ಕೆಂಪಣ್ಣರ 40% ಕಥೆಯಲ್ಲಿ ಸ್ವಾರಸ್ಯ ಉಳಿಸಲು ಕಾಂಗ್ರೆಸ್ ಕಸರತ್ತು!!
ಇನ್ನು ಕಾಂಗ್ರೆಸ್ಸಿಗರು ರಾಜ್ಯ ಸರಕಾರದ 40% ಕಮೀಷನ್ ವಿಷಯದಲ್ಲಿ ಆರೋಪ ಮಾಡುವುದನ್ನು ನಿಲ್ಲಿಸಿದರೆ ಉತ್ತಮ. ಯಾಕೆಂದರೆ ಅವರ ಬಳಿ ಒನ್ ಲೈನ್ ಕಥೆ ಮಾತ್ರ ಇದೆ. ಆದರೆ ಒಂದು ಎಳೆ ಹಿಡಿದು ನೂರು ಸಂಚಿಕೆಗಳನ್ನು ಮಾಡಿದರೆ ಅಂತಹ ಧಾರಾವಾಹಿಗಳಿಗೆ ಟಿಆರ್ ಪಿ ಇರುವುದಿಲ್ಲ ಎಂದು ಡಿಕೆಶಿ, ಸಿದ್ದು ಮತ್ತು ಹರಿಪ್ರಸಾದಿಗೆ ಗೊತ್ತಿರಬೇಕು. ಒಂದೋ ಆ ಕಥೆಯನ್ನೇ ಬಿಟ್ಟು ಬೇರೆ ಎಳೆ ಸಿಗುತ್ತಾ ನೋಡಿ. ಇಲ್ಲವೇ ಈ ಕಥೆಯಲ್ಲಿ ಏನಾದರೂ ಟ್ವಿಸ್ಟ್ ಅಥವಾ ಟರ್ನ್ ಸಿಗುತ್ತಾ ಹುಡುಕಿ. ಅದು ಬಿಟ್ಟು ನಿತ್ಯ ಬೆಳಿಗ್ಗೆ ಎದ್ದು, ರಾತ್ರಿ ಮಲಗುವ ತನಕ 40% ಎಂದರೆ ಅದು ಕೆಲವೇ ದಿನಗಳಲ್ಲಿ ಗಾಳಿ ಇಲ್ಲದ ಬೆಲೂನು ಆಗುತ್ತದೆ. ಸರಿಯಾಗಿ ನೋಡಿದರೆ 40% ಕಥೆ ಕಾಂಗ್ರೆಸ್ಸಿನದ್ದು ಅಲ್ಲವೇ ಅಲ್ಲ. ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರಿಂದ ಎರವಲು ಪಡೆದ ಒಂದು ಎಳೆ. ಕೆಂಪಣ್ಣ ಅದಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಇಟ್ಟಿರಬಹುದು. ಅದನ್ನು ನಿರ್ದೇಶನ ಮಾಡಿ ಎಂದು ಈಗಾಗಲೇ ಸಿದ್ದುಗೆ ಅವರು ವಿನಂತಿಸಿಮಾಡಿದ್ದಾರೆ. ಡಿಕೆಶಿ ನಿರ್ದೇಶನ ಮಾಡಿದರೆ ಸೂಟ್ ಆಗಲಿಕ್ಕಿಲ್ಲ. ಜನ ಅವರ ನಿರ್ದೇಶನವನ್ನು ಒಪ್ಪಲಿಕ್ಕಿಲ್ಲ ಎಂದು ಕೆಂಪಣ್ಣ ಅವರಿಗೆ ಅನಿಸಿರಬಹುದು. ಆ ನಿಟ್ಟಿನಲ್ಲಿ ಸಿದ್ದು ಇದ್ದುದ್ದರಲ್ಲಿಯೇ ಸ್ವಲ್ಪ ಬೆಟರ್ ಎಂದು ಅವರನ್ನು ಕೆಂಪಣ್ಣ ನಂಬಿದ್ದಾರೆ. ಆದರೆ ಕೆಂಪಣ್ಣ ಬರೆದುಕೊಟ್ಟಿರುವ ಚಿತ್ರಕಥೆಯ ಮೇಲೆ ಸಿದ್ದುಗೆ ನಂಬಿಕೆ ಬಂದಂತೆ ಕಾಣಿಸುವುದಿಲ್ಲ. ಕೆಂಪಣ್ಣ ಬರೆದಿರುವ ಪಾತ್ರಗಳ ಬಗ್ಗೆ ಸಿದ್ದು ಚಕಾರ ಎತ್ತುತ್ತಿಲ್ಲ. ಯಾಕೆಂದರೆ ಯಾವುದಕ್ಕೂ ಸೂಕ್ತವಾಗಿರುವ ಸಾಕ್ಷ್ಯಗಳಿಲ್ಲ. ಇದೆಲ್ಲವನ್ನು ಪರಿಗಣಿಸಿ ಸಿದ್ದು ಈ ವಿಚಾರದಲ್ಲಿ ಕೇವಲ ಆಕ್ಷನ್, ಕಟ್ ಹೇಳುವುದಕ್ಕೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಹೊರತು ಸಿನೆಮಾ ಕಳೆಗಟ್ಟುತ್ತಿಲ್ಲ. ಇದನ್ನು ಮುಂದಿನ ಮೇ ತನಕ ಹೀಗೆ ತೆಗೆದುಕೊಂಡು ಹೋಗಲು ಸಿದ್ದು ಮತ್ತು ಅವರ ತಂಡ ನಿರ್ಧರಿಸಿರಬಹುದು. ಆದರೆ ಯಾವುದೇ ಕಾರಣಕ್ಕೂ ಈ ಚಿತ್ರದಲ್ಲಿ ಅಂತಹ ತಿರುವು ಇಲ್ಲ ಎನ್ನುವುದು ಅವರ ಇಡೀ ಬಳಗಕ್ಕೆ ಗೊತ್ತಿದೆ. ಇನ್ನು ತಾವಾಗಿಯೇ ಚಿತ್ರಕಥೆ ಬರೆಯೋಣ ಎಂದು ಸಿದ್ದು ಯೋಚಿಸಿದರೂ ಅವರಿಗೆ ತಮ್ಮದೇ ಪಕ್ಷದ ಹಲವರು ಈ ಪ್ರಕರಣದಲ್ಲಿ ಸಿಲುಕಿ ಬಿದ್ದರೆ ಏನು ಎನ್ನುವ ಅಪಾಯ ಕಾಣುತ್ತಿದೆ. ಇನ್ನು 40% ಕಥೆಯನ್ನು ಕಾಂಗ್ರೆಸ್ ಎಳೆದಷ್ಟು ಡಿಕೆಶಿಗೆ ಈಡಿಯಿಂದ ಬುಲಾವ್ ಬರುವುದು ಸಾಮಾನ್ಯವಾಗುತ್ತಿದೆ. ಇದೆಲ್ಲವನ್ನು ಅರಿತಿರುವ ಕಾಂಗ್ರೆಸ್ 40% ಬಲೆಯಲ್ಲಿ ತಾನೆ ಬಿದ್ದು ಒದ್ದಾಡುತ್ತಿರುವುದೇ ಆಶ್ಚರ್ಯಕರ ವಿಷಯ.
