ಮುತಾಲಿಕ್ ಗಿಂತ ಸೈಲೆಂಟ್ ಸುನೀಲ, ಫೈಟರ್ ರವಿ ಬಿಜೆಪಿಗೆ ಒಳ್ಳೆಯವರು!!
ಸೈಲೆಂಟ್ ಸುನೀಲ ಮತ್ತು ಫೈಟರ್ ರವಿ ವಿದ್ಯುಕ್ತವಾಗಿ ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ. ಈ ಮೂಲಕ ಪಕ್ಷಕ್ಕೆ ತುಂಬಾ ಜೀವ ತುಂಬಿದ್ದಾರೆ. ಗೆಲ್ಲಲೇಬೇಕು, ಈ ಮೂಲಕ ಅಧಿಕಾರಕ್ಕೆ ಬರಲೇಬೇಕು ಎನ್ನುವ ಸಂದರ್ಭದಲ್ಲಿ ರಾಜಕೀಯ ವ್ಯಭಿಚಾರತೆ ಬಿಜೆಪಿಯ ಅನಿವಾರ್ಯತೆಯೂ ಹೌದು. ಬಂದ ಕೂಡಲೇ ಈ ಧೀಮಂತ ನಾಯಕರು ವಿಧಾನಸಭಾ ಕ್ಷೇತ್ರ ಚುನಾವಣೆಗೆ ಟಿಕೆಟ್ ಕೇಳಿದ್ದಾರೆ. ಬಿಜೆಪಿ ನಾಯಕರು ಕೊಟ್ಟರೂ ಕೊಡಬಹುದು. ಯಾಕೆಂದರೆ ಬಹುಮತಕ್ಕೆ ಒಂದೊಂದು ಸೀಟು ಕೂಡ ಮುಖ್ಯ. ಆದರೆ ಸೈಲೆಂಟ್ ಸುನೀಲ ಹಾಗೂ ಫೈಟರ್ ರವಿಗೆ ಟಿಕೆಟ್ ಕೊಟ್ಟರೆ ಯಾರಿಗೆ ಏನು ತೊಂದರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇವರಿಬ್ಬರು ಜನರಿಗಿಂತ ಪೊಲೀಸರಿಗೆ ತುಂಬಾ ಬೇಕಾದವರು. ಇವರು ವಿಧಾನಸೌಧಕ್ಕಿಂತ ಜೈಲಿನಲ್ಲಿ ಇರಬೇಕಾದವರು. ಯಾವ ಪೊಲೀಸ್ ಕಾನ್ಸಟೇಬಲ್ ” ಏಯ್ ಎಲ್ಲಿದ್ದೀಯಾ?” ಎಂದು ಕೇಳುವ ಲೆವಲ್ಲಿನಲ್ಲಿ ಇರುವವರು. ಇವರಿಗೆ ಟಿಕೆಟ್ ಬಿಡಿ, ಬಿಜೆಪಿ ಕಚೇರಿಯಿಂದ ಒಂದು ಕಿ.ಮೀ ದೂರ ಇಟ್ಟರೆನೆ ಬಿಜೆಪಿಗೆ ಒಳ್ಳೆಯದು. ಅದು ಬಿಟ್ಟು ಅವರನ್ನು ಪಕ್ಷದ ಕಚೇರಿಗೆ ಕರೆಸಿ ಅವರನ್ನು ವೇದಿಕೆಯ ಮೇಲೆ ಕರೆದು ಸಚಿವರಿಬ್ಬರು ಕೇಸರಿ ಶಾಲು ಹಾಕಿ ಫೋಟೋ ತೆಗೆಯುವುದಿದೆಯಲ್ಲ, ಅದು ಶುದ್ಧ ಅನೈತಿಕತೆ. ಈಗೀಗ ರಾಜಕೀಯ ವಲಯದಲ್ಲಿ ಏನು ಜೋಕಿದೆ ಎಂದರೆ ಎಂತಹುದೇ ಭ್ರಷ್ಟಾಚಾರಿ, ಎಂತದೇ ಅಪರಾಧಿ ಯಾ ಆರೋಪಿ ಇದ್ದರೂ ಆತ ಬಿಜೆಪಿ ಸೇರಿದರೆ ಆತ ಶುದ್ಧ ಸಾತ್ವಿಕ ವ್ಯಕ್ತಿಯಾಗುತ್ತಾನೆ ಎಂದು ಹೇಳುತ್ತಾರೆ. ಬಹುಶ: ವೈಲೆಂಟ್ ಮತ್ತು ಫೈಟರ್ ಹಾಗೆ ಶುದ್ಧರಾಗಬಹುದು. ಮೇಲೆ ಮೋದಿ, ಶಾ ಪಕ್ಷಕ್ಕೆ ಫಿನಾಯಿಲ್ ಹಾಕಿ ಶುದ್ಧ ಮಾಡುತ್ತಿದ್ದರೆ ರಾಜ್ಯ ಬಿಜೆಪಿ ನಾಯಕರು ತಟ್ಟೆಯಲ್ಲಿಯೇ “ಅದು” ಮಾಡುತ್ತಿದ್ದಾರೆ.
