ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
2002ರಲ್ಲಿ ಗುಜರಾತ್ ರಾಜ್ಯವನ್ನು ದು:ಸ್ವಪ್ನದಂತೆ ಕಾಡಿದ್ದ ಗೋಧ್ರಾ ಹತ್ಯಾಕಾಂಡದ ಬಗ್ಗೆ ಎರಡು ದಶಕಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಕೂಡ ಬಂದಿದೆ. ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ಕೂಡ ಸಿಕ್ಕಿದೆ. ಇಷ್ಟಾದ ನಂತರ ಈಗ ಬಿಬಿಸಿ ಎನ್ನುವ ಅಂತರಾಷ್ಟ್ರೀಯ ವಾಹಿನಿ ಒಂದು ಡಾಕ್ಯುಮೆಂಟರಿ ಕೂಡ ಮಾಡಿದೆ. ಅದರಲ್ಲಿ ವಾಸ್ತವಕ್ಕಿಂತ ವಿಭಿನ್ನವಾಗಿ ಸುಳ್ಳುಗಳನ್ನು ಜೋಡಿಸಿ ಮೋದಿಯವರ ವಿರುದ್ಧ ಕಟ್ಟುಕಥೆಗಳನ್ನು ಹೇಳಿರುವುದರಿಂದ ಅದನ್ನು ಕೇಂದ್ರ ಸರಕಾರ ನಿಷೇಧ ಮಾಡಿದೆ. ಯಾಕೆಂದರೆ ಒಂದು ಪ್ರಕರಣ ಎಲ್ಲಿಂದ ಶುರುವಾಯಿತು, ಯಾಕೆ ಶುರುವಾಯಿತು, ಯಾರು ಶುರು ಮಾಡಿದರು ಎಲ್ಲವೂ ಮುಖ್ಯ. ಅಯೋಧ್ಯೆಯಲ್ಲಿ ಕರಸೇವೆಯನ್ನು ಮುಗಿಸಿ ಗುಜರಾತಿಗೆ ಮರಳುತ್ತಿದ್ದ ಕರಸೇವಕರೇ ಇದ್ದ ರೈಲು ಬೋಗಿಗಳಿಗೆ ಬೆಂಕಿ ಕೊಟ್ಟು 59 ಜನರನ್ನು ಸುಟ್ಟು ಮತಾಂಧರು ಹತ್ಯೆ ಮಾಡಿದ್ದರು. ಆವತ್ತು ಏನಾಯಿತು ಎನ್ನುವುದನ್ನು ಇಡೀ ಪ್ರಪಂಚ ನೋಡಿದೆ. ಆದ್ದರಿಂದ ಮತ್ತೆ ಇಲ್ಲಿ ನಾನು ಅದನ್ನು ಬರೆಯಲು ಹೋಗುವುದಿಲ್ಲ. ಆದರೆ ಒಂದು ವಾಹಿನಿ ಎಂದ ಮೇಲೆ ಅದು ನೈಜತೆಯನ್ನು ಪ್ರಚಾರ ಮಾಡಬೇಕು ಎಂದು ಸಮಾಜ ಬಯಸುತ್ತದೆ. ಆದರೆ ಎಡಪಂಥಿಯ ಮನಸ್ಥಿತಿಯ ಬಿಬಿಸಿ ಯಾವತ್ತೂ ಕೂಡ ಭಾರತದ ವಿರುದ್ಧ ದ್ವೇಷ ಸಾಧನೆಯನ್ನೇ ಮಾಡಿಕೊಂಡು ಬಂದಿದೆ. ಆದ್ದರಿಂದ ಅದು ಗೋಧ್ರಾ ವಿಷಯದಲ್ಲಿ ಅಲ್ಪಸಂಖ್ಯಾತರ ಪರ ಮತ್ತು ಎಡಪಂಥಿಯರಿಗೆ ಹೇಗೆ ಬೇಕೋ ಹಾಗೆ ವಿಷಯವನ್ನು ಪಸರಿಸುತ್ತದೆ ಎನ್ನುವುದು ಅವರು ಸಿದ್ಧಪಡಿಸಿಕೊಂಡಿರುವ ಡಾಕ್ಯುಮೆಂಟರಿಯಿಂದ ಗೊತ್ತಾಗುತ್ತದೆ.
