ಕಾಂಗ್ರೆಸ್ಸಿಗರೇ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ ಘೋಷಣೆ ಕೂಗಿ!!
ಒಂದು ಮಾಲ್ ನಡೆಸಿದ ಹಾಗೆ ಒಂದು ರಾಜ್ಯವನ್ನು ನಡೆಸಲು ಆಗುವುದಿಲ್ಲ. ಮಾಲ್ ಆದರೆ ಕಾಲಕಾಲಕ್ಕೆ ಹಬ್ಬ ಹರಿದಿನಗಳ ಸಂದರ್ಭ ವಿಶೇಷ ಡಿಸ್ಕೌಂಟ್ ನೀಡಿ ಗ್ರಾಹಕರನ್ನು ಸೆಳೆದು ವ್ಯಾಪಾರ ಹೆಚ್ಚಿಸುತ್ತಾ ಹೋಗಬಹುದು. ಆಕರ್ಷಕವಾಗಿ ಕಾರ್ಯಕ್ರಮ ನಡೆಸಿ ಸಿನೆಮಾ ತಾರೆಯರನ್ನು ಕರೆದು ಅವರಿಂದ ಎರಡು ಒಳ್ಳೆಯ ಮಾತುಗಳನ್ನು ಆಡಿಸಿ ಜನರಿಗೆ ತಮ್ಮತ್ತ ಸೆಳೆಯಬಹುದು. ಜಾಹೀರಾತು ನೀಡಿ ಜನರ ಗಮನ ತಮ್ಮತ್ತ ಆಕರ್ಷಿಸಬಹುದು. ಇದೆಲ್ಲಾ ಚುನಾವಣೆಯ ಸಂದರ್ಭದಲ್ಲಿ ಚೆಂದ. ಆದರೆ ಮಾಲ್ ಗಳಲ್ಲಿ ವ್ಯಾಪಾರಿ ತಂತ್ರಗಳನ್ನು ಹೆಣೆದ ಹಾಗೆ ಚುನಾವಣೆಗಳಲ್ಲಿ ಅಳವಡಿಸಲು ಪಕ್ಷಗಳು ಹೋಗಬಾರದು. ಯಾಕೆಂದರೆ ಚುನಾವಣೆ ನಡೆದು ಫಲಿತಾಂಶ ಬಂದು ಒಂದು ಸರಕಾರ ರಚನೆ ಆದ ಬಳಿಕ ಚುನಾವಣಾ ಪ್ರಚಾರದ ಸಮಯದಲ್ಲಿ ತಾವು ಹೇಳಿದ್ದು ಮರೆತು ಹೋಯಿತು ಎನ್ನಲು ಆಗುತ್ತಾ? ಮಾಲ್ ಗಳಾದರೆ ನಾವು ಅವರ ವಸ್ತುಗಳ ಗುಣಮಟ್ಟದ ಬಗ್ಗೆ ಆರೋಪ ಮಾಡಿ ಗ್ರಾಹಕ ನ್ಯಾಯಾಲಯಕ್ಕಾದರೂ ಹೋಗಬಹುದು. ಆದರೆ ಒಂದು ಪಕ್ಷ ಕೊಟ್ಟ ಭರವಸೆಗಳನ್ನು ಅದು ಈಡೇರಿಸದೇ ಹೋದರೆ ಆಗ ಯಾವ ನ್ಯಾಯಾಲಯಕ್ಕೆ ಹೋಗಲು ಸಾಧ್ಯ. ಹತ್ತಿಪ್ಪತ್ತು ಸಾವಿರದ ವಸ್ತುವೇ ಅಂಗಡಿಯವರು ಹೇಳಿದ ಆಶ್ವಾಸನೆ, ಕೊಟ್ಟ ಗ್ಯಾರಂಟಿಯನ್ನು ಪೂರೈಸದಿದ್ದರೆ ಕೋಪಗೊಳ್ಳುವ ನಾವು ಸಾವಿರಾರು ಕೋಟಿಯ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬರುವ ಪಕ್ಷಗಳು ತಮ್ಮ ವಾಗ್ದಾನವನ್ನು ಮರೆತರೆ ಏನು ಮಾಡಲು ಸಾಧ್ಯವಿದೆ.
