ಹಿಂದೂಸ್ತಾನವನ್ನು ಮತ್ತೆ ಹಿಂದೂ ರಾಷ್ಟ್ರ ಮಾಡುವುದು ಹೇಗೆ?
ಭಾಗೇಶ್ವರ ಧಾಮಿನ ಮಠಾಧೀಶರಾದ ಧೀರೇನ್ ಕೃಷ್ಣ ಶಾಸ್ತ್ರೀಜಿಯವರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಇದಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕೂಡ ಕೈಜೋಡಿಸಿದ್ದಾರೆ. ಇದಕ್ಕೆ ಸಂಸದ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎನ್ನುವ ಸಂತರ, ಕೇಸರಿ ಪಡೆಗಳ ಕಟ್ಟರ್ ಭಾಷಣಕಾರರ ಘೋಷಣೆ ಇಂದು ನಿನ್ನೆಯದ್ದಲ್ಲ. ಹೀಗೆ ಅವರು ಹೇಳಿದ ಕೂಡಲೇ ಮತಾಂಧರು ಅದಕ್ಕೆ ತಿರುಗಿ ಬೀಳುವುದು ಕೂಡ ಹೊಸತಲ್ಲ. ಸರಿಯಾಗಿ ನೋಡಿದರೆ ಯೋಗಿ ಆದಿತ್ಯನಾಥ್ ಹೇಳುವ ಪ್ರಕಾರ ಇದನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅವಶ್ಯಕತೆ ಏನಿದೆ? ಇದು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಎನ್ನುವ ಅರ್ಥದ ಮಾತುಗಳನ್ನು ಸಂದರ್ಶನವೊಂದರಲ್ಲಿ ಹೇಳಿದೆ. ತಾಂತ್ರಿಕವಾಗಿ ಇದು ಸರಿ ಕೂಡ ಹೌದು. 1947 ರಲ್ಲಿ ಭರತಖಂಡ ವಿಭಜನೆಯಾದಾಗ ಅದು ಆದದ್ದೇ ಧರ್ಮದ ತಳಹದಿಯ ಮೇಲೆ. ಮೊಹಮ್ಮದ್ ಆಲಿ ಜಿನ್ನಾ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎನ್ನುವ ಹಟದ ಕಾರಣದಿಂದ ಪಾಕಿಸ್ತಾನ ಹುಟ್ಟಿಕೊಂಡಿತ್ತು. ನಾವಿರುವ ಈ ದೇಶವನ್ನು ಹಿಂದೂಸ್ತಾನವೆಂದು ಕರೆಯಲಾಯಿತು. ಈಗಲೂ ಮೆಕ್ಕಾ, ಮದೀನಕ್ಕೆ ಹೋಗುವ ಭಾರತೀಯ ಮುಸ್ಲಿಮರನ್ನು ಹಿಂದೂಸ್ತಾನದಿಂದ ಬಂದವರೆಂದೇ ಗುರುತಿಸಲಾಗುತ್ತದೆ. ಅದರ ಅರ್ಥ ಹಿಂದೂಸ್ತಾನದಿಂದ ಅಲ್ಲಿಗೆ ಹೋಗುವ ಮುಸಲ್ಮಾನರನ್ನು ಬೇರೆಯದ್ದೇ ದೃಷ್ಟಿಯಿಂದ ನೋಡಲಾಗುತ್ತದೆ. ಹಾಗಂತ ಭಾರತದಲ್ಲಿ ವಾಸಿಸುವ ಮುಸಲ್ಮಾನರು ಈ ದೇಶವನ್ನು ಅಷ್ಟು ಸುಲಭವಾಗಿ ಬಿಟ್ಟು ಪಾಕಿಸ್ತಾನಕ್ಕೆ ಹೋಗಲು ಸುತಾರಾಂ ತಯಾರಿಲ್ಲ. ಯಾಕೆಂದರೆ ಧರ್ಮದ ಆಧಾರ ಮೇಲೆ ಜನ್ಮತಾಳಿದ ದೇಶದ ಪರಿಸ್ಥಿತಿ ಹೇಗೆ ಇದೆ ಎಂದು ಪ್ರಪಂಚವೇ ನೋಡುತ್ತಾ ಇದೆ. ಆದ್ದರಿಂದ ಭಾರತವನ್ನು ಹೊಸದಾಗಿ ಹಿಂದೂರಾಷ್ಟ್ರ ಮಾಡುವ ಅಗತ್ಯ ಇಲ್ಲ ಎನ್ನುವುದು ಎಲ್ಲಾ ಸನಾತನಿಗಳ ಅಭಿಪ್ರಾಯ. ಹಾಗಾದರೆ ಭಾರತದ ಸಂವಿಧಾನವನ್ನು ಬದಲಾಯಿಸಲು ಇವರು ಹೋಗುತ್ತಾರಾ ಎಂದು ಓವೈಸಿ ಪ್ರಶ್ನೆ ಹಾಕಿದ್ದಾರೆ.
