ನಂದಿನಿ ಉಳಿಸಲು ರಾಜಕೀಯ ಅಮೂಲ್ಯ!
ನಂದಿನಿ ಹಾಗೂ ಅಮುಲ್ ನಡುವೆ ಕರ್ನಾಟಕದ ರಾಜಕೀಯ ನಿಂತಿದೆ. ಮತದಾನಕ್ಕೆ ತಿಂಗಳು ಮಾತ್ರ ಇರುವ ಈ ಹಂತದಲ್ಲಿ ಜನರ ಮನಸ್ಸನ್ನು ಭಾರತೀಯ ಜನತಾ ಪಾರ್ಟಿಯಿಂದ ತಿರುಗಿಸಿ ಪ್ರಾದೇಶಿಕತೆಯತ್ತ ತಿರುಗಿಸಲು ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಪಕ್ಷಗಳು ಮುಂದಾಗಿವೆ. ಈ ಸಮಯದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಮಾಡಲೇಬೇಕು. ಅದು ಅವರ ಹಣೆಬರಹ. ಆದರೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಈಗ ಅಮುಲ್ ಮತ್ತು ನಂದಿನಿಯನ್ನು ಕೈಗೆತ್ತಿಕೊಳ್ಳುವುದರ ಹಿಂದೆ ಅವರ ಆತ್ಮಸಾಕ್ಷಿಯನ್ನು ಅವರೇ ಪ್ರಶ್ನಿಸಬೇಕಾಗಿದೆ. ನಂದಿನಿಯನ್ನು ಮುಗಿಸಲು ಗುಜರಾತಿನ ಅಮುಲ್ ಹೊರಟಿದೆ ಎನ್ನುವ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಅದರೊಂದಿಗೆ ಮುಂದಿನ ದಿನಗಳಲ್ಲಿ ನಂದಿನಿ ಮತ್ತು ಅಮುಲ್ ವಿಲೀನವಾಗಿ ಅಮುಲ್ ಮಾತ್ರ ಉಳಿಯಲಿದೆ ಎಂದು ಕೂಡ ಸೇರಿಸುತ್ತಿದ್ದಾರೆ. ಅದಕ್ಕೆ ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ವಿಲೀನವಾಗಿರುವುದನ್ನು ಉದಾಹರಣೆ ನೀಡುತ್ತಾರೆ. ಆದ್ದರಿಂದ ಯಾರು ಕೂಡ ಅಮುಲ್ ಉತ್ಪನ್ನಗಳನ್ನು ಖರೀದಿಸಬಾರದು ಎಂದು ಸಿದ್ದು ಆದಿಯಾಗಿ ಕಾಂಗ್ರೆಸ್ಸಿನ ಮುಖಂಡರು ಹೇಳುತ್ತಿದ್ದಾರೆ. ಅಮುಲ್ ಉತ್ಪನ್ನಗಳು ಗುಜರಾತಿನದ್ದು ಎನ್ನುವ ಕಾರಣಕ್ಕೆ ಪರೋಕ್ಷವಾಗಿ ಇದಕ್ಕೆ ಅಮಿತ್ ಶಾ ಅವರ ಬೆಂಬಲ ಇದೆ ಎಂದು ತೋರಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಗುಜರಾತ್ ಮತ್ತು ಕರ್ನಾಟಕದ ನಡುವಿನ ಸಮರವನ್ನಾಗಿ ತಿರುಗಿಸಲು ಕಾಂಗ್ರೆಸ್ ಶತಾಯಗತಾಯ ಯತ್ನಿಸುತ್ತಿದೆ.
