ನಿರೇಶ್ವಾಲ್ಯದ ಯುವಶಕ್ತಿ ಫ್ರೆಂಡ್ಸ್ ಬಳಗಕ್ಕೆ ನಿತ್ಯಾನಂದ ಸ್ವಾಮಿ ಆರ್ಶೀವಾದ ಇದೆ!!

ಯುವಶಕ್ತಿಗಳು ಮಾದರಿ ಆಗುವಂತಹ ಕಾರ್ಯ ಮಾಡಿದಾಗ ಅವರ ಬೆನ್ನು ತಟ್ಟುವ ಕೆಲಸವನ್ನು ನಾವು ಮಾಡಲೇಬೇಕು. ಯಾಕೆಂದರೆ ಇವತ್ತಿನ ದಿನಗಳಲ್ಲಿ ಮೋಜು, ಮಸ್ತಿಯಲ್ಲಿ, ವಿಡಿಯೋ ಗೇಮ್ ಗಳಲ್ಲಿ, ಫೇಸ್ ಬುಕ್, ಇನ್ಟಾಗ್ರಾಂನಲ್ಲಿ ತಲೆ ಕೆಳಗೆ ಮಾಡಿದರೆ ಮೇಲೆ ಎತ್ತಲು ಮರೆಯುವ ಯುವವೃಂದದ ನಡುವೆ ತಲೆ ಎತ್ತಿ ನಿಲ್ಲುವ ಕೆಲಸ ಮಾಡುವ ನಮ್ಮ ನಿರೇಶ್ವಾಲ್ಯದ ಯುವಶಕ್ತಿ ಫ್ರೆಂಡ್ಸ್ ನಿಜಕ್ಕೂ ಅಭಿನಂದನೀಯರು. ಅವರು ಮಾದರಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರ ಹಿತೈಷಿಯಾಗಿ ನನಗೆ ಹೆಮ್ಮೆ ಇದೆ. ಹಿಂದೆ ಒಂದು ಕಾಲವಿತ್ತು. ಹುಲಿವೇಷ ಹಾಕುವ ತಂಡಗಳು ವಾದ್ಯ, ತಾಸೆಯೊಂದಿಗೆ ಮನೆಮನೆಗೆ ಹೋಗಿ ಅಲ್ಲಿ ಒಂದಿಷ್ಟು ಕುಣಿದು ಕೊಟ್ಟ ಹಣವನ್ನು ಸ್ವೀಕರಿಸಿ ಮುಂದಿನ ಮನೆಗಳಿಗೆ ತೆರಳುತ್ತಿದ್ದರು. ಜನ ಕೂಡ ತಮ್ಮ ಕೈಲಾದಷ್ಟು ಕೊಟ್ಟು ಖುಷಿಪಡುತ್ತಿದ್ದರು. ನಂತರ ಕ್ರಮೇಣ ಹುಲಿವೇಷದ ಬಣ್ಣ, ತಾಸೆ ಇನ್ನಿತರ ಖರ್ಚುಗಳು ಏರುತ್ತಾ ಬಂತು. ಜನ ಕೊಟ್ಟ ಹಣ ಹುಲಿವೇಷ ತಂಡಗಳಿಗೆ ಸಾಕಾಗುತ್ತಿರಲಿಲ್ಲ. ಆದ್ದರಿಂದ ದೊಡ್ಡ ಮೊತ್ತ ಕೊಡುವ ಪ್ರಭಾವಿಗಳ, ಶ್ರೀಮಂತರ ಮನೆಗಳಿಗೆ ಮಾತ್ರ ತೆರಳಿ ಪ್ರದರ್ಶನ ನೀಡುವ ಸಂಪ್ರದಾಯ ಶುರುವಾಯಿತು. ಅದರ ನಂತರ ಈಗಂತೂ ಲೆಕ್ಕದ ಮನೆಗಳನ್ನು ಗುರುತಿಸಿ, ಅವರಿಗೆ ಮೊದಲೇ ತಮ್ಮ ತಂಡದಿಂದ ಹೇಳಿಯೋ, ಆಮಂತ್ರಣ ಪತ್ರಿಕೆ ಕೊಟ್ಟು ಅವರು ನೀಡಿದ ಸಮಯಕ್ಕೆ ತೆರಳಿ ಪ್ರದರ್ಶನ ನೀಡಿ ಹಣವನ್ನು ಪಡೆದುಕೊಳ್ಳುವ ಕ್ರಮ ಇದೆ. ಆದ್ದರಿಂದ ಈಗ ದಶಕಗಳ ಹಿಂದೆ ಇದ್ದ ಹಾಗೆ ಹಾದಿಬೀದಿಯಲ್ಲಿ ಹುಲಿವೇಷದ ತಾಸೆ ಶಬ್ದ ಕೇಳುವುದಿಲ್ಲ. ಎಲ್ಲೋ ಕೇಳುತ್ತಿದೆ ಎಂದರೆ ಅಕ್ಕಪಕ್ಕದಲ್ಲಿ ಯಾವುದೋ ಉದಾರಿ ಧನವಂತರ ಮನೆ ಇದೆ ಎಂದೇ ಅರ್ಥ. ಅದು ಹುಲಿವೇಷ ತಂಡಗಳ ಅನಿವಾರ್ಯತೆ ಕೂಡ ಹೌದು. ಇವತ್ತಿನ ದಿನಗಳಲ್ಲಿ ಹುಲಿವೇಷ ಹಾಕುವುದೇ ಒಂದು ಸವಾಲು. ಅದರ ಖರ್ಚುವೆಚ್ಚಗಳಿಗೆ ರಾಜಾಶ್ರಯದ ಅಗತ್ಯ ಇದ್ದೇ ಇದೆ.
