ಜಾಣ ಈಶುವಿನಿಂದ ಶೆಟ್ಟರ್ ಪಾಠ ಕಲಿಯಬಹುದಿತ್ತು!
ಅದೇನೆ ಕಾರಣ ಇರಲಿ, ಈಶು ಸೈಲೆಂಟಾಗಿ ಪಕ್ಕಕ್ಕೆ ಸರಿದದ್ದು ಅವರು ತಮ್ಮ ಗೌರವವನ್ನು ತಾವೇ ಹೆಚ್ಚಿಸಿಕೊಂಡು ಬಿಟ್ಟಿದ್ದಾರೆ. ಅವರಿಗೆ ಈ ಜೂನ್ ತಿಂಗಳಿಗೆ 75 ವರ್ಷ ತುಂಬುತ್ತದೆ. ಶಾ ಮುಂದೆ ರಾಜ್ಯ ನಾಯಕರು ನೀಡಿದ್ದ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಎದುರು ಈಶು ಹೆಸರಿತ್ತು. ಶಾ ಕೂಡ ಅತೀ ಹೆಚ್ಚು ಸೀಟು ಗೆದ್ದು ರಾಜ್ಯದಲ್ಲಿ ಅಧಿಕಾರ ಮುಂದುವರೆಯುವ ನಿಟ್ಟಿನಲ್ಲಿ ಏನೇ ಆಗಲಿ ಈಶು ಮತ್ತು ಶೆಟ್ಟರ್ ಅಂತಹ ಹಿರಿಯರು ಇರಲಿ ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದರು. ಆದರೆ ಕೊನೆಯ ಸುತ್ತಿನಲ್ಲಿ ಮೋದಿ ಎದುರು ಪಟ್ಟಿ ಹಿಡಿದಾಗ ಮೋದಿ ಕನಲಿ ಕೆಂಡವಾಗಿಬಿಟ್ಟರು. ಈಶು ಅಂತವರು ಸುಮ್ಮನೆ ಮಾರ್ಗದರ್ಶಕರಾಗಿ ಇರಲಿ, ಅವರಿಂದ ಏನೂ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಏನಿದ್ದರೂ ನಾವು ಬೆವರು ಸುರಿಸಬೇಕಾಗುತ್ತದೆ. ಅವರ ಮೇಲೆ ಗುತ್ತಿಗೆದಾರರ ಆರೋಪಗಳು ಇದ್ದಾವೆ. ಅದನ್ನೇ ಹಿಡಿದು ಕಾಂಗ್ರೆಸ್ಸಿಗರು ನಮ್ಮನ್ನು ಟೀಕಿಸಲು ಅವಕಾಶ ನೀಡುವುದು ಯಾಕೆ? ಹೇಗೂ 75 ಆಯಿತು. ಗುಜರಾತಿನಲ್ಲಿಯೇ ನಾವು ಓರಗೆಯ ಆನಂದಿಬೆನ್ ಪಟೇಲ್ ಅಂತವರನ್ನು ಬಿಟ್ಟಿಲ್ಲ. ಹಾಗಿರುವಾಗ ಈಶು ಯಾವ ಮರದ ತೊಪ್ಪಲು ಎಂದು ಮೋದಿ ಹೇಳಿಬಿಟ್ಟರು. ನಂತರವೇ ಈಶುಗೆ ಕರೆ ಹೋದದ್ದು. ತಯಾರಾಗಿ ಎಂದು ಅಲ್ಲಿಂದ ಕರೆ ಮಾಡಿದವರು ಹೇಳುತ್ತಾರೆ ಎಂದು ಅಂದುಕೊಂಡಿದ್ದ ಈಶುಗೆ ಮೋದಿ ಒಪ್ಪುತ್ತಾ ಇಲ್ಲ ಎನ್ನುವ ಮಾಹಿತಿ ನೀಡಲಾಗಿದೆ. ನಾನೀಗ ಏನು ಮಾಡಬೇಕು ಎಂದು ಶಿವಮೊಗ್ಗದ ಅತಿಥಿ ಗೃಹದಲ್ಲಿ ಕುಳಿತ ಈಶು ಕೇಳಿದ್ದಾರೆ. ಮುಂದಿನದು ಇತಿಹಾಸ.
ತಕ್ಷಣ ಚುನಾವಣಾ ಕಣಕ್ಕೆ ರಾಜೀನಾಮೆ ನೀಡುತ್ತೇನೆ. ಸ್ಪರ್ಧೆಗೆ ನನ್ನ ಹೆಸರನ್ನು ವರಿಷ್ಟರು ಪರಿಗಣಿಸಬಾರದಾಗಿ ವಿನಂತಿ ಎಂದು ಬರೆದು ವೈರಲ್ ಮಾಡಿ ಎನ್ನುವ ಸಂದೇಶ ಅತ್ತಲಿಂದ ಬಂದಿದೆ. ಮೋದಿಯೇ ಒಪ್ಪುತ್ತಿಲ್ಲ ಎಂದು ಹೇಳಿದ ಮೇಲೆ ಈಶು ತಡ ಮಾಡಲಿಲ್ಲ. ಕೂಡಲೇ ಹುಡುಗರನ್ನು ಕರೆದು ಒಂದು ಲೆಟರ್ ರೆಡಿ ಮಾಡಲು ಹೇಳಿದ್ದಾರೆ. ಇಂಗ್ಲೀಷಿನಲ್ಲಿ ಬರೆಯಲು ಹೋಗಿ ಏನೇನೋ ಅಪಾರ್ಥ ಆಗುವುದು ಬೇಡಾ ಎಂದು ಸಹಾಯಕರಿಗೆ ಕನ್ನಡದಲ್ಲಿಯೇ ಬರೆದು ಒರಿಜಿನಲ್ ಪೋಸ್ಟ್ ಮಾಡಿ ಅದರ ಫೋಟೋ ತೆಗೆದು ವೈರಲ್ ಮಾಡಿ ಎಂದಿದ್ದಾರೆ. ಅಷ್ಟು ಮಾಡಿ ತಮಗೆ ಫೋನ್ ಮಾಡಿದವರಿಗೆ ಸಂತೋಷದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲಿಗೆ ಈಶು ತಮ್ಮ ರಾಜಕೀಯ ಜೀವನದ 40 ವರ್ಷಗಳನ್ನು ಶುಭಂ ಮಾಡಿದ್ದಾರೆ. ಯಾವಾಗ ಚಕ್ರವರ್ತಿಯೇ ಯುದ್ಧಭೂಮಿಗೆ ಬರುವಷ್ಟು ನೀನು ಸಮರ್ಥನಾಗಿಲ್ಲ ಎಂದು ಹೇಳಿದ ಮೇಲೆ ಖಡ್ಗವನ್ನು ಮೊನಚು ಮಾಚುವುದು ಮೂರ್ಖತನ. ಬುದ್ಧಿವಂತ ಈಶು ಕೊನೆಯ ಕ್ಷಣದಲ್ಲಿ ಆಗಬಹುದಾದ ಮುಖಭಂಗವನ್ನು ತಾವೇ ತಪ್ಪಿಸಿಕೊಂಡಿದ್ದಾರೆ.
ಆದರೆ ಜಗ್ಗು ಶೆಟ್ಟರ್ ಮಾತ್ರ ತಾನು ಆರೋಗ್ಯವಾಗಿದ್ದೇನೆ, ತಯಾರಿ ಮಾಡಿಕೊಂಡಾಗಿದೆ. ಪ್ರಚಾರ ಕೂಡ ಆರಂಭಿಸಿದ್ದೇನೆ. ಈಗ ಇಲ್ಲ ಎಂದು ಹೇಳಿದರೆ ಹೇಗೆ ಎಂದು ತಮ್ಮ ವರಸೆಯನ್ನು ತೋರಿಸಿದ್ದಾರೆ. ಶೆಟ್ಟರ್ ಅವರಿಗೆ 75 ಆಗಲು ಇನ್ನೂ ಏಳೆಂಟು ವರ್ಷ ಇದೆ ಎಂದು ಗೂಗಲ್ ಹೇಳುತ್ತದೆ. ಆದರೆ ಅವರನ್ನು ಈಗಲೇ ವಾನಪ್ರಸ್ತಕ್ಕೆ ಕಳುಹಿಸಲು ಮೋದಿ ತಯಾರಾಗಿಬಿಟ್ಟಿದ್ದಾರೆ. ಇಂತಹ ಒಂದು ಸುಳಿವು ಶೆಟ್ಟರ್ ಅವರಿಗೆ ವರ್ಷದ ಹಿಂದೆನೆ ಇತ್ತು. ಈಗ ಹೇಳಿದರೆ ಹೇಗೆ ಎನ್ನುವುದೇ ಅವರ ರಾಜಕೀಯ ಬಾಲಿಶತನದ ಹೇಳಿಕೆ. ಯಡ್ಡಿ, ಈಶು, ಶೆಟ್ಟರ್ ಅವರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಹಾಕಿ ಎರಡನೇ ತಲೆಮಾರನ್ನು ಬೆಳೆಸುವುದು ಇಂದು ನಿನ್ನೆಯ ವಿಷಯವಲ್ಲ.
