ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
ಶಾಲೆಗೆ ಹೋಗುವ ಮಕ್ಕಳ ಬ್ಯಾಗುಗಳಲ್ಲಿ ಏನೇನಿರುತ್ತೆ? ಪುಸ್ತಕ, ಪೆನ್ನು, ಪೆನ್ಸಿಲ್ ಇರಬಹುದು. ಆದರೆ ಬೆಂಗಳೂರಿನ ಶಾಲೆಯೊಂದರ ಮಕ್ಕಳು ತಮ್ಮ ಬ್ಯಾಗಿನಲ್ಲಿ ಮೊಬೈಲುಗಳನ್ನು ಕ್ಲಾಸಿಗೆ ತರುತ್ತಾರೆ ಎಂಬ ಮಾಹಿತಿ ಆ ಶಾಲೆಯ ಆಡಳಿತ ಮಂಡಳಿಗೆ ದೊರಕಿದಾಗ ಅವರು ಪರೀಕ್ಷಿಸಲು ಶಿಕ್ಷಕರಿಗೆ ಹೇಳಿದ್ದಾರೆ. ಪರೀಕ್ಷಿಸುವಾಗ ಮೊಬೈಲು ಸಿಕ್ಕಿದರೆ ಶಿಕ್ಷಕರಿಗೆ ಹೆಚ್ಚೆಂದರೆ ಕೋಪ ಬರುತ್ತಿತ್ತು. ಆದರೆ ಕಾಂಡೋಮ್ ಸಿಕ್ಕಿದ್ರೆ? ಹೌದು ಎಂಟು, ಒಂಭತ್ತು, ಹತ್ತನೆ ತರಗತಿಯ ಹೆಣ್ಣು ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಸಿಕ್ಕಿದರೆ ಅದು ನಿಜಕ್ಕೂ ಶಾಕಿಂಗ್ ವಿಷಯ. ಅಷ್ಟಕ್ಕೂ ಆಗುತ್ತಿರುವುದೇನು? ಹೈಸ್ಕೂಲ್ ಮಕ್ಕಳಿಗೆ ಕಾಂಡೋಮ್ ಯಾಕೆ ಬೇಕು. ಅದನ್ನು ಅವರು ಬಳಸಿ ಏನು ಮಾಡುತ್ತಾರೆ? ಅದನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಲು ಅವರಿಗೆ ಹೇಳಿದವರ್ಯಾರು? ನಮ್ಮ ಶಾಲೆಯಲ್ಲಿ ಇದು ಬೇಕಾಗುತ್ತದೆ ಎನ್ನುವ ಅರ್ಥದ ಮಾತುಗಳನ್ನು ಮಕ್ಕಳು ಹೇಳಿದ್ದಾರೆ.
ಇನ್ನು ಮದ್ಯವನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ತಯಾರಿಸಿದ ಪಾನೀಯದ ಬಾಟಲ್, ಸಿಗರೇಟು, ಲೈಟರ್ಸ್ ಮತ್ತು ಕೆಲವರು ವೈಟನರ್ ಕೂಡ ಬ್ಯಾಗ್ ಗಳಲ್ಲಿ ಇಟ್ಟುಕೊಂಡಿದ್ದಾರೆ. ಈ ಡ್ರಗ್ಸ್ ಪರ್ಯಾಯವಾಗಿ ವೈಟನರ್ ಬಳಸುವುದನ್ನು ಕೆಲವರು ರೂಢಿಸಿಕೊಂಡಿರುವುದು ಮಕ್ಕಳಿಗೂ ಗೊತ್ತಾಗಿದೆ. ಹಾಗಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ. ಇಂತಹ ಒಂದು ಡೇಂಜರ್ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಇದ್ದಾರಾ ಎನ್ನುವುದನ್ನು ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮೊದಲನೇಯದಾಗಿ ಪೋಷಕರು ಅಥವಾ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ವರ್ತಿಸಬೇಕು. ನನ್ನ ಮಗ ಅಥವಾ ಮಗಳು ಒಳ್ಳೆಯವಳು ಎಂದು ಪ್ರತಿ ತಂದೆ ಮತ್ತು ತಾಯಿಯ ಮನಸ್ಸಿನಲ್ಲಿ ಇರುತ್ತದೆ. ಇರಲಿ. ತಪ್ಪಿಲ್ಲ. ಆದರೆ ಹಾಗಂತ ಮೈಮರೆಯುವುದು ಒಳ್ಳೆಯದಲ್ಲ. ಮಕ್ಕಳು ಸಂಜೆಗೆ ಬಂದ ನಂತರ ಅವರೊಂದಿಗೆ ಎಷ್ಟು ಅಪ್ಪ, ಅಮ್ಮ ಮಾತನಾಡುತ್ತಾರೆ. ಎಷ್ಟೋ ಕಡೆ ಸಂಜೆ ಶಾಲೆಯಿಂದ ಅಲ್ಲಿಯೇ ಎಲ್ಲಾದರೂ ತಿನ್ನಲು