ಸಂವಿಧಾನದ ಬಗ್ಗೆ ಈ ದೇಶದ ಪ್ರತಿಯೊಬ್ಬರಿಗೂ ಗೌರವ ಇರಲೇಬೇಕಾಗಿರುವುದು ಅತ್ಯಗತ್ಯ. ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸಿ ಹಿಂದೂ ರಾಷ್ಟ್ರ ಆಗಬೇಕಾಗಿಲ್ಲ. ಯಾಕೆಂದರೆ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಹಿಂದೂಯೇತರರನ್ನು ಮತಾಂತರ ಮಾಡುವ ಯಾವ ಉದ್ದೇಶವೂ ಇಲ್ಲ. ಎಲ್ಲರೂ ಅವರವರ ಮತವನ್ನು ಆರಾಧಿಸುವ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಮುಂದೆಯೂ ಉಳಿಸಿಕೊಳ್ಳಲಿದ್ದಾರೆ. ಹಾಗೇ ನೋಡಿದರೆ ಈ ದೇಶದಲ್ಲಿ ಒಂದು ಬಲಿಷ್ಟ ಸಂವಿಧಾನ ಇರುವಾಗ ಮುಸ್ಲಿಮರು ಶರಿಯತ್ ಕಾನೂನು, ಮುಸ್ಲಿಂ ಲಾ ಎಂದು ಪ್ರತ್ಯೇಕ ಕಾನೂನನ್ನು ಪಾಲಿಸುವ ಅಗತ್ಯ ಇರಲಿಲ್ಲ. ಆದರೂ ಅವರಿಗೆ ಆ ಅನುಕೂಲ ಮಾಡಿಕೊಡಲಾಗಿದೆ. ಇನ್ನು ವಕ್ಫ್ ಬೋರ್ಡ್ ಇದಕ್ಕೂ ಅನುಮತಿ ನೀಡಲಾಗಿದೆ. ಎಲ್ಲಿಯೂ ಸನಾತನ ಬೋರ್ಡ್ ಎಂದು ಮಾಡಲಾಗಿಲ್ಲ. ಹಿಂದೂ ರಾಷ್ಟ್ರದಲ್ಲಿ ಒಂದು ವಕ್ಫ್ ಬೋರ್ಡ್ ಇರುವುದು ಮತ್ತು ಅದು ಈ ದೇಶದ 8 ಲಕ್ಷ ಎಕರೆಗಿಂತಲೂ ಅಧಿಕ ಭೂ ಪ್ರದೇಶವನ್ನು ತನ್ನ ಕಬ್ಜೆಯಲ್ಲಿ ಇಟ್ಟುಕೊಂಡು ಮುಸ್ಲಿಮರ ಏಳಿಗೆಗೆ ಶ್ರಮಿಸುವುದು ಈ ದೇಶದಲ್ಲಿ ಮಾತ್ರ ಸಾಧ್ಯ. ಪಾಕಿಸ್ತಾನದಲ್ಲಿ ಬೆರಳೆಣಿಕೆಯ ಶೇಕಡಾ ಹಿಂದೂಗಳು ಒಂದು ಅಂಗುಲ ಭೂಮಿ ಇಟ್ಟುಕೊಂಡರೂ ಅವರನ್ನು ಓಡಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಮತಾಂಧರ ಎದುರು ಈ ದೇಶದ ಲಕ್ಷಾಂತರ ಎಕರೆ ಭೂಮಿಯನ್ನು ಮುಸ್ಲಿಮರ ಏಳಿಗೆಗೆ ನೀಡುವುದು ಎಂದರೆ ಅದಕ್ಕಿಂತ ದೊಡ್ಡ ಸಹಿಷ್ಣುತೆ ಬೇಕಾ? ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಲಾಗಿದೆ. ಅಲ್ಲಿನ ಆಡಳಿತ ಕಣ್ಣುಮುಚ್ಚಿ ಕುಳಿತಿದೆ. ಅದಕ್ಕೆ ಸಮ್ಮತಿಯನ್ನು ನೀಡಿ ಮೂಲಭೂತವಾದಿಗಳಿಗೆ ಪ್ರೇರಣೆ ನೀಡಿದೆ. ಅದೇ ಭಾರತದಲ್ಲಿ ನಮ್ಮ ದೇವರ ಜನ್ಮಸ್ಥಳದಲ್ಲಿ ಭವ್ಯ ಮಂದಿರ ಕಟ್ಟಲು ನಾವು ಶತಮಾನಗಳಿಂದ ಕಾನೂನು ಹೋರಾಟ ಮಾಡಬೇಕಾಯಿತು. ಇಲ್ಲಿ ಒಂದು ಮಸೀದಿ ರಸ್ತೆಯ ಬದಿಯಲ್ಲಿ ಇದ್ದಾಗ ರಸ್ತೆ ಅಗಲಕ್ಕೆ ಅದನ್ನು ಕೆಡವಲು ಹೋದರೆ ಅದೇ ವಿವಾದವಾಗುತ್ತದೆ. ಅದೇ ಕೆಲವು ರಾಜ್ಯಗಳಲ್ಲಿ ಚೌತಿಯ ಸಂದರ್ಭದಲ್ಲಿ ಗಣಪತಿ ದೇವರ ಶೋಭಾಯಾತ್ರೆ ಒಂದು ಮಸೀದಿ ಇರುವ ರಸ್ತೆಯಲ್ಲಿ ಹೋಗಬೇಕಾದರೆ ಮಸೀದಿಯ ಮೌಲ್ವಿ ಅದಕ್ಕೆ ಅನುಮತಿ ನೀಡಬೇಕು ಎನ್ನುವ ಪರಿಸ್ಥಿತಿ ಇದೆ. ಆದರೆ ಇದನ್ನು ಹಿಂದೂ ರಾಷ್ಟ್ರ ಎನ್ನಲು ಹಿಂಜರಿಯುತ್ತೇವೆ. ಇಲ್ಲಿನ ಕಾನೂನುಗಳು ತಮಗೆ ಅನ್ವಯಿಸಲ್ಲಾ ಎಂದು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಮಾಡಲು ಬಿಟ್ಟಿದ್ದೇವೆ. ಮಾತೆತ್ತಿದರೆ ಅಂಬೇಡ್ಕರ್ ಎನ್ನುವ ಓವೈಸಿಗಳು ತಮಗೆ ಸಮಸ್ಯೆಯಾದರೆ ಮುಸ್ಲಿಂ ಕಾನೂನಿನ ಮೊರೆ ಹೋಗುತ್ತಾರೆ. ಅವರ ಮಧ್ಯದಲ್ಲಿ ಈ ದೇಶವನ್ನು 2047 ರಲ್ಲಿ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿ ಕೆಲವರು ಕುಕ್ಕರ್ ಹಿಡಿದು ಹೊರಡುತ್ತಾರೆ. ಅವರನ್ನು ನಾವು ಅಮಾಯಕ ಎನ್ನುತ್ತೇವೆ. ಯಾಕೆಂದರೆ ಇದು ನನ್ನ ಭಾರತ!
Leave A Reply