ಮಂಗಳೂರು ರೈಲು ನಿಲ್ದಾಣದಲ್ಲಿ ಬಾಂಬ್ ಸ್ವಾಗತಕ್ಕೆ ವ್ಯವಸ್ಥೆ!!
ಮಂಗಳೂರಿನಲ್ಲಿ ಯಾರೂ ಬೇಕಾದರೂ ಬಾಂಬ್ ತರಬಹುದು. ಅಷ್ಟು ಸುಲಭದ ವಾತಾವರಣ ಇಲ್ಲಿದೆ. ಬೇಕಾದರೆ ನನ್ನ ಬಳಿ ಅದಕ್ಕೆ ಸಾಕ್ಷ್ಯಗಳಿವೆ. ನೀವು ಇವತ್ತು ನಾನು ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಬಹುದು. ಇದು ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದ ಫೋಟೋ. ಎಲ್ಲರಿಗೂ ಗೊತ್ತಿರುವ ಹಾಗೆ ಮಂಗಳೂರು ರಾಷ್ಟ್ರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎನ್ನುವುದನ್ನು ರಾಷ್ಟ್ರೀಯ ತನಿಖಾ ದಳ ಪಟ್ಟಿ ಮಾಡಿದೆ. ಮೊದಲನೇಯದಾಗಿ ನಾವು ಕೇರಳದ ತಲೆಯನ್ನು ನಮ್ಮ ಕಾಲ ಬಳಿ ಇಟ್ಟುಕೊಂಡಿದ್ದೇವೆ. ಇಲ್ಲಿ ಏನಾದರೂ ಗಲಭೆ ಮಾಡಿ ಕೇರಳದ ಗಡಿ ದಾಟಿದರು ಎಂದರೆ ಭಯೋತ್ಪಾದಕರಿಗೆ ಒಂದು ರೀತಿಯಲ್ಲಿ ಮಾವನ ಮನೆಗೆ ಹೋದಷ್ಟೆ ಸಂಭ್ರಮ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಕೂಡ ಹೀಗೆ ಆಗಿತ್ತು. ಅದು ಮಾತ್ರವಲ್ಲ, ಎಷ್ಟೋ ಕೊಲೆ, ಕೊಲೆಯತ್ನ, ಹಲ್ಲೆ ಪ್ರಕರಣದಲ್ಲಿ ಕೂಡ ಹೀಗೆ ಆಗಿದೆ. ಇನ್ನು ಇಲ್ಲಿಂದ ಬೇರೆ ರಾಜ್ಯಗಳಿಗೆ ವಸ್ತುಗಳನ್ನು ಸಾಗಾಟ ಮಾಡುವುದು ಕೂಡ ತುಂಬಾ ಸುಲಭ ಎನ್ನುವುದನ್ನು ಸ್ಮಂಗ್ಲರ್ಸ್ ಕಂಡುಕೊಂಡಿದ್ದಾರೆ. ಡ್ರಗ್ಸ್, ಆಯುಧಗಳು, ಬಾಂಬ್ ಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಕರಾವಳಿಯ ಬೇರೆ ಊರುಗಳಿಂದ ಇಲ್ಲಿಗೆ ತಂದು ಇಲ್ಲಿಂದ ಬೇರೆ ಬೇರೆ ವಾಹಕಗಳ ಮೂಲಕ ಸ್ಥಳಾಂತರ ಮಾಡುವುದು ಕೂಡ ನಡೆಯುತ್ತದೆ. ಅದರೊಂದಿಗೆ ಶಿಕ್ಷಣ, ಮೆಡಿಕಲ್, ದೇವಸ್ಥಾನ, ಟೂರಿಸಂ ವಿಷಯದಲ್ಲಿ ಕೂಡ ಮಂಗಳೂರು ರಾಷ್ಟ್ರಮಟ್ಟದಲ್ಲಿ ಗೊತ್ತಿರುವ ಸಂಗತಿಯಾಗಿರುವುದರಿಂದ ಇಲ್ಲಿ ಏನಾದರೂ ಆದ ಕೂಡಲೇ ಅದು ರಾಷ್ಟ್ರೀಯ ವಾಹಿನಿಗಳಲ್ಲಿ ಕೂಡ ಸುದ್ದಿಯಾಗುತ್ತದೆ. ಕೆಲವೊಮ್ಮೆ ಸ್ಥಳೀಯ ವಾಹಿನಿಗಳಿಗೆ ಗೊತ್ತಾಗುವ ಮೊದಲೇ ಅದು ಪಾಕಿಸ್ತಾನದ ಮೂಲಭೂತ ದೇಶಗಳಿಗೂ ಗೊತ್ತಾಗಿ ಅಲ್ಲಿನ ಟಿವಿ ವಾಹಿನಿಗಳಲ್ಲಿ ಕೂಡ ನ್ಯೂಸ್ ಆಗುತ್ತದೆ. ಆದ್ದರಿಂದ ಇಲ್ಲಿ ಎಷ್ಟು ಕಟ್ಟೆಚರ ವಹಿಸಲಾಗುತ್ತದೆಯೋ ಅಷ್ಟು ಒಳ್ಳೆಯದು. ಆದ್ದರಿಂದ ಮಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣವಾಗಿರುವ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಅದನ್ನೇ ಇವತ್ತು ನಾನು ಹೇಳುತ್ತಿರುವುದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವುದೇನೋ ಹೌದು. ಆದರೆ ಅದರಿಂದ ಉಪಯೋಗ ಪಡೆಯುವುದನ್ನು ಬಿಟ್ಟು ಅದಕ್ಕೆ ಟರ್ಪಾಲು ಹಾಕಿ ಮುಚ್ಚಲಾಗಿದೆ. ಇದರ ಅರ್ಥ ಏನು? ನಾವು ಯಾರನ್ನೂ ಡಿಟೆಕ್ಟ್ ಮಾಡಲ್ಲ. ಯಾವ ಭಯೋತ್ಪಾದಕ ಬೇಕಾದರೆ ಒಳಗೆ ಬಂದು ಬಾಂಬ್ ಇಟ್ಟು ಹೋಗಲು ಸ್ವಾಗತ ಎಂದು ರತ್ನಕಂಬಳಿ ಹಾಸಿದಂತೆ ಆಗುತ್ತಿದೆಯಲ್ಲ. ಹಾಗಾದರೆ ಮೆಟಲ್ ಡಿಟೆಕ್ಟರ್ ಇರುವುದು ಆಯುಧ ಪೂಜೆ ದಿನ ಕೇವಲ ಪೂಜೆ ಮಾಡುವುದಕ್ಕಾ?
ಇನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬ್ಯಾಗೇಜ್ ಸ್ಕ್ಯಾನರ್ ಇದೆ. ಅದರ ಮೇಲೆ ನೀವು ನಿಮ್ಮ ಸಾಮಾನು ಸರಂಜಾಮು ಇಟ್ಟರೆ ಅದು ಎಕ್ಸರೆ ಮಿಶಿನ್ ತರಹ ನಿಮ್ಮ ಬ್ಯಾಗ್ ಒಳಗೆ ಇರುವುದನ್ನು ಎಕ್ಸರೆ ಮಾಡಿ ಅಲ್ಲಿಯೇ ಮಿಶಿನ್ ಕೊನೆಯಲ್ಲಿ ಕುಳಿತ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಅದು ಕೂಡ ಈ ರೈಲು ನಿಲ್ದಾಣದಲ್ಲಿ ಡಮ್ಮಿ ಆಗಿದೆ. ಹಾಗಾದರೆ ನಮ್ಮ ರೈಲು ನಿಲ್ದಾಣಗಳು ಎಷ್ಟು ಸೇಫ್ ಎನ್ನುವಂತಹ ವಾತಾವರಣ ನಿರ್ಮಾಣ ಆಗಿದೆ ಎಂದು ಗೊತ್ತಾಗುತ್ತದೆ. ಇನ್ನು ನಿಮಗೆ ಇನ್ನೊಂದು ಆಶ್ಚರ್ಯ ವಿಷಯ ಕೂಡ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ. ಈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೇರೆ ಊರುಗಳಿಗೆ ಪಾರ್ಸೆಲ್ ಸೇವೆ ಕೂಡ ಇದೆ. ಆದ್ದರಿಂದ ನಿತ್ಯ ಎಷ್ಟೋ ವಸ್ತುಗಳು ಇಲ್ಲಿ ಬಂದು ರಾಶಿ ಬೀಳುತ್ತದೆ. ಪಾರ್ಸೆಲ್ ವಸ್ತುಗಳನ್ನು ನಿಲ್ದಾಣದ ಒಳಗೆ ತರಲು ಪ್ರತ್ಯೇಕವಾದ ಎಂಟ್ರಿ ಇದೆ. ಇಲ್ಲಿ ಎಷ್ಟು ಸುರಕ್ಷತೆ ಕಾಪಾಡಲಾಗಿದೆ ಎನ್ನುವುದನ್ನು ಉನ್ನತ ಪೊಲೀಸ್ ಅಧಿಕಾರಿಗಳು ನೋಡಬೇಕು. ಯಾಕೆಂದರೆ ಯಾರೂ ಕೂಡ ಇಲ್ಲಿ ಏನಾದರೂ ತಂದು ಇಟ್ಟು ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ. ಈಗ ಎಲ್ಲಿಯೋ ತೆಗೆದುಕೊಂಡು ಹೋಗಿ ಸ್ಫೋಟ ಮಾಡಲ್ಲಿದ್ದ ಬಾಂಬ್ ತೆಗೆದುಕೊಂಡು ಹೋಗುವವನ ಗ್ರಹಚಾರ ಮುಗಿದು ಹೋಗಿರುವುದರಿಂದ ಅವನ ಕೈಯಲ್ಲಿಯೇ ಸ್ಫೋಟವಾಯಿತು. ಪಾಪ, ಆಟೋ ರಿಕ್ಷಾ ಚಾಲಕ ಪುರುಷೋತ್ತಮ್ ಅವರಿಗೂ ಗ್ರಹಚಾರ ಕೆಟ್ಟಿರುವುದರಿಂದ ನೋವು ಉಣ್ಣುವಂತಾಗಿದೆ. ಆದರೆ ಈ ಬಾಂಬ್ ಸಾಗಾಟ ಮಾಡುತ್ತಿದ್ದ ಎನ್ನಲಾದ ಶಾಕೀರ್ ಒಂದು ವೇಳೆ ತನ್ನ ಮಿಶನ್ ನಲ್ಲಿ ಯಶಸ್ವಿಯಾಗಿ ಪಂಪ್ ವೆಲ್ ನಲ್ಲಿ ಎಲ್ಲಿಯಾದರೂ ಜನನಿಬಿಡ ಸ್ಥಳದಲ್ಲಿ ಇಟ್ಟು ಅದು ಸ್ಫೋಟಗೊಂಡಿದ್ದರೆ ಆಗ ಯಾರು ಜವಾಬ್ದಾರಿ. ಸರಕಾರ ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣದಲ್ಲಿ ಸುರಕ್ಷತೆಗಾಗಿ ಯಂತ್ರಗಳನ್ನು ತಂದು ಅಧಿಕಾರಿಗಳಿಗೆ ನೀಡಿದರೆ ಅವರು ಅದಕ್ಕೆ ಟರ್ಪಾಲು ಹಾಕಿ ಮುಚ್ಚಿ ಇಟ್ಟರೆ ಯಾರು ಹೊಣೆ? ಹಾಗಂತ ಈಗಾಗಲೇ ಕೆಲವು ಪ್ರಕರಣಗಳ ಮೂಲಕ ಮಂಗಳೂರಿನಲ್ಲಿ ಐಸಿಸ್ ಸಂಪರ್ಕಿತರು ಇದ್ದಾರೆ ಎಂದು ಎನ್ ಐಎ ತನಿಖೆಯಿಂದ ಗೊತ್ತಾಗಿದೆ. ಮಾಜಿ ಶಾಸಕರ ಸೊಸೆ ಐಸಿಸ್ ಸಂಪರ್ಕ, ಸುಭಾಷ್ ನಗರದಲ್ಲಿ ನಡೆದ ಐಎನ್ ಎ ದಾಳಿ, ಉಳ್ಳಾಲದ ಮುಕ್ಕಚೇರಿಯಲ್ಲಿ ಬಾಂಬ್ ತಯಾರಿಕಾ ಅಡ್ಡೆ ಮೇಲೆ ದಾಳಿ, ಹೃದಯಭಾಗದಲ್ಲಿ ಗೋಡೆ ಬರಹಗಳು ಮತ್ತು ಈಗ ರಿಕ್ಷಾದಲ್ಲಿ ಬಾಂಬ್ ಹೀಗೆ ಎಲ್ಲವೂ ಕಣ್ಣ ಮುಂದಿರುವಾಗ ಇಷ್ಟು ನಿರ್ಲಕ್ಷ್ಯವೇ? ಏನು ಈಗ ರಿಕ್ಷಾದಲ್ಲಿ ಆಯಿತೋ ಅದೇ ರೈಲಿನ ಒಳಗೆ ಆಗಿದಿದ್ದರೆ ಏನಾಗುತ್ತಿತ್ತು? ಇದನ್ನೆಲ್ಲಾ ತಪ್ಪಿಸಲು ಎಲ್ಲವೂ ಇದ್ದರೂ ಇವರು ಬಳಸಲ್ಲ ಎಂದರೆ ಏನು ಕಥೆ? ನಮ್ಮನ್ನು ದೇವರೇ ಕಾಪಾಡಬೇಕು!
Leave A Reply