ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹೇಳಿದ್ದಾರೆ ಎನ್ನುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪಸರಿಸಲಾಗುತ್ತಿದೆ. ಅದರಲ್ಲಿ ನಾವು ಹಿಂದೂತ್ವದಲ್ಲಿ ಮುಂದುವರೆಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ ಎನ್ನುವ ಅರ್ಥದ ಮಾತುಗಳನ್ನು ಹೆಡ್ಡಿಂಗ್ ಆಗಿ ಬಳಸಿ ವೈರಲ್ ಮಾಡಲಾಗುತ್ತಿದೆ. ಇದು ಒಂದು ಅಸಹ್ಯ ರಾಜಕಾರಣದ ಪರಮಾವಧಿ. ಪ್ರಸಿದ್ಧ ಪತ್ರಿಕೆಯೊಂದರ ಮುಖಪುಟದ ಸ್ಕ್ರೀನ್ ಶಾಟ್ ತೆಗೆದು ಅದರಲ್ಲಿ ಪತ್ರಿಕೆಯ ಹೆಸರಿನ ಭಾಗವನ್ನು ಹಾಗೆ ಉಳಿಸಿ ಕೆಳಗೆ ತಾವು ಯಾರ ತೇಜೋವಧೆ ಮಾಡಲು ಹೊರಟಿದ್ದಾರೋ ಅವರ ಯಾವುದಾದರೂ ಫೋಟೋ ಬಳಸಿ ಕುತಂತ್ರಿಗಳು ತಮಗೆ ಬೇಕಾದ ವಿಷಯವನ್ನು ತುರುಕುತ್ತಾರೆ. ಆ ಪತ್ರಿಕೆಯ ತುಣುಕನ್ನು ಎಲ್ಲೆಡೆ ವೈರಲ್ ಮಾಡಲಾಗುತ್ತದೆ. ಇವತ್ತಿನ ದಿನಗಳಲ್ಲಿಯೂ ಪತ್ರಿಕೆಗಳ ಬಗ್ಗೆ ಒಂದಿಷ್ಟು ಗೌರವ, ವಿಶ್ವಾಸ ಇದೆ. ಹಾಗಿರುವಾಗ ಒಂದು ಪ್ರಸಿದ್ಧ ಪತ್ರಿಕೆಯಲ್ಲಿ ಹೀಗೆ ಬಂದಿದೆ ಎಂದರೆ ಜನ ಕಣ್ಣಾಡಿಸದೇ ಬಿಡುವುದಿಲ್ಲ. ಅದರಲ್ಲಿಯೂ ರಾಷ್ಟ್ರೀಯ ನಾಯಕರು ಹೇಳಿದ್ದಾರೆನ್ನಲಾದ ಹೇಳಿಕೆಯನ್ನು ಓದುವಾಗ ಅದು ಮನಸ್ಸಿನಲ್ಲಿ ಕುಳಿತುಕೊಳ್ಳುವುದು ಸಹಜ. ಹೀಗೆ ಒಮ್ಮೆ ಮನಸ್ಸಿನ ಆಳದಲ್ಲಿ ಆ ವಿಷಯ ಫಿಕ್ಸ್ ಆದರೆ ನಿಮಗೆ ಆ ನಾಯಕನ ಬಗ್ಗೆ ಒಂದು ರೀತಿಯ ಕೋಪ, ರೋಷ, ತಾತ್ಸಾರ ಉಂಟಾಗುತ್ತದೆ. ಇದರಿಂದ ಎದುರಾಳಿ ಪಕ್ಷಕ್ಕೆ ಲಾಭವಾಗುತ್ತದೆ. ಇಂತಹ ಷಡ್ಯಂತ್ರವನ್ನು ಮಾಡಿ ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ಆಪ್ ಪಕ್ಷದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಎಂದು ಗುರುತಿಸಲಾಗಿದೆ.
ಚುನಾವಣೆ ಎಂದರೆ ತಮಗೆ ಗೊತ್ತಿರುವ ರಾಜಕೀಯ ಪಟ್ಟುಗಳನ್ನು ಎದುರಾಳಿಯ ವಿರುದ್ಧ ಬಳಸುವುದು ಎಂದು ಇದ್ದರೂ ಕೆಳಮಟ್ಟದ ಇಂತಹ ರಾಜಕಾರಣ ಯಾವುದೇ ಪಕ್ಷದವರು ಮಾಡಬಾರದು. ಎದುರಾಳಿಯನ್ನು ಎದುರಿನಿಂದಲೇ ಎದುರಿಸುವುದು ನೈಜ ಯುದ್ಧವಾಗುತ್ತೆ. ಬೆನ್ನ ಹಿಂದೆ ನಿಂತು ಚೂರಿ ಹಾಕಿದರೆ ಅದು ಷಡ್ಯಂತ್ರ ಎನ್ನಲಾಗುತ್ತದೆ. ಆದರೆ ಮರೆಯಲ್ಲಿ ನಿಂತು ಬಾಂಬ್ ಬಿಸಾಡುವವರನ್ನು ಅದ್ಯಾವ ಕೆಟ್ಟ ಶಬ್ದದಿಂದ ಕರೆದರೂ ಕಡಿಮೆ. ಯಾಕೆಂದರೆ ಇಂತಹ ಕೃತ್ಯ ಮಾಡುವವನಿಗೆ ಎದುರಿಗೆ ನಿಂತು ಬಡಿದಾಡುವ ಧೈರ್ಯ ಇರುವುದಿಲ್ಲ. ಅವನು ಎದುರಾಳಿಯನ್ನು ಹೇಗಾದರೂ ಸೋಲಿಸಲು ತೆರೆಯ ಹಿಂದಿನಿಂದ ಪ್ರಯತ್ನ ಮಾಡುತ್ತಾ ಇರುತ್ತಾನೆ. ಅಂತಹುದೇ ಒಂದು ಪ್ರಯತ್ನವನ್ನು ಸಂತೋಷ್ ವಿರುದ್ಧ ಮಾಡಲಾಗಿದೆ.
ಲಿಂಗಾಯತರು ಬಿಜೆಪಿಯ ಬಹಳ ದೊಡ್ಡ ವೋಟ್ ಬ್ಯಾಂಕ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬಿ.ಎಸ್ ಯಡ್ಯೂರಪ್ಪ ಲಿಂಗಾಯತ ಸಮುದಾಯದ ಅನಭೀಷೇಕ್ತ ದೊರೆ. ಇಂತಹ ಸಂದರ್ಭದಲ್ಲಿ ಯಡ್ಡಿಯ ಬಗ್ಗೆ ಹಗುರವಾಗಿ ಯಾರಾದರೂ ಬಿಜೆಪಿಯ ಮುಖಂಡರು ಮಾತನಾಡುವುದು ಎಂದರೆ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಎತ್ತಿ ಹಾಕಿದ ಹಾಗೆ. ಇದನ್ನು ಅರಿತಿರುವ ಆರೋಪಿ ಯಡ್ಡಿಯ ಬಗ್ಗೆ ಸಂತೋಷ್ ಅವರು ಕೇವಲವಾಗಿ ಮಾತನಾಡಿದ್ದಾರೆ ಎನ್ನುವ ವಾಕ್ಯವನ್ನು ಬರೆದು ಪತ್ರಿಕೆಯಲ್ಲಿ ಪ್ರಿಂಟಾದಂತೆ ಚಿತ್ರಿಸಿದ್ದಾನೆ. ಅದನ್ನು ಓದಿದವರಿಗೆ ಬಿಜೆಪಿ ಲಿಂಗಾಯತರ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಭಾಸವಾಗುತ್ತದೆ. ಇದನ್ನು ಸಿದ್ದು ಮಾಧ್ಯಮ ಸಲಹೆಗಾರರಾಗಿ ಒಂದು ಕಾಲದಲ್ಲಿ ಇದ್ದವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹೆಚ್ಚು ಕಡಿಮೆ ಮೂರ್ನಾಕು ದಶಕಗಳಿಂದ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಅವರು “ಮುಟ್ಟು” ನೋಡದ ಪತ್ರಿಕೆಗಳಿಲ್ಲ ಎನ್ನಬಹುದು. ಅಂತವರಿಗೆ ಪತ್ರಿಕೆಯೊಂದರ ಫಾಂಟ್ ಹೇಗಿರಬಹುದು ಎನ್ನುವ ಕಲ್ಪನೆ ಮೇಲ್ನೋಟದಲ್ಲಿಯೇ ಗೊತ್ತಾಗುತ್ತದೆ. ಅಂತವರು ಕೂಡ ಇದು ನಿಜವಾದ ಪತ್ರಿಕೆಯ ಸ್ಕ್ರೀನ್ ಶಾಟ್ ಅಂದುಕೊಳ್ಳುವುದು ಇದೆಯಲ್ಲ, ಅದು ಅವರ ಅನುಭವ ಮಣ್ಣು ಎನ್ನುವುದು ಗೊತ್ತಾಗುತ್ತದೆ. ಅಂತವರು ಕೂಡ ಸಂತೋಷ್ ಅವರಿಗೆ ಟಾಂಗ್ ಇಟ್ಟು ಬರೆದಿದ್ದಾರೆ. ಈ ಮೂಲಕ ತಮ್ಮ ಆತ್ಮರತಿ ಮಾಡಿಕೊಂಡಿದ್ದಾರೆ.