ನಾವು ಅಧಿಕಾರಕ್ಕೆ ಬಂದರೆ ವರುಣ ದೇವನೊಂದಿಗೆ ಮಾತನಾಡಿ ಉತ್ತಮ ಮಳೆ ಬರುವ ಹಾಗೆ ಮಾಡುತ್ತೇವೆ. ಹೆಚ್ಚು ಮಳೆ ಬಂದರೆ ಫೋನ್ ಮಾಡಿ ಹೇಳಿ ನಿಲ್ಲಿಸುತ್ತೇವೆ ಎಂದು ರಾಜಕೀಯ ಪಕ್ಷಗಳು ಹೇಳುವುದು ಮಾತ್ರ ಬಾಕಿ. ಅದು ಬಿಟ್ಟರೆ ಇವರುಗಳು ಬೇರೆ ಎಲ್ಲವನ್ನು ಹೇಳಿಯಾಗಿದೆ. ಇಲ್ಲದೇ ಹೋದರೆ ಒಂದು ರಾಜ್ಯದ ಬಜೆಟಿನ ಅಂದಾಜು ಇಲ್ಲದೆ, ಏಳೆಂಟು ಬಾರಿ ರಾಜ್ಯದ ಬಜೆಟ್ ಮಂಡಿಸಿದ ಕೀರ್ತಿಯನ್ನು ಹೊಂದಿರುವ ಮಾಜಿ ಸಿಎಂ ಸಿದ್ದು ಇರುವ ಪಕ್ಷದವರು ಉಚಿತ ಘೋಷಣೆಗಳ ಮೇಲೆ ಘೋಷಣೆಗಳನ್ನು ಕೂಗುತ್ತಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರಲಿಲ್ಲ. ಮನೆಯ ಯಜಮಾನಿಗೆ ವರ್ಷಕ್ಕೆ 24000 ರೂಪಾಯಿ ನೀಡುತ್ತೇವೆ ಎಂದು ಇವರು ಬಹಳ ಸಿಂಪಲ್ಲಾಗಿ ಹೇಳುತ್ತಿರುವುದು ಹೇಳಿದಷ್ಟೇ ಸುಲಭವಲ್ಲ. ನಮ್ಮ ರಾಜ್ಯದ ಜನಸಂಖ್ಯೆ ಅಂದಾಜು ಏಳು ಕೋಟಿ. ಅದರ ಅರ್ಥ ಕನಿಷ್ಟ ಎರಡು ಕೋಟಿ ಕುಟುಂಬಗಳು ನಮ್ಮ ರಾಜ್ಯದಲ್ಲಿವೆ. ಅಷ್ಟು ಕುಟುಂಬಗಳ ಅರ್ಧದಷ್ಟಾದರೂ ಕುಟುಂಬಗಳಲ್ಲಿ ಮನೆಯ ಯಜಮಾನಿಗಳು ಇದ್ದಾರೆ. ಅವರಿಗೆ ವರ್ಷಕ್ಕೆ ಇಪ್ಪತ್ತನಾಲ್ಕು ಸಾವಿರ ರೂಪಾಯಿ ಕೊಡಲು ಇವರು ಹೋದರೆ ವರ್ಷಕ್ಕೆ ತಗಲುವ ವೆಚ್ಚವನ್ನು ಕ್ಯಾಲ್ಕುಲೇಟರ್ ಹಾಕಿ ನೋಡಿ. ಆಗ ನಿಮಗೆ ನಮ್ಮ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಡಬೇಕಾದ ಗ್ಯಾರಂಟಿಯ ಅಂದಾಜು ಆಗುತ್ತದೆ. ಇದರೊಂದಿಗೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ. ಅದರೊಂದಿಗೆ ನಿರುದ್ಯೋಗಿಗಳಿಗೆ ಪ್ರತಿ ಒಬ್ಬರಿಗೆ ಗೌರವಧನ. ಹೀಗೆ ಇವರು ಕ್ಯಾಲ್ಕುಲೇಟರ್ ನೋಡದೇ ಘೋಷಣೆ ಕೂಗುತ್ತಿರುವ ರೀತಿ ನೋಡಿದರೆ ಸಂಶಯವೇ ಇಲ್ಲ. ಇನ್ನು ಮುಂದಿನ ನಮ್ಮ ರಾಜ್ಯದ ಭವಿಷ್ಯದ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ.
