ರೂಪಾ ಸಾಧಿಸಲು ಹೊರಟದ್ದು ಯಾರ ಸಿಂಧೂರವನ್ನು!!
ಕರ್ಮ ಯಾರನ್ನೂ ಬಿಡುವುದಿಲ್ಲ, ಅದು ಇವತ್ತಲ್ಲ ನಾಳೆ ಪ್ರತಿಫಲ ತೆಗೆದುಕೊಳ್ಳುತ್ತದೆ ಎನ್ನುವ ಅರ್ಥದ ಮಾತುಗಳನ್ನು ಡಿ.ಕೆ. ರವಿಯವರ ಪತ್ನಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ. ಡಿಕೆ ರವಿ ಎಂಬ ಐಎಎಸ್ ಅಧಿಕಾರಿಯ ಸಾವಿನ ವಿಷಯ ಈ ರಾಜ್ಯಕ್ಕೆ ಗೊತ್ತಿಲ್ಲ ಎಂದಲ್ಲ. ಅವರ ಆತ್ಮಹತ್ಯೆಯ ಹಿಂದೆ ಏನೇನೋ ಕಾರಣಗಳಿದ್ದವು. ಈಗ ರೋಹಿಣಿ ಸಿಂಧೂರಿಯವರ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ನೋಡುತ್ತಿದ್ದಂತೆ ರವಿ ಪತ್ನಿ ಕುಸುಮಾ ಈ ಮಾತುಗಳನ್ನು ಬರೆದಿದ್ದಾರೆ. ಅಷ್ಟಕ್ಕೂ ರೋಹಿಣಿ ಸಿಂಧೂರಿಯವರು ರವಿ ಸಾವಿನಿಂದ ಹಿಡದು ಇವತ್ತಿನವರೆಗೆ ಒಂದಲ್ಲ ಒಂದು ಚರ್ಚೆಯಲ್ಲಿ ಇದ್ದಾರೆ. ಹೆಣ್ಣುಮಕ್ಕಳು ಕೂಡ ಇವರು ಚೆಂದ ಇದ್ದಾರಲ್ಲ ಎಂದು ಹೇಳುವಷ್ಟು ಸೌಂದರ್ಯ, ಒಂದಿಷ್ಟು ಅಹಂ, ಒಂದಿಷ್ಟು ಪ್ರಚಾರದ ತೆವಲು, ಒಂದಿಷ್ಟು ದೊಡ್ಡಸ್ತಿಕೆ ಮತ್ತು ಒಂದಿಷ್ಟು ಗ್ರಹಚಾರ ಒಟ್ಟು ಸೇರಿದರೆ ಅದು ರೋಹಿಣಿ ಸಿಂಧೂರಿ. ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ತಮಗೆ ಒಂದು ಸಭೆಗೆ ಔಪಚಾರಿಕವಾಗಿ ಕರೆದಿಲ್ಲ ಎಂದು ಹೇಳಿ ಸಭೆಗೆ ಬಂದು ಎದುರಿಗೆ ಕುಳಿತು ಅಲ್ಲಿ ವಿವಾದ ಉಂಟು ಮಾಡಿ ಎದ್ದು ಹೋಗುವುದರಿಂದ ಹಿಡಿದು ಮೈಸೂರಿನ ಶಾಸಕರೊಂದಿಗೆ, ಸಂಸದರೊಂದಿಗೆ ತಿಕ್ಕಾಟ ನಡೆಸಿ ಕೊನೆಗೆ ಡಿಸಿ ಬಂಗ್ಲೆಯ ಕೆಲವು ವಸ್ತುಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ತನಕ ರೋಹಿಣಿ ಟಿವಿಯಲ್ಲಿ ಮಿಂಚದ ದಿನಗಳೇ ಕಡಿಮೆ. ಅಂತಹ ರೋಹಿಣಿಯವರ ಕೆಲವು ಫೋಟೋಗಳನ್ನು ಬಹಿರಂಗಗೊಳಿಸಿ ಇದು ಸರಿನಾ ಎಂದು ಪ್ರಶ್ನಿಸುತ್ತಿರುವ ಇನ್ನೊರ್ವ ಮಹಿಳೆಯ ಹೆಸರು ರೂಪಾ. ಕೊರೊನಾ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಗೋಲ್ ಮಾಲ್ ಮಾಡುತ್ತಿವೆ ಎಂದು ಅಂತಹ ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ, ಜಯಲಲಿತಾ ಆಪ್ತೆ ಶಶಿಕಲಾಳಿಗೆ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್ ಸಿಗುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಸಮರ ಸಾರಿದ ಐಪಿಎಸ್ ಅಧಿಕಾರಿಯೇ ರೂಪಾ. ಲೇಡಿ ಸಿಂಗಂ ಎಂದರೆ ಹೇಗೆ ಇರಬಹುದು ಎಂದು ಕಲ್ಪನೆ ಮಾಡುವವರಿಗೆ ತಾನೇ ಉದಾಹರಣೆ ಎಂದು ತೋರಿಸುವ ಒಂದಿಷ್ಟು ಹಪಾಹಪಿ, ಜನ ಸಾಮಾನ್ಯರ ಪರ ಧ್ವನಿ ಎತ್ತಿ ತಾನು ಅವರ ಲೇಡಿ ರಾಬಿನ್ ಹುಡ್ ಎಂದು ತೋರಿಸುವ ಒಂದು ಚಾಕಚಕ್ಯತೆ, ಯಾರಿಗೂ ಡೋಂಟ್ ಕೇರ್ ಎಂದು ಮಾತಿನಲ್ಲಿ ತೋರಿಸುವ ಒಂದಿಷ್ಟು ದಿಟ್ಟತನ ಮತ್ತು ತಿರುಗಿ ನೋಡಬಲ್ಲಷ್ಟು ಸೌಂದರ್ಯ ಒಟ್ಟು ಸೇರಿದರೆ ಅದು ಡಿ ರೂಪಾ.
