ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
ಮಂಗಳೂರಿನಲ್ಲಿ ಸರಕಾರಿ ವೆನಲಾಕ್ ಆಸ್ಪತ್ರೆ ಇದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹೀಗೆ ಐದು ಜಿಲ್ಲೆಗಳ ಜನರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಸರಕಾರಿ ಆಸ್ಪತ್ರೆಯಾಗಿರುವುದರಿಂದ ಸಹಜವಾಗಿ ಬಹಳ ಹಿಂದಿನಿಂದ ಸ್ಥಳೀಯರಿಗೆ ಈ ಆಸ್ಪತ್ರೆ ಅಷ್ಟಕಷ್ಟೇ ಎನ್ನುವ ಭಾವನೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆ ಗಣನೀಯವಾಗಿ ಅಭಿವೃದ್ಧಿಯನ್ನು ಕಂಡಿದೆ. ಸ್ಮಾರ್ಟ್ ಸಿಟಿ ಫಂಡ್, ಎಂಆರ್ ಪಿಎಲ್, ಒಎನ್ ಜಿಸಿ, ಇನ್ಫೋಸಿಸ್ ಸಹಿತ ವಿವಿಧ ಕಂಪೆನಿಗಳ ಸಾಮಾಜಿಕ ಬದ್ಧತಾ ನಿಧಿಯಿಂದ ವೆನಲಾಕ್ ಎಲ್ಲಾ ರೀತಿಯಲ್ಲಿಯೂ ಏಳಿಗೆಯನ್ನು ಕಂಡಿದೆ. ಡಯಾಲಿಸಿಸ್, ಟಿಬಿ, ಎಲುಬು ಚಿಕಿತ್ಸೆ, ಮಕ್ಕಳ ವಾರ್ಡ್, ಕಣ್ಣು, ಚರ್ಮ ರೋಗ ಸಹಿತ ಬಹುತೇಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡುವಂತಹ ವ್ಯವಸ್ಥೆ ಇದೆ. ಯಾವುದಾದರೂ ಚಿಕಿತ್ಸಾ ಯಂತ್ರ ಹಾಳಾದರೆ ರಿಪೇರಿಗೆ 5-10 ದಿನ ಹಿಡಿಯುತ್ತೆ ಎನ್ನುವುದನ್ನು ಬಿಟ್ಟರೆ ಅಂತಹ ಸಮಸ್ಯೆ ಏನಿಲ್ಲ. ಅದೊಂದನ್ನು ವೆನಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಥವಾ ಜಿಲ್ಲಾ ವೈದ್ಯಾಧಿಕಾರಿಗಳು ನೋಡಿಕೊಂಡರೆ ಉಳಿದದ್ದು ಸರಾಗ. ಇಂತಹ ವೆನಲಾಕ್ ಆಸ್ಪತ್ರೆಯಲ್ಲಿ ಎಲ್ಲವೂ ಇದ್ದರೂ ಒಂದರ ಕೊರತೆ ಎದ್ದು ಕಾಣುತ್ತದೆ. ಅದು ಕ್ಯಾನ್ಸರ್ ಚಿಕಿತ್ಸಾ ಘಟಕ.
ಯಾವುದಾದರೂ ಆಸ್ಪತ್ರೆ ಎಂದ ಮೇಲೆ ಅಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಬೇಕೆ ಬೇಕು. ಯಾಕೆಂದರೆ ಅದು ಜನಸಾಮಾನ್ಯರಿಗೆ ಈಗಿನ ದಿನಗಳಲ್ಲಿ ಅತೀ ಅಗತ್ಯವಾಗಿ ಬೇಕಾಗಿರುವ ಚಿಕಿತ್ಸೆ. ಈಗ ಕೇಂದ್ರ ಸರಕಾರ ಆಯುಷ್ಮಾನ್ ಯೋಜನೆ ಜಾರಿಗೆ ತಂದ ಬಳಿಕ ಜನಸಾಮಾನ್ಯರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುವ ಅವಕಾಶ ಅದರಲ್ಲಿ ಇದ್ದೇ ಇದೆ. ಆದರೆ ವೆನಲಾಕ್ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಇಲ್ಲದೇ ಇರುವುದರಿಂದ ಅಂತವರಿಗೆ ಪತ್ರ ಕೊಟ್ಟು ಅವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಆ ಚಿಕಿತ್ಸೆ, ಈ ಚಿಕಿತ್ಸೆ, ಅದು ಇದು ಎಂದು ಖಾಸಗಿ ಆಸ್ಪತ್ರೆಯವರು ಸಿಕ್ಕಿದ್ದೆ ಲಾಭ ಎಂದು ಕೊಯ್ಯಲು ಶುರು ಮಾಡುತ್ತಾರೆ. ಇಷ್ಟುದ್ದ ಬಿಲ್ ತಯಾರಿಸಿ ಸರಕಾರದಿಂದ ಹಣವನ್ನು ಪೀಕಿಸಲು ಅವರಿಗೆ ಇದೊಂದು ರೀತಿಯಲ್ಲಿ ಸಮೃದ್ಧವಾದ ಹುಲ್ಲುಗಾವಲು.
