ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
ಮಂಗಳೂರು ಈಗ ಆ ಮೂಲೆಯಿಂದ ಈ ಮೂಲೆಯ ತನಕ ಸ್ವಚ್ಛವಾಗುತ್ತಿದೆ. ನೀಟಾಗಿ ಕಂಗೊಳಿಸುತ್ತಿದೆ. ಅದಕ್ಕೆ ಮುಖ್ಯ ಕಾರಣ ಫ್ಲೆಕ್ಸ್ ಗಳ ಹಾವಳಿ ನಿಂತಿರುವುದು. ಚುನಾವಣಾ ನೀತಿಸಂಹಿತೆ ಜಾರಿಯಾದ ನಂತರ ಪಾಲಿಕೆಯ ಕಮೀಷನರ್ ನಗರದ ಎಲ್ಲಾ ಫೆಕ್ಸ್ ಗಳನ್ನು ತೆಗೆಯಲು ಆದೇಶಿಸಿದ್ದರು. ಮರುದಿನವೇ ಮಂಗಳೂರು ಚೆಂದವಾಗಿದೆ. ಇದರ ಅರ್ಥ ಏನು? ಅರ್ಥ ಏನೆಂದರೆ ಅಧಿಕಾರಿಗಳಿಗೆ ಇಚ್ಚಾಶಕ್ತಿ ಬೇಕು. ಪಾಲಿಕೆ ಕಮೀಷನರ್ ಅವರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಅವರಿಗೆ ಆ ಅಧಿಕಾರ ಇದೆ. ಯಾಕೆಂದರೆ ಇಡೀ ರಾಜ್ಯದಲ್ಲಿ ಸರಕಾರ ಫ್ಲೆಕ್ಸ್ ನಿಷೇಧಿಸಿ ಆದೇಶ ಹೊರಡಿಸಿದೆ. ಆದ್ದರಿಂದ ಸರಕಾರವೇ ನಿಷೇಧಿಸಿದ ಒಂದು ವಸ್ತು ಬಳಕೆಯಲ್ಲಿದೆ ಎಂದರೆ ಅದು ಸರಕಾರದ ವಿರುದ್ಧ ನಮ್ಮ ಪಾಲಿಕೆ ಇದೆ ಎಂದೇ ಅಲ್ಲವೇ? ಈಗ ಚುನಾವಣೆ ಘೋಷಣೆಯಾದ ನಂತರ ತೆಗೆಸಲು ಗೊತ್ತಿದೆ ಎಂದರೆ ಹಿಂದೆಯೇ ತೆಗೆಸಬಹುದಿತ್ತಲ್ಲ. ಆವಾಗಲೂ ಈವಾಗಲೂ ಇರುವುದು ಅದೇ ಕಮೀಷನರ್ ಮತ್ತು ಸಿಬ್ಬಂದಿಗಳು.
ಪಾಲಿಕೆಯ ಎದುರು ಮಟನ್ ಅಂಗಡಿಯ ಒಂದು ಫ್ಲೆಕ್ಸ್ ಹಾಕಲಾಗಿದೆ. ಅದನ್ನು ಹಾಕಲು ಅನುಮತಿ ನೀಡಿದವರು ಯಾರು? ಪಾಲಿಕೆಯ ಕಂದಾಯ ವಿಭಾಗದವರಿಗೆ ಆ ಅಂಗಡಿಯವರು ಮಟನ್ ಏನಾದರೂ ಕೊಟ್ಟಿದ್ದಾರೆಯೇ? ಯುಗಾದಿಯ ಹಬ್ಬದ ಅಂಗವಾಗಿ ಆ ಅಂಗಡಿಯವರು ಹಾಕಿಸಿದ್ದಾರೆ. ಅದನ್ನು ತೆಗೆಸುವಷ್ಟು ಧಮ್ ಪಾಲಿಕೆಗೆ ಬೇಕಲ್ಲಾ? ಯಾವುದೇ ಒಂದು ನಿಯಮ ಪಾಲಿಕೆಯ ಕಣ್ಣೇದುರೇ ಸಾರಾಸಗಟಾಗಿ ಉಲ್ಲಂಘನೆಯಾಗುತ್ತಿದೆ ಎಂದರೆ ಅದನ್ನು ನೋಡಿಯೂ ಕಣ್ಮುಚ್ಚಿ ಕುಳಿತುಕೊಳ್ಳುವಷ್ಟು ಸಿನಿಕತನ ಪಾಲಿಕೆಗೆ ಇರಬಾರದು.