ಈಗ ವಿಷಯಕ್ಕೆ ಬರೋಣ. ಮಂಗಳೂರಿನ ನಿರೇಶ್ವಾಲ್ಯದಲ್ಲಿ ಒಂದು ಯುವಕ ಮಂಡಲ ಇದೆ. ಅದರ ಹೆಸರು ಯುವಶಕ್ತಿ ಫ್ರೆಂಡ್ಸ್. ನಿರೇಶ್ವಾಲ್ಯದಲ್ಲಿ ಸ್ವಾಮಿ ನಿತ್ಯಾನಂದ ಸ್ವಾಮಿಗಳ ಆಶ್ರಮ ಕೂಡ ಇದೆ. 20 ವರ್ಷಗಳ ಹಿಂದೆ ದಸರಾದ ದಿನಗಳಲ್ಲಿ ಒಂದಿಷ್ಟು ಯುವಕರಿಗೆ ತಾವು ಹರಕೆಯ ರೂಪದಲ್ಲಿ ಹುಲಿವೇಷ ಹಾಕಬೇಕು ಎನ್ನುವ ಮನಸ್ಸಾಯಿತು. ಕರಾವಳಿ ಕರ್ನಾಟಕದಲ್ಲಿ ಹರಕೆಯ ರೂಪದಲ್ಲಿ ಹುಲಿವೇಷ ಹಾಕುವ ಸಂಪ್ರದಾಯ ಇದೆ. ಆರೋಗ್ಯಕ್ಕಾಗಿ ಪ್ರಾರ್ಥಿಸಿ ಅನೇಕ ಕುಟುಂಬಗಳಲ್ಲಿ ಹುಲಿವೇಷ ಹಾಕಿ ನಲಿಕೆ ಸೇವೆ ಮಾಡುವ ಪದ್ಧತಿ ಇದೆ. ಅದು ಕಾಲಾಂತರದಲ್ಲಿ ಅವರ ಮುಂದಿನ ಪೀಳಿಗೆಯಲ್ಲಿ ಮುಂದುವರೆದುಕೊಂಡು ಬಂದಿದೆ. ಹಾಗೆ ಈ ಯುವಕರು ಕೂಡ ಹರಕೆಯ ಸೇವೆ ಹಾಕುವುದಾಗಿ ನಿರ್ಧರಿಸಿ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಬಂದಿದ್ದರು. ನಾವು ಹುಲಿವೇಷ ಹಾಕಲು ನಿಶ್ಚಯಿಸಿದ್ದೇವೆ. ಸ್ವಾಮಿ ನಿತ್ಯಾನಂದರ ಹೆಸರಿನಲ್ಲಿ ತಂಡವನ್ನು ಕಟ್ಟಿ ಆ ಮೂಲಕವೇ ಈ ಸೇವಾಕಂಕೈರ್ಯವನ್ನು ಮುಂದುವರೆಸಲು ಬಯಸಿದ್ದೇವೆ ಎಂದು ವಿನಂತಿಸಿಕೊಂಡರು.