ಕಾಂಗ್ರೆಸ್ ಇದನ್ನೊಂದು ಭಾವನಾತ್ಮಕ ವಿಷಯವನ್ನಾಗಿ ಮಾಡಲು ಶತಾಯಗತಾಯ ಯತ್ನಿಸುತ್ತಿದೆ. ಆದರೆ ಈ ವಿಷಯದ ಒಳಹೊಕ್ಕರೆ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯದ ಪರಿಪೂರ್ಣ ಚಿತ್ರಣ ಜನರಿಗೆ ಸಿಗುತ್ತದೆ. ಮೊದಲನೇಯದಾಗಿ ಅಮುಲ್ ಈಗ ಆನ್ ಲೈನ್ ಮೂಲಕ ಕರ್ನಾಟಕದ ಜನರಿಗೆ ಸಿಗುತ್ತಿದೆ. ಒಬ್ಬ ವ್ಯಕ್ತಿ ತನಗೆ ಅಮುಲ್ ಉತ್ಪನ್ನವೇ ಬೇಕು ಎಂದು ಬಯಸಿದ್ದಲ್ಲಿ ಅದನ್ನು ಆನ್ ಲೈನ್ ಮೂಲಕ ಖರೀದಿಸಬಹುದು. ಯಾವುದೇ ಒಂದು ವಸ್ತು ಆನ್ ಲೈನ್ ಮೂಲಕ ಈ ದೇಶದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗೆ ಮಾರುವ ಅವಕಾಶವಿದೆ. ಈ ಅವಕಾಶ ನಂದಿನಿ ಹಾಲಿಗೂ ಇದೆ. ನಂದಿನಿ ನಮ್ಮದು ಎಂದು ಎದೆತಟ್ಟಿ ಹೇಳುವವರು ಇದೇ ನಂದಿನಿ ಹಾಲು ಮತ್ತು ಇತರ ಉತ್ಪನ್ನಗಳು ಕರ್ನಾಟಕದ ಗಡಿಯನ್ನು ಮೀರಿ ಯಾವತ್ತೋ ಬೆಳೆದಿದೆ ಎನ್ನುವುದನ್ನು ಮರೆಯಬಾರದು. ನಂದಿನಿ ಈಗ ದೆಹಲಿ, ಪಶ್ಚಿಮ ಬಂಗಾಳ, ಗುಜರಾತ್, ಓರಿಸ್ಸಾ, ತ್ರಿಪುರ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿಯೂ ಸಿಗುತ್ತದೆ. ಹಾಗಾದರೆ ನಂದಿನಿ ಕೇವಲ ಕರ್ನಾಟಕದ್ದು, ಅದನ್ನು ನಾವು ಖರೀದಿಸಬಾರದು ಎಂದು ಅಲ್ಲಿನ ರಾಜಕೀಯ ಪಕ್ಷಗಳು ಹೇಳಿದರೆ ಏನಾಗುತ್ತದೆ? ಆಗ ನಮ್ಮ ರೈತರಿಗೆ ತೊಂದರೆಯಾಗುವುದಿಲ್ಲವೇ? ಈಗ ಈ ವಿವಾದವನ್ನು ಎತ್ತುವ ಮೂಲಕ ಕಾಂಗ್ರೆಸ್ ಪರೋಕ್ಷವಾಗಿ ನಮ್ಮ ಹೈನುಗಾರರ ಆದಾಯದ ಮೇಲೆ ಹೊಡೆತ ನೀಡಲು ಹೊರಟಿರುವಂತಿದೆ. ಯಾಕೆಂದರೆ ಒಂದು ದೇಶ ಎಂದ ಮೇಲೆ ಯಾವುದೇ ವಸ್ತು ಯಾರು ಎಲ್ಲಿ ಕೂಡ ಮಾರಬಹುದು. ಈಗ ನಂದಿನಿಯನ್ನು ಕೇರಳದಲ್ಲಿ ಮಾರುವಾಗ ಅದರ ಪ್ಲಾಸ್ಟಿಕ್ ಮೇಲೆ ಮಲಯಾಳಿಯಲ್ಲಿ ಬರೆದಿರುತ್ತಾರೆ. ಹಾಗೆಂದು ಹೇಳಿ ಅವರು ನಂದಿನಿ ನಮ್ಮದ್ದಲ್ಲ ಎಂದು ಹೇಳಿದರೆ ಏನಾಗುತ್ತದೆ. ಹಾಗೆ ಅಮುಲ್ ಕೂಡ ಹಾಲು ಅಥವಾ ಇತರ ಉತ್ಪನ್ನಗಳು ಗುಜರಾತಿನದ್ದು ಇರಬಹುದು. ಆದರೆ ಅದು ಇಲ್ಲಿ ಮಾರುವಾಗ ಅದರ ಗುಣಮಟ್ಟ, ಕೈಗೆಟಕುವ ಬೆಲೆ, ದೊರೆಯುವ ಸ್ಥಳ, ಅಗತ್ಯ ಇದ್ದಾಗ ಸಿಗುತ್ತಾ ಹೀಗೆ ಹಲವು ಆಯಾಮಗಳೊಂದಿಗೆ ಅದರ ಮಾರುಕಟ್ಟೆ ವಿಸ್ತರಿಸುತ್ತದೆ. ಒಂದು ವೇಳೆ ಗುಣಮಟ್ಟ ಚೆನ್ನಾಗಿದ್ದು, ರೇಟ್ ಕೂಡ ಹೈ ಇದ್ದರೆ ಆಗ ಶ್ರೀಮಂತರು ಮಾತ್ರ ಅದನ್ನು ಖರೀದಿಸಲು ಶಕ್ತರಾಗುತ್ತಾರೆ. ಒಂದು ವೇಳೆ ಗುಣಮಟ್ಟ ಚೆನ್ನಾಗಿಲ್ಲದೇ ರೇಟ್ ಕಡಿಮೆ ಇದ್ದರೂ ಅದು ವ್ಯಾಪಾರ ಆಗಲಿಕ್ಕಿಲ್ಲ. ಆದ್ದರಿಂದ ನಂದಿನಿಯಾಗಲೀ, ನಮ್ಮ ರೈತರಾಗಲಿ ಅದರಿಂದ ಆತಂಕವನ್ನು ಅನುಭವಿಸಬೇಕಾಗಿಲ್ಲ.
