ಗೆಲುವು ಸಿಗದ ಹತಾಶೆ, ಅಧಿಕಾರ ಇಲ್ಲದ ನಿರಾಶೆ ಖರ್ಗೆಯವರದ್ದು!!
ಕೈಲಾಗದವ ಮೈ ಪರಚಿಕೊಂಡ ಎನ್ನುವ ಗಾದೆ ಮಾತಿದೆ. ಆದರೆ ಬಹಿರಂಗ ವೇದಿಕೆಯಲ್ಲಿ ಮೈ ಪರಚಿಕೊಳ್ಳುವುದು ಯಾವಾಗಲೂ ಅಸಹ್ಯ. ಯಾಕೆಂದರೆ ಅದರಿಂದ ನಿಮ್ಮ ಘನತೆ ಮತ್ತು ಜನ ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ಉಂಟಾಗುತ್ತದೆ. ಆದರೆ ಏನು ಮಾಡುವುದು? ಕೆಲವೊಮ್ಮೆ ಹತಾಶೆ ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ ನಮಗೆ ನಾವೇ ಏನಾದರೂ ಮಾಡಿಕೊಳ್ಳೋಣ ಎಂದು ಅನಿಸುತ್ತದೆ. ಹೀಗೆ ಹತಾಶೆ ಮತ್ತು ಕೈಲಾಗದೇ ವೇದಿಕೆ ಮೇಲೆ ಮೈಕ್ ಮುಂದೆ ತಮ್ಮನ್ನು ತಾವು ಪರಚಿಕೊಂಡು ಮತದಾನಕ್ಕೆ ಹತ್ತು ದಿನಗಳು ಇರುವಾಗ ಖರ್ಗೆ ಸಾಹೇಬ್ರು ಆವಾಂತರ ಮಾಡಿಕೊಂಡು ಬಿಟ್ಟಿರುವುದೇ ಅಸಹ್ಯ.
ನಿಮಗೆ ಒಬ್ಬ ವ್ಯಕ್ತಿಯ ಬಗ್ಗೆ ಅಸಾಧ್ಯ ಕೋಪ ಇರಬಹುದು. ನಿಮ್ಮ ದಾರಿಗೆ ಅಡ್ಡವಾಗಿ ನಿಂತಿದ್ದಾರೆ ಎನ್ನುವ ರೋಷ ಇರಬಹುದು. ಎಲ್ಲಿಂದ ಬಂದು ನಮ್ಮ ವಿರುದ್ಧ ತೊಡೆ ತಟ್ಟಿದ ಎನ್ನುವ ಉರಿ ಇರಬಹುದು. ಇಂತವರು ಇರುವುದರಿಂದ ತಮಗೆ ಗೆಲುವು ಮರೀಚಿಕೆ ಎನ್ನುವ ಭಾವನೆ ಇರಬಹುದು. ಏನಾದ್ರೂ ಮಾಡಿ ಖರ್ಗೆ ಅಂಕಲ್ ಎಂದು ಗಾಂಧಿ ಕುಡಿಗಳು ನಿತ್ಯ ಹೇಳುವುದನ್ನು ಭರಿಸಲಾಗದೇ ನೀವು ಒದ್ದಾಡುತ್ತಿರಬಹುದು. ನಿಮಗೆ ರಾತ್ರಿ ನಿದ್ದೆಯಲ್ಲಿ ಮೋದಿ ಬಂದು ಕಾಳಿಂಗ ಸರ್ಪದಂತೆ ಕಾಣಿಸಿ ಬೆವರು ಹರಿಸುತ್ತಾ ಇರಬಹುದು. ನಿಮಗೆ ಇಡೀ ದಿನ ಎದುರಿಗೆ ಮೋದಿ ಎಂಬ ದೊಡ್ಡ ಆಲದ ಮರದ ಎದುರು ನೀವು ಒಂದು ಸಣ್ಣ ಸಸಿ ಎನ್ನುವ ಭಾವನೆ ಬರುತ್ತಿರಬಹುದು. ಆದರೆ ಇದು ಏನೇ ಇದ್ದರೂ ಒಂದು ಲಕ್ಷ್ಮಣ ರೇಖೆ ಎನ್ನುವುದನ್ನು ನಾಲಿಗೆಯ ಮಧ್ಯದಲ್ಲಿ ಎಳೆಯದಿದ್ದರೆ ಖರ್ಗೆಜಿ ನಿಮಗೆ ಭವಿಷ್ಯ ಇನ್ನಷ್ಟು ಅಂಧಕಾರವಾಗುವುದರಲ್ಲಿ ಸಂಶಯವಿಲ್ಲ.
ಪ್ರವಾಹದ ಎದುರು ಈಜುವ ಮೊದಲು ತುಂಬಾ ಯೋಚಿಸಬೇಕು. ಆದರೆ ಸುನಾಮಿಯ ಎದುರು ನಿಲ್ಲುವ ಮೊದಲು ಸಾವಿಗೆ ಬೇಗ ಬರುತ್ತೇನೆ ಎಂದು ಹೇಳಿರಬೇಕು. ಮೋದಿ ಈಗ ಅಕ್ಷರಶ: ಕಾಂಗ್ರೆಸ್ಸಿನ ಪಾಲಿಗೆ ಸುನಾಮಿಯೇ ಆಗಿದ್ದಾರೆ. ಅವರ ವಿರುದ್ಧ ಗಾಂಧಿ ಪರಿವಾರ ಮತ್ತು ಅದರ ಸುತ್ತಲೂ ಸುತ್ತುವ ಕೆಲವು ಭಟ್ಟಂಗಿಗಳು ಬಿಟ್ಟರೆ ಬೇರೆ ಯಾರೂ ಇಲ್ಲ. ಇಡೀ ದೇಶ ಮೋದಿಯವರಿಗೆ ಶಕ್ತಿ ತುಂಬಲು 2014 ರಿಂದಲೇ ಮನಸ್ಸು ಮಾಡಿದೆ. ಈ ಹಂತದಲ್ಲಿ ಒಂದಿಷ್ಟು ಜಾಣತನದಿಂದ ರಾಜಕೀಯ ಮಾಡುವುದನ್ನು ಬಿಟ್ಟು ಮೋದಿಗೆ ವಿಷ ಸರ್ಪ ಮತ್ತು ಅದನ್ನು ನೆಕ್ಕಿದ್ರೆ ಸಾವು ಗ್ಯಾರಂಟಿ ಎನ್ನುವ ಅರ್ಥದ ಮಾತುಗಳನ್ನು ಆಡುವುದು ಇದೆಯಲ್ಲ, ಇದು ಈ ಕಾಲಘಟ್ಟದಲ್ಲಿ ಬುಲ್ಡೋಜರ್ ಕೆಳಗೆ ತಲೆ ಕೊಟ್ಟರೂ ನನಗೆ ಏನೂ ಆಗಲ್ಲ ಎನ್ನುವ ರೀತಿಯಲ್ಲಿ ಇರುತ್ತದೆ.
ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯಲ್ಲ ಎನ್ನುವುದು ಖರ್ಗೆ ಮಾತಿನಿಂದ ಸ್ಪಷ್ಟವಾಗಿದೆ. ಇದೇ ಖರ್ಗೆ ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ಮೋದಿಯವರನ್ನು ಹತ್ತು ತಲೆಯ ರಾವಣ ಎಂದು ಟೀಕೆ ಮಾಡಿದ್ದರು. ಏನಾಯಿತು? ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತಾ? ಬರಬಹುದಾಗಿದ್ದ ಕೆಲವು ಸೀಟುಗಳನ್ನು ಕೂಡ ಕಾಂಗ್ರೆಸ್ ಕಳೆದುಕೊಂಡಿತ್ತು. ಈಗ ಕರ್ನಾಟಕದ ಚುನಾವಣೆ. ರಾವಣನ ಹೋಲಿಕೆಯಿಂದ ವಿಷಸರ್ಪಕ್ಕೆ ಖರ್ಗೆ ಶಿಫ್ಟ್ ಆಗಿದ್ದಾರೆ. ನೆಕ್ಕಿದ್ರೆ ಅಪಾಯ ಎಂದಿದ್ದಾರೆ. ಹೀಗೆ ನೀವು ಹೇಳುವುದು ಯಾರಿಗೆ? ನಿಮ್ಮನ್ನು ಲೋಕಸಭೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ ಅದೇ ಜನರ ಮುಂದೆ ಅಲ್ಲವೇ ಖರ್ಗೆಜಿ? ನಿಮಗೆ ಗಾಂಧಿ ಫ್ಯಾಮಿಲಿ ರಾಜ್ಯಸಭೆಗೆ ಕಳುಹಿಸದೇ ಇದ್ದರೆ ಈಗ ನೀವು ಮನೆಯಲ್ಲಿ ಉಪ್ಪಿನಕಾಯಿ ನೆಕ್ಕುತ್ತಾ ಕುಳಿತಿರಬೇಕಿತ್ತು. ನಿಮ್ಮ ಅದೃಷ್ಟ ಚೆನ್ನಾಗಿತ್ತು. ಬಚಾವಾದ್ರಿ. ಆದರೆ ಅದೇ ಮಣಿಶಂಕರ್ ಅಯ್ಯರ್ ದೊಡ್ಡ ಬಕೆಟ್ ಹಿಡಿದು ಗಾಂಧಿಗಳನ್ನು ಖುಷಿ ಮಾಡೋಣ ಎಂದು ಇದೇ ಮೋದಿಯನ್ನು ನೀಚ ಎಂದರು. ಫಲಿತಾಂಶ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಸ್ಥಾನಕ್ಕೆ ಕುಸಿದುಬಿಟ್ಟಿತ್ತು. ಆತ್ಮಾವಲೋಕನ ಸಭೆಯಲ್ಲಿ ಅಯ್ಯರ್ ಹೇಳಿಕೆ ತಿರುಗುಬಾಣವಾಗಿತ್ತು ಎನ್ನುವ ವರದಿ ಬಂತು. ನಂತರ ಅಯ್ಯರ್ ಅವರನ್ನು ಗಾಂಧಿ ಕುಟುಂಬ ಎಷ್ಟು ದೂರ ಇಟ್ಟಿತ್ತು ಎಂದರೆ ಈಗ ಪೋಸ್ಟ್ ಮ್ಯಾನ್ ಕೂಡ ಯಾವುದಾದರೂ ಲೆಟರ್ ಅಯ್ಯರ್ ಮನೆಗೆ ತಲುಪಿಸಲು ಮಣ್ಣಿನ ದಾರಿಯಲ್ಲಿ ಕಿಲೋ ಮೀಟರ್ ಒಳಗೆ ನಡೆಯಬೇಕಿದೆ. ಮೌತ್ ಕಾ ಸೌದಾಗರ್ ಎಂದು ಆವತ್ತು ಸೋನಿಯಾ ಇದೇ ಮೋದಿಯವರನ್ನು ಟೀಕಿಸಿದ್ರು.
ಅದರ ನಂತರ ರಾಹುಲ್ ಚೌಕಿದಾರ್ ಚೋರ್ ಹೇ ಅಂದರು. ಕಾಂಗ್ರೆಸ್ ಕುಂಟುತ್ತಾ ಸಾಗುತ್ತಾ ಇದ್ದದ್ದು ಮತ್ತೆ ತೆವಳಿಕೊಂಡು ಹೋಗುವ ಪರಿಸ್ಥಿತಿಗೆ ಬಂದುಬಿಟ್ಟಿತ್ತು. ಮೋದಿಯ ಜನಪ್ರಿಯತೆಯಿಂದ ಭಾರತೀಯ ಜನತಾ ಪಾರ್ಟಿಗೆ ಹೆಚ್ಚೆಚ್ಚು ಸೀಟು ಬರುತ್ತದೆ ಎನ್ನುವುದರಲ್ಲಿ ಯಾವ ಭಿನ್ನಾಭಿಪ್ರಾಯವಿಲ್ಲ. ಯೋಗಿಯಂತಹ ಮುಖ್ಯಮಂತ್ರಿ ನಮಗೂ ಬೇಕು ಎನ್ನುವಂತಹ ಅಭಿಪ್ರಾಯ ಇದ್ದೇ ಇದೆ. ಇಂತಹ ಸಂದರ್ಭದಲ್ಲಿ ನಿಮ್ಮ ಕುಟುಂಬದವರೇ ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎನ್ನುವುದೇ ಅನುಮಾನ ಇರುವಾಗ ಸುಮ್ಮನೆ ವೈಯಕ್ತಿಕ ಟೀಕೆ ಮಾಡುವುದು ನಿಮ್ಮ ಸೋಲಿಗೆ ನೀವೆ ಇಟ್ಟಿಗೆಗಳನ್ನು ಸಂಗ್ರಹಿಸಿಟ್ಟ ಹಾಗೆ ಅಲ್ಲವೇ ಖರ್ಗೆ ಅವರೇ? ಇನ್ನು ಕೊನೆಯದಾಗಿ ಇತ್ತೀಚೆಗೆ ಮೋದಿ ಹಾಗೂ ಗಣ್ಯರೊಡನೆ ಖರ್ಗೆಯವರು ಭೋಜನ ಸ್ವೀಕರಿಸುತ್ತಿರುವ ಚಿತ್ರವೊಂದು ವೈರಲ್ ಆಗುತ್ತಿದೆ. ರಾಜಕೀಯ ಬೇರೆ, ಸಂಬಂಧಗಳು ಬೇರೆ ಎಂದು ಇಟ್ಟುಕೊಳ್ಳೋಣ. ಆದರೆ ಗೆಲುವು ಸಿಗದ ಹತಾಶೆ, ಅಧಿಕಾರ ಇಲ್ಲದ ನಿರಾಶೆ ಯಾವಾಗ ನಮ್ಮ ಬಾಯಿಯಿಂದ ಏನು ಹೇಳಿಸುತ್ತದೆ ಎಂದು ಗೊತ್ತಾಗುವುದಿಲ್ಲ. ಆದರೆ ಐದು ದಶಕಗಳಿಂದ ರಾಜಕೀಯ ಮಾಡುತ್ತಿರುವ ಖರ್ಗೆ ಇಷ್ಟು ಬೇಗ ಮನಸ್ಸನ್ನು ಮನೆಯಲ್ಲಿ ಬಿಟ್ಟು ವೇದಿಕೆ ಹತ್ತುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ!
Leave A Reply