ವಕ್ಫ್ ಬೋರ್ಡ್ ಅಧ್ಯಕ್ಷರ ಕ್ಲೈಮ್ಯಾಕ್ಸ್ ಆಟದಿಂದ ಬಿಜೆಪಿಗೆ ಟೆನ್ಷನ್!

ಕೆಲವರು ಇರುವುದೇ ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರದ ನಿದ್ರೆಯನ್ನು ಕಸಿಯಲು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಒಂದಲ್ಲ, ಒಂದು ಕಡೆಯಿಂದ ಒಂದಲ್ಲ ಒಂದು ಕಿರಿಕಿರಿಗಳು ಬಿಜೆಪಿ ಸರಕಾರವನ್ನು ಸರಣಿಯಂತೆ ಹಣಿಯುತ್ತಿರುವುದು ಸಾಬೀತಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅವಧಿಯ ಈ ಬಾರಿ ಒಂದು ದೇವಸ್ಥಾನವನ್ನು ಕೆಡವಿದ ಸಂದರ್ಭದಲ್ಲಿ ದೊಡ್ಡ ಕೋಲಾಹಲ ಎದ್ದಿತ್ತು. ಅದು ನಮಗೆ ಗೊತ್ತಿಲ್ಲದೇ ಅಧಿಕಾರಿಗಳು ಮಾಡಿದ್ದು ಎಂದು ಸರಕಾರದವರು ಹೇಳಿದ್ರು. ಅದು ಮುಂದಿನ ಚುನಾವಣೆಯಲ್ಲಿ ಈಶ್ಯೂ ಆಗಲಿದೆ. ಇನ್ನೊಮ್ಮೆ ಗೋಹತ್ಯೆಯ ಕಠಿಣ ಕಾನೂನು ಜಾರಿಯಲ್ಲಿದ್ದರೂ ಅವ್ಯಾಹತವಾಗಿ ಗೋಸಾಗಾಟ ನಡೆಯುತ್ತಿದ್ದಾಗ ಮತ್ತೆ ಸಂಘಟನೆಗಳು ಬೊಬ್ಬೆ ಹೊಡೆದವು. ಆಗ ಪೊಲೀಸ್ ಇಲಾಖೆ ಕಾನೂನನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿ ತಿಪ್ಪೆ ಸಾರಲಾಯಿತು. ಈಗ ವಕ್ಫ್ ಬೋರ್ಡಿನ ರಾಜ್ಯಾಧ್ಯಕ್ಷರು “ನಾವು ಮುಸ್ಲಿಮ್ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಕಾಲೇಜನ್ನು ಆರಂಭಿಸುತ್ತೇವೆ. ಅದಕ್ಕಾಗಿ ರಾಜ್ಯ ಸರಕಾರದ ಅನುದಾನದಲ್ಲಿ 25 ಕೋಟಿ ರೂಪಾಯಿಗಳನ್ನು ಬಳಸುತ್ತೇವೆ. 2.5 ಕೋಟಿ ರೂಪಾಯಿಗಳಂತೆ 10 ಕಾಲೇಜುಗಳನ್ನು ಕಟ್ಟುತ್ತೇವೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಈ ಕಾಲೇಜುಗಳು ನಿರ್ಮಾಣವಾಗಲಿವೆ” ಎಂದು ಹೇಳಿದ್ದಾರೆ.
