ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!

ಪೊಲೀಸ್ ಇಲಾಖೆ ಜಾರಿಗೆ ತರುವ ಕೆಲವು ನಿಯಮಗಳನ್ನು ಒಂದೇ ಸಲಕ್ಕೆ ನಂಬಲು ಆಗುವುದಿಲ್ಲ ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಅಂತಹ ಒಂದು ನಿಯಮ ಜಾರಿಗೆ ತಂದಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬೈಕ್ ಸವಾರರು ಹಿಂಬದಿಯಲ್ಲಿ ಪುರುಷ ಸವಾರರನ್ನು ಕೂರಿಸಿಕೊಂಡು ಹೋಗುವಂತಿಲ್ಲ. ನಿಮಗೆ ಈ ಹೊಸ ನಿಯಮ ಕೇಳಿದ ತಕ್ಷಣ ಆಶ್ಚರ್ಯ ಖಂಡಿತವಾಗುತ್ತದೆ. ಯಾಕೆಂದರೆ ಇಂತಹ ನಿಯಮವನ್ನು ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾರೂ ಕೇಳಿರಲಿಲ್ಲ. ಹಿಂದೆ ಕುತ್ಕೋಬಾರದಾ ಎನ್ನುವ ಮಾತು ಈಗ ಜಿಲ್ಲೆಯಲ್ಲಿ ಸುನಾಮಿಯಂತೆ ಅಪ್ಪಳಿಸುತ್ತಿದೆ. ಇದರ ಉದ್ದೇಶ ಏನು ಎಂದು ಅಲೋಕ್ ಕುಮಾರ್ ಅವರಲ್ಲಿ ವರದಿಗಾರರು ಕೇಳಿದಾಗ ಅದು ಜಿಲ್ಲೆಯಲ್ಲಿ ನಡೆದಿರುವ ಮೂರು ಹತ್ಯೆಗಳು ಮತ್ತು ಈಗ ಪರಿಸ್ಥಿತಿ ಒಂದಿಷ್ಟು ಕೆಟ್ಟದಾಗಿರುವುದರಿಂದ ಬೈಕಿನಲ್ಲಿ ಬಂದು ಹತ್ಯೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಮೊದಲನೇಯದಾಗಿ ಈ ನಿಯಮದ ವಾಸ್ತವತೆಯನ್ನು ನೋಡೋಣ. ಜಿಲ್ಲೆಯಲ್ಲಿ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹತ್ತು ದಿನಗಳ ಅಂತರದಲ್ಲಿ ಮೂರು ಕೊಲೆಗಳು ಆಗಿರುವುದು ನಿಜ.
ಆದರೆ ಮೂರು ಕೊಲೆಗಳಲ್ಲಿ ಫಾಜಿಲ್ ಹಂತಕರು ಬಂದದ್ದು ಕಾರಿನಲ್ಲಿ. ಅವರು ಐದಾರು ಜನ ಬಂದ್ರು. ಕಾರಿನಿಂದ ಇಳಿದ್ರು. ಹತ್ಯೆ ಮಾಡಿದ್ರು. ಅದೇ ಕಾರಿನಲ್ಲಿ ಓಡಿಹೋದ್ರು. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಆರೋಪಿಗಳು ಬೈಕ್ ನಲ್ಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮಸೂದ್ ಹತ್ಯಾ ಆರೋಪಿಗಳು ಅಲ್ಲಿ ರಾಜೀ ಪಂಚಾಯತಿಗೆ ಎಂದು ಕರೆದು ಹಲ್ಲೆ ಮಾಡಿದ್ರು ಎನ್ನುವ ಮಾಹಿತಿ ಇರುವುದರಿಂದ ಅದಕ್ಕೂ ಕೋಮು ಹತ್ಯೆಗಳಿಗೂ ಯಾವುದೇ ನೇರ ಸಂಬಂಧ ಇನ್ನು ಸಿಕ್ಕಿಲ್ಲ. ಮುಂದಿನ ಒಂದು