ಹಾಲಾಡಿ ಮತ್ತು ಆಯನೂರುವಿಗೆ ಇರುವ ವ್ಯತ್ಯಾಸ ಅಷ್ಟೇ!!
ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಒಬ್ಬ ಹಾಲಿ ಶಾಸಕ ಅದು ಕೂಡ ಪ್ರಚಾರಕ್ಕೆ ಹೋಗದಿದ್ದರೂ ಗೆಲ್ಲಬಲ್ಲ ಸಾಮರ್ತ್ಯ ಇರುವ ಅಭ್ಯರ್ಥಿ, ಆರೋಗ್ಯ, ಅಂತಸ್ತು ಚೆನ್ನಾಗಿರುವಾಗಲೇ ಸಾಕು ಎನ್ನುವುದಿದೆಯಲ್ಲ, ಅದು ಇವತ್ತಿನ ದಿನಗಳಲ್ಲಿ ನಂಬಲು ಸಾಧ್ಯವೇ ಇಲ್ಲದ ಸಂಗತಿ. ಆದರೆ ಹಾಲಾಡಿ ತಮ್ಮ ವಿಶಾಲ ಮನಸ್ಸು ಮತ್ತು ತ್ಯಾಗಮಯಿ ನಿಲುವಿನಿಂದ ನಂಬಲು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದ್ದಾರೆ. ಅಷ್ಟಕ್ಕೂ ಹಾಲಾಡಿ ಇಂತಹ ನಿಲುವುವನ್ನು ಅಗತ್ಯವಿರಲಿಲ್ಲ. ಯಾಕೆಂದರೆ ಅವರು ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರಲಿಲ್ಲ. ಅವರು ನಿಂತಿದ್ದಾರೆ ಎಂದು ಗೊತ್ತಾದರೆ ಸಾಕು, ಜನ ಅವರಿಗೆ ಮತ ನೀಡುತ್ತಿದ್ದರು. ಇನ್ನು ಅವರ ಬಗ್ಗೆ ಕುಂದಾಪುರದ ಜನರು ಎಷ್ಟು ಪ್ರೀತಿ ಮಾಡುತ್ತಿದ್ದರು ಎಂದರೆ ಅವರು ನಾಲ್ಕನೇ ಬಾರಿ ಸ್ಪರ್ಧಿಸಿದ್ದು ಪಕ್ಷೇತರರಾಗಿ. ಆಗ ಹಿಂದಿನ ಎಲ್ಲಾ ಅವಧಿಗಿಂತ ಹೆಚ್ಚು ಮತಗಳನ್ನು ಅಲ್ಲಿನ ಜನ ಗೆಲ್ಲಿಸಿದ್ದಾರೆ. ಅದರ ಅರ್ಥ ಅವರು ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದಿದ್ದರು. ಅವರನ್ನು ಕುಂದಾಪುರದ ವಾಜಪೇಯಿ ಎಂದು ಬಿರುದು ಕೊಟ್ಟಿದ್ದು ಅಲ್ಲಿನ ಜನರು. ಮಾಧ್ಯಮಗಳಲ್ಲಿ ಮಾತನಾಡಲು ಹೋಗದ, ವಿಧಾನಸೌಧದ ಕಾರಿಡಾರುಗಳಲ್ಲಿ ಸುಖಾಸುಮ್ಮನೆ ಶೋ ಕೊಡದ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಬಿಂಬಿಸಿಕೊಳ್ಳದ, ಡಿಬೇಟುಗಳಲ್ಲಿ ಕಾಣಿಸಿಕೊಳ್ಳದ, ಸಿಎಂ ಹಿಂದೆ ಮುಂದೆ ನಿಲ್ಲದ, ಮಾಧ್ಯಮಗಳು ಕರೆದು ಗುದ್ದಲಿಪೂಜೆ, ಶಿಲಾನ್ಯಾಸ ಮಾಡುವಂತಹ ಶಾಸಕರ ಮುಂದೆ ಇವರು ವಿಭಿನ್ನವಾಗಿ ನಿಂತು ಒಬ್ಬ ಶಾಸಕ ಹೀಗೂ ಇರಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ಸಾಮಾನ್ಯವಾಗಿ 85 ವರ್ಷ ವಯಸ್ಸು ಆದರೂ ಟಿಕೆಟ್ ಬೇಡಾ ಎಂದು ಹೇಳುವವರು ರಾಜಕೀಯದಲ್ಲಿ ಇಲ್ಲ. ಒಂದು ವೇಳೆ ಪ್ರಚಾರಕ್ಕೆ ಓಡಾಡಲು ಕಷ್ಟ ಎನಿಸಿ ಆರೋಗ್ಯ ಕೈಕೊಟ್ಟರೆ ತನ್ನ ಮಗನಿಗೋ, ಮಗಳಿಗೋ ಕೊಡಿ ಎನ್ನುವವರು ಇದ್ದಾರೆ. ಒಂದು ವೇಳೆ ಮಗ ಅಥವಾ ಮಗಳು ಇಲ್ಲದಿದ್ದರೆ ಹೆಂಡತಿ, ಸಹೋದರರ ಮಗ ಹೀಗೆ ಕುಟುಂಬದ ಆಪ್ತ ವರ್ಗದೊಳಗೆ ಯಾರಿಗಾದರೂ ನೀಡಿ ಎನ್ನುವವರು ಇದ್ದಾರೆ. ಯಾಕೆಂದರೆ ಅಧಿಕಾರದ ಆಸೆಯೇ ಅಂತಹುದು. ಇನ್ನು ಚುನಾವಣೆಗೆ ಹಣ ಇಲ್ಲದಿದ್ದರೂ ಹೇಗಾದರೂ ಮಾಡಿ ಸಂಗ್ರಹಿಸಿ ಟೋಪಿ ಹಾಕುವವರು ಇದ್ದಾರೆ. ಆದರೆ ಹಾಲಾಡಿಯವರು ಶಾಸಕತ್ವದ ಐದು ಅವಧಿಯಲ್ಲಿ ಎಲ್ಲಿಯೂ ಹೆಸರು ಕೆಡಿಸಿಕೊಂಡಿಲ್ಲ. ಭ್ರಷ್ಟಾಚಾರದ ನೆರಳು ಅವರ ಹತ್ತಿರದಿಂದಲೂ ಸುಳಿದು ಹೋಗಿಲ್ಲ. ಹಾಲಾಡಿ ನಮಗೆ ಸಾಕು ಎಂದು ಮತದಾರ ಹೇಳಿಲ್ಲ. ಈ ಎಲ್ಲದರ ನಡುವೆಯೂ ಹಾಲಾಡಿ ತಮಗೆ ಟಿಕೆಟ್ ಬೇಡಾ ಎಂದಿದ್ದಾರೆ. ಟಿಕೆಟ್ ಕೊಡದಿದ್ದರೆ ಬಂಡಾಯ ಎನ್ನುವವರ ನಡುವೆ ಹಾಲಾಡಿಯವರು ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ರಾಜಕಾರಣಿ ಹೀಗೆ ಇದ್ದರೆ ಎಷ್ಟು ಚೆಂದ ಅಲ್ವಾ ಎನ್ನುವುದರ ನಡುವೆ ಶಿವಮೊಗ್ಗದ ಆಯನೂರು ಮಂಜುನಾಥ್ ಎನ್ನುವವರು ಕಪ್ಪು ಚುಕ್ಕೆಗಳಾಗಿರುವುದು ಕೂಡ ಅಷ್ಟೇ ದುರಂತ.
ಆಯನೂರು ಅನುಭವಿಸಿದಷ್ಟು ಬೇರೆ ರಾಜಕಾರಣಿಗಳು ಭಾರತೀಯ ಜನತಾ ಪಾರ್ಟಿಯಲ್ಲಿ ಅನುಭವಿಸಿಲ್ಲ. ಆಯನೂರು ವಿಧಾನ ಸಭೆ, ವಿಧಾನ ಪರಿಷತ್ತು, ಲೋಕಸಭೆ, ರಾಜ್ಯಸಭೆ ಹೀಗೆ ನಾಲ್ಕು ಸದನವನ್ನು ನೋಡಿದ ಬಿಜೆಪಿಯ ಏಕೈಕ ರಾಜಕಾರಣಿ ಎಂದರೆ ತಪ್ಪಿಲ್ಲ. ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದಲ್ಲ ಒಂದು ಸ್ಥಾನದಲ್ಲಿ ಇದ್ರು. ಅವರಿಗೆ ಬಿಜೆಪಿ ಎಲ್ಲವನ್ನು ಅವರ ಅರ್ಹತೆಗೆ ಮೀರಿ ಕೊಟ್ಟಿದೆ. ಈಗಲೂ ಅವರು ಅಧಿಕಾರದಲ್ಲಿ ಇದ್ದಾರೆ. ಶಂಕರಮೂರ್ತಿಯವರ ಸೀಟನ್ನು ಇವರಿಗೆ ಪಕ್ಷ ಕೊಟ್ಟಿದೆ ಎಂದರೆ ಅವರಿಗೆ ಅದೆಷ್ಟು ಗೌರವ ಕೊಟ್ಟಿತ್ತು ಎನ್ನುವುದನ್ನು ಮರೆಯುವ ಹಾಗಿಲ್ಲ. ಇದೇ ಆಯನೂರು ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿ ಅಲ್ಲಿಂದ ಮತ್ತೆ ಪಕ್ಷಕ್ಕೆ ಬಂದಾಗ ಅವರನ್ನು ಗೌರವಯುತವಾಗಿ ಸ್ವಾಗತಿಸಿದಲ್ಲದೇ, ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್ ನೀಡಿ ಪಕ್ಷ ಗೆಲ್ಲಿಸಿದೆ. ಹೀಗಿರುವಾಗ ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವ ಮೂಲಕ ಈಶ್ವರಪ್ಪನವರ ವಿರುದ್ಧ ಬಹಿರಂಗವಾಗಿ ಕದನಕ್ಕೆ ಇಳಿದುಬಿಟ್ಟಿದ್ರು.
ಒಂದು ಕಡೆ ಹಾಲಾಡಿಯವರನ್ನು ಬೆಂಗಳೂರಿಗೆ ಮಂತ್ರಿಯಾಗಲು ಪ್ರಮಾಣವಚನಕ್ಕೆ ಕರೆದು ಕೊನೆಯ ಕ್ಷಣದಲ್ಲಿ ನಿರಾಕರಿಸಿ ಅವಮಾನ ಮಾಡಿದಾಗಲೂ ಪಕ್ಷ ಬಿಟ್ಟು ಹೋಗದೇ, ಕುಂದಾಪುರದ ಜನರ ಒತ್ತಾಯಕ್ಕೆ ಮಣಿದು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಇನ್ನೊಂದು ಕಡೆ ಆಯನೂರು ಎಲ್ಲವೂ ಸಿಕ್ಕಿದ ನಂತರ ನಡುವಿನಲ್ಲಿ ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಒಂದಂತೂ ನಿಜ, ಬಿಜೆಪಿ ಹಾಲಾಡಿಯವರನ್ನು ಚೆನ್ನಾಗಿ ನಡೆಸಿಕೊಳ್ಳದೇ ಅವಮಾನ ಮಾಡಿತು. ಆಯನೂರುವಿಗೆ ಎಲ್ಲಾ ಸನ್ಮಾನ ಕೊಟ್ಟರೂ ಅವರು ಪಕ್ಷಕ್ಕೆ ಅವಮಾನ ಮಾಡಿ ಹೋಗಿದ್ದಾರೆ. ಕೆಲವು ವ್ಯಕ್ತಿತ್ವಗಳೇ ಹಾಗೆ. ನಮಗೆ ಕೆಲವರನ್ನು ನೋಡುವಾಗ ಕಾಲಿಗೆ ಬೀಳೋಣ ಎಂದು ಆಗುತ್ತದೆ. ಕೆಲವರನ್ನು ನೋಡಿದಾಗ ಕಾಲಿನಿಂದ ಒದೆಯೋಣ ಎಂದು ಆಗುತ್ತದೆ. ಅಷ್ಟೇ ವ್ಯತ್ಯಾಸ!
Leave A Reply