ಇವರಿಗೆ ಯಾಕೆ ಇಚ್ಚಾಶಕ್ತಿ ಇಲ್ಲ ಎಂದರೆ ಕಾಂಗ್ರೆಸ್ ಆಗಲಿ, ಭಾರತೀಯ ಜನತಾ ಪಾರ್ಟಿಯ ಮುಖಂಡರಾಗಲಿ ಯಾರೂ ಕೂಡ ಪಾಲಿಕೆಯ ಮೇಲೆ ಒತ್ತಡ ಹಾಕಿ ರಾಜ್ಯ ಸರಕಾರದ ಕಾನೂನನ್ನು ಪಾಲಿಸಿ ಎಂದು ಹೇಳಲ್ಲ. ಫ್ಲೆಕ್ಸ್ ಗಳನ್ನು ಹಾಕಲು ಬಿಡಬೇಡಿ ಎಂದು ಸೂಚಿಸಲ್ಲ. ಹಾಕಿದ ಫ್ಲೆಕ್ಸ್ ಗಳನ್ನು ತೆಗೆಸಲ್ಲ. ಯಾಕೆಂದರೆ ಫ್ಲೆಕ್ಸ್ ನವರಲ್ಲಿ ಮಾಜಿ ಶಾಸಕರ ಸಂಬಂಧಿಗಳು, ಹಾಲಿ ಶಾಸಕರ ಆಪ್ತರು ಎಲ್ಲಾ ಇದ್ದಾರೆ. ಹಾಗಿರುವಾಗ ತೆಗೆಸುವುದು ಸಾಧ್ಯವಾ? ಇನ್ನು ಕಾಂಗ್ರೆಸ್ಸಿನ ಭಾಗ್ಯಗಳ ಫ್ಲೆಕ್ಸ್, ಬಿಜೆಪಿಯವರ ಗುದ್ದಲಿಪೂಜೆಯ ಸ್ಥಳೀಯ ನಾಗರಿಕರ ಫ್ಲೆಕ್ಸ್ ಹೀಗೆ ಎರಡೂ ಕಡೆಯವರ ಫ್ಲೆಕ್ಸ್ ಗಳು ಬೀಳುವುದರಿಂದ ಯಾರೂ ವಿರೋಧಿಸುವುದಿಲ್ಲ. ಫ್ಲೆಕ್ಸ್ ನಿಷೇಧ ಇರುವಾಗಲೇ ಇವರುಗಳು ಕ್ಯಾರ್ ಮಾಡುವುದಿಲ್ಲ ಎಂದಾದರೆ ಬೇರೆ ಏನು ಬೇಕು? ಮಧ್ಯದಲ್ಲಿ ಬಟ್ಟೆಯ ಫ್ಲೆಕ್ಸ್ ಎನ್ನುವ ವಿಷಯ ಮುನ್ನಲೆಗೆ ಬಂತು. ಆದರೆ ಬಟ್ಟೆಯ ಫ್ಲೆಕ್ಸ್ ತುಂಬಾ ದುಬಾರಿಯಾಗುತ್ತದೆ ಎನ್ನುವ ಕಾರಣಕ್ಕೆ ಎಲ್ಲರೂ ನಿಷೇಧಿತ ವಸ್ತುಗಳಿಂದ ತಯಾರಿಸುವ ಫ್ಲೆಕ್ಸ್ ಗಳನ್ನೇ ಮಾಡಿಸುತ್ತಾರೆ. ನಿಯಮ ಪ್ರಕಾರ ಯಾವುದೇ ಕಚ್ಚಾ ವಸ್ತುಗಳಿಂದ ತಯಾರಿಸಿದ ಫ್ಲೆಕ್ಸ್ ಗಳು ನಿಷೇಧವೇ ಆಗಿದೆ. ಆದರೂ ನೀತಿ ಸಂಹಿತೆ ಜಾರಿಗೆ ಬರುವ ತನಕ ಅವರು ರಾಜಾರೋಷವಾಗಿ ಬಳಕೆಯಲ್ಲಿದ್ದವು.
