ಜಾರಕಿಹೊಳಿ ಯೂಟರ್ನ್ ಹೊಡೆದರೂ ಅಚ್ಚು ಉಳಿದಿದೆ!
ಸತೀಶ್ ಜಾರಕಿಹೊಳಿ ತಮ್ಮ ಹೇಳಿಕಯನ್ನು ಹಿಂದಕ್ಕೆ ಪಡೆದಿದ್ದಾರೆ. ತಮ್ಮ ಹೇಳಿಕೆಯಿಂದ ವಿವಾದ ಉಂಟಾಗಿದೆ. ಆದ್ದರಿಂದ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ ಎಂದು ಸಮಜಾಯಿಷಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ವಿವಾದ ಉಂಟಾಗಲಿರುವುದು ಖಾತ್ರಿಯಾಗಿತ್ತು. ಅದರಲ್ಲಿ ನೂರಕ್ಕೆ ನೂರರಷ್ಟು ಸಂಶಯವೇ ಇರಲಿಲ್ಲ. ಯಾಕೆಂದರೆ ಹೇಳಿಕೆಯೇ ಹಾಗಿತ್ತು. ಅದು ಕೂಡ ಸಾವಿರಾರು ಜನರ ಎದುರು ಹತ್ತಾರು ಕ್ಯಾಮೆರಾಗಳ ಎದುರು ಬಹಿರಂಗವಾಗಿ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದಿದ್ದವರು ಈಗ ಹೈ ಪ್ರೆಶರ್ ನಿಂದ ವಿಚಲಿತರಾಗಿದ್ದಾರೆ. ಬಹುಶ: ತುಂಬಾ ಮೇಲಿನಿಂದ ಒತ್ತಡ ಬಂದಿರಬಹುದು. ಆದರೆ ಈ ಬಗ್ಗೆ ತನಿಖೆ ಮಾಡಬೇಕೆಂದು ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ಸತ್ಯಾಂಶ ಹೊರಗೆ ತೆಗೆಯಬೇಕು ಎಂದು ಒತ್ತಿ ಹೇಳಿದ್ದಾರೆ. ತಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿತ್ತು, ತಾವು ಹಿಂದೂ ಎಂಬ ಪದ ಅಶ್ಲೀಲ ಎಂದು ಹೇಳಿರುವುದನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಸಿಎಂ ಏನೆಂದು ತನಿಖೆ ಮಾಡಬೇಕು. ಅವರು ತನಿಖೆ ಮಾಡಬೇಕಾದ ಪ್ರಶ್ನೆಗಳೇನು?
ಮೊದಲನೇಯ ಪ್ರಶ್ನೆ ಹಿಂದೂ ಎನ್ನುವ ಶಬ್ದಕ್ಕೆ ಅರ್ಥ ಹುಡುಕಲು ಸತೀಶ್ ಜಾರಕಿಹೊಳಿ ಹೋದದ್ದೇಕೆ? ಅವರು ಯಾವಾಗ ಪರ್ಶಿಯನ್, ಅರಬ್ಬಿ ಭಾಷೆಯನ್ನು ಕಲಿಯಲು ಹೊರಟಿದ್ದು? ಅದನ್ನು ಕಲಿತು ಅವರು ಪರ್ಶಿಯಾದಲ್ಲಿಯೋ, ಗಲ್ಫ್ ರಾಷ್ಟ್ರದಲ್ಲಿಯೋ ವಾಸಿಸಲು ಹೊರಟಿದ್ದಾರಾ? ಅಲ್ಲಿಗೆ ಹೋಗುವುದಾದರೆ ಅವರು ಭಾರತ ಬಿಡಲು ಕಾರಣವೇನು? ಅವರು ಭಾರತ ಬಿಟ್ಟರೆ ಅದರೊಂದಿಗೆ ಕಾಂಗ್ರೆಸ್ ಕೂಡ ಬಿಡುತ್ತಾರಾ? ಹಾಗಾದರೆ ಅವರಿಗೆ ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರಲ್ಲ ಎಂದು ಗ್ಯಾರಂಟಿ ಇದೆಯಾ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದಾ, ಇಲ್ವಾ, ಒಟ್ಟಿನಲ್ಲಿ ಸತೀಶ್ ಈ ಹೇಳಿಕೆಯಿಂದ ಕಾಂಗ್ರೆಸ್ ಮಾತ್ರ ಅಧಿಕಾರದ ಏಣಿಯಿಂದ ಒಂದು ಮೆಟ್ಟಿಲು ಕೆಳಗಿಳಿದಂತೆ ಆಗಿದೆ. ಚುನಾವಣೆಗೆ ಕೇವಲ ಐದೂವರೆ ತಿಂಗಳು ಇರುವಾಗ ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಮಾತನಾಡುವುದು ಎಂದರೆ ಬೆಂಕಿಯ ಮೇಲೆ ನಡೆಯಲು ತೀರ್ಮಾನಿಸಿದಂತೆ ಎನ್ನುವುದು ನಿಜ. ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಹೇಳಿದ್ದೇನು? ತಾವು ನೋಡಿದ, ಓದಿದ ಯಾವುದೋ ಡಿಕ್ಷನರಿಯಲ್ಲಿ ಹಿಂದೂ ಎನ್ನುವ ಶಬ್ದಕ್ಕೆ ಅಶ್ಲೀಲ, ಅಸಹ್ಯ ಎನ್ನುವ ಅರ್ಥ ಇದೆ ಎಂದು ಹೇಳಿದ್ದಾರೆ. ತಾವು ಹೇಳಿದ್ದು ಸುಳ್ಳೆಂದು ಸಾಬೀತಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಕೂಡ ಸಿದ್ಧ ಎಂದು ಕೂಡ ಹೇಳಿದ್ದಾರೆ. ಅವರು ರಾಜಕೀಯ ತ್ಯಾಗ ಮಾಡುತ್ತಾರೋ, ಬಿಡುತ್ತಾರೋ ಬೇರೆ ವಿಷಯ. ಆದರೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಕಾರ್ಯಾಧ್ಯಕ್ಷರಾಗಿ ಅವರು ಹೇಳಿದ್ದು ಪಕ್ಷಕ್ಕೆ ಡ್ಯಾಮೇಜು ಆಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ಮುಖಂಡರು ಅದು ಸತೀಶ್ ವೈಯಕ್ತಿಕ ಹೇಳಿಕೆ, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಭಾರತೀಯ ಜನತಾ ಪಾರ್ಟಿ ಮಾತ್ರ ಚುನಾವಣೆ ಕೂಗಳತೆಯ ದೂರದಲ್ಲಿರುವಾಗ ಕೈಗೆ ಸಿಕ್ಕಿರುವ ಇಷ್ಟು ಸುಲಭದ ತುತ್ತನ್ನು ನುಂಗದೇ ಬಿಡಲು ತಯಾರಿಲ್ಲ. ಅಷ್ಟೇ ಅಲ್ಲ, ಈ ಹೇಳಿಕೆಯನ್ನು ಒಂದೇ ಇಟ್ಟು ಆದಷ್ಟು ದೂರ ಕ್ರಮಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅದಕ್ಕಾಗಿ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆಗಳನ್ನು ಮಾಡುತ್ತಿದೆ.
ಇಂತಹ ಒಂದು ಹೇಳಿಕೆಯನ್ನು ಸತೀಶ್ ಕೊಡುತ್ತಿದ್ದಂತೆ ಮೊದಲು ಬೆಚ್ಚಿಬಿದ್ದವರು ಸುರ್ಜೆವಾಲಾ. ಯಾಕೆಂದರೆ ಸತೀಶ್ ಹೇಳಿದ್ದು ಅಪ್ಪಟ ಹಿಂದಿಯಲ್ಲಿ. ಬೇರೆಯವರಿಗೆ ಅರ್ಥವಾಗುವ ಮೊದಲೇ ಅವರಿಗೆ ಅರ್ಥವಾಗಿತ್ತು. ಅವರು ಅದನ್ನು ತಮ್ಮ ಟ್ವಿಟರ್ ನಲ್ಲಿ ಮೊದಲು ಖಂಡಿಸಿ ಬರೆದರು. ತಕ್ಷಣ ಸಿದ್ಧರಾಮಯ್ಯ ಅವರಿಗೆ ಫೋನ್ ಮಾಡಿ ಈ ವಿಷಯದಲ್ಲಿ ಜಾರಕಿಹೊಳಿಯನ್ನು ಬೆಂಬಲಿಸಿ ಮಾತನಾಡಬೇಡಿ ಎಂದು ಖಡಕ್ಕಾಗಿ ಹೇಳಿದರು. ಆದ್ದರಿಂದಲೇ ಸಿದ್ದು “ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಏನು ಹೇಳುತ್ತಾರೋ, ಅದೇ ನಮ್ಮ ನಿಲುವು” ಎಂದು ಸ್ಫುಟವಾಗಿ ಹೇಳಿದ್ದಾರೆ. ಅದರಿಂದ ಕಾಂಗ್ರೆಸ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಇನ್ನು ಡಿಕೆಶಿಗೆ ಏನೂ ಹೇಳಬೇಕಾಗಿಲ್ಲ. ಯಾಕೆಂದರೆ ಹಿಂದೂತ್ವದ ವಿಷಯ ಬಂದಾಗ ಅವರು ಲೆಕ್ಕಕ್ಕಿಂತ ಹೆಚ್ಚು ಸೂಕ್ಷ್ಮವಾಗಿ ಯೋಚಿಸುತ್ತಾರೆ. ಅವರಿಗೆ ಈ ಹಂತದಲ್ಲಿ ಹಿಂದೂ ಧರ್ಮದ ವಿರುದ್ಧ ತಮ್ಮ ಪಕ್ಷದ ಯಾರು ಏನು ಮಾತನಾಡಿದರು ಅದರಿಂದ ತೊಂದರೆ ಇಡೀ ಪಕ್ಷಕ್ಕೆ ಇದೆ ಎಂದು ಗೊತ್ತಿದೆ. ಕೆಲವೊಮ್ಮೆ ಬಿಜೆಪಿಯ ಅದೃಷ್ಟದಿಂದ ಕಾಂಗ್ರೆಸ್ ಬೇಡಾ ಎಂದರೂ ಹುತ್ತಕ್ಕೆ ಕೈ ಹಾಕುತ್ತದೆ. ಹಾವು ಕಚ್ಚದೆ ಇರುತ್ತದಾ? ಅದು ಕೂಡ ಚುನಾವಣೆ ಹತ್ತಿರ ಇರುವಾಗ!
Leave A Reply