ರಾಜಕಾಲುವೆಗಳು ಸೊರಗುತ್ತಿವೆ!

ಒಂದು ದೊಡ್ಡ ಮಳೆ ಬಂದ ಕೂಡಲೇ ಮಂಗಳೂರಿನ ಮೂರು ಕಡೆ ಕೃತಕ ನೆರೆ ಎನ್ನುವುದು ನೂರಕ್ಕೆ ನೂರು ಗ್ಯಾರಂಟಿ. ಈ ಮೂರು ಕಡೆ ಕೃತಕ ನೆರೆ ಆಗಲು ಮೂರು ಬೇರೆ ಬೇರೆ ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ನೋಡಿಕೊಂಡು ಬರೋಣ. ಮೊದಲನೇಯದಾಗಿ ಟ್ರೋಲ್ ಗಳಿಂದ ವಿಶ್ವಪ್ರಸಿದ್ಧವಾಗಿರುವ ಪಂಪ್ ವೆಲ್ ಫ್ಲೈ ಒವರ್ ಅದನ್ನೇ ತೆಗೆದುಕೊಳ್ಳೋಣ. ಅಲ್ಲಿಯೂ ಈ ಮಳೆಗಾಲದಲ್ಲಿ ದೊಡ್ಡ ಮಳೆ ಬಂದ ತಕ್ಷಣ ಒಂದು ಸೈಡ್ ಕೃತಕ ಈಜುಕೊಳ ನಿರ್ಮಾಣವಾಗುತ್ತಿದೆ. ಹೀಗೆ ಆದ ಕೂಡಲೇ ಅಲ್ಲಿ ಬ್ಲಾಕ್ ಆದ, ಆಗದ, ಅದಕ್ಕೆ ಸಂಬಂಧಿಸದೇ ಇದ್ದ, ಈ ಊರಿನವರೇ ಅಲ್ಲದ ಆದರೂ ಅಲ್ಲಿನ ದೃಶ್ಯವನ್ನು ವಾಟ್ಸಪ್, ಎಫ್ ಬಿಯಲ್ಲಿ ನೋಡುವ ಜನರು ಮೊದಲು ಬೈಯುವುದು ಮಂಗಳೂರಿನ ಜನಪ್ರತಿನಿಧಿಗಳನ್ನು. ಹಾಗಾದರೆ ಇಲ್ಲಿನ ಜನಪ್ರತಿನಿಧಿಗಳು ಮಳೆಯ ನೀರನ್ನು ಬೇಕಂತಲೇ ಅಲ್ಲಿ ನಿಲ್ಲಿಸಿದ್ದರಾ? ಮೊದಲನೇಯದಾಗಿ ಭಾರಿ ಮಳೆ ಬಂದಿರುವುದು ನಿಜ. ಅದನ್ನು ಒಪ್ಪಿಕೊಳ್ಳೋಣ. ಆ ಭಾರಿ ಮಳೆ ನೀರಿಗೆ ಹೋಗಲು ಜಾಗ ಬೇಕಲ್ಲ. ಆ ಜಾಗ ಅಲ್ಲಿ ಇದೆಯಾ? ಇಲ್ಲ. ಯಾಕಿಲ್ಲ. ಯಾಕೆಂದರೆ ಅಲ್ಲಿರುವ ರಾಜಕಾಲುವೆ ಒತ್ತುವರಿಯಾಗಿದೆ. ಕಂಕನಾಡಿ ಜಂಕ್ಷನ್ ನಿಂದ ಪಂಪ್ ವೆಲ್ ಕಡೆಗೆ ಹೋಗುವ ಬೈಪಾಸ್ ರೋಡ್ ಒತ್ತುವರಿಯಾಗಿದೆ. ಅದನ್ನು ಯಾರು ಕೂಡ ಮಾತನಾಡುವುದಿಲ್ಲ. ನಿಮಗೆ ಒಂದು ವಿಷಯ ಗೊತ್ತಿರಬಹುದು. ಅದೇನೆಂದರೆ ಎಲ್ಲೆಲ್ಲಿ ಲೋ ಏರಿಯಾ ಇದೆಯೋ ