ಪುತ್ತಿಲರಿಗೆ ಜ್ಞಾನೋದಯವಾಗಲು ಎರಡು ದಿನ ಇದೆ!!
ಕರಾವಳಿಯಲ್ಲಿ ಹಾಲಾಡಿಯಂತವರು ಒಂದು ಕಾಲದಲ್ಲಿ ಮಾಡಿದ ಹಾಗೆ ಬೇರೆ ಯಾರೂ ಕೂಡ ಪಕ್ಷೇತರನಾಗಿ ಅಥವಾ ಪ್ರಾದೇಶಿಕ ಪಕ್ಷದಲ್ಲಿ ನಿಂತು ದಕ್ಕಿಸಿಕೊಳ್ಳುತ್ತೇನೆ ಎಂದು ಭ್ರಮೆಯಲ್ಲಿ ಇರುವುದು ಬೇಡಾ. ಅದು ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಹಾಗೂ ಸುರತ್ಕಲ್ ನ ಮೊಯ್ದೀನ್ ಬಾವ ಇಬ್ಬರಿಗೂ ಅನ್ವಯಿಸುತ್ತದೆ. ಪುತ್ತಿಲ ತಮ್ಮ ಸಾಮರ್ತ್ಯವನ್ನು ಒರೆಗೆ ಹಚ್ಚಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಲಿಷ್ಟ ಕೋಟೆಯ ಮುಖ್ಯ ಪ್ರಾಂಗಣದಲ್ಲಿ ಎನ್ನುವುದನ್ನು ಮರೆಯಬಾರದು. ಯಾಕೆಂದರೆ ಏನೂ ಇಲ್ಲದವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಹೋಗಬಲ್ಲ ಸಾಮರ್ತ್ಯ ಸಂಘಕ್ಕೆ ಆವತ್ತು ಇತ್ತು, ಇವತ್ತು ಇದೆ ಮತ್ತು ಮುಂದಕ್ಕೂ ಇರುತ್ತದೆ ಎನ್ನುವುದನ್ನು ಯಾರೂ ಮರೆತಿಲ್ಲ. ಬೆರಳೆಣಿಕೆಯ ಜನ ಈ ಹಿಂದೆನೆ ಗುಟುರು ಹಾಕಲು ಹೋಗಿ ಸತ್ಯ ಒಪ್ಪಿಕೊಂಡು ಬಿಟ್ಟಿದ್ದಾರೆ. ತಡವಾಗಿಯಾದರೂ ಜ್ಞಾನೋದಯವಾದರೆ ಪುತ್ತಿಲರಿಗೆ ಒಳ್ಳೆಯದು. ಭ್ರಮೆಯೇ ಜೀವನ ಎಂದುಕೊಂಡರೆ ಮೇ 13 ರ ಬಳಿಕ ವಾಸ್ತವ ಗೊತ್ತಾಗುತ್ತದೆ. ಇದನ್ನು ಶಕುಂತಳಾ ಶೆಟ್ಟಿಯವರು ಅರಿತ ಕಾರಣ ಅವರು ಬೇರೆಯದ್ದೇ ರಾಜಕೀಯ ಪಕ್ಷ ಸೇರಿ ಅಸ್ತಿತ್ವ ಕಂಡುಕೊಂಡಿದ್ದರು. ಆದರೆ ಅದು ಒಂದು ಅವಧಿಗೆ ಮಾತ್ರ ಸೀಮಿತವಾಯಿತು. ಹಾಗಾದ್ರೆ ಪುತ್ತಿಲರಿಗೆ ಸಂಘದ ಸಾಮರ್ತ್ಯದ ಅಂದಾಜು ಇಲ್ಲವೇ?
ಒಂದು ಕಾಲದಲ್ಲಿ ಜನಾರ್ಧನ ಪೂಜಾರಿ ಎಂದರೆ ಅವರೆದುರು ನಿಂತು ಗೆಲ್ಲುವುದು ಬಿಡಿ, ಸ್ಪರ್ಧೆ ಮಾಡುವುದನ್ನು ಯೋಚಿಸಿದರೆ ಕೂಡ ನಿದ್ರೆ ಬರದ ಎಂಭತ್ತರ ದಶಕದ ಉತ್ತರಾರ್ಧ ಅದು. ಆಗ ಪೂಜಾರಿಯವರ ಎದುರು ಸಂಘದ ಸೂಚನೆಯಂತೆ ಭಾರತೀಯ ಜನತಾ ಪಾರ್ಟಿ ನಿಲ್ಲಿಸಿದ್ದು ಧನಂಜಯ ಕುಮಾರ್ ಅವರನ್ನು. ಜಿಲ್ಲೆಯಲ್ಲಿ ಬಿಲ್ಲವರ ಅನಭೀಷೇಕ್ತ ದೊರೆಯ ಎದುರು ಬಹಳ ಸಣ್ಣ ಸಮುದಾಯದ ಜೈನ್ ಸಮಾಜದಿಂದ ಬಂದ ಧನಂಜಯ ಕುಮಾರ್ ಗೆಲ್ಲುವುದು ಬಿಡಿ, ಡೆಪಾಸಿಟ್ ಉಳಿದರೆ ಅದೇ ದೊಡ್ಡ ವಿಷಯ ಎಂದು ಸಮುದ್ರ ನಗರಿ ಮಾತನಾಡಿಕೊಂಡಿತ್ತು. ಅಂತಹ ಜನಾರ್ಧನ ಪೂಜಾರಿಯವರನ್ನು ಧನಂಜಯ ಕುಮಾರ್ ಸೋಲಿಸಿದಾಗ ದೆಹಲಿಯಲ್ಲಿ ಕೂತ ಬಿಜೆಪಿಯ ಭೀಷ್ಮರು ಕೂಡ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ನಂತರ ನಡೆದದ್ದು ಅಪ್ಪಟ ಇತಿಹಾಸ. ಧನಂಜಯ್ ಕುಮಾರ್ ಹಿಂದೆ ತಿರುಗಿ ನೋಡಲಿಲ್ಲ. 2009 ರಲ್ಲಿ ನಳಿನ್ ಕುಮಾರ್ ಕಟೀಲ್ ಮೊದಲ ಬಾರಿ ಪೂಜಾರಿಯವರ ಎದುರು ಸ್ಪರ್ಧಿಸಿದಾಗ ಚುನಾವಣಾ ರಾಜಕೀಯದಲ್ಲಿ ಅಂಬೆಗಾಲಿಡುವ ಹುಡುಗನನ್ನು ಈ ಬಾರಿ ಪೂಜಾರಿ ಸೋಲಿಸಿ ಲೋಕಸಭೆಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂದೇ ಕೇಸರಿ ಕೋಟೆಯ ಹೊರಗಿನ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದರು. ಇಂಗ್ಲೀಷಿನಲ್ಲಿ ಅದನ್ನು ಜೈಂಟ್ ಕಿಲ್ಲರ್ ಎನ್ನುತ್ತಾರೆ. ಕಟೀಲ್ 40200 ಮತಗಳ ಅಂತರದಿಂದ ಪೂಜಾರಿಯವರನ್ನು ಸೋಲಿಸಿದಾಗ ಸಂಘದ ತಾಕತ್ತಿನ ಪರಿಚಯ ಮತ್ತೊಮ್ಮೆ ಆಯಿತು.
