, ಅಬ್ಬರದ ಮಳೆ ನೋಡಲಿಕ್ಕೆ ಆಗುತ್ತಿಲ್ಲ. ಅಂದರೆ ಅದರಿಂದ ಸಮುದ್ರದ ತಟದ ಜನರಿಗೆ ತೊಂದರೆ ಆಗುತ್ತದೆ ಎಂದಲ್ಲ. ತನ್ನ ಸರಕಾರ ಇದ್ದಿದ್ದರೆ ಇಷ್ಟೊತ್ತಲ್ಲಿ ಕಡಲಿಗೆ ಒಂದಿಷ್ಟು ಕಲ್ಲುಗಳನ್ನು ಹಾಕಬಹುದಿತ್ತಲ್ಲ ಎಂದು ಹೊಟ್ಟೆ ಚುರುಗುಟ್ಟುತ್ತಿದೆ. ಅದಕ್ಕಾಗಿ ಆಗಾಗ ಮೀಡಿಯಾ ಬಳಗವನ್ನು ಕರೆದು ನಾವೀಗ ಅಧಿಕಾರದಲ್ಲಿ ಇಲ್ಲ. ಇದ್ದಿದ್ದರೆ ಈ ಕಡಲ್ಕೊರೆತವನ್ನು ಶಾಶ್ವತವಾಗಿ ಪರಿಹಾರ ಮಾಡಿಬಿಡುತ್ತಿದ್ದೆವು ಎಂದು ಪಟ್ಟಿಯೇ ಇಲ್ಲದ ಜಾಗದಲ್ಲಿ ರೈಲು ಬಿಡುತ್ತಿದ್ದಾರೆ. ಅದ್ಯಾವುದೋ ಸ್ಥಳದಲ್ಲಿ ದೋಣಿಯ ಮೇಲೆ ಕುಳಿತು ಸಂವಾದದ ಹೆಸರಿನಲ್ಲಿ ಈಗ ನಾವು ಇರಬೇಕಿತ್ತು. ಕಡಲ್ಕೊರೆತ ಇಲ್ಲವೇ ಇಲ್ಲ ಎಂದು ಮಾಡುತ್ತಿದ್ದೆವು. ಆದರೆ ಏನು ಮಾಡುವುದು? ನಮ್ಮ ಸರಕಾರ ಇಲ್ಲವಲ್ಲ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ. ಖಾದರ್ ಉತ್ತಮ ಆಂಗಿಕ ಶೈಲಿಯಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಬಲ್ಲರು. ಅದು ಅವರಿಗೆ ದೇವರು ಕೊಟ್ಟಿರುವ ವರ.
ಇಲ್ಲದಿದ್ದರೆ ಇವರ ಕುಟುಂಬವೇ ಕಳೆದ 20 ವರ್ಷಗಳಿಂದ ಉಳ್ಳಾಲವನ್ನು ಆಳುತ್ತಿದೆ. ಉಳ್ಳಾಲ ಎಂದರೆ ಕಡಲು. ಕಡಲು ಎಂದರೆ ಉಳ್ಳಾಲ. ಉಳ್ಳಾಲಕ್ಕೆ ಕಡಲು ಹೊಸದಲ್ಲ. ಅಲ್ಲಿ ಸಮುದ್ರ ಏಕಾಏಕಿ ನಿನ್ನೆ, ಮೊನ್ನೆ ಹುಟ್ಟಿದ್ದಲ್ಲ. ಯು ಟಿ ಫರೀದ್ ಅವರ ಕಾಲದಿಂದಲೂ ಅಲ್ಲಿ ಕಡಲು ಇದೆ. ಕಡಲ್ಕೊರೆತವೂ ಇದೆ. ಆವತ್ತಿನಿಂದ ಇವತ್ತಿನ ವರೆಗೂ ಇವರು ಕಡಲಿಗೆ ಕಲ್ಲು ಹಾಕುತ್ತಲೇ ಬಂದಿದ್ದಾರೆ. ಎಷ್ಟು ಸಾವಿರ ಕೋಟಿಯ ಕಲ್ಲು ಹಾಕಿದ್ದಾರೆ ಎನ್ನುವ ಅಂಕಿಸಂಖ್ಯೆ ಇವರ ಬಳಿ ಇರಲಿಕ್ಕಿಲ್ಲ. ಪ್ರತಿ ಬಾರಿ ಮಳೆಗಾಲಕ್ಕೆ ಇವರು ಕಡಲಿಗೆ ಕಲ್ಲು ಹಾಕುತ್ತಾರೆ. ಇಷ್ಟು ವರ್ಷ ಇವರದ್ದೇ ಸರಕಾರ ಇತ್ತಲ್ಲ, ಕಡಲ್ಕೊರೆತ ಯಾಕೆ ಇವರು ನಿಲ್ಲಿಸಿಲ್ಲ. ಇವರ ಸರಕಾರ ಇದ್ದಾಗ ಸಚಿವರು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದರಲ್ಲ, ಆದರೂ ಕಡಲ್ಕೊರೆತ ನಿಂತಿಲ್ಲವಲ್ಲ. ಆದರೂ ಇವರು ಮತ್ತು ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಕುಳಿತುಕೊಂಡು ಸುದ್ದಿಗೋಷ್ಟಿಯಲ್ಲಿ ಕಡಲ್ಕೊರೆತ ನಿಲ್ಲಿಸಲು ಸಲಹೆ ನೀಡುತ್ತಾರೆ.
