ತರೂರ್ ಅಧ್ಯಕ್ಷರಾದರೆ ವೇಣು ಜೊತೆ ಗೆಹ್ಲೋಟ್ ಕೂಡ ಫಿನಿಶ್!!
ಕಾಂಗ್ರೆಸ್ ಎರಡು ದಶಕಗಳ ಬಳಿಕ ತಮ್ಮ ರಾಷ್ಟ್ರೀಯ ಅಧ್ಯಕ್ಷರು ಯಾರಾಗಬೇಕು ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಒಂದಿಷ್ಟು ಸಮಯ ತಮ್ಮ ನಾಯಕರಿಗೆ ಟೈಂಪಾಸ್ ಮಾಡಲಿದೆ. ಅಕ್ಟೋಬರ್ ನಲ್ಲಿ ಚುನಾವಣೆ ನಡೆಯಲಿದೆಯಂತೆ. ಅದರ ಒಳಗೆ ರಾಹುಲ್ ಗಾಂಧಿ ದೊಡ್ಡ ಮನಸ್ಸು ಮಾಡಿದರೆ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಅವರು ಆ ಕಿರಿಕಿರಿಯೇ ಬೇಡಾ, ಯಾರು ಅಧ್ಯಕ್ಷರಾದರೇನಂತೆ, ನಮ್ಮದೇ ನಡೆಯುವುದಲ್ವಾ? ಎಂದು ಅಂದುಕೊಂಡು ಯಾರಾದರೂ ಆಗಲಿಬಿಡಿ ಎಂದು ಹೇಳಿದರೆ ಬಹುತೇಕ ಗೆಹ್ಲೋಟ್ ಆಗಲಿದ್ದಾರೆ. ಅಶೋಕ್ ಗೆಹ್ಲೋಟ್ ಅಧ್ಯಕ್ಷರಾದರೆ ಕಾಂಗ್ರೆಸ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲಿದೆ. ಒಂದು ಸಚಿನ್ ಪೈಲೆಟ್ ಅವರನ್ನು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಮಾಡಿ ಅವರು ಮತ್ತೊಂದು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಆಗದಂತೆ ನೋಡಿಕೊಳ್ಳುವುದು. ಅದರೊಂದಿಗೆ ಕಾಂಗ್ರೆಸ್ಸಿನಲ್ಲಿ ಮುಂದಿನ ತಲೆಮಾರಿಗೂ ಅಧಿಕಾರದ ಅವಕಾಶ ಸಿಗುತ್ತದೆ ಎಂದು ರಾಷ್ಟ್ರದ ಕಾಂಗ್ರೆಸ್ಸಿಗರಿಗೂ ಒಂದು ಸಂದೇಶ ಕೊಡುವುದು. ಇನ್ನೊಂದು ಕಡೆಯಲ್ಲಿ ಗೆಹ್ಲೋಟ್ ಅವರ ಕೈಗೆ ಅಧ್ಯಕ್ಷಗಿರಿ ಕೊಡುವ ಮೂಲಕ ಮನೆಯ ಒಳಗೆ ಕೈಗೆ ಸುಲಭವಾಗಿ ಸಿಗುವಂತೆ ಮಾಡುವುದು. ಇಂತಹ ಒಂದು ಚಾಣಾಕ್ಷ ನಡೆಯನ್ನು ಮಾಡಲು ಕಾಂಗ್ರೆಸ್ ಹೊರಟಿದೆ. ಆದರೆ “ಮೇಡಂ, ಬೇಕಾದರೆ ನನ್ನನ್ನು ನಾಮಕಾವಸ್ತೆ ಅಧ್ಯಕ್ಷನನ್ನಾಗಿ ಮಾಡಿದರೂ ಬೇಜಾರಿಲ್ಲ. ಆದರೆ ಯಾವ ಕಾರಣಕ್ಕೂ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಪೈಲೆಟ್ ಕೈಗೆ ಅಧಿಕಾರ ಕೊಡಬೇಡಿ” ಎಂದು ನಿತ್ಯ ಬೆಳಿಗ್ಗೆ ಜನಪಥ್ 10 ರ ಡೈನಿಂಗ್ ಟೇಬಲ್ ನಲ್ಲಿ ಕುಳಿತು ಗೋಗರೆಯುತ್ತಿರುವ ವ್ಯಕ್ತಿಯ ಹೆಸರು ಅಶೋಕ್ ಗೆಹ್ಲೋಟ್. “ಮಿಸ್ಟರ್ ಗೆಹ್ಲೋಟ್, ಅಧ್ಯಕ್ಷ ಸ್ಥಾನ ಎಂದರೆ ಮುಖ್ಯಮಂತ್ರಿ ಸ್ಥಾನಕ್ಕಿಂತ ತುಂಬಾ ದೊಡ್ಡದು. ಅರ್ಥ ಮಾಡಿಕೊಳ್ಳಿ. ಸಿಎಂ ಯಾರು ಬೇಕಾದರೂ ಆಗಬಹುದು. ಅಧ್ಯಕ್ಷರಾಗಬೇಕಾದರೆ ಕಾಂಗ್ರೆಸ್ಸಿನಲ್ಲಿ ಗಾಂಧಿಯಾಗಿಯೇ ಹುಟ್ಟಬೇಕು. ನೀವು ಏಳೇಳು ಜನ್ಮದ ಪುಣ್ಯದಿಂದ ಅಧ್ಯಕ್ಷರಾಗುತ್ತಿದ್ದಿರಿ” ಎಂದು ಮೇಡಂ ಹೇಳುತ್ತಿದ್ದರೆ ” ಮೇಡಂ, ಈ ಅಧ್ಯಕ್ಷ ಸ್ಥಾನ ಹೆಚ್ಚೆಂದರೆ ಮೂರು ವರ್ಷ. ಅದರ ನಂತರ ನಾನು ರಾಜಸ್ಥಾನಕ್ಕೆ ಹೋದರೆ ಮುಖ್ಯಮಂತ್ರಿ ಆಗುವುದು ದೂರದ ಮಾತು. ನನಗೆ ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯದರ್ಶಿ ಕೂಡ ಆಗದ ರೀತಿಯಲ್ಲಿ ಆ ಪೈಲೆಟ್ ಮಾಡಿಬಿಡುತ್ತಾನೆ. ನನ್ನ ರಾಜಕೀಯ ಜೀವನದುದ್ದಕ್ಕೂ ನೀವು ಕಾಲ ಬೆರಳಿನಿಂದ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತು ಮಾಡಿದ್ದೇನೆ. ನನ್ನ ಈ ಒಂದು ಬೇಡಿಕೆಯನ್ನು ಆಗಲ್ಲ ಎನ್ನಬೇಡಿ. ಬೇಕಾದರೆ ಅಲ್ಲಿ ಪೈಲೆಟ್ ಬಿಟ್ಟು ಬೇರೆಯವರಿಗೆ ಸಿಎಂ ಮಾಡಿ ನನ್ನನ್ನು ಇಲ್ಲಿ ಅಧ್ಯಕ್ಷ ಮಾಡಿ. ಅದು ಒಕೆ” ಎಂದು ಗೆಹ್ಲೋಟ್ ಮೇಡಂ ಎದುರು ಸಕ್ಕರೆ ಇಲ್ಲದ ಕಾಫಿ ಕುಡಿಯುತ್ತಿದ್ದರೆ ಅತ್ತ ಒಂದು ದಿವಸ ಮೊದಲೇ ಸಚಿನ್ ಪೈಲೆಟ್ ಕೇರಳದಲ್ಲಿ ಲ್ಯಾಂಡ್ ಆಗಿ ರಾಹುಲ್ ಎದುರು ಕುಳಿತು ” ಬ್ರೋ, ನೀವೆನೆ ಹೇಳಿ, ಈ ಬಾರಿ ಗೆಹ್ಲೋಟ್ ಪ್ರೆಸಿಡೆಂಟ್ ಆದರೆ ನಾನು ರಾಜಸ್ಥಾನದ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ನೀವು ಬರಲೇಬೇಕು” ಎಂದು ಹೇಳಿದ್ದಾರೆ. ಅತ್ತ ಅದೇ ಸಮಯಕ್ಕೆ ಮೇಡಂ ” ಗೆಹ್ಲೋಟ್ ಜಿ, ನೀವು ಈಗಲೇ ಕೇರಳಕ್ಕೆ ಹೋಗಿ ಪಾದಯಾತ್ರೆ ಮಾಡುತ್ತಿರುವ ವೇಣು ಹತ್ರ ಮಾತನಾಡಿ ಬನ್ನಿ” ಎಂದಿದ್ದಾರೆ. ಹಾಗೇ ಗೆಹ್ಲೋಟ್ ದೆಹಲಿಯಿಂದ ತ್ರಿವೆಂಡ್ರಮ್ ಪ್ಲೈಟ್ ಹತ್ತುವುದಕ್ಕೂ, ಇತ್ತ ಸಚಿನ್ ತ್ರಿವೆಂಡ್ರಮ್ ನಿಂದ ಜೈಪುರ ವಿಮಾನ ಹತ್ತುವುದಕ್ಕೂ ಸರಿಯಾಗಿ ಹೋಯಿತು.
