ಮೋದಿಯವರು 70 ದಾಟಿದವರ ಬಗ್ಗೆ ಒಂದು ಕೆಲಸ ಮಾಡಬೇಕು!!
ಭಾರತದಲ್ಲಿ ಹಿರಿಯ ನಾಗರಿಕರಾಗುವುದು ಅಪರಾಧವೇ? ಹಾಗೊಂದು ಚಿಂತನೆ ದೇಶದ ಹಿರಿಯ ನಾಗರಿಕರಲ್ಲಿ ಕಾಡುತ್ತಿದೆ. ಅದರಲ್ಲಿಯೂ ವಿಶೇಷವಾಗಿ 70 ವರ್ಷ ದಾಟಲು ಕೆಲವೇ ವರ್ಷಗಳಿರುವ ಮತ್ತು 70 ವರ್ಷದ ಹೊಸ್ತಿಲಲ್ಲಿರುವ ಮತ್ತು 70 ವರ್ಷ ದಾಟಿದವರ ಮನಸ್ಸಿನಲ್ಲಿ ಕಾಡುವ ಏಕೈಕ ಪ್ರಶ್ನೆ ನಮಗೆ ಯಾಕೆ 70 ವರ್ಷ ಆಯಿತು? ಯಾಕೆಂದರೆ 70 ವರ್ಷ ದಾಟಿದ ನಂತರ ನಿಮಗೆ ಭಾರತದಲ್ಲಿ ಒಂದು ಗೌರವಯುತ ಸ್ಥಾನ ಸಿಗುವುದು ಎಂದರೆ ಕೇವಲ ಮುಖಸ್ತುತಿಯಾಗಿ ಮಾತ್ರ. ಯಾಕೆಂದರೆ ಯಾರೆಂದರೆ ಯಾರು ಕೂಡ ಹೊರಗಿನವರು ವಿಶೇಷವಾಗಿ ನೀವು ಯೌವನಾವಸ್ಥೆಯಲ್ಲಿ ಇರುವಾಗ ಒಂದು ಇನ್ಸೂರೆನ್ಸ್ ಪಾಲಿಸಿ ಮಾಡಿ ಎಂದು ದಂಬಾಲು ಬೀಳುತ್ತಿದ್ದ ಇನ್ಸೂರೆನ್ಸ್ ಕಂಪೆನಿಯವರು ಕೂಡ ನೀವು 70 ದಾಟುತ್ತಿದ್ದಂತೆ ಮೂಸುವುದಿಲ್ಲ. ಹಾಗಾದರೆ ಇವರಿಗೆ ಮಾನವೀಯತೆಯೇ ಇಲ್ವಾ? ಸರಿಯಾಗಿ ನೋಡಿದರೆ ಮನುಷ್ಯನಿಗೆ ಇನ್ಸೂರೆನ್ಸ್ ಬೇಕಾಗಿರುವುದೇ 60-70 ರ ನಂತರ. ಅಲ್ಲಿ ತನಕ ಆಕ್ಸಿಡೆಂಟ್ ಬಿಟ್ಟರೆ ಬೇರೆ ವಿಷಯದಲ್ಲಿ ಅಷ್ಟರಮಟ್ಟಿಗೆ ಇನ್ಸೂರೆನ್ಸ್ ಅಗತ್ಯ ಬೀಳುವುದಿಲ್ಲ. ಬಿದ್ದರೂ ಇಡೀ ದೇಶಕ್ಕೆ ಹೋಲಿಸಿದಾಗ ಅದರ ಪ್ರಮಾಣ ಬಹಳ ಕಡಿಮೆ. ಹಾಗಿರುವಾಗ ನಾವು ಚೆನ್ನಾಗಿದ್ದಾಗ ನಮ್ಮಿಂದ ಪ್ರತಿ ಕಂತನ್ನು ಕೂಡ ಬಿಡದೇ ಮಸೂಲಿ ಮಾಡಿ ನಾವು ಅನಾರೋಗ್ಯಕ್ಕೆ ಬೀಳುವ ದಿನಗಳು ಬಂದಾಗ ನಿಮ್ಮ ಕಂತುಗಳನ್ನು ಇನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರೆ ಹೇಗಾಗಬೇಡಾ. ಇನ್ಸೂರೆನ್ಸ್ ಕಂಪೆನಿಗಳ ನಿಯಮಗಳು ಹಾಗಿದೆ ಎಂದು ನಾವು ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ನಾವು ಏನಾದರೂ ಈ ಬಗ್ಗೆ ನಮ್ಮ ಧ್ವನಿಯನ್ನು ಪ್ರಧಾನ ಮಂತ್ರಿಯವರ ತನಕ ತಲುಪಿಸುವ ಕೆಲಸ ಮಾಡಿದರೆ ಆಗ ನಿಜಕ್ಕೂ ಏನಾದರೂ ಆಗಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಒಂದು ಕಾನೂನನ್ನು ಮಾಡಿ 70 ರ ಹರೆಯದಲ್ಲಿರುವ ಯಾರಿಗೂ ಅನ್ಯಾಯ ಆಗದ ಹಾಗೆ ನೋಡಬೇಕು. ಇನ್ಸೂರೆನ್ಸ್ ಕಂಪೆನಿಯವರು 70 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸೇವಾ ಸೌಲಭ್ಯವನ್ನು ನೀಡಬೇಕು ಎಂದು ನಿಯಮ ಜಾರಿಗೆ ತರಬೇಕು. ಆಗ ಇಡೀ ರಾಷ್ಟ್ರದ ಹಿರಿಯ ನಾಗರಿಕರು ಪ್ರಧಾನಿಗೆ ಅಭಾರಿಯಾಗಿರುತ್ತಾರೆ.
ಈಗ ಒಬ್ಬ ವ್ಯಕ್ತಿ ತಾನು 70 ವರ್ಷ ವಯಸ್ಸಿನ ಬಳಿಕ ಹೊಸ ಇನ್ಸೂರೆನ್ಸ್ ಪಾಲಿಸಿಯನ್ನು ಮಾಡಲು ಹೊರಟರೆ ಆಗ ಬೇಕಾದರೆ ಹೊಸದಾಗಿ ಪಾಲಿಸಿ ಮಾಡಿಸಲು ಆಗುವುದಿಲ್ಲ ಎಂದು ಹೇಳಿದರೆ ಬೇರೆ ವಿಷಯ. ಆದರೆ ಒಬ್ಬ ನಾಗರಿಕ 25 ರಿಂದ 30 ವರ್ಷ ಇರುವಾಗ ಪಾಲಿಸಿಯನ್ನು ಮಾಡಿದರೆ ಆತ ಸಾಯುವ ತನಕ ಆ ಪಾಲಿಸಿ ಊರ್ಜಿತವಾಗಿರಬೇಕು. ಆತನಿಗೆ 70 ಆಯಿತು ಎಂದು ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದರೆ ಅದು ಆ ನಾಗರಿಕನಿಗೆ ಮಾಡುವ ಅಪಮಾನ. ಒಬ್ಬ ವ್ಯಕ್ತಿ ತಾನು ದುಡಿಯುವಷ್ಟು ಕಾಲ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೆರಿಗೆ ಕಟ್ಟುತ್ತಾನೆ. ಆಗ ಅವನಿಂದ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದರೆ ಕಂಪೆನಿಗೆ ಲಾಭ. ಆದರೆ ವಯಸ್ಸಾದರೆ ಅದೇ ವ್ಯಕ್ತಿ ಯಾರಿಗೂ ಬೇಡಾ. ಹಿರಿಯ ನಾಗರಿಕರಾದ ನಂತರವೂ ಈ ದೇಶ ಅಂತಹ ವ್ಯಕ್ತಿಗಳಿಂದ ಪರೋಕ್ಷ ತೆರಿಗೆಯನ್ನು ವಸೂಲಿ ಮಾಡುತ್ತದೆ. ಒಂದು ಮಾತ್ರೆಯಿಂದ ಹಿಡಿದು ಒಂದು ಚಡ್ಡಿ ಖರೀದಿಸಿದರೂ ಅದು 70 ವರ್ಷ ದಾಟಿದ ಹಿರಿಯರು ಎನ್ನುವ ಕಾರಣಕ್ಕೆ ಎಲ್ಲಿಯೂ ರಿಯಾಯಿತಿ ಇಲ್ಲ. ನೀವು ತೆರಿಗೆಯಲ್ಲಿ ವಯಸ್ಸು ನೋಡುವುದಿಲ್ಲ, ವಸ್ತುವಿನ ಬೆಲೆಯಲ್ಲಿ ಹಿರಿಯರಿಗೆ ರಿಯಾಯಿತಿ ಕೊಡದವರು ಇನ್ಸೂರೆನ್ಸ್ ನಲ್ಲಿ ಮಾತ್ರ ಅವರನ್ನು ಹೊರಗಿಡುವ ಕೃತ್ಯ ಸರಿಯಾ? ಇದರಿಂದ ಅವರು ತಮ್ಮ ಮನೆಯವರ ದೃಷ್ಟಿಯಲ್ಲಿ ಕೂಡ ಚಿಕ್ಕವರನ್ನಾಗಿ ಮಾಡುವ ಪ್ರಯತ್ನದಂತೆ ಇದು ಕಾಣುತ್ತದೆ. ಎಲ್ಲಿಯ ತನಕ ಎಂದರೆ ಬ್ಯಾಂಕಿನವರು ಕೂಡ 70 ವರ್ಷ ದಾಟಿದವರಿಗೆ ಬಡ್ಡಿದರ ಕಡಿಮೆ ಮಾಡುವ ಮೂಲಕ ಇನ್ನು ನೀವು ನಮಗೆ ಹೊರೆ ಎಂದು ಸಾಬೀತುಪಡಿಸುವ ಕೆಲಸ ಮಾಡುತ್ತಾರೆ.
ಹಿರಿಯ ನಾಗರಿಕರಿಗೆ ಬ್ಯಾಂಕು ಅಥವಾ ಹಣಕಾಸಿನ ಸಂಸ್ಥೆಗಳಲ್ಲಿ ಸಾಲ ಸಿಗುವುದಿಲ್ಲ. ಯಾಕೆಂದರೆ ಅವರು ಕಟ್ಟುವುದು ಹೇಗೆ ಎನ್ನುವ ಪ್ರಶ್ನೆ ಬ್ಯಾಂಕಿನವರದ್ದು. ಡ್ರೈವಿಂಗ್ ಲೈಸೆನ್ಸ್ ಸಿಗುವುದಿಲ್ಲ. ಎಲ್ಲಿಯೂ ಗೌರವಯುತವಾದ ಕೆಲಸ ಸಿಗುವುದಿಲ್ಲ. ಅವರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಯೋಜನೆಗಳು ಇರುವುದಿಲ್ಲ. ಇದನ್ನೆಲ್ಲ ಮೋದಿಯವರು ನೋಡಿ ಹಿರಿಯ ನಾಗರಿಕರಿಗೆ ದೇಶದಲ್ಲಿ ಗೌರವಯುತ ಸ್ಥಾನ ಸಿಗುವಂತೆ ಮಾಡಬೇಕು. ಯಾಕೆಂದರೆ ತಾನು ಚೆನ್ನಾಗಿರುವಾಗ ಮೈಮುರಿದು ದುಡಿದು ಈ ದೇಶದ ಏಳಿಗೆಗೆ ಪರೋಕ್ಷವಾಗಿ ಅಳಿಲು ಸೇವೆ ಮಾಡಿದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಗೌರವಯುತ ವಿದಾಯ ಕೊಡಬೇಕಾಗಿರುವುದು ಈ ದೇಶದ ಕರ್ತವ್ಯ. ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅವರನ್ನು ಮೂಲೆಗುಂಪು ಮಾಡುವುದು, ಥರ್ಡ್ ಕ್ಲಾಸ್ ಸಿಟಿಜನ್ ತರಹ ನೋಡುವುದು ಅವರಿಗೂ ಮನಸ್ಸಿಗೆ ನೋವಾಗುತ್ತದೆ. ಆ ನೋವು ಶೀಘ್ರ ನಿವಾರಣೆಯಾಗಲಿ ಎನ್ನುವುದು ನಮ್ಮ ಕಾಳಜಿ!
Leave A Reply