ಆ ಡಾಕ್ಯುಮೆಂಟರಿಯನ್ನು ತೋರಿಸಲು ಕಾಂಗ್ರೆಸ್ ಮತ್ತು ಎಡಪಂಥಿಯರು ತುದಿಗಾಲಲ್ಲಿ ನಿಂತಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಅಷ್ಟೊತ್ತಿಗಾಗಲೇ ಮೋದಿಯವರ ವಿರುದ್ಧ ಜನರಲ್ಲಿ ಒಂದು ಅಸಹ್ಯಕರ ವಾತಾವರಣ ನಿರ್ಮಾಣವಾಗಲಿ ಎನ್ನುವುದು ಅವರ ಅಪೇಕ್ಷೆ. ಈಗಾಗಲೇ ಮುಸ್ಲಿಂ ಮತಗಳು ಕಾಂಗ್ರೆಸ್ಸಿನಿಂದ ದೂರ ಸರಿಯುತ್ತಿವೆ. ಮುಸ್ಲಿಮರ ವಿಪರೀತ ಓಲೈಕೆ ಮಾಡಿದ ಕಾರಣ ಹಿಂದೂ ಮತಗಳು ಕೂಡ ಕಾಂಗ್ರೆಸ್ಸಿನಿಂದ ಕೈಬಿಟ್ಟು ಹೋಗಿವೆ. ಆದ್ದರಿಂದ ಮುಸ್ಲಿಮರಲ್ಲಿ ಸಣ್ಣ ಸಣ್ಣ ಸಮುದಾಯವನ್ನು ಕೂಡ ಸೆಳೆಯಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಾ ಬರುತ್ತಿದೆ. ಹೀಗಿರುವಾಗ ಈ ಗುಜರಾತ್ ಕಾಂಡವನ್ನು ಹಿಡಿದು ಮತ್ತೆ ಮುಸ್ಲಿಂ ಮತದಾರರಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸುವುದು ಕಾಂಗ್ರೆಸ್ಸಿನ ಅಂತಿಮ ಗುರಿ.
ಆವತ್ತು ಏನಾಯಿತು ಎನ್ನುವುದನ್ನು ಗುಜರಾತಿನ ಜನ ಅರಿತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ರಾಜಧರ್ಮವನ್ನು ಪಾಲಿಸಬೇಕು ಎಂದು ಕಿವಿ ಮಾತು ಹೇಳಿದ್ದರು. ಅದರಂತೆ ಎರಡೂ ಸಮುದಾಯದ ಅಮಾಯಕರಿಗೂ ಅನ್ಯಾಯವಾಗದಂತೆ ಮೋದಿಯವರು ಗುಜರಾತನ್ನು ನಡೆಸಿಕೊಂಡು ಬಂದಿದ್ದರು. ಕರಸೇವೆಯಿಂದ ಬಂದು ಊರಿನಲ್ಲಿ ಮತಾಂಧರು ಹಚ್ಚಿದ ಬೆಂಕಿಯಲ್ಲಿ ಹುತಾತ್ಮರಾದ 59 ಮಂದಿಯ ಪ್ರಾಣಕ್ಕೆ ನ್ಯಾಯವನ್ನು ಒದಗಿಸಿದ್ದರು. ಇದೆಲ್ಲವನ್ನು ಇತಿಹಾಸದ ಅಧ್ಯಾಯದಲ್ಲಿ ದಾಖಲಾಗಿದೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವುದು ಈ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ಇಂದಿರಾಗಾಂಧಿ ಸಿಖ್ ಅಂಗರಕ್ಷಕರಿಂದ ಹತ್ಯೆಗೊಳಗಾದ ನಂತರ ದೇಶದಲ್ಲಿ ಸಿಖ್ ರ ಪರಿಸ್ಥಿತಿ ಹೇಗಿತ್ತು. ಕಾಂಗ್ರೆಸ್ಸಿಗರು