ಅನೇಕರಿಗೆ ಗೊತ್ತಿರಬಹುದು. ವಕ್ಫ್ ಬೋರ್ಡ್ ರಾಜ್ಯ ಸರಕಾರದ ಅಧೀನದಲ್ಲಿ ಬರುವ ಒಂದು ಸಂಸ್ಥೆ. ಎಷ್ಟೇ ಸ್ವಾಯತ್ತ ಎಂದು ಅಂದುಕೊಂಡರೂ ಅದು ಸರಕಾರದ ಅನುದಾನದ ಮೇಲೆಯೇ ಅವಲಂಬಿತವಾಗಿರುವುದು. ಆ ಬೋರ್ಡಿಗೆ ಒಬ್ಬರು ಅಧ್ಯಕ್ಷರಿರುತ್ತಾರೆ. ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ. ಯಾಕೆಂದರೆ ಯಾವುದೇ ರಾಜ್ಯ ಸರಕಾರ ಮುಸ್ಲಿಮರಿಗಾಗಿ ಮಾಡುವ ಯಾವುದೇ ಯೋಜನೆ, ಸೌಲಭ್ಯಗಳನ್ನು ಹಂಚುವುದು ವಕ್ಫ್ ಬೋರ್ಡಿನ ಮೂಲಕ. ಆದ್ದರಿಂದ ಸಹಜವಾಗಿ ಕಾಂಗ್ರೆಸ್ ಮುಸ್ಲಿಮರ ಬಗ್ಗೆ ಒಲೈಕೆ ರಾಜಕಾರಣ ಮಾಡುವುದರಿಂದ ಹೆಚ್ಚು ಸೌಲಭ್ಯಗಳನ್ನು ಘೋಷಿಸುವಾಗ ಅದನ್ನು ಪ್ರಚಾರ ಮಾಡುವುದೇ ವಕ್ಫ್ ಬೋರ್ಡ್. ಬಿಜೆಪಿ ಸರಕಾರ ಇದ್ದಾಗ ವಕ್ಫ್ ಬೋರ್ಡುಗಳಿಗೆ ಹೆಚ್ಚು ಪ್ರಚಾರ ಇರುವುದಿಲ್ಲ. ಆದರೆ ವಾಸ್ತವ ಏನೆಂದರೆ ಬಿಎಸ್ ವೈ ಮುಖ್ಯಮಂತ್ರಿಯಾಗಿರುವಾಗಲೇ ವಕ್ಫ್ ಬೋರ್ಡಿಗೆ ಅತೀ ಹೆಚ್ಚು ಅನುದಾನ ಬಿಡುಗಡೆಯಾಗಿರುವುದು. ಸಿದ್ದು ಸಿಎಂ ಆಗಿದ್ದಾಗ ಮುಸ್ಲಿಮರಿಗಾಗಿ ಅನೇಕ ಘೋಷಣೆಗಳನ್ನು ಮಾಡಿದ್ದಾರಾದರೂ ಅನುದಾನ ನೀಡಿದ್ದು ಕಡಿಮೆ. ಅಂತಹ ವಕ್ಫ್ ಬೋರ್ಡು ಮತ್ತೆ ಈಗ ಬಿಜೆಪಿ ಸರಕಾರದ ಕ್ಲೈಮ್ಯಾಕ್ಸ್ ನಲ್ಲಿ ಸುದ್ದಿಯಾಗಿದೆ. ಅದಕ್ಕೆ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಮಾಡುತ್ತೇವೆ ಎನ್ನುವ ಹೇಳಿಕೆಯಿಂದ.
