ಎಷ್ಟೇ ಹೇಳಿದರೂ ಸಿದ್ದು ಮುಸ್ಲಿಮರ ಓಲೈಕೆ ಬಿಡುತ್ತಿಲ್ಲ!
ಸಿದ್ಧರಾಮಯ್ಯನವರಿಗೆ ಮಡಿಕೇರಿಯಲ್ಲಿ ಬಿಸಿ ಮುಟ್ಟಿದೆ. ಅದು ಸಹಜ ಕೂಡ. ಒಂದಿಷ್ಟು ದಿನಗಳ ಹಿಂದೆ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿಕೆಶಿ ಕೂಡ ಕೊಡಗಿಗೆ ಬಂದಿದ್ರು. ಆದರೆ ಏನೂ ಪ್ರತಿಭಟನೆ ವ್ಯಕ್ತವಾಗಿರಲಿಲ್ಲ. ಅದರ ಅರ್ಥ ಸಿದ್ದು ಬಗ್ಗೆ ರಾಜ್ಯದ ಅನೇಕ ಭಾಗಗಳಲ್ಲಿ ಸಾಕಷ್ಟು ವಿರೋಧ ಇದೆ. ಆ ವಿರೋಧಕ್ಕೆ ಕಾರಣ ಅವರು ಮುಸ್ಲಿಮರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡಿರುವುದು. ಇದು ಕಾಂಗ್ರೆಸ್ ಪಾಲಿಗೆ ನಿಜವಾದ ರಿಸ್ಕ್. ನೀವೆಲ್ಲಾ ಆದಷ್ಟು ರಾಜ್ಯ ಸರಕಾರದ ಕಮೀಷನ್ ವ್ಯವಹಾರ, ಭ್ರಷ್ಟಾಚಾರವನ್ನು ಮಾತ್ರ ಮಾತನಾಡಿ, ತಪ್ಪಿಯೂ ಎಲ್ಲಿ ಕೂಡ ಕೋಮು ವಿಷಯಗಳನ್ನು ವೈಭವಿಕರಿಸಬೇಡಿ ಎಂದು ಚುನಾವಣಾ ರಣತಂತ್ರವನ್ನು ನೋಡಿಕೊಳ್ಳುತ್ತಿರುವ ಒಂದು ಕಾಲದ ಪ್ರಶಾಂತ್ ಕಿಶೋರ್ ಶಿಷ್ಯ ಸುನೀಲ್ ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದರೆ ಸಿದ್ದು ತರದವರು ಮೀಟಿಂಗ್ ನಲ್ಲಿ ಕೇಳಿ ಹೊರಗೆ ಬರುತ್ತಿದ್ದಂತೆ ತಮ್ಮದೇ ರಾಗವನ್ನು ಎಳೆಯುತ್ತಿದ್ದಾರೆ. ಇದರಿಂದ ಎತ್ತು ನೀರಿಗೆ ಎಳೆಯುವ ಗಾದೆ ಮತ್ತೊಮ್ಮೆ ಸಾಬೀತಾಗುತ್ತಿದೆ. ಯಾಕೆಂದರೆ ಸಿದ್ದು ಎಲ್ಲಿ ಹೋದರೂ ಅವರಿಗೆ ವರದಿಗಾರರು ಕೇಳುವ ಕೋಮು ಸಂಬಂಧಿ ಪ್ರಶ್ನೆಗಳಿಗೆ ಸಿದ್ದು ಅಲ್ಪಸಂಖ್ಯಾತರಿಗೆ ಖುಷಿಯಾಗುವಂತೆ ಮಾತನಾಡುತ್ತಿರುತ್ತಾರೆ. ಮುಸ್ಲಿಮರನ್ನು ಒಲೈಸಿಕೊಳ್ಳೋಣ, ಆದರೆ ನೇರವಾಗಿ ಕುತ್ತಿಗೆಗೆ ಕಟ್ಟಿಕೊಂಡು ತಿರುಗುವುದು ಬೇಡಾ, ಅವರನ್ನು ತಲೆ ಮೇಲೆ ಕುಳ್ಳಿರಿಸಿಕೊಂಡದ್ದು ಬೇರೆಯವರಿಗೆ ಕಾಣಿಸಿಕೊಳ್ಳಬಾರದು ಎಂದು ಡಿಕೆಶಿ ಎಷ್ಟೇ ಹೇಳಿದ್ರೂ ಮುಸ್ಲಿಮರನ್ನು ಕಾಣುತ್ತಿದಂತೆ ಸಿದ್ದುಗೆ ಅವರೆಲ್ಲಿಯಾದರೂ ಕಡಿಮೆ ಒಲೈಕೆ ಮಾಡಿದ ಪರಿಣಾಮ ಜಾತ್ಯಾತೀತ ಜನತಾದಳಕ್ಕೆ ಹೋಗುತ್ತಾರೋ ಎಂದು ಹೆದರಿಕೆ ಆಗುತ್ತದೆ. ಸಿದ್ದು ಜೆಡಿಎಸ್ ಮುಗಿಸಲು ಆದಷ್ಟು ಅಲ್ಪಸಂಖ್ಯಾತರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಜೆಡಿಎಸ್ ಗೆ ಒಂದಿಷ್ಟು ಹಿನ್ನಡೆಯಾಗಬಹುದು. ಆದರೆ ಮೈಮೇಲೆ ಇರುವೆಗಳನ್ನು ಬಿಟ್ಟುಕೊಂಡರೆ ಅದೆಷ್ಟು ಕಿರಿಕಿರಿ ಎನ್ನುವುದು ಉಳಿದ ಕಾಂಗ್ರೆಸ್ ಮುಖಂಡರಿಗೆ ಗೊತ್ತಿರುವ ಸಂಗತಿ. ಹೀಗೆ ಶಿವಮೊಗ್ಗದ ವಿಷಯದಲ್ಲಿ “ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ” ಎಂದು ಹೇಳಿ ರಾಜ್ಯಾದ್ಯಂತ ಟ್ರೋಲ್ ಆಗಿರುವ ಸಿದ್ದು ಅದು ಬಿಸಿಯಾಗಿರುವಾಗಲೇ ಮಡಿಕೇರಿಗೆ ಕಾಲಿಟ್ಟಿದ್ದಾರೆ. ಮಡಿಕೇರಿ ಹೇಳಿ ಕೇಳಿ ಕಟ್ಟರ್ ಹಿಂದೂತ್ವದ ನಾಡು. ಕೊಡವರು ಸ್ವಾಭಿಮಾನಿಗಳು. ಅವರು ದನದ ಮಾಂಸ ತಿನ್ನುತ್ತಾರೆ ಎನ್ನುವ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಸಿದ್ದು ಕೊಡವರ ಕೆಂಗೆಣ್ಣಿಗೆ ಗುರಿಯಾಗಿದ್ದರು. ಅದರೊಂದಿಗೆ ಟಿಪ್ಪು ಜಯಂತಿ ಆಚರಿಸಲು ಸೂಚನೆ ನೀಡಿ ಇಬ್ಬರು ಅಮಾಯಕರ ಹತ್ಯೆಗೆ ಕಾರಣವಾಗಿದ್ದನ್ನು ಕೊಡವರು ಮರೆತಿಲ್ಲ. ಇಂತಹ ಹಿನ್ನಲೆಯಿರುವ ಸಿದ್ದು ಮಡಿಕೇರಿಗೆ ಹೋಗಿ ಅತಿವಷ್ಟಿಯಿಂದ ಸಂತ್ರಸ್ತರಾಗಿರುವವರ ಮುಂದೆ ಮೊಸಳೆ ಕಣ್ಣೀರು ಸುರಿಸಲು ತಯಾರಾಗಿರುವಾಗ ಅವರಿಗೆ ಮಡಿಕೇರಿಯಲ್ಲಿ ಮೊಟ್ಟೆ ಬಿಸಾಡಲಾಗಿದೆ. ಇದನ್ನು ಭಾರತೀಯ ಜನತಾ ಪಾರ್ಟಿಯ ಮುಖಂಡರು ಕಾರ್ಯಕರ್ತರಿಗೆ ಹಣ ಕೊಟ್ಟು ಮೊಟ್ಟೆ ಬಿಸಾಡಿಸಿದ್ದಾರೆ ಎಂದು ಸಿದ್ದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಕಾಂಗ್ರೆಸ್ಸಿಗರು ಬಿಜೆಪಿ ಮುಖಂಡರ ಮೇಲೆ ಮಾಡುವ ಮೂಲಕ ಪ್ರತ್ಯುತ್ತರ ಕೊಟ್ಟರೆ ಏನಾಗಬಹುದು ಎಂದು ಸಿದ್ದು ಈಗಾಗಲೇ ಮುಂದಿನ ದಿನಗಳ ಹಿಂಟ್ ನೀಡಿದ್ದಾರೆ. ಈ ಮೂಲಕ ಬರುವ ದಿನಗಳಲ್ಲಿ ಗಲಾಟೆ ಪಕ್ಕಾ ಎನ್ನುವ ಸೂಚನೆ ನೀಡಿದ್ದಾರೆ.