ಇಬ್ಬರಿಗೂ ಯಾರನ್ನಾದರೂ ಮೈಮೇಲೆ ಎಳೆದುಕೊಂಡು ವಿವಾದ ಸೃಷ್ಟಿಸುವ ನೈಪುಣ್ಯತೆ ಸಿದ್ಧಿಸಿದೆ. ಸದ್ಯ ರಾಜಕಾರಣಿಗಳನ್ನು, ತಮ್ಮದೇ ಇಲಾಖೆಯ ಅಧಿಕಾರಿಗಳನ್ನು ಚುಚ್ಚುತ್ತಿದ್ದವರು ಈಗ ಪರಸ್ಪರ ವಿರುದ್ಧ ಇಲಾಖೆಗಳಿಗೆ ಕೈ ಹಾಕಿರುವುದೇ ಜನರಿಗೆ ಆಶ್ಚರ್ಯ. ಸಿಂಧೂರಿ ಆಡಳಿತಾತ್ಮಕ ಸೇವೆಯಲ್ಲಿ ಇದ್ದರೆ ರೂಪಾ ಕಾನೂನು, ಸುವ್ಯವಸ್ಥೆಯ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ರೋಹಿಣಿ ತಮ್ಮ ಖಾಸಗಿ ಫೋಟೋಗಳನ್ನು ಕೆಲವು ಪುರುಷ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎಂದು ರೂಪಾ ಅವರು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವಿಜೃಂಭಿಸಿದ್ದಾರೆ. ಇದು ಸರಿನಾ ಎನ್ನುವುದು ಅವರ ಪ್ರಶ್ನೆ. ಹಾಗಾದರೆ ಆ ಫೋಟೋಗಳನ್ನು ಇವರು ಬಹಿರಂಗಗೊಳಿಸಿ ಇನ್ನೊಂದು ಹೆಣ್ಣಿನ ಚರಿತ್ರೆಯ ಬಗ್ಗೆ ಬಟಾಬಯಲು ಮಾಡುವುದು ಸರಿನಾ ಎನ್ನುವುದು ಇನ್ನೊಂದು ಪ್ರಶ್ನೆ. ರೋಹಿಣಿ ಯಾಕೆ ಹಾಗೆ ಮಾಡುತ್ತಿದ್ದರು ಎನ್ನುವುದು ಈಗ ತನಿಖೆಗೆ ಬರಬೇಕಾದ ವಿಷಯ. ಯಾಕೆಂದರೆ ಅವರು ಹಾಗೆ ಮಾಡಿರುವುದರಿಂದ ಯಾವುದಾದರೂ ಪುರುಷ ಅಧಿಕಾರಿ ತನ್ನ ಕರ್ತವ್ಯದಲ್ಲಿ ಲೋಪ ಮಾಡಿದ್ದರೆ ಆಗ ಮಾತ್ರ ಇದು ನೈತಿಕತೆಯ ಎಲ್ಲೆಯನ್ನು ಮೀರುತ್ತದೆ. ಇನ್ನು ಈ ಫೋಟೋಗಳಿಂದ ಆ ಪುರುಷ ಅಧಿಕಾರಿ ಮಾನಸಿಕ ಚಂಚಲನಾಗಿ ತನ್ನ ಜೀವಕ್ಕೆ ಅಪಾಯ ತಂದುಕೊಟ್ಟರೆ ಆಗ ಅದು ಆತ್ಮಹತ್ಯೆಗೆ ಪ್ರಚೋದನೆ ಆಗುತ್ತದೆ. ಆದರೆ ಅದನ್ನು ಸಾಬೀತುಪಡಿಸುವುದು ಕಷ್ಟ. ಅದರಲ್ಲಿಯೂ ನಮ್ಮ ಕಾನೂನಿನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಎನ್ನುವುದು ಸಾಬೀತಾಗುವುದು