ಹೇಳಿ ಅಲ್ಲಿಂದಲೇ ಟ್ಯೂಶನ್ ಗೆ ಕಳುಹಿಸುವ ಪೋಷಕರಿದ್ದಾರೆ. ರಾತ್ರಿ 7.30 – 8 ಗಂಟೆಗೆ ಮಕ್ಕಳು ಮನೆಗೆ ಹಿಂತಿರುಗುವಾಗ ತಾಯಿ ಸಿರಿಯಲ್ ನೋಡುವ ಗಡಿಬಿಡಿಯಲ್ಲಿರುತ್ತಾರೆ. ಮಕ್ಕಳು ಸುಸ್ತಾಗಿರುತ್ತಾರೆ. ಮಾತನಾಡುವುದು ಇಬ್ಬರಿಗೂ ಬೇಕಾಗಿರುವುದಿಲ್ಲ. ರಾತ್ರಿ ತಂದೆ ಬಂದಾಗ ಆವತ್ತಿನ ಅಧ್ಯಾಯಕ್ಕೆ ತೆರೆ ಬಿದ್ದಿರುತ್ತದೆ. ಈಗ ಅಜ್ಜ, ಅಜ್ಜಿಯರು ಸಿಟಿಗಳಲ್ಲಿ ತಮ್ಮವರೊಂದಿಗೆ ಇರುವುದು ಕಡಿಮೆ ಆಗಿರುವುದರಿಂದ ಮಕ್ಕಳಿಗೆ ಹೇಳುವವರು, ಕೇಳುವವರು ಯಾರೂ ಇರುವುದಿಲ್ಲ. ಆದ್ದರಿಂದ ಮಕ್ಕಳು ಯೂಟ್ಯೂಬ್ ನೋಡುತ್ತಾ ಏನು ಮಾಡುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಏನು ಮಾಡುತ್ತಾರೆ ಎಂದು ನೋಡುವವರು ಇಲ್ಲದೆ ಇದ್ರೆ ಬೆಕ್ಕೆ ಕದ್ದು ಹಾಲು ಕುಡಿಯುತ್ತದೆ ಎನ್ನುವಾಗ ಮಕ್ಕಳು ದಾರಿ ತಪ್ಪದೆ ಇರುತ್ತಾರಾ?
ಇನ್ನು ಎರಡನೇಯದಾಗಿ ಶಾಲೆಗಳು ಕೂಡ ನೈತಿಕತೆಯ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಶಿಕ್ಷಕರು ಕೂಡ ನೈತಿಕ ಶಿಕ್ಷಣದ ತರಗತಿಯಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಒಂದಿಷ್ಟು ನೀಡಬೇಕು. ಇದರಿಂದ ಅನಾವಶ್ಯಕ ಕುತೂಹಲದಿಂದ ಏನೇನೋ ಮಾಡಲು ಹೊರಟು ದಾರಿ ತಪ್ಪುವ ಮಕ್ಕಳಿಗೆ ತಾವು ಏನು ಮಾಡಿದರೆ ತಪ್ಪು, ಏನು ಮಾಡುವುದು ಅನೈತಿಕತೆ, ಏನು ಮಾಡಿದರೆ ಸಮಾಜದಲ್ಲಿ ಮುಜುಗರಕ್ಕೆ ಒಳಗಾಗುತ್ತೇವೆ ಎನ್ನುವುದನ್ನು ತಿಳಿಹೇಳಿದಂತೆ ಆಗುತ್ತದೆ. ಇಲ್ಲದಿದ್ದರೆ ಏನಾಗುತ್ತದೆ ಎಂದರೆ ಇವತ್ತಿನ ದಿನಗಳಲ್ಲಿ ಈ ಒಟಿಟಿಯಂತಹ ಮಾಧ್ಯಮಗಳು ಮಕ್ಕಳ ಮನಸ್ಸಿನಲ್ಲಿ ಕೆಟ್ಟದ್ದನ್ನು ತುಂಬಿಸಿ ಅವರನ್ನು ಹಾಳು ಮಾಡಿಬಿಡುತ್ತದೆ. ಈ ಒಟಿಟಿಯ ಪರಿಣಾಮದಿಂದ ಒಂದು ಶಾಲೆಯಲ್ಲಿ ಹುಡುಗನೊಬ್ಬ ಶಿಕ್ಷಕಿಗೆ ಐ ಲವ್ ಯೂ ಎಂದಿದ್ದಾನೆ. ಹಿಂದಿನ ಕಾಲವಾಗಿದ್ದರೆ ಆ ಹುಡುಗನ ಬೆನ್ನಿನ ಮೇಲೆ ಶಿಕ್ಷಕಿಕ ಬೆತ್ತದ ಅಚ್ಚು ಕಂಡುಬರುತ್ತಿತ್ತು. ಆದರೆ ಈಗ ಮಕ್ಕಳಿಗೆ ಹೊಡೆಯುವಂತಿಲ್ಲವಲ್ಲ. ಆದ್ದರಿಂದ ಮಕ್ಕಳಿಗೂ ಬುದ್ಧಿ ಬರುತ್ತಿಲ್ಲ. ಈ 14-15 ವರ್ಷ ವಯಸ್ಸು ಎನ್ನುವುದು ಕಾದ ಕಬ್ಬಿಣ ತರಹ. ಹೇಗೆ ಬೇಕಾದರೂ ಬೆಂಡ್ ಮಾಡಬಹುದು. ಆದರೆ ಈ ವಯಸ್ಸಿನಲ್ಲಿ ಹೈಸ್ಕೂಲ್ ಹುಡುಗನೊಬ್ಬ ಕಿಸೆಯಲ್ಲಿ ಗರ್ಭ ನಿರೋಧಕ ಮಾತ್ರೆ ಹಿಡಿದು ತಿರುಗುತ್ತಾನೆ ಎಂದರೆ ಅದು ಒಳ್ಳೆಯ ಸೂಚನೆ ಅಲ್ಲವೇ ಅಲ್ಲ!
Leave A Reply