ನೀವು ನಿತ್ಯಾನಂದ ಸ್ವಾಮಿಗಳ ಹೆಸರಿನಲ್ಲಿ ಹುಲಿವೇಷದ ತಂಡವನ್ನು ಕಟ್ಟಿ ಸೇವೆ ಮಾಡುವುದಾದರೆ ಸಂಗ್ರಹವಾಗಿ ಖರ್ಚು ತೆಗೆದು ಮಿಗತೆ ಹಣವನ್ನು ಆಶ್ರಮಕ್ಕೆ ನೀಡಬೇಕು ಎಂದು ಆಡಳಿತ ಮಂಡಳಿ ಹೇಳಿತ್ತು. ಆಶ್ರಮದ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಕೊಡುಗೆ ಈ ಮೂಲಕ ಸಿಗುವುದಾದರೆ ಅದಕ್ಕಿಂತ ಬೇರೆ ಸಂತೋಷ ಇಲ್ಲ ಎಂದು ಹೇಳಿದ ಯುವಶಕ್ತಿ ಫ್ರೆಂಡ್ಸ್ ಆವತ್ತಿನಿಂದ ಇವತ್ತಿನ ತನಕ ನಿರಂತರವಾಗಿ 20 ವರ್ಷದಿಂದ ಸೇವೆ ಸಲ್ಲಿಸಿಕೊಂಡು ಬಂದಿದೆ. ಪ್ರತಿ ವರ್ಷ ಸರಾಸರಿ 20 ಯುವಕರು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನವರಾತ್ರಿಯ ಸಮಯದಲ್ಲಿ ಅವರು ಹುಲಿವೇಷ ಹಾಕುವ ಮೊದಲು ನಿತ್ಯಾನಂದ ಸ್ವಾಮಿಗಳ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರ ನಂತರ ಹುಲಿವೇಷ ಹಾಕಿ ಮೊದಲ ಸೇವೆಯನ್ನು ಆಶ್ರಮದಲ್ಲಿ ಸಲ್ಲಿಸುತ್ತಾರೆ. ನಿಷ್ಟೆಯಿಂದ ಹುಲಿವೇಷದಲ್ಲಿ ತೊಡಗಿಸಿಕೊಂಡು ಅಂತಿಮವಾಗಿ ತಮ್ಮೆಲ್ಲ ಖರ್ಚನ್ನು ತೆಗೆದು ಹಣವನ್ನು ಆಶ್ರಮಕ್ಕೆ ನೀಡುತ್ತಾರೆ. ಅವರ ತಂಡದಲ್ಲಿ ಈ ವರ್ಷ ಎಂಟು ವರ್ಷದ ಒಬ್ಬ ಬಾಲಕ ಇದ್ದಾನೆ. ಅವನ ಹೆಸರು ಸೃಜನ್. ಈ ದಸರಾಕ್ಕೆ ಅವನು ಹುಲಿವೇಷ ಹಾಕಿದಾಗ ಪ್ರೀತಿಯಿಂದ ಒಬ್ಬರು ನೋಟಿನ ಮಾಲೆ ಹಾಕಿದ್ದಾರೆ. ಅದರಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ನೋಟುಗಳಿದ್ದವು. ಅದನ್ನು ಕೂಡ ಆ ಮಗು ಆಶ್ರಮಕ್ಕೆ ನೀಡಿದೆ. ಸಾಮಾನ್ಯವಾಗಿ ಮಕ್ಕಳು ಆ ವಯಸ್ಸಿನಲ್ಲಿ ಹಣ ಸಿಕ್ಕಿದರೆ ಅದರಿಂದ ಆಟಿಕೆಗಳನ್ನು ಖರೀದಿಸಲು ಹಟ ಮಾಡುತ್ತಾರೆ. ಹಾಗಿರುವಾಗ ತನಗೆ ಸಿಕ್ಕಿದ ನೋಟಿನ ಮಾಲೆಯನ್ನು ಆ ಮಗು ಆಶ್ರಮಕ್ಕೆ ನೀಡಿರುವುದು ನಿಜಕ್ಕೂ ಅವನ ಹೆತ್ತವರು ಹೆಮ್ಮೆ ಪಡಬೇಕು. ಒಟ್ಟಿನಲ್ಲಿ ಯುವಶಕ್ತಿ ಫ್ರೆಂಡ್ಸ್ ಬಳಗವನ್ನು ನಾನು ಅಭಿನಂದಿಸುತ್ತೇನೆ. ಹರಕೆಯ ರೂಪದಲ್ಲಿ ಹುಲಿವೇಷ ಹಾಕುವ ತಂಡಗಳು ತಮ್ಮಲ್ಲಿ ಸಂಗ್ರಹವಾಗಿ ಎಲ್ಲಾ ಖರ್ಚುವೆಚ್ಚ ಕಳೆದು ಉಳಿದ ಹಣವನ್ನು ತಮ್ಮದೇ ಊರಿನ ಆದಾಯ ಕಡಿಮೆ ಇರುವ ಮಠ, ಮಂದಿರ, ಭಜನಾ ಕೇಂದ್ರಗಳಿಗೆ ನೀಡಿ ಆ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಪಣ ತೊಟ್ಟರೆ ಅದರಿಂದ ಸನಾತನ ಸಂಸ್ಕೃತಿ ಉಳಿಯಲು ತಾವು ಕೂಡ ಕೈಜೋಡಿಸಿದಂತೆ ಆಗುತ್ತದೆ, ಈ ಬಾರಿ ಯುವಶಕ್ತಿ ಫ್ರೆಂಡ್ಸ್ ಬಳಗ ನಿತ್ಯಾನಂದ ಆಶ್ರಮಕ್ಕೆ ನೀಡಿದ ಬರೊಬ್ಬರಿ ಮೊತ್ತ 2 ಲಕ್ಷ ರೂಪಾಯಿ.
Leave A Reply