ಆ ನಿಟ್ಟಿನಲ್ಲಿ ಪುತ್ತೂರು ಪುರಸಭೆಯ ಕಮೀಷನರ್ ಅವರ ಧೈರ್ಯವನ್ನು ಮೆಚ್ಚಬೇಕು. ಯಾರು ಜಾಹೀರಾತು ಫಲಕಗಳ ಶುಲ್ಕವನ್ನು ಕಟ್ಟುತ್ತಿಲ್ಲ, ಅವರ ಹೋರ್ಡಿಂಗ್ ಗಳಿಗೆ ಕಪ್ಪು ಬಣ್ಣವನ್ನು ಹಚ್ಚಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಒಂದು ಸ್ಥಳೀಯ ಸಂಸ್ಥೆ ಈ ಪ್ರಮಾಣದಲ್ಲಿ ಕ್ರಮ ತೆಗೆದುಕೊಳ್ಳಲು ರೆಡಿ ಇದೆ ಎಂದರೆ ರಾಜ್ಯದ ಪ್ರಭಾವಿ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಯಾಕೆ ಧೈರ್ಯ ತೋರಿಸಬಾರದು. ಪುತ್ತೂರಿನಲ್ಲಿ ಬಹುಶ: ಜಾಹೀರಾತು ಹಾಕಲು ಅನುಮತಿ ಪಡೆದ ಗುತ್ತಿಗೆದಾರರು ಸರಕಾರಕ್ಕೆ ಕಟ್ಟಬೇಕಾದ ಶುಲ್ಕದ ಹಣ ಬಾಕಿ ಇಟ್ಟು ಆಟ ಆಡಿಸುತ್ತಾ ಇರಬಹುದು. ಮಂಗಳೂರು ಪಾಲಿಕೆಗೂ ಲಕ್ಷಗಟ್ಟಲೆ ರೂಪಾಯಿ ಹೋರ್ಡಿಂಗ್ ಹಣ ಬರುವುದು ಬಾಕಿ ಇದೆ. ಆದರೆ ವಸೂಲಿ ಮಾಡುವುದು ಯಾರು? ಕಾರ್ಯಕ್ರಮ ಸಂಘಟಕರು ಬ್ಯಾನರ್ ಹಾಕಿಸಲು ಪಾಲಿಕೆಗೆ ಅರ್ಜಿ ಸಲ್ಲಿಸುವಾಗ ಯಾವ ಸ್ಥಳದಲ್ಲಿ ಎಷ್ಟು ಬ್ಯಾನರ್ ಹಾಕಿಸುತ್ತಾರೆ ಎಂದು ನಮೂದಿಸಬೇಕು. ಅದರೊಂದಿಗೆ ಅಳತೆಗೆ ಅನುಗುಣವಾಗಿ ಇಂತಿಷ್ಟು ಹಣ ಕಟ್ಟಿ ಅನುಮತಿ ಪಡೆಯಬೇಕು. ಕನಿಷ್ಟ 125 ರೂಪಾಯಿಗಳಿಂದ ಶುಲ್ಕ ಶುರುವಾಗುತ್ತದೆ. ಅದರಲ್ಲಿಯೂ ಮೋಸ ಮಾಡುವವರು ಇದ್ದಾರೆ. ಒಟ್ಟಿನಲ್ಲಿ ಇನ್ನು ಒಂದೂವರೆ ತಿಂಗಳು ಫ್ಲೆಕ್ಸ್ ಹಾವಳಿ ಇರುವುದಿಲ್ಲ. ಮೇ 15 ರ ನಂತರವೂ ಮಂಗಳೂರು ಇವತ್ತು ಕಾಣಿಸುವ ಹಾಗೆ ಇರಬೇಕು. ಅದು ಬಿಟ್ಟು ನೀತಿ ಸಂಹಿತೆ ಇಲ್ಲ ಎಂದು ಕಂಡಕಂಡಲ್ಲಿ ಫ್ಲೆಕ್ಸ್ ಜನ್ಮತಾಳಿದರೆ ಮಂಗಳೂರು ಮತ್ತೆ ಅಧ್ವಾನವಾಗುತ್ತದೆ. ಹಾಗೆ ಮಾಡಲು ಪಾಲಿಕೆಯ ಕಮೀಷನರ್ ಬಿಡದಿರಲಿ ಎಂದು ಹಾರೈಕೆ!
Leave A Reply