ಹರೀಶ್ ಪೂಂಜಾ ಪ್ರಕರಣದಲ್ಲಿ ಎಸ್ಪಿ ಹಾಗೆ ಮಾಡಲು ಹಿಂದಿನ ಮನಸ್ತಾಪ ಕಾರಣವಾಗಿತ್ತಾ?
ಹರೀಶ್ ಪೂಂಜಾ ಮೇಲೆ ಹಲ್ಲೆಗೆ ಯತ್ನ ಎನ್ನಲಾದ ಪ್ರಕರಣ ಸಿಐಡಿಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ಇಷ್ಟು ಚಿಕ್ಕ ಕೇಸನ್ನು ಕೂಡ ದಕ್ಷಿಣ ಕನ್ನಡ ಪೊಲೀಸರಿಗೆ ಭೇದಿಸಲು ಆಗಲಿಲ್ಲ ಎನ್ನುವ ಸಂದೇಶವನ್ನು ಅದೇ ಜಿಲ್ಲೆಯ ಶಾಸಕರು ರಾಜ್ಯಕ್ಕೆ ನೀಡಿದ್ದಾರೆ. ಎಂತೆಂತಹ ಪ್ರಕರಣಗಳ ಜಾಡು ಹಿಡಿದು ಸತ್ಯ ಬಯಲಿಗೆಳೆದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ನೀಡಿದ ಖ್ಯಾತಿ ಇರುವ ದಕ್ಷಿಣ ಕನ್ನಡ ಪೊಲೀಸರಿಗೆ ಪೂಂಜಾ ಪ್ರಕರಣ ಏನು ಕಬ್ಬಿಣದ ಕಡಲೆಯಾಗಿತ್ತಾ? ಚಾನ್ಸೆ ಇಲ್ಲ. ಹಾಗಾದರೆ ಆಗಿರುವುದೇನು? ಒಂದೋ ಸತ್ಯ ಹರೀಶ್ ಪೂಂಜಾರಿಗೆ ಎಸ್ಪಿ ಹೇಳಿಕೆ ಅಪಥ್ಯವಾಗಿದೆ ಅಥವಾ ಹರೀಶ್ ಪೂಂಜಾ ಮೇಲಿನ ಯಾವುದೋ ಹಳೆಕೋಪದಿಂದ ಪೊಲೀಸ್ ವರಿಷ್ಠಾಧಿಕಾರಿಯವರು ಕೇಸ್ ವೀಕ್ ಮಾಡಲು ಪ್ರಯತ್ನಿಸಿರಬಹುದು. ಎರಡರಲ್ಲಿ ಯಾವುದಾದರೂ ಒಂದು ನಿಜ ಆಗಲೇಬೇಕು. ಆದರೆ ಜನರಿಗೆ ತಮ್ಮ ಮೇಲೆ ಬೇರೆ ಭಾವನೆ ಬರಬಾರದು ಎನ್ನುವ ಕಾರಣಕ್ಕೆ ಪೂಂಜಾ ಪಕ್ಷದ ಮುಖಂಡರನ್ನು, ಗೃಹ ಸಚಿವರನ್ನು ವಿನಂತಿಸಿ ಕೇಸ್ ಸಿಐಡಿಗೆ ವರ್ಗವಾಗುವಂತೆ ನೋಡಿಕೊಂಡಿದ್ದಾರೆ. ಆ ಮೂಲಕ ತಮ್ಮ ಪ್ರಕರಣವನ್ನು ಹಳ್ಳ ಹಿಡಿಯಲು ಯತ್ನಿಸಿದ ಎಸ್ಪಿಗೆ ಮುಖಕ್ಕೆ ಹೊಡೆದಹಾಗೆ ಮಾಡಿದ್ದಾರೆ. ಒಂದು ಕೇಸ್ ಸಿಐಡಿಗೆ ರಾಜ್ಯ ಸರಕಾರ ಶಿಫಾರಸ್ಸು ಮಾಡಿದೆ ಎಂದರೆ ಸ್ಥಳೀಯ ಪೊಲೀಸರಿಗೆ ಅದರ ಹಿಂದೆ ಹೋಗುವಷ್ಟು ಧಮ್ ಇಲ್ಲ ಎಂದೇ ಅರ್ಥ. ಈ ಪ್ರಕರಣದಲ್ಲಿ ಒಂದಿಷ್ಟು ಪೊಲೀಸರ ನಿರ್ಲಕ್ಷ್ಯವೂ ಎದ್ದು ಕಾಣುತ್ತೆ. ನಂತೂರ್ ಸಮೀಪವೇ ಪೂಂಜಾರಿಗೆ ತಮ್ಮ ಕಾರನ್ನು ಯಾರೋ ಅನಗತ್ಯವಾಗಿ ಹಿಂಬಾಲಿಸುತ್ತಿದ್ದಾರೆ ಎನ್ನುವ ಅನುಮಾನ ಬಂದ ಕೂಡಲೇ ಅವರು ಪೊಲೀಸ್ ಡಿವೈಎಸ್ಪಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಿರುವಾಗ ಫರಂಗಿಪೇಟೆಯ ಬಳಿ ಆರೋಪಿಯ ವಾಹನವನ್ನು ಅಡ್ಡಗಟ್ಟುವುದು ಅದೇನು ಕಷ್ಟವಾ? ಆದರೆ ಫರಂಗಿಪೇಟೆ ಚೆಕ್ ಪೋಸ್ಟ್ ಬಳಿ ಇಬ್ಬರು ಪೊಲೀಸ್ ಕಾನ್ಸಟೇಬಲ್ ಅವರನ್ನು ಕಳುಹಿಸಿ ಅನುಮಾನಾಸ್ಪದ ಕಾರನ್ನು ಅಡ್ಡಹಾಕಲು ಹೇಳಲಾಗಿತ್ತು. ಹಾಗಾದರೆ ಒಬ್ಬ ಶಾಸಕನ ಪ್ರಾಣಕ್ಕೆ ಪೊಲೀಸರು ಕಟ್ಟಿದ ಬೆಲೆ ಅಷ್ಟೇನಾ? ಶಾಸಕರು ಮತ್ತು ನಾಗರಿಕರು ಎಂದರೆ ಎಲ್ಲರ ಪ್ರಾಣವೂ ಅಮೂಲ್ಯ.
ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಒಬ್ಬ ಶಾಸಕ ತನ್ನ ಮೇಲೆ ಹಲ್ಲೆಯಾಗುವ ಸಾಧ್ಯತೆ ಇದೆ ಎಂದು ಮೌಖಿಕವಾಗಿ ಹೇಳಿದಾಗಲೂ ಪೊಲೀಸರು ಅದನ್ನು ಲೈಟಾಗಿ ತೆಗೆದುಕೊಳ್ಳುತ್ತಾರೆ ಆದರೆ ಜನಸಾಮಾನ್ಯ ಹಾಗೆ ಹೇಳಿದರೆ ಏನಾಗುತ್ತದೆ? ಏನೂ ಆಗುವುದಿಲ್ಲ. ಜನಸಾಮಾನ್ಯನ ಹೆಣ ಬೀಳುತ್ತದೆ. ಅದು ಹಿಂದೂ ಆಗಿದ್ದರೆ ಕೇಸರಿ ಪಡೆಗಳು ಪ್ರತಿಭಟನೆ ಮಾಡುತ್ತಾರೆ. ಮುಸ್ಲಿಂ ಆದರೆ ಅವರ ಸಂಘಟನೆಗಳು ಸುದ್ದಿಗೋಷ್ಟಿ ಮಾಡುತ್ತಾರೆ. ಅದೇ ಸತ್ತ ವ್ಯಕ್ತಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಆಗಿದ್ದಲ್ಲಿ ಸಂಘ ಪರಿವಾರದ ಯುವಕರು ಬೀದಿಗೆ ಇಳಿಯುತ್ತಾರೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಮ್ಮ ಕಾರ್ಯಕರ್ತರನ್ನು ಉಳಿಸಲು ಆಗಲಿಲ್ಲವಲ್ಲ ಎಂದು ಬಿಜೆಪಿ ನಾಯಕರನ್ನು ಅಡ್ಡಹಾಕುತ್ತಾರೆ. ವಾಹನವನ್ನು ಅಲ್ಲಾಡಿಸುತ್ತಾರೆ. ಅದನ್ನೇ ಹಿಡಿದು ಕಾಂಗ್ರೆಸ್ಸಿಗರು ಟೀಕೆ, ವ್ಯಂಗ್ಯ ಮಾಡುತ್ತಾರೆ. ಮಾಧ್ಯಮಗಳು ಸುದ್ದಿ ಮಾಡುತ್ತವೆ. ಪೊಲೀಸ್ ಅಧಿಕಾರಿಗಳು ದೂರ ನಿಂತು ಚೆಂದ ನೋಡುತ್ತಾರೆ. ಹಾಗಾದರೆ ಪೊಲೀಸ್ ಇಲಾಖೆ ವಿಪಕ್ಷದಲ್ಲಿರುವ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದೆಯಾ? ಬೇರೆ ಯಾವುದೇ ಪ್ರಕರಣ ಇದ್ದಾಗ ಅದಿನ್ನು ತನಿಖೆಯ ಹಂತದಲ್ಲಿದೆ. ವಿಚಾರಣೆಯ ವಿಷಯವನ್ನು ಈಗಲೇ ಹೇಳಲು ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸುತ್ತಾರೆ. ಈ ಪ್ರಕರಣದಲ್ಲಿ ಅಂತಹ ಅರ್ಜೆಂಟ್ ಏನಿತ್ತು. ಹಾಗೆ ನೋಡಿದರೆ ವರ್ಷಗಳಾದರೂ ದಡ ಸೇರದ ಎಷ್ಟೋ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಪಂಜಿಮೊಗರು ಡಬ್ಬಲ್ ಮರ್ಡರ್ ನಿಂದ ಹಿಡಿದು ಅನೇಕ ಪ್ರಕರಣಗಳಲ್ಲಿ ಆರೋಪಿ ಯಾರೆಂದು ಗೊತ್ತಿಲ್ಲದೇ ಅವು ಮುಚ್ಚಿ ಹೋಗಿವೆ. ಹಾಗಿರುವಾಗ ಈ ಸೆನ್ಸಿಟಿವ್ ಪ್ರಕರಣದಲ್ಲಿ ಅದೆಂತಹ ಅವಸರ ಇತ್ತು? ಪೂಂಜಾ ಹೇಳುವ ಪ್ರಕಾರ ಆರೋಪಿಯ ಕೈಯಲ್ಲಿ ತಲ್ವಾರ್ ಇತ್ತು. ಪೊಲೀಸರ ಪ್ರಕಾರ ಸ್ಪಾನರ್. ಇನ್ನು ಆರೋಪಿಗೆ ಯಾವುದೇ ಹಿನ್ನಲೆ ಇಲ್ಲ ಎನ್ನುವುದು ಪೊಲೀಸರ ಅಭಿಮತ.
ಈಗ ಅಂತಿಮವಾಗಿ ಈ ಫೈಲ್ ಸಿಐಡಿ ಮುಂದೆ ಇದೆ. ಸಿಐಡಿ ಎಂದ ಕೂಡಲೇ ಅವರು ಮೇಲಿನಿಂದ ಇಳಿದು ಬರುವ ಸೂಪರ್ ಮ್ಯಾನ್ ಗಳಲ್ಲ. ಪೊಲೀಸ್ ಇಲಾಖೆಗಳಲ್ಲಿ ಇರುವ ಕೆಲವರನ್ನು ಸಿಐಡಿಗೆ ವರ್ಗಾವಣೆ ಮಾಡಿರುತ್ತಾರೆ. ಈಗ ಸಿಐಡಿ ಮಂಗಳೂರಿಗೆ ಬಂದು ತನಿಖೆಗೆ ಇಳಿಯುವಾಗ ಅವರಿಗೆ ಸಹಕಾರ ಕೊಡಬೇಕಾಗಿರುವುದು ಇಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಗಳು. ಅವರು ಈಗ ಪೂರ್ವಾಗ್ರಹ ಪೀಡಿತರಾಗಿದ್ದರೆ ಫಲಿತಾಂಶ ಏನಾಗಬಹುದು ಎನ್ನುವುದು ವಿವರಿಸಿ ಹೇಳಬೇಕಾಗಿಲ್ಲ. ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಕಾಂಗ್ರೆಸ್ – ಬಿಜೆಪಿ ಎಂದು ನೋಡದೇ ಕೆಲಸ ಮಾಡಬೇಕು. ಇನ್ನು ಮೊದಲ ಬಾರಿಗೆ ಶಾಸಕರಾದವರು ಪೊಲೀಸ್ ಅಧಿಕಾರಿಗಳನ್ನು ಸಮಚಿತ್ತದಿಂದ ಮಾತನಾಡಿಸಬೇಕು. ಇದರಲ್ಲಿ ಯಾರಾದರೂ ಒಬ್ಬರು ಜಿದ್ದಿಗೆ ಬಿದ್ದರೆ ಇಬ್ಬರಿಗೂ ನಷ್ಟ. ಒಂದು ಸಣ್ಣ ಮನಸ್ತಾಪ ಎರಡೂ ಕಡೆ ಇದ್ದರೆ ಅವಕಾಶ ಸಿಕ್ಕಿದಾಗ ಇಬ್ಬರೂ ಹಿಂದಿನಿಂದ ಕತ್ತಿ ಮಸೆಯುತ್ತಾರೆ. ಆಗ ತಲ್ವಾರ್ ಹೋಗಿ ಸ್ಪಾನರ್ ಆಗುತ್ತದೆ. ಸ್ಪಾನರ್ ಹೋಗಿ ಬ್ಲೇಡ್ ಆಗುತ್ತದೆ. ಅಷ್ಟೇ!
Leave A Reply