ಇನ್ನು ಇದನ್ನು ನಂಬಿ ಕಾಂಗ್ರೆಸ್ಸಿಗೆ ಮತ ಹಾಕಿದ ಮತದಾರನಿಗೆ ಇವರು ಮೊಣಕೈಗೆ ಬೆಲ್ಲ ತಾಗಿಸಿ ನೆಕ್ಕು ಎಂದರೆ ಏನಾಗುತ್ತದೆ? ಉದಾಹರಣೆಗೆ ಈಗ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ಎಂದು ಹೇಳುವ ಇವರು ಮುಂದೆ ಅಧಿಕಾರಕ್ಕೆ ಬಂದರೆ ಅದರಲ್ಲಿ ಕಂಡೀಶನ್ ಅಪ್ಲೈ ಎಂದು ಹೇಳುವುದಿಲ್ಲ ಎಂದು ಏನು ಗ್ಯಾರಂಟಿ. ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಬಾಯಿ ತಪ್ಪಿ ಅಷ್ಟೂ ಗ್ಯಾರಂಟಿಗಳನ್ನು ಘೋಷಿಸಿದ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಅನೇಕ ರಾಜ್ಯ ಸರಕಾರಗಳು ಅದನ್ನು ಪೂರೈಸಲಾಗದೇ ಕೈ ಎತ್ತಿ ಆಗಿದೆ. ಇಷ್ಟು ಕೊಡಲು ಎಲ್ಲಿದೆ ಫಂಡ್ ಎಂದು ಅಧಿಕಾರಿಗಳು ಕೇಳುವಾಗ ನೋಟ್ ಪ್ರಿಂಟ್ ಮಾಡಿ ಎಂದು ಹೇಳಲು ಆಗುತ್ತಾ? ಯಾಕೆಂದರೆ ರಾಜ್ಯದ ಒಟ್ಟು ಬಜೆಟ್ ನಲ್ಲಿ ಯೋಜನಾ ವೆಚ್ಚುಗಳು ಮತ್ತು ಯೋಜನೇತರ ವೆಚ್ಚಗಳು ಎಂದು ಇರುತ್ತವೆ. ಯೋಜನೇತರ ವೆಚ್ಚಗಳು ಎಂದರೆ ಅದರಿಂದ ರಿಟನ್ಸ್ ಇಲ್ಲ. ಉದಾಹರಣೆಗೆ ಸರಕಾರಿ ಅಧಿಕಾರಿಗಳ ಸಂಬಳ, ಭತ್ಯೆ, ಪಿಂಚಣಿಯೇ ಸರಕಾರದ ಬಹುಭಾಗ ಆದಾಯವನ್ನು ಕಸಿದುಕೊಳ್ಳುತ್ತದೆ. ಇದನ್ನು ಕಡಿತಗೊಳಿಸುವ ಧಮ್ ಯಾವ ಸರಕಾರಕ್ಕೂ ಇಲ್ಲ. ಅದನ್ನು ಪ್ರತಿ ಬಾರಿ ಹೆಚ್ಚಿಸಲು ವೇತನ ಆಯೋಗಗಳನ್ನು ರಚಿಸಲಾಗುತ್ತದೆ ವಿನ: ಬಿಳಿಯಾನೆಯಂತಹ ಇಂತಹ ದುಬಾರಿ ಮೊತ್ತವನ್ನು ಕತ್ತರಿಸಲು ಆಗುವುದೇ ಇಲ್ಲ. ಇನ್ನು ಯೋಜನಾ ವೆಚ್ಚ ಎಂದರೆ ಸೇತುವೆಗಳು, ಅಣೆಕಟ್ಟುಗಳು, ರಸ್ತೆಗಳ ಸಹಿತ ಯಾವ ಅಭಿವೃದ್ಧಿಯಿಂದ ರಾಜ್ಯಕ್ಕೆ ಲಾಭ ಆಗುತ್ತದೆಯೋ ಅದು. ಅವುಗಳಿಗೆ ಹಣ ಇಡದೇ ಇದ್ದರೆ ನಾಳೆ ಇದೇ ಜನ ಏನು ಕಿಸಿದಿದ್ದೀರಿ ಐದು ವರ್ಷಗಳಲ್ಲಿ ಎಂದು ಕೇಳಿಯೇ ಕೇಳುತ್ತಾರೆ. ಗುದ್ದಲಿಪೂಜೆ, ಶಿಲಾನ್ಯಾಸ ಆಗದೇ ಹೋದರೆ ಜನಪ್ರತಿನಿಧಿಗಳು ಬದುಕುವುದು ಬೇಡವೇ? ಅದರ ನಡುವೆ ಈ ಫ್ರೀ ಕೊಡುಗೆಗಳನ್ನು ಕೊಡಲು ಹಣ ಕಾಂಗ್ರೆಸ್ ಪಕ್ಷ ತನ್ನ ಕಿಸೆಯಿಂದ ನೀಡುವುದಿಲ್ಲ. ಆದ್ದರಿಂದ ಉಚಿತವಾಗಿ ನೀಡುವ ಬದಲು ಒಂದಿಷ್ಟು ಕಡಿಮೆ ದರಕ್ಕೆ ನೀಡಿದರೂ ಪರವಾಗಿಲ್ಲ. ಸರಕಾರ ನಷ್ಟಕ್ಕೆ ಬೀಳಬಾರದು. ಅದರ ಬದಲು ಈ ರಾಜಕಾರಣಿಗಳಿಗೆ ಅಷ್ಟು ಸೇವೆ ಮಾಡುವ ಮನಸ್ಸಿದ್ದರೆ ತಮ್ಮ ವೇತನ, ಭತ್ಯೆ, ಪಿಂಚಣಿ ಎಲ್ಲಾ ತ್ಯಾಗ ಮಾಡುತ್ತೇವೆ. ಆ ಹಣ ಅಭಿವೃದ್ಧಿಗೆ ಬಳಸುತ್ತೇವೆ ಎಂದು ಘೋಷಣೆ ಮಾಡಿ ಚುನಾವಣೆಗೆ ನಿಲ್ಲಲಿ. ಆಗುತ್ತಾ?
Leave A Reply