ತುಂಬಾ ಅಪರೂಪ. ಇಂತಹ ವಿಷಯದಲ್ಲಿ ಏನಿದ್ದರೂ ಆತ್ಮಸಾಕ್ಷಿಯೇ ಮಾನದಂಡ ಬಿಟ್ಟರೆ ಬೇರೆ ಏನೂ ಇಲ್ಲ. ಹಾಗಿರುವಾಗ ಒಂದು ಹೆಣ್ಣಿಗೆ ತನ್ನ ಸೌಂದರ್ಯ ಎಷ್ಟು ಘನತೆ ತಂದುಕೊಡುತ್ತದೋ ಅದನ್ನು ದುರುಪಯೋಗ ಮಾಡಿದರೆ ಅದು ಇನ್ನೊಬ್ಬರ ಅಂತ್ಯಕ್ಕೂ ಕಾರಣವಾಗಬಹುದು ಮತ್ತು ಆ ಶಾಪ ಅವರನ್ನು ತಟ್ಟದೆ ಬಿಡುವುದಿಲ್ಲ ಎನ್ನುವುದು ನಿಜ. ಅದನ್ನೇ ರವಿ ಪತ್ನಿ ಟ್ವಿಟರ್ ನಲ್ಲಿ ಬರೆದಂತೆ ಕಾಣುತ್ತದೆ. ಅದೇನೆ ಇದ್ದರೂ ಇಬ್ಬರೂ ಅಧಿಕಾರಿಗಳ ಸೋಶಿಯಲ್ ಮೀಡಿಯಾ ವಾರ್ ಅವರ ವೃತ್ತಿ ಬದುಕಿಗೆ ಸಂಚಕಾರ ತಂದಿದೆ. ಈ ಮಧ್ಯೆ ರೂಪಾ ಪತಿ ಐಎಎಸ್ ಅಧಿಕಾರಿ ಮುನೀಶ್ ಮೌಡ್ಗಿಲ್ ಮಾಧ್ಯಮದವರೊಂದಿಗೆ ಈ ವಿಚಾರದಲ್ಲಿ ಸ್ಪಷ್ಟನೆ ಕೊಡಲು ಹೋಗಿ ಮಾತನಾಡಿದಕ್ಕೆ ಅವರನ್ನು ಬೇರೆ ಹುದ್ದೆಗೆ ವರ್ಗಾಯಿಸಲಾಗಿದೆ. ಸಿಂಧೂರಿ ಹಾಗೂ ರೂಪಾ ಅವರನ್ನು ಯಾವುದೇ ಹುದ್ದೆ ತೋರಿಸದೇ ಎತ್ತಂಗಡಿ ಮಾಡಲಾಗಿದೆ. ರೂಪಾ ಅವರಿಗೆ ತನಿಖೆ ಮಾಡಲೇಬೇಕಿದ್ದರೆ ಅವರ ಇಲಾಖೆಯಲ್ಲಿಯೇ ಅಂತ್ಯ ಕಾಣದ ಎಷ್ಟೋ ಪ್ರಕರಣಗಳಿದ್ದವು. ಕಣ್ಣು ಎದುರು ಬೇರೆ ಇಲಾಖೆಯ ಅಧಿಕಾರಿಣಿಯೊಬ್ಬಳ ಕೆಟ್ಟ ನಡವಳಿಕೆ ನೋಡಲು ಆಗದಿದ್ದರೆ ರಾಜ್ಯದ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ನೀಡಬಹುದಿತ್ತು. ಆದರೆ ಅವರು ಎತ್ತಿಕೊಂಡದ್ದು ಸೋಶಿಯಲ್ ಮೀಡಿಯಾವನ್ನು. ಸಾಮಾಜಿಕ ಜಾಲತಾಣಗಳು ನಮ್ಮ ಕೈಯಲ್ಲಿರುವ ಹೆಂಡ ಕುಡಿದ ಕೋತಿಗಳಂತೆ. ಅವು ಮರದಿಂದ ಮರಕ್ಕೆ ಹಾರಲು ಕಾಯುತ್ತಿರುತ್ತವೆ. ಬಳಸುವುದು ನಮ್ಮ ಬುದ್ಧಿಮತ್ತೆಗೆ ಬಿಟ್ಟ ವಿಚಾರ. ಐಎಎಸ್, ಐಪಿಎಸ್ ಗಳೇ ದಾರಿ ತಪ್ಪುತ್ತಾರಲ್ಲ ಎನ್ನುವುದು ದೌರ್ಬಾಗ್ಯ!
Leave A Reply