ಆದರೂ ಕೊನೆಯ ಕ್ಷಣದಲ್ಲಿ ಏನಾದರೂ ಪವಾಡ ನಡೆದು ಟಿಕೆಟ್ ಕೊಟ್ಟರೂ ಕೊಟ್ಟಾರು ಎನ್ನುವ ಆಸೆ ರಾಜಕೀಯದಲ್ಲಿ ಅಂಬೆಗಾಲಿಡುವವರಿಂದ ಹಿಡಿದು ಗಂಟೆಗೆ ನೂರು ಕಿಲೋ ಮೀಟರ್ ಓಡುವ ರನ್ನರಿಗೂ ಇದ್ದೇ ಇರುತ್ತದೆ. ಅದೇ ಶೆಟ್ಟರ್ ತಪ್ಪು. ಯಾಕೆಂದರೆ ಗೆಲ್ಲಿಸಿಕೊಂಡು ಬರುವವರು ನಿರ್ಧಾರ ಮಾಡಿದ ಮೇಲೆ ಮುಗಿಯಿತು. ಯಾಕೆಂದರೆ ಈ ಬಾರಿ ಮೋದಿ ಮುಂದಿನ ಮೂರು ವಾರ ಕರ್ನಾಟಕದಲ್ಲಿಯೇ ಬೀಡುಬಿಟ್ಟರೆ ಮಾತ್ರ ಬಹುಮತ ಎನ್ನುವ ಸ್ಥಿತಿ ಇದೆ. ಅಮಿತ್ ಶಾ ಈ ಬಿಸು ಹಬ್ಬಕ್ಕೆ ಬಂದವರು ಹೋಗುವುದು ಮೇ 7 ರ ಕೊನೆಯ ಫ್ಲೈಟಿಗೆ ಎನ್ನುವುದು ಪಕ್ಕಾ ಆಗಿದೆ. ಆದ್ದರಿಂದ ಶೆಟ್ಟರ್ ಅಂತವರು ಸುಮ್ಮನೆ ಕಣ್ಣಮುಂದೆ ನಡೆಯುವ ಸಮರವನ್ನು ಕೋಟೆಯ ಒಳಗೆ ಕುಳಿತು ನೋಡಿ ಪಕ್ಷ ಅಧಿಕಾರಕ್ಕೆ ಬರುವ ಸಂಭ್ರಮವನ್ನು ಅನುಭವಿಸುವುದೇ ಮೇಲು. ಆದರೆ ಶೆಟ್ಟರ್ ಹಾಗೆ ಮಾಡುತ್ತಿಲ್ಲ ಎನ್ನುವುದೇ ಅವರ ನಿಲುವು ಎಷ್ಟರಮಟ್ಟಿಗೆ ಅವರ ವರ್ಚಸ್ಸಿಗೆ ಹಾಗೂ ಪಕ್ಷಕ್ಕೆ ಮುಜುಗರ ತರುತ್ತಿದೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಶೆಟ್ಟರ್ ಅವರಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಮುಖ್ಯಮಂತ್ರಿ ಸೀಟಿನಲ್ಲಿ ಒಂದು ದಿನ ಕುಳಿತುಕೊಳ್ಳಬೇಕೆಂದು ಕನಸು ಕಾಣುವ ಪ್ರತಿ ಶಾಸಕನ ಎದುರು ಇವರು ಒಂದು ವರ್ಷ ಕುಳಿತಿರುವುದು ಪಕ್ಷ ಕೊಟ್ಟ ಅವಕಾಶ. ಸಹೋದರನಿಗೆ ಎಂಎಲ್ಸಿ ಮಾಡಿದ್ದು ಪಕ್ಷ ಕೊಟ್ಟ ಭಿಕ್ಷೆ. ಇಷ್ಟೆಲ್ಲಾ ಇರುವಾಗ ಇನ್ನೂ ಬೇಕು ಎನ್ನಲು ಇದು ಹಿಂದಿನ ಭಾರತೀಯ ಜನತಾ ಪಾರ್ಟಿ ಅಲ್ಲ ಎನ್ನುವುದು ಶೆಟ್ಟರ್ ಅವರಿಗೆ ಗೊತ್ತಿರಬೇಕಿತ್ತು.
ಅಂಗಾರ ಅವರು ಕೂಡ ಈಶು ಅಥವಾ ಹಾಲಾಡಿ ತರಹ ಮಾಡಬಹುದಿತ್ತು. ಆದರೆ ಕನಿಷ್ಟ ವಿರುದ್ಧ ಹೇಳಿಕೆ ನೀಡದೆ ಎಂದಿನಂತೆ ಗದ್ದೆಯಲ್ಲಿ ಇಳಿದು ಬೆಳೆ ನೋಡುತ್ತಿದ್ದಾರೆ. ಅವರಿಗೂ ಇನ್ನೊಂದು ಅವಕಾಶ ಕೊಟ್ಟರೆ ಆಗಬಹುದಿತ್ತು ಎನ್ನುವ ಭಾವನೆ ಇತ್ತು. ಆದರೆ ಅದೃಷ್ಟ ಕೈಗೊಡಲಿಲ್ಲ. ಇನ್ನು ಸವದಿಯಂತವರು ಏನೇನೋ ಹೇಳುತ್ತಿದ್ದಾರೆ. ಪಕ್ಷ ಅವರನ್ನು ಕೂಡ ಉಪಮುಖ್ಯಮಂತ್ರಿ ಮಾಡಿತ್ತು. ಅದೆಲ್ಲ ಈಗ ಯಾರಿಗೆ ನೆನಪಿರುತ್ತೇ ಅಲ್ವಾ!
Leave A Reply