ಅವರನ್ನು ಹೇಗೆ ನಡೆಸಿಕೊಂಡರು. ಸಾವಿರಾರು ಸಿಖ್ ಜನರ ನರಮೇಧ ಹೇಗೆ ನಡೆಯಿತು. ಆಲದ ಮರ ಉರುಳಿ ಬಿದ್ದಾಗ ಅದರ ಕೆಳಗಿರುವ ಸಣ್ಣಪುಟ್ಟ ಮರಗಿಡಗಳಿಗೆ ಏನಾಗುತ್ತದೆ ಎಂದು ರಾಜೀವ್ ಗಾಂಧಿ ಯಾಕೆ ಹೇಳಿದ್ರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಏನೇನೋ ಊಹೆ ಮಾಡಿ ಏಕಪಕ್ಷೀಯ ಅಧ್ಯಾಯಗಳನ್ನು ತೋರಿಸುವುದರಿಂದ ಬಿಬಿಸಿ ಸಾಧಿಸುವುದಾದರೂ ಏನು? ಈಗ ಈ ವಿಡಿಯೋ ಮಾಡಿ ಜನರ ಮುಂದೆ ಇಡುವ ಅನಿವಾರ್ಯತೆ ಏನು? ಆ ಘಟನೆಗಳ ಬಳಿಕದಿಂದ ಇಂದಿಗೂ ಅಲ್ಲಿನ ಜನ ನಿರಂತರವಾಗಿ ಮೋದಿಯವರನ್ನೇ ಬೆಂಬಲಿಸುತ್ತಾ ಬರುತ್ತಿದ್ದಾರೆ. ಇದನ್ನೆಲ್ಲ ಸಹಿಸದ ದೇಶದ್ರೋಹಿಗಳೊಂದಿಗೆ ಇಲ್ಲಿನ ವಿಘ್ನ ಸಂತೋಷಿಗಳು ಸೇರಿ ಈ ನಿಷೇಧಿತ ಡಾಕ್ಯುಮೆಂಟರಿಯನ್ನು ಅಲ್ಲಲ್ಲಿ ಕದ್ದು ಮುಚ್ಚಿ ತೋರಿಸುವ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲಾ ವಿವಾದಗಳ ನಡುವೆ ಒಬ್ಬ ವ್ಯಕ್ತಿ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಅವರ ಹೆಸರು ಅನಿಲ್ ಆಂಟೋನಿ. ಇವರು ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವರಾದ ಎ.ಕೆ.ಆಂಟೋನಿಯವರ ಮಗ. ತಾವು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೂ ಈ ದೇಶದ ಪ್ರಧಾನಿಯ ಇಮೇಜನ್ನು ಹಾಳು ಮಾಡುವ ಕಟ್ಟುಕಥೆಯನ್ನು ತೋರಿಸುವ ಡಾಕ್ಯುಮೆಂಟರಿಯನ್ನು ವಿರೋಧಿಸುತ್ತೇನೆ. ಈ ಹೇಳಿಕೆಗಾಗಿ ತಮಗೆ ಪಕ್ಷದಿಂದಲೇ ಸಾಕಷ್ಟು ಬೆದರಿಕೆಯ ಕರೆಗಳು ಬರುತ್ತಿವೆ. ಅದನ್ನು ವಿರೋಧಿಸಿ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಕೊಡುತ್ತೇನೆ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ. ಅವರ ಧೈರ್ಯವನ್ನು ದೇಶಭಕ್ತರು ಮೆಚ್ಚಲೇಬೇಕು!
Leave A Reply