ಈಗ ನಾವು ಒಂದು ಸೂಪರ್ ಮಾರ್ಕೆಟ್ಟಿಗೆ ಹೋಗುತ್ತೇವೆ. ಅಲ್ಲಿ ಅಕ್ಕಿಯದ್ದೇ ಮೂರ್ನಾಕು ಬ್ರಾಂಡ್ ಗಳಿರುತ್ತವೆ. ಟೂತ್ ಪೇಸ್ಟಿನಿಂದ ಹಿಡಿದು ಪೌಡರ್ ತನಕ ಹತ್ತಾರು ಕಂಪೆನಿಗಳು ವಸ್ತುಗಳನ್ನು ಮಾರಲು ಇಟ್ಟಿದ್ದಾರೆ. ಆಗ ನಮಗೆ ಅದರಲ್ಲಿ ಯಾವುದು ಬೇಕು, ಅದನ್ನೇ ನಾವು ಖರೀದಿಸುತ್ತೇವೆ. ಇದೇ ಲಾಜಿಕ್ ಇಲ್ಲಿಯೂ ಅನ್ವಯವಾಗುತ್ತದೆ.
ಆದರೆ ಕಾಂಗ್ರೆಸ್ಸಿಗೆ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜ್ಯದ ಪ್ರಮುಖ ಮತಬ್ಯಾಂಕ್ ಆಗಿರುವ ಹೈನುಗಾರರನ್ನು ಸೆಳೆಯಲು ಈ ಅಸ್ತ್ರ ಉತ್ತಮ ಎಂದು ಅನಿಸಿದೆ. ಇಲ್ಲದಿದ್ದರೆ ಇದೇ ಕಾಂಗ್ರೆಸ್ಸಿಗರು ಯಾವತ್ತೂ ಚೀನಾ ಉತ್ಪನ್ನ ಖರೀದಿಸಬೇಡಿ. ಲಾಭ ಅವರಿಗೆ ಹೋಗುತ್ತದೆ. ಆ ಹಣ ನಮ್ಮ ದೇಶದ ವಿರುದ್ಧ ಬಳಕೆಯಾಗುತ್ತದೆ ಎಂದು ಹೇಳಿಲ್ಲ. ಪತಂಜಲಿ ನಮ್ಮ ದೇಶದ ಹೆಮ್ಮೆ. ಅದಕ್ಕೆ ಒತ್ತು ನೀಡಲಿಲ್ಲ. ಬಾಬಾ ರಾಮದೇವ್ ವಿರುದ್ಧ ಏನೆಲ್ಲಾ ಷಡ್ಯಂತ್ರ ಮಾಡಲು ಸಾಧ್ಯವಿತ್ತೋ ಕಾಂಗ್ರೆಸ್ ಸರಕಾರಗಳು ಮಾಡಿದವು. ಕೊನೆಯದಾಗಿ ಒಂದು ಪ್ರಮುಖ ವಿಷಯ ಹೇಳಲೇಬೇಕು. ಸಂಪೂರ್ಣ ಗೋಹತ್ಯಾ ನಿಷೇಧಕ್ಕೆ ವಿರೋಧವಿದ್ದ, ಗೋಹಂತಕರನ್ನು ಬೆಂಬಲಿಸುತ್ತಿದ್ದ, ಗೋಮಾಂಸದ ಬಗ್ಗೆ ಮಮಕಾರ ಇದ್ದವರು ಈಗ ನಂದಿನಿ ಹಾಲಿನ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಚುನಾವಣೆಗೆ ಅಲ್ಲದೇ ಮತ್ತೇನು
Leave A Reply