ಹಾಗಂತ ಕಮೀಷನ್ ಇಲ್ಲದೆ ಇಲ್ಲಿಯ ತನಕ ಯಾವ ರಾಜಕಾರಣಿ ತಾನೆ ತನ್ನ ರಾಜಕೀಯ ಜೀವನವನ್ನು ಕಳೆದಿದ್ದಾರೆ ಎಂದು ನೋಡಲು ಹೋದಾಗ ಬೆರಳೆಣಿಕೆಯ ಜನಪ್ರತಿನಿಧಿಗಳು ಕೂಡ ಸಿಗುವುದು ಕಷ್ಟಸಾಧ್ಯ. ಕೆಲವರು ನೇರವಾಗಿ ಕಮೀಷನ್ ತೆಗೆದುಕೊಂಡಿದ್ದರೆ ಕೆಲವರು ತಮ್ಮ ಬೇರೆ ಕಾರ್ಯಕ್ರಮಗಳಿಗೆ ಬೇರೆ ರೀತಿಯ ಸಹಾಯಗಳನ್ನು ಮಾಡಲು ಗುತ್ತಿಗೆದಾರರಿಗೆ ಪ್ರಲೋಭನೆ ಒಡ್ಡಿರುತ್ತಾರೆ. ಒಟ್ಟಿನಲ್ಲಿ 40% ಎನ್ನುವುದು ಪ್ಯಾಂಟಸಿ ಸಂಖ್ಯೆಯಾದರೂ ಕಮೀಷನ್ ಎನ್ನುವುದು ಒಂದಲ್ಲ ಒಂದು ರೂಪದಲ್ಲಿ ಆಡಳಿತ ಮತ್ತು ವಿಪಕ್ಷದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬರಲಿ ಅದು ಸರ್ವೆಸಾಮಾನ್ಯವಾಗಿರುವ ವಿಷಯ. ಅದೆಲ್ಲವನ್ನು ತಿಳಿದಿದ್ದರೂ ಸಿದ್ದು ಮತ್ತು ಬಳಗ ಈ ಒಂದು ವಿಷಯ ಹಿಡಿದುಕೊಂಡು ಮೂರು ಮೂರು ದಿನ ಸದನವನ್ನು ಸುಮ್ಮನೆ ಹಾಳುಗೆಡವುತ್ತಿರುವುದು ಮಾತ್ರ ಸರ್ವಥಾ ಸರಿಯಲ್ಲ.
ಅದರ ಬದಲಿಗೆ ಯಾರೇ ಆಗಲಿ ತಮ್ಮಲ್ಲಿರುವ ಅಷ್ಟು ದಾಖಲೆಗಳನ್ನು ಸಂಗ್ರಹಿಸಿ ನೇರವಾಗಿ ಲೋಕಾಯುಕ್ತಕ್ಕೆ ಹೋಗಿ ಇಂತಿಂತಹ ಸಚಿವರು, ಶಾಸಕರು, ಅಧಿಕಾರಿಗಳು ತಮ್ಮಿಂದ ಇಂತಿಷ್ಟು ಲಂಚವನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ದೂರು ಕೊಡುವುದು ಒಳ್ಳೆಯದಲ್ಲವೇ. ಇಲ್ಲಿ ಅವರು 40% ಎಂದು ಹೇಳುವುದು, ಇವರು ನಿಮ್ಮ ಅವಧಿಯಲ್ಲಿ 90% ಎಂದು ಹೇಳುವುದು ಎರಡೂ ಕೂಡ ಕೇವಲ ಭ್ರಮೆಯ ಶೇಕಡಾ ಮಾತ್ರವೇ ವಿನ: ನೈಜವಾಗಿ ಗೊತ್ತಿರುವುದು ಕೊಟ್ಟವರಿಗೆ ಮತ್ತು ತೆಗೆದುಕೊಂಡವರಿಗೆ ಮಾತ್ರ. ಇನ್ನು ಈ ಲಂಚದ ವಿಷಯ ಬಂದಾಗ ಅದಕ್ಕೆ ರಸೀದಿ ಇರುವುದಿಲ್ಲ. ಹಾಗಾಗಿ ದಾಖಲೆ ಎನ್ನುವುದು ಸೃಷ್ಟಿಯಾಗುವುದಿಲ್ಲ. ದಾಖಲೆಯೇ ಇಲ್ಲದಿದ್ದಾಗ ಪ್ರೂಫ್ ಕೊಡಿ ಎಂದು ಆಗ್ರಹಿಸುವುದು ಶುದ್ಧ ಕಾಮಿಡಿ ನಾಟಕವಲ್ಲದೇ ಬೇರೆ ಏನೂ ಅಲ್ಲ. ಅದರ ಬದಲಿಗೆ ಲೋಕಾಯುಕ್ತಕ್ಕೆ ಕೊಟ್ಟರೆ ಹೇಗೂ ಅವರು ಕೆಲವು ವರ್ಷಗಳ ಅಜ್ಞಾತ ವಾಸದ ಬಳಿಕ ಹೊಸ ಹುರುಪಿನಿಂದ ಎದ್ದು ಕುಳಿತಿದ್ದಾರೆ. ಅವರಿಗೆ ಇಂತಹ ಕೇಸ್ ಸಿಕ್ಕರೆ ತಾವು ಕೂಡ ಸಾಮರ್ತ್ಯ ತೋರಿಸಬೇಕು ಎನ್ನುವ ಹಂಬಲ ಇದೆ. ಆದ್ದರಿಂದ ಅವರಿಗೆ ಒಂದು ಕೆಲಸ ಕೊಟ್ಟ ಹಾಗೆ ಆಗುತ್ತದೆ. ಅದರೊಂದಿಗೆ ನಾವು ಕೇವಲ ಟಿವಿ ಎದುರು ಆಕ್ರೋಶ ತೋರಿಸುವುದಕ್ಕೆ ಮಾತ್ರವಲ್ಲ, ಇದನ್ನು ದಡ ಮುಟ್ಟಿಸಲು ಕೂಡ ಬದ್ಧವಾಗಿದೆ ಎಂದು ಕಾಂಗ್ರೆಸ್ ತೋರಿಸಿಕೊಟ್ಟಂತೆ ಆಗುತ್ತದೆ.
ಇನ್ನು ಕೊನೆಯದಾಗಿ ವಿಷಯ ಯಾವುದೇ ಇರಲಿ ಸದನದಲ್ಲಿ ಅದನ್ನು ಚರ್ಚಿಸುವಾಗ ಒಂದು ತಾರ್ಕಿಕ ಅಂತ್ಯಕ್ಕೆ ಅದನ್ನು ತೆಗೆದುಕೊಂಡು ಹೋಗಲು ಶಾಸಕರಿಗೆ, ಸಚಿವರಿಗೆ ಇಚ್ಚಾಶಕ್ತಿ ಇರಬೇಕೆ ವಿನ: ಕೇವಲ ಟಿವಿ ಕ್ಯಾಮೆರಾಗಳು ನೋಡುತ್ತಿವೆ ಎನ್ನುವ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಮಾಡಬಾರದು. ಟಿವಿ ವಾಹಿನಿಗಳು ಸದನದಲ್ಲಿ ಇದ್ದರೆ ಪಾತ್ರಧಾರಿಗಳ ಆವೇಶ ಜಾಸ್ತಿ ಇರುತ್ತದೆ. ಮೇಕಪ್ಪು, ವೇಷಭೂಷಣ ಅಬ್ಬರ ಇರುತ್ತದೆ. ಅದರ ಬದಲಿಗೆ ಇಡೀ ದಿನದ ಕಲಾಪವನ್ನು ಹದಿನೈದು ನಿಮಿಷಗಳಿಗೆ ಸೀಮಿತಗೊಳಿಸಿ ಟಿವಿಯಲ್ಲಿ ಪ್ರಸಾರಗೊಳಿಸಿದರೆ ವಿಷಯ ಮಾತ್ರ ಇರುತ್ತದೆ. ಒಣಜಂಭ, ವ್ಯಂಗ್ಯ, ಬೊಬ್ಬೆ ಕಡಿಮೆ ಇರುತ್ತದೆ!
Leave A Reply