ಇಂತಹ ಷಡ್ಯಂತ್ರ ಮಾಡಿದವರಿಗೆ ತಾವು ಬಿಜೆಪಿಯನ್ನು ಯಾವುದೇ ರೀತಿಯಲ್ಲಾದರೂ ಸೋಲಿಸಬೇಕೆಂಬ ಹಪಾಹಪಿ ಇದ್ದಿರಬೇಕು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮಂಗಳೂರಿನಲ್ಲಿ ಕೆಲವರು ಸೇರಿ ಕರಾವಳಿಯ ಪ್ರಸಿದ್ಧ ಪತ್ರಿಕೆಯ ಹೆಸರು ಬಳಸಿ ಪೂಜಾರಿಯವರ ಹೇಳಿಕೆ ಎಂಬ ಭಾವನೆ ಬರುವ ಹಾಗೆ ಷಡ್ಯಂತ್ರ ಮಾಡಿದ್ದರು. ಅವರ ತಂತ್ರ ಸಫಲವಾಗಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಹೀಗೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಡ್ಯಾಮೇಜ್ ಮಾಡುವ ಯತ್ನ ಮಾಡಲಾಗುತ್ತದೆ. ಯಾಕೆಂದರೆ ಇಂತಹ ಕೀಳುರುಚಿಯ ಸ್ಕ್ರೀನ್ ಶಾಟ್ ಗಳನ್ನು ವಾಟ್ಸಪ್ ಮೂಲಕ ಹರಡಿಸುವಾಗ ಇದೆಲ್ಲಾ ಗೊತ್ತಿಲ್ಲವರು ಓದಿ ವಿರುದ್ಧ ಮತ ಹಾಕುವ ಚಾನ್ಸ್ ಇರುತ್ತದೆ. ಇನ್ನು ಹಾಗೆ ಆಗಿ ಬಿಜೆಪಿಯ ಅಭ್ಯರ್ಥಿ ಸೋತರೆ ಆಗ ಅವರು ಸಂತೋಷ್ ಅವರ ಇಂತಹ ಹೇಳಿಕೆಗಳಿಂದ ಸೋಲು ಕಾಣುವಂತಾಯಿತು ಎಂದು ಹೇಳಿದರೂ ಅದು ಕೂಡ ಸಂತೋಷ್ ಅವರ ಗರಿಮೆಗೆ ದಕ್ಕೆಯಾಗುತ್ತದೆ. ಆದ್ದರಿಂದ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎನ್ನುವ ಮಾತಿದೆ. ಅದು ಚುನಾವಣೆಗೆ ನಾಲ್ಕೈದು ದಿನ ಇರುವಾಗ ಹೆಚ್ಚು ಅಗತ್ಯವಾಗಿ ನೆನಪಿಡಬೇಕಾದ ಸಂಗತಿ. ಇನ್ನು ಹೀಗೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು. ಅವರು ಒಂದಿಷ್ಟು ಕಾಲ ಜೈಲಿನಲ್ಲಿ ಕೊಳೆಯಬೇಕು. ಆಗ ಅವರಿಗೂ ಬುದ್ಧಿ ಬರುತ್ತದೆ! ನಾವು ಹಿಂದೂಗಳಾಗಿ ಇರುತ್ತೇವೆ. ನಮಗೆ ಲಿಂಗಾಯಿತರ ಅವಶ್ಯಕತೆ ಇಲ್ಲ ಎಂದು ಬಿ.ಎಲ್.ಸಂತೋಷ್ ಅವರು ಹೇಳದಿದ್ದರೂ ಪತ್ರಿಕೆಗಳಲ್ಲಿ ಸುದ್ದಿ ಬಂದಂತೆ ಮಾಡಿರುವ ದಿಲೀಪ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Leave A Reply