ನೋಟಿನಲ್ಲಿ ಗಣಪತಿ, ಲಕ್ಷ್ಮಿ ಫೋಟೋ ಹಾಕಿ ಎನ್ನುವ ವ್ಯಂಗ್ಯ!!
ಅರವಿಂದ ಕೇಜ್ರಿವಾಲ್ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ವೇಷ ಧರಿಸಿ ಸ್ಟೇಜ್ ಹತ್ತುತ್ತಾರೆ. ಅವರೊಬ್ಬ ಉತ್ತಮ ಕಲಾವಿದ. ಅದೇ ರೀತಿಯಲ್ಲಿ ಅವರೊಬ್ಬ ನುರಿತ ಕ್ರಿಕೆಟ್ ಆಟಗಾರ. ಅವರಿಗೆ ಯಾವ ಪಿಚ್ ನಲ್ಲಿ ಯಾವ ರೀತಿಯಲ್ಲಿ ಆಡಬೇಕು ಎನ್ನುವುದು ಕೂಡ ಗೊತ್ತಿದೆ. ಅಂತಹ ಕೇಜ್ರಿವಾಲ್ ಈಗ ಗುಜರಾತಿನ ಪಿಚ್ ನಲ್ಲಿ ಇಳಿದು ನೆಲ ಕುಟ್ಟುತ್ತಿದ್ದಾರೆ. ಗುಜರಾತ್ ಹೇಳಿ ಕೇಳಿ ಅಪ್ಪಟ ಹಿಂದೂ ಧರ್ಮದ ನಾಡು. ಗೋಧ್ರಾ ಹತ್ಯಾಕಾಂಡದ ಬಳಿಕ ಅಲ್ಲಿನ ನೆಲದಲ್ಲಿ ಎಲ್ಲಿ ಅಗೆದರೂ ಓಂ ಎಂಬ ಶಬ್ದವೇ ರಿಂಗಣಿಸುತ್ತದೆ. ಆದ್ದರಿಂದ ಗುಜರಾತ್ ಚುನಾವಣೆಗೆ ಮುಹೂರ್ತ ಇನ್ನೇನೂ ಬೆರಳೆಣಿಕೆಯ ವಾರದಲ್ಲಿ ನಿಗದಿಯಾಗುವ ಸಾಧ್ಯತೆ ಇರುವುದರಿಂದ ಮಾನ್ಯ ಸಾಹೇಬ್ರು ಈಗ ಅಲ್ಲಿ ತಮ್ಮ ಹಿಂದೂತ್ವದ ಮಂತ್ರವನ್ನು ಜಪಿಸುತ್ತಿದ್ದಾರೆ. ಪ್ರತಿ ರಾಜಕಾರಣಿಗೆ ಸದಾ ಲೈಮ್ ಲೈಟಿನಲ್ಲಿ ಇರಲು ಬೇರೆ ಬೇರೆ ರೀತಿಯ ಐಡಿಯಾಗಳನ್ನು ಕೊಡುವ ವ್ಯಕ್ತಿಗಳಿರುತ್ತಾರೆ. ಹಾಗೆ ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೋಡಿಗೆ ಈಗ ಸಿಕ್ಕಿರುವ ಐಡಿಯಾ ಏನೆಂದರೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬೇಕಾದರೆ ಹಿಂದೂತ್ವದ ಬಗ್ಗೆ ವಿಭಿನ್ನ ವಿಷಯಗಳನ್ನು ಮುನ್ನಲೆಗೆ ತರಬೇಕು. ಅದಕ್ಕಾಗಿ ಅವರು ಭಾರತ ಸರಕಾರ ಹೊಸದಾಗಿ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡುವಾಗ ಅದರಲ್ಲಿ ಲಕ್ಷ್ಮಿ, ಗಣಪತಿ ಫೋಟೋಗಳನ್ನು ಹಾಕಿಸಿ ಎಂದು ಎನ್ನುವ ಸಲಹೆಯನ್ನು ನೀಡಿದ್ದಾರೆ.
ಒಂದು ಕರೆನ್ಸಿ ನೋಟಿನಲ್ಲಿ ಏನು ಹಾಕಬೇಕು, ಏನು ಇರಬಾರದು ಎಂದು ನಿರ್ಣಯಿಸುವುದು ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿ. ಅದಕ್ಕಾಗಿ ಆರ್ ಬಿಐ ಕಾಯ್ದೆ ಕೂಡ ಇದೆ. ಅವರು ಕೇಂದ್ರ ಸರಕಾರದ ಮುಂದೆ ಪ್ರಸ್ತಾವನೆ ಇಟ್ಟು ಅದರಂತೆ ಒಪ್ಪಿಗೆ ಸಿಕ್ಕಿದ ಮೇಲೆ ಏನಾದರೂ ಬದಲಾವಣೆ ಸಾಧ್ಯ. ಆದರೆ ಈ ಅರವಿಂದ ಕೇಜ್ರಿವಾಲ್ ಗೆ ಕರೆನ್ಸಿಯಲ್ಲಿ ಹಿಂದೂ ದೇವರ ಫೋಟೋಗಳನ್ನು ಹಾಕಬೇಕಾ, ಬೇಡ್ವಾ ಎನ್ನುವುದು ಬಿದ್ದು ಹೋಗಿಲ್ಲ. ಅವರಿಗೆ ಏನಾದರೂ ಮಾಡಿ ಗುಜರಾತಿನಲ್ಲಿ ತಾವು ಚರ್ಚೆಯಲ್ಲಿರಬೇಕು, ಅಷ್ಟೇ. ಅಷ್ಟಕ್ಕೂ ಕೇಜ್ರಿವಾಲ್ ಬಾಯಲ್ಲಿ ಹಿಂದೂತ್ವ ಎಂದರೆ ಅದು ಭೂತದ ಬಾಯಲ್ಲಿ ಭಗವತ್ ಗೀತೆ ಇದ್ದ ಹಾಗೆ. ಯಾಕೆಂದರೆ ಇದೇ ಕೇಜ್ರಿವಾಲ್ ರಾಮ ಮಂದಿರದ ವಿವಾದ ತಾರಕಕ್ಕೆ ಏರಿದಾಗ ಬೇರೆಯದ್ದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವ ಬದಲು ಅಲ್ಲಿ ಆಸ್ಪತ್ರೆಯೋ, ಶಾಲೆಯೋ ನಿರ್ಮಿಸಬಹುದು ಎನ್ನುವ ಅರ್ಥದ ಹೇಳಿಕೆಯನ್ನು ಉಳಿದ ಬಿಜೆಪಿಯೇತರ ರಾಜಕೀಯ ಪಕ್ಷಗಳಂತೆ ನೀಡಿದ್ದರು. ಆಗ ಭಾರತೀಯ ಜನತಾ ಪಾರ್ಟಿ ಬಿಟ್ಟು ಬೇರೆ ಎಲ್ಲಾ ರಾಜಕೀಯ ಪಕ್ಷಗಳ ಹೇಳಿಕೆ ಹೆಚ್ಚು ಕಡಿಮೆ ಅದೇ ಇತ್ತು. ಒಂದು ಕಡೆ ಇಡೀ ದೇಶದ ಹಿಂದೂಗಳ ಭಾವನೆ ಭವ್ಯ ರಾಮ ಮಂದಿರದ ನಿರ್ಮಾಣವಾಗಿದ್ದರೆ, ಈ ಓತಿಕ್ಯಾತ ರಾಜಕಾರಣಿಗಳ ಅಭಿಪ್ರಾಯ ಮಾತ್ರ ಆಗ ಅಲ್ಪಸಂಖ್ಯಾತರ ಓಲೈಕೆಯಾಗಿತ್ತು. ರಾಮ ಮಂದಿರ ಅಲ್ಲಿಯೇ ಆಗಬೇಕು ಎಂದು ಹಟ ಯಾಕೆ ಎಂದು ಕೇಳಿದ ಅನೇಕ ರಾಜಕಾರಣಿಗಳಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಅಲ್ಲಿ ರಾಮ ಹುಟ್ಟಿದ್ದ ಎನ್ನುವುದಕ್ಕೆ ಸಾಕ್ಷಿ ಇದೆಯಾ ಎಂದು ಕೇಳಿದ್ದವರಿದ್ದರು. ಅಂತವರು ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ಆದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಸ್ಥಳಕ್ಕೆ ಕೈ ಮುಗಿದು ಪ್ರಚಾರವನ್ನು ಆರಂಭಿಸಿದ್ದರು. ಈ ಕೇಜ್ರಿವಾಲ್ ದೆಹಲಿಯಲ್ಲಿ ಒಂದು ವೇಷ, ಉತ್ತರ ಪ್ರದೇಶದಲ್ಲಿ ಒಂದು ವೇಷ, ಗುಜರಾತ್ ನಲ್ಲಿ ಒಂದು ವೇಷ ಹಾಕುವುದರಿಂದಲೇ ಇವತ್ತು ಜನರಿಗೆ ಇವರ ನೌಟಂಕಿಯ ಬಗ್ಗೆ ಅನುಮಾನ ಮೂಡಿದೆ. ವರ್ಷದಲ್ಲಿ ಒಂದು ಸಲ ಹಿಂದೂಗಳು ದೀಪಾವಳಿ ಆಚರಿಸುತ್ತಾರೆ. ಆಗ ಒಂದಿಷ್ಟು ಪಟಾಕಿಗಳನ್ನು ಹೊಡೆಯುವುದು ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಕೇಜ್ರಿವಾಲ್ ಪಟಾಕಿಗೆ ಕೈ ಹಾಕಿದರೆ ಜಾಗ್ರತೆ ಎಂದು ತಮ್ಮ ರಾಜ್ಯ ದೆಹಲಿಯಲ್ಲಿ ಆದೇಶ ಹೊರಡಿಸಿದ್ದರು.
ತಮ್ಮ ರಾಜ್ಯದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಅಂಶಗಳನ್ನು ಕಂಡುಹಿಡಿದು ಅದರ ಪರಿಹಾರಕ್ಕೆ ಪ್ರಯತ್ನ ಮಾಡದೇ ಪಟಾಕಿ ಹೊಡೆಯುವುದರಿಂದ ದೆಹಲಿಯಲ್ಲಿ ತೊಂದರೆ ಆಗುತ್ತದೆ ಎಂದು ಹೇಳುವ ಮೂಲಕ ಲಕ್ಷಾಂತರ ಹಿಂದೂಗಳ ಭಾವನೆಗೆ ನೋವು ತಂದಿದ್ದರು. ಯಾಕೆಂದರೆ ಅದರಿಂದ ಅಲ್ಲಿನ ಮುಸ್ಲಿಮರನ್ನು ಸಂತೃಪ್ತಿಗೊಳಿಸಿದೆ ಎನ್ನುವ ಭಾವನೆ ಅವರದ್ದಾಗಿತ್ತು. ದೆಹಲಿಯಲ್ಲಿ ವಾಯು ಮಾಲಿನ್ಯ ಸಿಕ್ಕಾಪಟ್ಟೆ ಇದೆ. ಅದು ಜಾಗತಿಕವಾಗಿ ವಾಯುಮಾಲಿನ್ಯದಲ್ಲಿ ಮೊದಲ ಹತ್ತರಲ್ಲಿ ಇದೆ. ಅದನ್ನು ಪರಿಹರಿಸಲು ಇಲ್ಲಿಯ ತನಕ ಕೇಜ್ರಿವಾಲ್ ಏನು ಮಾಡಿದ್ದಾರೆ. ಅದೇ ದೀಪಾವಳಿ ಬಂದರೆ ಪಟಾಕಿ ಹೊಡೆಯಬೇಡಿ ಎನ್ನುತ್ತಾರೆ. ಇನ್ನು ಗುಜರಾತಿಗೆ ಬಂದು ಕರೆನ್ಸಿ ನೋಟ್ ಮುಂದೆ ಹೊಸದಾಗಿ ಪ್ರಿಂಟ್ ಮಾಡುವ ಸಂದರ್ಭದಲ್ಲಿ ನೋಟಿನಲ್ಲಿ ಗಣೇಶ, ಲಕ್ಷ್ಮಿ ಇದ್ದರೆ ಬಿದ್ದಿರುವ ನಮ್ಮ ಆರ್ಥಿಕತೆಯನ್ನು ಎತ್ತಬಹುದು ಎಂದು ಹೇಳಿದ್ದಾರೆ. ಇದು ಅವರು ಕೊಟ್ಟಿರುವ ಸಲಹೆ ಎನ್ನುವುದಕ್ಕಿಂತ ಮಾಡಿರುವ ವ್ಯಂಗ್ಯ ಎಂದು ಹೇಳಬಹುದು. ನಮ್ಮ ಆರ್ಥಿಕತೆ ಕೊರೋನಾ ಕಾಲದಲ್ಲಿ ಕುಸಿದಿದ್ದಿರಬಹುದು. ನಾವು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹೋಲಿಕೆ ಮಾಡುವಾಗ ಕೇಂದ್ರ ಸರಕಾರದ ದೂರದೃಷ್ಟಿಯ ನೀತಿಗಳ ಫಲವಾಗಿ ಅಷ್ಟಾಗಿ ತೊಂದರೆಯನ್ನು ಅನುಭವಿಸಿಲ್ಲ. ಈಗ ಆರ್ಥಿಕತೆ ನಿಧಾನವಾಗಿ ಚೇತರಿಸುತ್ತಿದೆ. ಆದರೆ ಗಣಪತಿ, ಲಕ್ಷ್ಮಿ ಫೋಟೋ ಹಾಕಿದ ತಕ್ಷಣ ಆರ್ಥಿಕತೆ ತಕ್ಷಣ ಮೇಲೆರುತ್ತದೆ ಎಂದಲ್ಲ. ನಾವು ನೋಟಿನಲ್ಲಿ ದೇವರನ್ನು ಕಾಣುವವರು. ಹಣ ನೆಲದ ಮೇಲೆ ಬಿದ್ದಾಗ ಅದನ್ನು ಎತ್ತಿ ಕಣ್ಣಿಗೆ ಒತ್ತಿಕೊಂಡು ನಂತರ ಕಿಸೆಯಲ್ಲಿ ಇಟ್ಟುಕೊಳ್ಳುತ್ತೇವೆ. ಅದರಲ್ಲಿ ಗಾಂಧಿ ಫೋಟೋ ಇದೆ, ನಾವು ಯಾಕೆ ಹಾಗೆ ಮಾಡಬೇಕು ಎಂದು ಯಾವತ್ತೂ ನಾವು ಅಂದುಕೊಂಡಿಲ್ಲ. ಆದರೆ ಇದ್ಯಾವುದೂ ಗೊತ್ತಿಲ್ಲದ ಐಎಫ್ ಎಸ್ ಡಿಗ್ರಿಯ ಕೇಜ್ರಿವಾಲ್ ನೋಟಿನಲ್ಲಿ ಗಣಪತಿ, ಲಕ್ಷ್ಮಿಯ ಫೋಟೋ ಹಾಕಿ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದಾರೆ!
Leave A Reply