ಇನ್ನು ಪುತ್ತೂರಿನ ವಿಷಯವನ್ನೇ ತೆಗೆದುಕೊಳ್ಳೋಣ. ಒಮ್ಮೆ ಶಾಸಕಿಯಾಗಿ ಜನರ ಪ್ರೀತಿಯನ್ನು ಪಡೆದುಕೊಂಡಿದ್ದ ಶಕುಂತಳಾ ಶೆಟ್ಟಿಯವರಿಗೆ ಪಕ್ಷ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಿದಾಗ ಅದನ್ನು ಗಂಜಿಕೇಂದ್ರ ಎಂದು ಆಪ್ತರಲ್ಲಿ ಹೇಳಿಕೊಂಡು ಸಚಿವ ಸ್ಥಾನ ಕೊಡಿ ಇದು ಬೇಡಾ ಎಂದಿದ್ದರು. ಸಂಘ ಕೊಟ್ಟದ್ದನ್ನು ಸ್ವೀಕರಿಸದೇ ಅದರ ವಿರುದ್ಧ ಮಾತನಾಡಿದರೆ ಅದು ತಮ್ಮ ರಾಜಕೀಯ ಇಳಿಜಾರಿಗೆ ತಾವೇ ಮನಸ್ಸು ಮಾಡಿದಂತೆ ಎನ್ನುವುದು ಶಕ್ಕು ಅಕ್ಕನಿಗೆ ಆವತ್ತು ಗೊತ್ತಿರಲಿಲ್ಲ. ಕೆಲವೊಮ್ಮೆ ಅಧಿಕಾರ ಕೈಯಲ್ಲಿ ಇದ್ದಾಗ ಗೆಲ್ಲಿಸಿದವರ ಮುಖಗಳು ಅಸ್ಪಷ್ಟವಾಗಿ ಕಾಣುತ್ತವೆ. 2008 ರಲ್ಲಿ ಇದೇ ಶಕುಂತಳಾ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಶಕ್ಕು ಅಕ್ಕ ಪಕ್ಷೇತರರಾಗಿ ನಿಂತರು. ಸ್ವಾಭಿಮಾನಿ ವೇದಿಕೆ ಕಟ್ಟಿದರು. ಅವರ ಹಿಂದೆ ಜನಸಂಘದ ನಾಯಕರಾಗಿದ್ದ ರಾಮ ಭಟ್ ನಿಂತರು. ಅಣ್ಣಾ ವಿನಯಚಂದ್ರ ನಿಂತರು. ಇನ್ನೇನೂ ಶಕುಂತಳಾ ಶೆಟ್ಟಿ ಎದುರು ಬಿಜೆಪಿಯಿಂದ ಯಾರು ನಿಲ್ಲುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾಗ ಸಂಘ ನಿಲ್ಲಿಸಿದ್ದು ಮಲ್ಲಿಕಾ ಪ್ರಸಾದ್ ಭಂಡಾರಿಯವರನ್ನು. ಪುತ್ತೂರಿನ ಜಗತ್ ಪ್ರಸಿದ್ಧ ವೈದ್ಯ ಪ್ರಸಾದ್ ಭಂಡಾರಿಯವರ ಧರ್ಮಪತ್ನಿ ಎನ್ನುವುದು ಬಿಟ್ಟರೆ ಮಲ್ಲಿಕಾ ಅವರಿಗೆ ಅಂತಹ ಹೇಳಿಕೊಳ್ಳುವ ಹಿನ್ನಲೆ ಇಲ್ಲ. ಎದುರಿಗೆ ರಾಜಕೀಯ ಅನುಭವವನ್ನು ಅರೆದು ಕುಡಿದು ಎರಡು ಬಾರಿ ಬಂಟ್ವಾಳದಲ್ಲಿ ರಮಾನಾಥ್ ರೈ ಅವರ ವಿರುದ್ಧ ಸ್ಪರ್ಧಿಸಿದ, ಒಂದು ಬಾರಿ ಶಾಸಕಿಯಾಗಿರುವ ಶಕುಂತಳಾ ಶೆಟ್ಟಿ ಇದ್ದರೆ, ಮತ್ತೊಂದೆಡೆ ಕಾಂಗ್ರೆಸ್ಸಿನ ಯುವ ಅಧ್ಯಕ್ಷ ಬೊಂಡಾಲ ಜಗನ್ನಾಥ್ ಶೆಟ್ಟಿ. ಮಲ್ಲಿಕಾ ಪ್ರಸಾದ್ ಗೆಲ್ತಾರಾ ಎನ್ನುವ ಪ್ರಶ್ನೆಯನ್ನು ಸಂಘಕ್ಕೆ ಕೇಳಿದಾಗ ಅದರ ಮುಖಂಡರು ಮುಗುಳ್ನಗುತ್ತಾ ಮುಂದೆ ಸಾಗುತ್ತಿದ್ದರು. ಯಾಕೆಂದರೆ ಅದು ಆತ್ಮವಿಶ್ವಾಸ. ಕೊನೆಗೆ ಫಲಿತಾಂಶ ಬಂದಾಗ ಮಲ್ಲಿಕಾ ಪ್ರಸಾದ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಹದಿನೈದು ವರ್ಷಗಳ ನಂತರ ಈಗ ಇತಿಹಾಸ ಪುನರಾರ್ವತೆ ಆಗಿದೆ. ಆಗ ಶಕ್ಕು ಅಕ್ಕನ ಹಿಂದೆ ಪುತ್ತೂರಿನ ಮುತ್ತು ರಾಮಭಟ್ ಅವರಂತಹ ಮುಖಗಳಿದ್ದವು. ಈಗ ಪುತ್ತಿಲರ ಹಿಂದೆ ಅಂತಹ ಕೈಗಳಿಲ್ಲ. ಇದೇ ಎಂದು ಅವರು ನಂಬಿಕೊಂಡಿರುವುದು ಹಿಂದು ಕಾರ್ಯಕರ್ತರ ಪಡೆ. ಆದರೆ ಮೊನ್ನೆ ಆಶಾ ತಿಮ್ಮಪ್ಪ ಗೌಡ ಅವರ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಇದ್ದ ಕಾರ್ಯಕರ್ತರ ಪಡೆಯನ್ನು ನೋಡಿದ ನಂತರವಾದರೂ ಪುತ್ತಿಲ ತಮ್ಮ ನಿಲುವನ್ನು ಬದಲಿಸಿಕೊಳ್ಳದಿದ್ದರೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಾಗುತ್ತದೆ.
ಇನ್ನು ಮೊಯ್ದೀನ್ ಬಾವ ಅವರಿಗೆ ಇನ್ನೊಂದು ಅವಕಾಶವನ್ನು ಕಾಂಗ್ರೆಸ್ಸ್ ಕೊಟ್ಟಿದ್ದರೆ ಜೀವ ಬಿಟ್ಟು ಕೆಲಸ ಮಾಡಿ ಗೆಲ್ಲಲು ಗರಿಷ್ಟ ಪ್ರಯತ್ನವನ್ನು ಮಾಡುತ್ತಿದ್ದರೇನೋ. ಯಾಕೆಂದರೆ ಅವರಿಗೆ ಆ ಕ್ಷೇತ್ರದಲ್ಲಿ ಒಂದಿಷ್ಟು ಹೆಸರಿದೆ. ಒಂದಿಷ್ಟು ಅಭಿಮಾನಿ ವರ್ಗವಿದೆ. ಶಾಸಕರಾಗಿದ್ದಾಗ ವರಿಷ್ಟರ ಕೈಕಾಲು ಹಿಡಿದು ಅನುದಾನ ತಂದು ಅಭಿವೃದ್ಧಿ ಮಾಡಿದ್ದರು ಎನ್ನುವ ಜನಾಭಿಪ್ರಾಯ ಇದೆ. ಅವರನ್ನು ಬಿಟ್ಟು ಈಗ ಟಿಕೆಟ್ ಸಿಕ್ಕಿರುವ ಇನಾಯತ್ ಆಲಿಯವರ ಬಳಿ ಹಣ ಇದೆ. ಅದೇ ಈಗ ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಿರುವುದು. ಇನ್ನು ಬಾವ ಘೋಷಣೆ ಮಾಡಿದ ಹಾಗೆ ಆಲಿ ಗೆಲ್ಲಲು ತಾನು ಬಿಡಲ್ಲ. ತನಗೆ ಓಟ್ ಕೊಡದಿದ್ದರೂ ಪರವಾಗಿಲ್ಲ, ಆಲಿಗೆ ಕೊಡಬೇಡಿ ಎಂದು ಹೇಳಿಕೊಂಡು ಅವರು ತಿರುಗಾಡಲಿದ್ದಾರೆ. ಜೆಡಿಎಸ್ ಗೆ ಸೇರಿ ಸ್ಪರ್ಧಿಸಲಿದ್ದಾರೆ. ಬಹುಶ: ಕಾಂಗ್ರೆಸ್ಸಿಗೆ ಈ ಸೀಟಿನ ಮೇಲೆ ಆಸೆ ಇದ್ದಂತಿಲ್ಲ. ಇದ್ದಿದ್ರೆ ಹೀಗೆ ಮಾಡುತ್ತಿರಲಿಲ್ಲ!
Leave A Reply