ಇನ್ನು ಕೊನೆಯದಾಗಿ ವೀರಪ್ಪ ಮೊಯಿಲಿಯವರ ಕಥೆ ತೆಗೆದುಕೊಳ್ಳೋಣ. ಇತ್ತೀಚೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚು ಸುತ್ತಾಡುತ್ತಿದ್ದಾರೆ. ತಮ್ಮ ರಾಜಕೀಯ ಜೀವನವನ್ನು ಮುಗಿಸಿ ವಕೀಲ ವೃತ್ತಿ ಮಾಡುತ್ತೇನೆ ಎಂದು ಹೇಳಿ ಒಂದಿಷ್ಟು ದಿನ ಹೈಕೋರ್ಟ್ ಕಾರಿಡಾರ್ ಗಳಲ್ಲಿ ಕಾಣಿಸಿಕೊಂಡಿದ್ದರು. ಮಗನಿಗೆ ರಾಜಕೀಯ ನೆಲೆ ಕಲ್ಪಿಸಬೇಕು ಎಂದು ಪ್ರಯತ್ನಪಟ್ಟರೂ ಹರ್ಷ ಮೊಯಿಲಿ ರಾಹುಲ್ ಕ್ಯಾಟಗರಿ ಆಗಿರುವುದರಿಂದ ತಂದೆಯ ಆಸೆಗೆ ಕೈಗೂಡಿಸಲೇ ಇಲ್ಲ. ಸದ್ಯ ಮೊಯಿಲಿ ರಾಜಕೀಯ ಕರ್ಮಭೂಮಿ ಕಾರ್ಕಳದಲ್ಲಿ ಹರ್ಷ ಶಾಸಕನಾಗುವುದು ಬಿಡಿ, ಡೆಪಾಸಿಟ್ ಉಳಿಯುವುದು ಕೂಡ ಕಷ್ಟ ಎಂದು ಗೊತ್ತಿರುವುದರಿಂದ ಅವರೀಗ ಬೇರೆ ಸೇಫ್ ಜಾಗ ಹುಡುಕುತ್ತಿದ್ದಾರೆ. ಪುತ್ರವಾತ್ಸಲ್ಯ ಎನ್ನುವುದು ಅದಕ್ಕೆ ನೋಡಿ. ಅದು ಎಲ್ಲಾ ಕೆಲಸಗಳನ್ನು ಮಾಡಿಸುತ್ತದೆ. ಆದ್ದರಿಂದ ಮಂಜೇಶ್ವರದಿಂದ ಬೈಂದೂರು ತನಕ ಮೊಯಿಲಿ ಓಡಾಡ್ತಾ ಇದ್ದಾರೆ. ಮೊಯಿಲಿಯವರ ಮಗ ನಿಜಕ್ಕೂ ರಾಜಕೀಯ ಎಂಟ್ರಿಗೆ ಅರ್ಹ ಆಗಿದಿದ್ರೆ ಟಿಕೆಟ್ ದೊರಕಿಸಿಕೊಡುವುದು ಮೊಯಿಲಿಯವರಿಗೆ ಕಷ್ಟವೇನಲ್ಲ. ರಾಹುಲ್ ಕಿಚನ್ ಕ್ಯಾಬಿನೆಟಿನ ಮಾರ್ಗದರ್ಶಕ ಮಂಡಳಿಯಲ್ಲಿರುವ ಮೊಯಿಲಿಯವರಿಗೆ ತಮ್ಮ ಉತ್ತರಾಧಿಕಾರಿ ಇಲ್ಲದೆ ತಮ್ಮ ಅಧ್ಯಾಯ ಅಂತ್ಯವಾಗುತ್ತಾ ಎನ್ನುವ ಭಯ ಕಾಡುತ್ತಿದೆ. ಜೀ ಹುಜೂರ್ ಎನ್ನುತ್ತಿದ್ದ ಅಭಯರು ಕೂಡ ಶಸ್ತ್ರ ಕೆಳಗಿಟ್ಟು ಚುನಾವಣಾ ರಾಜಕೀಯ ಬೇಡಾ ಎನ್ನುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡಿಕೆ ಅಶೋಕ್ ಅಂತವರು ಪಕ್ಷದ ಒಳರಾಜಕೀಯದಿಂದ ಬೇಸತ್ತು ತಟಸ್ಥರಾಗಿದ್ದಾರೆ. ಅಂತಹ ಒಂದು ವಾನಪ್ರಸ್ಥ ಆಶ್ರಮದಲ್ಲಿ ಇರುವ ಮೊಯಿಲಿಯವರು ದಕ್ಷಿಣ ಕನ್ನಡ, ಉಡುಪಿಯಲ್ಲಿ ಸುತ್ತಾಡುತ್ತಿದ್ದಾರಾದರೂ ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಟವೆಲ್ ಹಾಕಿ ಕುಳಿತ ಅರ್ಧ ಡಜನ್ ಆಕಾಂಕ್ಷಿಗಳಿದ್ದಾರೆ. ಹೀಗಿರುವಾಗ ಮೊಯಿಲಿಯವರು ಬಂದ ದಾರಿಗೆ ಸುಂಕ ಇಲ್ಲ ಎಂದು ಹೋಗುವುದೇ ಒಳಿತು ಎಂದು ಅಂದುಕೊಂಡಿದ್ದಾರೆ. ಈ ನಡುವೆ ಮೊಯಿಲಿ ಯಾಕೆ ಬಂದಿದ್ದಾರಂತೆ ಎಂದು ಸೋನಿಯಾ ಕಿಚನ್ ಕ್ಯಾಬಿನೆಟ್ ಖಾಯಂ ಸದಸ್ಯ ಹರಿಪ್ರಸಾದ್ ಕೇಳುತ್ತಿರುವುದು ಮೊಯಿಲಿಗೆ ಇನ್ನಷ್ಟು ಇರಿಸುಮುರಿಸು ತಂದಿದೆ!
Leave A Reply