ಹೀಗೆ ರೌಡಿಗಳನ್ನು, ಅಪರಾಧಿಕ ಹಿನ್ನಲೆಯುಳ್ಳವರನ್ನು ಕರೆಸಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿಯ ಅಶ್ವಥ್ ನಾರಾಯಣ್ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಅವರು ಹೇಳಿದ್ದಿಷ್ಟು ” ಒಳ್ಳೆಯವರಾಗುವ ಅವಕಾಶ ಎಲ್ಲರಿಗೂ ಇದೆ” ಹಾಗಾದರೆ ಮಾನ್ಯ ಸಚಿವರೇ ಆವತ್ತು ಮುತಾಲಿಕ್ ನಿಮ್ಮ ಬಿಜೆಪಿಗೆ ಸೇರಬೇಕು ಎಂದು ಬಂದಿದ್ದಾಗ ಅವರಿಗೆ ಶಾಲು ಹಾಕಿ ಸ್ವಾಗತಿಸಿ ಆವತ್ತೇ ಸಂಜೆ ಅವರನ್ನು ಹೊರಗೆ ಹಾಕಿಬಿಟ್ಟಿರಲ್ಲ. ಯಾಕೆ? ಅವರು ರೌಡಿಯಾ, ಅಪರಾಧಿಕ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರಾ? ಇಲ್ಲವಲ್ಲ? ಆದರೂ ಅವರಿಗೆ ಬೆಳಿಗ್ಗೆ ಕರೆಸಿ, ಸಂಜೆ ಗೇಟ್ ಪಾಸ್ ಕೊಟ್ಟರಲ್ಲ. ಏನು ಕಾರಣ? ಅವರು ಪಬ್ ಅಟ್ಯಾಕ್ ಬೆಂಬಲಿಸಿದರು ಎನ್ನುವ ಕಾರಣಕ್ಕಾ? ಯಾಕೆ, ಮುತಾಲಿಕ್ ಅವರಿಗೂ ಒಳ್ಳೆಯವರಾಗುವ ಅವಕಾಶ ಇದೆಯಲ್ಲ. ಅಷ್ಟಕ್ಕೂ ಈಗ ಬಿಜೆಪಿಯಲ್ಲಿರುವ 90 ಶೇಕಡಾ ರಾಜಕಾರಣಿಗಳಿಗಿಂತ ಮುತಾಲಿಕ್ ಹಿಂದೂತ್ವ ಸ್ಟ್ರಾಂಗ್ ಇದೆ. ಬಿಜೆಪಿಯ ಬಹುತೇಕರು ಕೇಸರಿ ಶಾಲು ಹೆಗಲ ಮೇಲೆ ಹಾಕ್ಕೊಳ್ಳುದು ಅಪ್ಪಟ ತೋರಿಕೆಗೆ ಎಂದು ಎಲ್ಲರಿಗೂ ಗೊತ್ತು. ಆದರೆ ಮುತಾಲಿಕ್ ಕೇಸರಿಯನ್ನು ಹೃದಯದಲ್ಲಿಯೇ ಧರಿಸಿದ್ದಾರೆ. ಅವರ ಹಿಂದೂತ್ವ ಅಚಲವಾಗಿದೆ. ಆದರೆ ಮುತಾಲಿಕ್ ಬಿಜೆಪಿಗೆ ಬಂದರೆ ಹಿಂದೂತ್ವದ ವಿಷಯದಲ್ಲಿ ಯಾವ ರಾಜಿಯೂ ನಡೆಯುವುದಿಲ್ಲ ಎನ್ನುವುದು ಬಿಜೆಪಿಯಲ್ಲಿರುವ ಅನೇಕ ಶಾಸಕರಿಗೆ, ಸಚಿವರಿಗೆ ಗೊತ್ತಿದೆ. ಆದ್ದರಿಂದ ರಿಸ್ಕ್ ಬೇಡಾ ಎಂದು ಅವರನ್ನು ದೂರ ಇಡುವ ಕೆಲಸ ನಡೆದಿದೆ. ಇನ್ನು ಮುತಾಲಿಕ್ ಬಿಜೆಪಿಗೆ ಬಂದು ಟಿಕೆಟ್ ಸಿಕ್ಕಿದರೆ ಖಂಡಿತವಾಗಿಯೂ ಶಾಸಕರಾಗುತ್ತಾರೆ. ಒಮ್ಮೆ ಶಾಸಕರಾದರೆ ನಂತರ ಅವರು ಉಳಿದವರನ್ನು ಕೂಡ ಹಿಂದೂತ್ವದ ವಿಷಯದಲ್ಲಿ ಬಡಿದೆಬ್ಬಿಸುತ್ತಾರೆ. ಯಾವುದೇ ರೀತಿಯಲ್ಲಿಯೂ ಹಿಂದೂತ್ವ ಸೈಡ್ ಲೈನ್ ಆಗಲು ಬಿಡುವುದಿಲ್ಲ. ಆದರೆ ಬಿಜೆಪಿಯಲ್ಲಿ ಈಗ ಏನಾಗಿದೆ ಎಂದರೆ ಎಲ್ಲರೂ ಹೊಂದಾಣಿಕೆಯ ರಾಜಕೀಯ. ಎದುರಿಗೆ ಮುಸ್ಲಿಮರನ್ನು ಬೈಯುವುದು. ಹಿಂದಿನಿಂದ ಅವರೊಂದಿಗೆ ವ್ಯಾಪಾರ, ವ್ಯವಹಾರ ಇಟ್ಟುಕೊಂಡಿರುವ ಅನೇಕ ಬಿಜೆಪಿ ನಾಯಕರಿದ್ದಾರೆ. ಕೇಳಿದ್ರೆ ಭಾಷಣಗಳು ಬೇರೆ. ವ್ಯವಹಾರ ಬೇರೆ ಎನ್ನುವಂತಹ ಸಮುಜಾಯಿಷಿಕೆ. ಇನ್ನು ಮುಸ್ಲಿಮರಲ್ಲಿಯೇ ತಮಗೆ ಅನುಕೂಲವಾಗುವ ಮುಸ್ಲಿಮರನ್ನು ಇವರು ರಾಷ್ಟ್ರೀಯವಾದಿ ಮುಸ್ಲಿಮರು ಎನ್ನುವ ಹಣೆಪಟ್ಟಿ ಕಟ್ಟುತ್ತಾರೆ. ಅವರು ಇವರಿಗೆ ಒಳ್ಳೆಯವರು. ಇರಲಿ. ಅದು ಬಿಜೆಪಿಯ ಕರ್ಮ.
ಆದರೆ ಫೈಟರ್ ರವಿ, ಸೈಲೆಂಟ್ ಸುನೀಲ ಈಗ ಬಿಜೆಪಿ ಟಿಕೆಟ್ ಕೇಳಿದ್ದಷ್ಟೇ. ಅಷ್ಟು ಬೇಗ ತಾವು ಶಾಸಕರಾದೇವು ಎನ್ನುವ ಭ್ರಮೆಯಲ್ಲಿದ್ದಾರೆ. ಮೊನ್ನೆಯ ತನಕ ಸೈಲೆಂಟ್ ಸುನೀಲನನ್ನು ಪೊಲೀಸರು ಹುಡುಕುತ್ತಿದ್ದರು. ಈಗ ಅವನೇ ಪೊಲೀಸರ ಎದುರು ರಾಜಾರೋಷವಾಗಿ ಸಚಿವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾನೆ. ಅಲ್ಲಿಯೇ ಇರುವ ಪೊಲೀಸರು ಮೂಕಪೇಕ್ಷಕರಾಗುತ್ತಿದ್ದಾರೆ. ಅವನನ್ನು ಬಂಧಿಸಲು ಆಗದೇ, ಬಿಡಲು ಆಗದೇ ಇಲಾಖೆ ಗೊಂದಲದಲ್ಲಿದ್ದಾರೆ. ಇದನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿಸಿಕೊಂಡಿದೆ. ಆದರೆ ಅದಕ್ಕೆ ಬಿಜೆಪಿ ನಿಮ್ಮ ಡಿಕೆಶಿ ಕೊತ್ವಾಲನ ಶಿಷ್ಯ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯ ಸೋಶಿಯಲ್ ಮೀಡಿಯಾ ಇವತ್ತಿಗೂ ಸ್ಟ್ರಾಂಗ್. ಅವರ ಬಳಿ ಎಲ್ಲಾ ಅಸ್ತ್ರ ಇದೆ. ಆದರೆ ಕಳೆದುಹೋಗಿರುವುದು ನೈತಿಕತೆ ಮಾತ್ರ!
Leave A Reply