ವಾರ ಹತ್ಯೆ ಮಾಡಲು ಬರುವ ಆರೋಪಿಗಳು ಬೈಕಿನಲ್ಲಿ ಬರುವ ಸಾಧ್ಯತೆ ಇರುವುದರಿಂದ ಹೊಸ ನಿಯಮ ಎನ್ನಲಾಗುತ್ತಿದೆ. ಹಿಂದುಗಡೆ ಯಾರನ್ನಾದರೂ ಕೂರಿಸಿ ಯಾವ ಬೈಕ್ ಸವಾರ ಕೂಡ ಹೋಗುವಂತಿಲ್ಲ ಎನ್ನುವುದೇ ವೇದವಾಕ್ಯವಾದರೆ ಕಾರಿನಲ್ಲಿ ಬಂದು ಕೂಡ ಹತ್ಯೆಗಳಾಗಿವೆ. ಹಾಗಾದ್ರೆ ಕಾರಿನಲ್ಲಿಯೂ ಯಾರೂ ಡ್ರೈವರ್ ಬಿಟ್ಟು ಬೇರೆಯವರು ಹೋಗುವಂತಿಲ್ಲ ಎಂದು ನಿಯಮ ತರಬಹುದಲ್ಲ. ಯಾಕೆಂದರೆ ಫಾಜಿಲ್ ಹತ್ಯೆ ಆರೋಪಿಗಳು ಬೈಕಿನಲ್ಲಿ ಬಂದದ್ದಲ್ಲ. ಬೆಸ್ಟ್ ಎಂದರೆ ಇನ್ನು ಮುಂದೆ ಎಲ್ಲರೂ ಬಸ್ಸಿನಲ್ಲಿಯೇ ಪ್ರಯಾಣಿಸಬೇಕು ಎಂದು ನಿಯಮ ತರುವುದು ಒಳ್ಳೆಯದು. ಒಂದು ವೇಳೆ ಬಸ್ಸಿನಲ್ಲಿ ಹೋಗಲು ಮನಸ್ಸಿಲ್ಲದವರು ಬೈಕಿನಲ್ಲಿ ಹೋಗುವುದಾದರೆ ಹಿಂದೆ ಯಾರನ್ನೂ ಕೂರಿಸುವಂತಿಲ್ಲ. ಮೊದಲೇ ಪೆಟ್ರೋಲ್ ಬೆಲೆ ಎಷ್ಟಿದೆ ಎನ್ನುವ ಸಂಕಟ ಬೈಕ್ ತೆಗೆದುಕೊಂಡವರದ್ದು. ಅಣ್ಣ ಮತ್ತು ತಮ್ಮ, ಅಪ್ಪ ಮತ್ತು ಮಗ ಹೀಗೆ ಯಾರಾದರೂ ಒಂದೇ ಬೈಕಿನಲ್ಲಿ ಹೋಗಲು ಹೊರಟರೆ ಪೊಲೀಸರ ಲಾಠಿ ರುಚಿ ನೋಡಬೇಕಾದಿತು. ಇನ್ನೇನು ಹಬ್ಬಗಳ ಸರಣಿ ಶುರುವಾಗುತ್ತದೆ. ಒಂದು ದೇವಸ್ಥಾನಕ್ಕೆ, ಮೂಲಮನೆಗಳಿಗೆ, ಮಾರುಕಟ್ಟೆಗೆ ಅಥವಾ ಏನಾದರೂ ಖರೀದಿಸಲು ಅಂಗಡಿಗೆ ಹೋಗಿ ಬರಲು ಇಬ್ಬರು ಹೋಗೋಣ ಎಂದರೆ ಇನ್ನು ಸದ್ಯ ಸಾಧ್ಯವಿಲ್ಲ.
ಈಗಾಗಲೇ ಸಂಜೆ ಆರು ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಬಂದಾಗುತ್ತಿದೆ. ಅಂಗಡಿ ಬಂದ್ ಮಾಡಿ ಮನೆಗೆ ಹಿಂತಿರುಗುವವರು ದಾರಿಯಲ್ಲಿ ಅಲ್ಲಲ್ಲಿ ಪೊಲೀಸರಿಂದ ಚೆಕಿಂಗ್ ಎದುರಿಸಬೇಕಾಗುತ್ತದೆ. ಮಂಗಳೂರು ಗ್ರಾಮಾಂತರದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಿಂದೂ ಯುವಕನನ್ನು ಲೇಟ್ ಆಯಿತು ಎಂದು ತಡೆ ಹಿಡಿದು ನಿಲ್ಲಿಸಿ ಕೀ ತೆಗೆದುಕೊಂಡು ಹೋದವರು ಅರ್ಧ ಗಂಟೆ ನಂತರ ಬಂದು ಕೊಟ್ಟಿದ್ದಾರೆ. ಆ ಯುವಕ ಅಲ್ಲಿ ಬಸ್ ಸ್ಟಾಪಿನಲ್ಲಿ ಬೈಕ್ ನಿಲ್ಲಿಸಿ ಕಾಯುತ್ತಾ ಇದ್ದನಂತೆ. ಮೊದಲೇ ಅದು ಗ್ರಾಮಾಂತರ ಪ್ರದೇಶ. ಕೇವಲ ತಡೆದು ನಿಲ್ಲಿಸಿದರೆ ಪರವಾಗಿಲ್ಲ. ತಕ್ಷಣ ಚೆಕ್ ಮಾಡಿ ಕಳುಹಿಸಿದರೆ ಸಮಸ್ಯೆ ಇಲ್ಲ. ಅದು ಬಿಟ್ಟು ಸಂಘಟನೆಯ ಯುವಕರನ್ನು ನಿಲ್ಲಿಸಿ ಅವರ ಕೀ ಕಸಿದು ಕೊಡದೇ ನಂತರ ಯಾವಾಗಲೋ ಕೊಟ್ಟರೆ ಅವರು ಕತ್ತಲೆಯಲ್ಲಿ ಹೋಗಿ ಮನೆ ಸೇರುವಾಗ ಎಲ್ಲಿಯಾದರೂ ದುಷ್ಕರ್ಮಿಗಳು ನಿಂತು ತಲವಾರು ಬೀಸಿದರೆ ಅದಕ್ಕೆ ಯಾರು ಹೊಣೆ? ಅದನ್ನು ಉನ್ನತ ಅಧಿಕಾರಿಗಳು ಕೆಳಗಿನ ಅಧಿಕಾರಿಗಳಿಗೆ ಹೇಳಬೇಕು. ಈಗ ಸಹಸವಾರನ ಹಿಂದೆ ಬಿದ್ದಿರುವ ಪೊಲೀಸರು ಇನ್ನಷ್ಟು ಗೋಜಲು ಸೃಷ್ಟಿಸಿದ್ದಾರೆ ಬಿಟ್ಟರೆ ಬೇರೆ ಏನೂ ಇಲ್ಲ. ಅದರ ಬದಲಿಗೆ ಎಲ್ಲಿ ಬೈಕ್ ಸವಾರರಿಬ್ಬರು ಹೋಗುವಾಗ ಸಂಶಯ ಬಂತು ಎಂದಾದರೆ ಅವರನ್ನು ನಿಲ್ಲಿಸಿ ಚೆಕ್ ಮಾಡುವುದು ಬಿಟ್ಟು ಏಕಾಏಕಿ ಎಲ್ಲರಿಗೂ ಒಂದೇ ನಿಯಮ ಮಾಡಿದರೆ ಅದರಿಂದ ಸಮಸ್ಯೆ ಹೆಚ್ಚು. ಹೆಚ್ಚು ಸೆನ್ಸಿಟಿವ್ ಏರಿಯಾ ಯಾವುದು ಎಂದು ಬಹಳ ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸಸ್ಟೇಬಲ್ ದರ್ಜೆಯ ಸಿಬ್ಬಂದಿಗಳಿಗೆ ಗೊತ್ತಿದೆ. ಅಂತವರು ಪ್ರತಿ ಠಾಣೆಯಲ್ಲಿ ಒಬ್ಬರಾದರೂ ಇರುತ್ತಾರೆ. ಜಿಲ್ಲೆಯ ಒಳಗೆ ಇರುವುದರಿಂದ ಅವರಿಗೆ ಹೆಚ್ಚಿನ ಠಾಣಾ ವ್ಯಾಪ್ತಿಯ ಪರಿಚಯ ಇರುತ್ತದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ಪ್ರದೇಶಗಳಲ್ಲಿ ಹೆಚ್ಚು ಭದ್ರತೆ ಹಾಕಿದರೆ ಅದಕ್ಕಿಂತ ಉತ್ತಮ ಮಾರ್ಗ ಬೇರೆ ಏನೂ ಇಲ್ಲ. ಸದ್ಯ ಇವರು ಒಂದೊಂದೇ ನಿಯಮ ಜಾರಿಗೆ ತರುತ್ತಿರುವುದರಿಂದ ಸಂಜೆ ಆರು ಗಂಟೆಯ ಬಳಿಕದ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಹಾಗೆ ಮುಂದುವರೆದಿದೆ. ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುತ್ತಿದೆ. ಒಂದು ಕಡೆ ಮಂಗಳೂರನ್ನು ಬ್ರಾಂಡ್ ಮಾಡಲು ಪ್ರಯತ್ನಿಸುವುದು ಮತ್ತೊಂದೆಡೆ ಸಂಜೆ ನಂತರ ಬಂದ್ ಮಾಡುವುದು, ಈಗ ಹಿಂಬದಿ ಸವಾರ ಇಲ್ಲ ಎನ್ನುವ ನಿಯಮ ಎಲ್ಲಾ ನೋಡಿದರೆ ಮಂಗಳೂರಿಗರು ಭಯದಿಂದಲೇ ಜೀವನ ಮಾಡಬೇಕಾದಿತೋ ಎಂದು ಅನಿಸುತ್ತೆ. ಪೊಲೀಸರು ಭಯ ತೆಗೆಯಲು ಇರಬೇಕಾದವರು. ಏನೋ ಆಗಲಿದೆ ಎಂದು ಭಯ ಕ್ರಿಯೇಟ್ ಮಾಡುವವರಾಗಿರಬಾರದು!!
Leave A Reply