ನಿಮಗೆ ಗೊತ್ತಿರುವ ಹಾಗೆ ಯಾವುದೇ ರೋಗಿ ಆಯುಷ್ಮಾನ್ ಯೋಜನೆಯ ಕಾರ್ಡ್ ಮಾಡಿಸಿದ್ದರೆ ಆತ ಚಿಕಿತ್ಸೆಗೆ ಮೊದಲು ಸರಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಆ ನಿಗದಿತ ರೋಗ ಅಥವಾ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಅದಕ್ಕೆ ಅಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಆಗ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡುವ ಶಿಫಾರಸ್ಸು ಪತ್ರವನ್ನು ಹಿಡಿದು ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅದು ಬಿಟ್ಟು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಆಯುಷ್ಮಾನ್ ಕಾರ್ಡ್ ತೋರಿಸಿದರೆ ಅಲ್ಲಿ ಬಿಲ್ ಮನ್ನಾ ಆಗುವುದಿಲ್ಲ. ಈಗ ವೆನಲಾಕ್ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಅವಕಾಶ ಇದೆ. ಶಸ್ತ್ರಚಿಕಿತ್ಸೆಗೂ ಸಮರ್ಥ ವೈದ್ಯರಿದ್ದಾರೆ. ಹಾಗಿರುವಾಗ ಅಲ್ಲಿಯೇ ಚಿಕಿತ್ಸೆಗೆ ಹೋಗಬೇಕು. ಅದು ಬಿಟ್ಟು ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿಸಿಕೊಂಡರೆ ಬಿಲ್ ನಾವೇ ಕೊಡಬೇಕು. ಆದರೆ ಕ್ಯಾನ್ಸರ್ ಗೆ ವೆನಲಾಕ್ ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಇಲ್ಲ. ಆದ್ದರಿಂದ ನನ್ನ ಮನವಿ ಏನೆಂದರೆ ಮುಂದಿನ ಚಳಿಗಾಲ ಅಧಿವೇಶನದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ, ಸರಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಬೇಕು. ಮುಖ್ಯಮಂತ್ರಿಗಳು ಈ ಕುರಿತು ಗಂಭೀರವಾಗಿ ಯೋಚಿಸಿ, ಆರೋಗ್ಯ ಸಚಿವರು ತಕ್ಷಣ ವೆನಲಾಕ್ ಆಸ್ಪತ್ರೆಗೆ ಕ್ಯಾನ್ಸರ್ ಘಟಕವನ್ನು ಮಂಜೂರು ಮಾಡಬೇಕು. ಈ ವಿಷಯ ಅತ್ಯಗತ್ಯವಾಗಿ ಬೇಕಾಗಿದ್ದು, ಶಾಸಕರು ಧ್ವನಿ ಎತ್ತಿದ ಮರುವಾರವೇ ಆಗುತ್ತದೆ ಎನ್ನುವ ಭ್ರಮೆ ನಮಗಿಲ್ಲ. ಆದರೆ ಒಂದು ಪ್ರಕ್ರಿಯೆ ಶುರುವಾಗುವುದು ಖಂಡಿತ. ಇನ್ನು ಕ್ಯಾನ್ಸರ್ ಘಟಕ ಆರಂಭವಾಗುವ ತನಕ ಕಿಮಿಯೋಥೆರಪಿ ಚಿಕಿತ್ಸೆಗೆ ಆದರೂ ಚಾಲನೆ ನೀಡಬೇಕು. ಅದಕ್ಕೊಂದು ಮಿಶಿನ್ ಮತ್ತು ಔಷಧ ಇದ್ದರೆ ಧಾರಾಳವಾಗಿ ಸಾಕು. ಇದರಿಂದ ಏನಾಗುತ್ತದೆ ಎಂದರೆ ಖಾಸಗಿ ಆಸ್ಪತ್ರೆಗಳ ಲೂಟಿ ಕಡಿಮೆಯಾಗುತ್ತದೆ. ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೂ ಅನುಕೂಲವಾಗುತ್ತದೆ. ಅಂತಹ ಒಂದು ಮಾದರಿ ಕೆಲಸ ಶೀಘ್ರ ಆಗಲಿ ಎಂದು ನಿರೀಕ್ಷೆ!
Leave A Reply