“ರಾಹುಲ್ ಜಿ, ನೀವು ಅಧ್ಯಕ್ಷರಾಗಿಯೇ ಮುಂದುವರೆಯಬೇಕು. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಇದ್ದೇವೆ” ಎಂದು ಗೆಹ್ಲೋಟ್ ರಾಹುಲ್ ಜೊತೆ ಹೆಜ್ಜೆ ಹಾಕುತ್ತಾ ಹೇಳುತ್ತಿದ್ದರೆ ಪಕ್ಕದಲ್ಲಿಯೇ ಇದ್ದ ವೇಣು ” ಗೆಹ್ಲೋಟ್ ಸಾಬ್, ನೀವು ಅಧ್ಯಕ್ಷ ಸ್ಥಾನಕ್ಕೆ ನಿಲ್ಲದಿದ್ದರೆ ತರೂರ್ ಗೆಲ್ಲುತ್ತಾರೆ. ತರೂರ್ ನನ್ನದೇ ಊರಿನವನು. ಅವನು ಅಧ್ಯಕ್ಷರಾದರೆ ನಂತರ ನನ್ನನ್ನು ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸಲು ಕೂಡ ನೇಮಿಸುವುದಿಲ್ಲ. ಯಾವುದೇ ಕಾರಣಕ್ಕೂ ತರೂರ್ ಆಗಬಾರದು. ಅವನು ಪಕ್ಕಾ ಚಾಣಾಕ್ಷ. ನೀವು ಮೇಡಂ ಕಡೆಯ ಅಭ್ಯರ್ಥಿ ಎಂದು ಪ್ರಚಾರ ಆದರೆ ಗೆದ್ದುಬಿಡುತ್ತೀರಿ. ನೀವು ನಿಲ್ಲದಿದ್ದರೆ ಬೇರೆ ಯಾರಾದರೂ ನಿಂತರೆ ತರೂರ್ ಗೆದ್ದುಬಿಡುತ್ತಾರೆ. ಅಲ್ಲಿಗೆ ನನ್ನ ರಾಜಕೀಯ ಮುಗಿಯುತ್ತದೆ. ನನ್ನ ರಾಜಕೀಯ ಮುಗಿದರೆ ಮುಂದೆ ನೀವು ಸಿಎಂ ಆಗುವುದಕ್ಕೂ ನಾನು ಬಿಡುವುದಿಲ್ಲ, ನೆನಪಿರಲಿ” ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇತ್ತ ವೇಣು ಹೇಳಿದ್ದು ತನ್ನ ಒಳ್ಳೆಯದ್ದಕ್ಕಾ, ನನ್ನ ಒಳ್ಳೆಯದ್ದಕ್ಕಾ ಎಂದು ಗೊತ್ತಾಗದೇ ಗೊಂದಲಕ್ಕೆ ಬಿದ್ದ ಗೆಹ್ಲೋಟ್ ಸೀದಾ ಕಾಂಗ್ರೆಸ್ಸಿನ ವಯೋವೃದ್ಧರೊಡನೆ ಮಾತನಾಡಲು ದೆಹಲಿಗೆ ಹಿಂತಿರುಗಿದ್ದಾರೆ. “ಹಾಗಾ ವಿಷಯ, ತರೂರ್ ಅಧ್ಯಕ್ಷರಾದರೆ ವೇಣು ರಾಜಕೀಯ ಮುಗಿಯಿತು” ಎಂದು ಖುಷಿಯಾದ ದಿಗ್ಗಿ “ನನಗೂ ಏನೂ ಕೆಲಸವಿಲ್ಲ. ಫ್ರೀಯಾಗಿದ್ದೇನೆ. ನಾನು ನಿಂತರೆ ಹೆಚ್ಚಿನ ಹಳೆ ಮುಖಗಳು ನನಗೆ ವೋಟ್ ಹಾಕುತ್ತಾರೆ. ಹೊಸ ಮುಖಗಳು ತರೂರ್ ಗೆ ವೋಟ್ ಹಾಕುತ್ತಾರೆ. ನಾನು ಗೆಲ್ಲುತ್ತೇನೋ, ಬಿಡುತ್ತೇನೋ, ತರೂರ್ ಗೆಲ್ಲುತ್ತಾರೆ” ಎಂದು ಚುನಾವಣೆಗೆ ನಿಲ್ಲಲು ಎಐಸಿಸಿ ಕಚೇರಿ ಕಡೆ ಕಾರು ತಿರುಗಿಸಲು ಡ್ರೈವರ್ ಗೆ ಹೇಳಿದ್ದಾರೆ. ದಿಗ್ಗಿ ಎಐಸಿಸಿ ಕಚೇರಿಯ ಮೆಟ್ಟಿಲು ಹತ್ತಿ ಒಳಗೆ ಬರುತ್ತಿದ್ದಂತೆ ಪ್ರಿಯಾಂಕಾಗೆ ಫೋನ್ ಹೋಗಿದೆ. ತಕ್ಷಣ ಮಿಸೆಸ್ ವಾದ್ರಾ ಫೋನ್ ಕೈಗೆತ್ತಿಕೊಂಡು ” ಖರ್ಗೆ ಅಂಕಲ್, ದಿಗ್ಗಿ ಅವರು ಯಾವ ಕಾರಣಕ್ಕೂ ಅಧ್ಯಕ್ಷರಾಗುವುದು ಬೇಡಾ. ನೀವು ಸೀದಾ ಎಐಸಿಸಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿ” ಎಂದಿದ್ದಾರೆ. ಪ್ರಿಯಾಂಕಾ ಹೇಳಿದ್ದು ಸ್ವತ: ಇಂದಿರಾ ಗಾಂಧಿ ಹೇಳಿದ್ದಂತೆ ಆಯಿತು ಎಂದುಕೊಂಡ ಖರ್ಗೆ ತಮ್ಮ ಪಂಚೆ ಸುತ್ತಿ “ಗಾಡಿ ನಿಕಾಲೋ” ಎಂದು ಚಾಲಕನಿಗೆ ಹೇಳಿದ್ದಾರೆ. ಹೀಗೆ ಹಿರಿಯರುಗಳು ಎಐಸಿಸಿ ಕಚೇರಿಗೆ ಧಾವಿಸುತ್ತಿದ್ದಂತೆ ಸೋನಿಯಾ ಫೋನ್ ತೆಗೆದುಕೊಂಡು “ಕಮಲನಾಥಜಿ, ನನಗೆ ಗೆಹ್ಲೋಟ್ ಮೇಲೆ ಅಷ್ಟು ವಿಶ್ವಾಸ ಕಾಣಿಸುತ್ತಿಲ್ಲ. ಆ ಮನುಷ್ಯ ಕೊನೆಕ್ಷಣದಲ್ಲಿ ಸಿಎಂ ಸ್ಥಾನವೇ ಇರಲಿ ಎಂದು ಬಿಟ್ಟರೆ ತರೂರ್ ಗೆಲ್ಲುತ್ತಾರೆ. ನಂತರ ನಾವು ಗಾಂಧಿಗಳಾಗಿ ಇದ್ದರೆಷ್ಟು, ಬಿಟ್ಟರೆಷ್ಟು. ನೀವು ನಾಮಿನೇಶನ್ ಹಾಕಿಬಿಡಿ. ನಮಗೆ ನೀವು ಕೂಡ ಆಪ್ತರು” ಎಂದಿದ್ದಾರೆ. ಹಾಗೆ ಸೋನಿಯಾ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಮಧ್ಯಾಹ್ನದ ಊಟ ಮುಗಿಸಿ ನಿದ್ರೆಗೆ ಜಾರಿದ್ದ ಕಮಲನಾಥ್ ರಪ್ಪನೆ ಎದ್ದು ಮುಖ ತೊಳೆದು ಅರ್ಜೆಂಟ್ ಒಂದು ಗ್ಲಾಸ್ ಚಾ ಮಾಡಿಕೊಡು. ಮೇಡಂ ಫೋನ್ ಬಂದಿದೆ ಎಂದು ಕೆಲಸದವರಿಗೆ ಹೇಳಿದ್ದಾರೆ. ಒಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನ ಎರಡು ದಶಕಗಳ ಬಳಿಕ ಇಷ್ಟು ಕುತೂಹಲದ ಘಟ್ಟದಲ್ಲಿ ಬರುತ್ತದೆ ಎಂದು ಸ್ವತ: ಎಐಸಿಸಿ ಕಚೇರಿಯ ಅಟೆಂಡರ್ ಗಳಿಗೂ ಆಶ್ಚರ್ಯ ತಂದಿದೆ!
Leave A Reply