ಗಲಾಟೆಗಳು ಹೀಗೆ ಮುಂದುವರೆದರೆ ಏಳು ತಿಂಗಳಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದೂಗಳ ಮತ ಕ್ರೋಢಿಕರಣವಾಗಿ ಅದು ಬಿಜೆಪಿಗೆ ನೇರವಾಗಿ ಲಾಭವಾಗುತ್ತದೆ ಎನ್ನುವುದು ಗೊತ್ತಿಲ್ಲದಷ್ಟು ದಡ್ಡರು ಕಾಂಗ್ರೆಸ್ಸಿನಲ್ಲಿ ಇಲ್ಲ. ಅದಕ್ಕೆ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ಯಾಕೆ ಎಂದು ಸಿದ್ದು ಹೇಳಿದ್ದಾರಲ್ಲ ಎಂದು ಡಿಕೆಶಿಗೆ ವರದಿಗಾರು ಕೇಳಿದ್ದಕ್ಕೆ ಅದಕ್ಕೆ ಅವರ ಬಳಿಯೇ ಉತ್ತರ ಕೇಳಿ, ನನಗೆ ಗೊತ್ತಿಲ್ಲ ಎಂದು ಡಿಕೆಶಿ ಬಹಳ ಮುಗುಮ್ಮಾಗಿ ಉತ್ತರಿಸಿದ್ದಾರೆ. ಇದರಿಂದ ಪಕ್ಷದಲ್ಲಿ ಯಾವ ರೀತಿಯ ಚುನಾವಣಾ ರಣತಂತ್ರ ಮಾಡಬೇಕು ಎನ್ನುವ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ ಎನ್ನುವುದು ಸ್ಪಷ್ಟ. ಈ ನಡುವೆ ಸರಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಫೋನ್ ಕಾಲ್ ಒಂದರಲ್ಲಿ ಸಾಮಾಜಿಕ ಹೋರಾಟಗಾರನೊಬ್ಬನಿಗೆ ಹೇಳಿರುವುದು ಮತ್ತು ಅದನ್ನು ತಾವೇ ಹೇಳಿದ್ದು ಎಂದು ಒಪ್ಪಿರುವುದು ಕೂಡ ಬಿಜೆಪಿಗೆ ಬಿಸಿತುಪ್ಪವಾಗಿರುವುದು ನಿಜ. ಆ ಒಂದು ವಿಷಯ ಹಿಡಿದುಕೊಂಡು ಆರಾಮವಾಗಿ ದಡ ಸೇರೋಣ ಎಂದು ಕಾಂಗ್ರೆಸ್ಸಿನ ರಾಜ್ಯ ನಾಯಕರು ಅಂದುಕೊಳ್ಳುತ್ತಿರುವಾಗಲೇ ಸಿದ್ದು ಸಾವರ್ಕರ್ ವಿಷಯ ಎತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತೆ ಗೊಂದಲಕ್ಕೆ ಬಿದ್ದಿದೆ. ಇನ್ನು ಶ್ರೀರಾಮುಲು ಕೂಡ ಸಿದ್ದು ಮುಖ್ಯಮಂತ್ರಿಯಾಗಬೇಕು ಎಂದು ಕುರುಬರ ಸಭೆಯೊಂದರಲ್ಲಿ ಹೇಳಿದ್ದಾರೆ. ಅದು ಆ ಸಭೆಗೆ ಮಾತ್ರ ಸೀಮಿತವಾಗಿರುವುದು ಹೌದಾದರೂ ಬಿಜೆಪಿ ಸಚಿವರೊಬ್ಬರು ಹೇಳುವ ಅಗತ್ಯ ಇದೆಯಾ ಎನ್ನುವುದು ಪ್ರಶ್ನೆ. ಈ ಎಲ್ಲಾ ಗೊಂದಲವನ್ನು ಪರಿಹರಿಸಲು ಯಡ್ಡಿಯವರನ್ನು ಕೇಂದ್ರೀಯ ಸಂಸದೀಯ ಮಂಡಳಿಗೆ ಸದಸ್ಯರನ್ನಾಗಿ ಮಾಡಲಾಗಿದೆ. ಲಿಂಗಾಯಿತರನ್ನು ಖುಷಿಪಡಿಸಲು ಈ ಹೆಜ್ಜೆ ತೆಗೆದುಕೊಳ್ಳದೇ ಬಿಜೆಪಿ ಹೈಕಮಾಂಡಿಗೆ ಬೇರೆ ವಿಧಿಯಿರಲಿಲ್ಲ. ಇಲ್ಲದಿದ್ದರೆ 80 ರ ಆಸುಪಾಸಿನ ವ್ಯಕ್ತಿಯನ್ನು ಸಂಸದೀಯ ಮಂಡಳಿಗೆ ಸೇರಿಸುವ ಕೆಲಸ ಮೋದಿ ಮಾಡುತ್ತಿರಲಿಲ್ಲ. ಅವರಿಗೆ ರಾಜ್ಯ ಬಿಜೆಪಿಯನ್ನು ನಂಬಿದ್ದರೆ ವಿಪಕ್ಷವೇ ಗತಿ ಎಂದು ಅನಿಸುತ್ತಿದೆಯಾ?
Leave A Reply