ಮೊದಲೇ ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೆ ಏರಿದ್ದು ಎಲ್ಲರಿಗೂ ಗೊತ್ತೆ ಇದೆ. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯ ಒಳಗೆ ಹಿಜಾಬ್ ಧರಿಸಿಯೇ ಪಾಠ ಕೇಳುವ ಹಟ ಮಾಡಿದ ಬಳಿಕ ಆ ವಿಷಯ ಸುಪ್ರೀಂ ಕೋರ್ಟ್ ತನಕ ಹೋಗಿರುವುದನ್ನು ರಾಷ್ಟ್ರೀಯ ವಾಹಿನಿಗಳು ಮಾತ್ರವಲ್ಲ, ಅಂತರಾಷ್ಟ್ರೀಯ ಟಿವಿ ಚಾನೆಲ್ ಗಳು ಕೂಡ ಸುದ್ದಿ ಮಾಡಿವೆ. ಹಾಗಿರುವಾಗ ಇಂತಹ ವಿಷಯದಲ್ಲಿ ಅದು ಕೂಡ ಬಿಜೆಪಿ ಸರಕಾರ ಇರುವಾಗ ವಕ್ಫ್ ಬೋರ್ಡು ಅಧ್ಯಕ್ಷರಾದ ಸಅದಿಯವರು ಹೆಚ್ಚು ಜಾಗರೂಕತೆಯಿಂದ ವರ್ತಿಸಬೇಕು. ಆದರೆ ನಮ್ಮ ಬಳಿ ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು ನಿರ್ಮಿಸಲು ಹತ್ತಾರು ಅರ್ಜಿ ಬಂದಿವೆ. ನಾವು ಸರಕಾರ ಕೊಟ್ಟಿರುವ ಅನುದಾನದಿಂದ ನಿರ್ಮಿಸುತ್ತೇವೆ ಎಂದು ಹೇಳಿದ್ದು ಹೇಗೆ ಆಗಿದೆ ಎಂದರೆ ಅದು ಬಸ್ಸು ಬೊಮ್ಮಾಯಿಯವರ ಮೂಗಿನ ಒಳಗೆ ಯಾರೋ ಬೆರಳು ಹಾಕಿ ಎಳೆದ ಹಾಗೆ ಆಗಿದೆ. ಕೊನೆಗೆ ಸಿಎಂನಿಂದ ಹಿಡಿದು ವಕ್ಫ್, ಹಜ್ ಸಚಿವೆ ಶಶಿಕಲಾ ಜೊಲ್ಲೆಯವರ ತನಕ ಬಿಜೆಪಿಗರು ಅಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಸಾರಿ ಹೇಳಬೇಕಾಯಿತು. ಅದರ ನಂತರ ಸುತ್ತೋಲೆ ಹೊರಡಿಸಬೇಕಾಯಿತು. ಅದು ಕಾಂಗ್ರೆಸ್ಸಿಗರ ಟೂಲ್ ಕಿಟ್ ಭಾಗ ಎಂದು ಹೇಳಬೇಕಾಯಿತು.
ಕಾಂಗ್ರೆಸ್ಸಿಗರದ್ದೇ ಟೂಲ್ ಕಿಟ್ ಎಂದಾದರೆ ವಕ್ಫ್ ಬೋರ್ಡು ಅಧ್ಯಕ್ಷರು ಕಾಂಗ್ರೆಸ್ಸಿಗರೇ ಎಂದಾಯಿತಲ್ಲವೇ? ಎನ್ನುವುದೇನು? ಅದು ನಿಜ ಕೂಡ. ಈ ಬಗ್ಗೆ ಅವರನ್ನು ನೇಮಿಸುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಸ್ವರ ಎದ್ದಿತ್ತು. ಕಾಂಗ್ರೆಸ್ಸಿಗರನ್ನು ಬಿಜೆಪಿ ಸರಕಾರ ಆಯಕಟ್ಟಿನ ಸ್ಥಾನದಲ್ಲಿ ನೇಮಿಸುವುದು ಇದು ಮೊದಲನೇಯದ್ದು ಅಲ್ಲ. ಕೊನೆಯದ್ದು ಅಲ್ಲ. ಆದರೆ ಇಂತವರಿಂದ ಕೊನೆಗೆ ಮುಳುಗು ನೀರು ಬರುತ್ತದಲ್ಲಾ, ಆಗ ತಡವಾಗಿರುತ್ತದೆ. ಇಂತವರು ಬಿಜೆಪಿಯ ಸೋಲಿಗೆ ಕಾಂಗ್ರೆಸ್ಸಿನಿಂದ ಸುಫಾರಿ ತೆಗೆದುಕೊಂಡಿರುತ್ತಾರೇನೋ ಎಂದು ಅನಿಸುತ್ತದೆ. ಆದಷ್ಟು ಬೇಗ ಇವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಇಂತವರೇ ಕಾಂಗ್ರೆಸ್ ಪಡಸಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ!
Leave A Reply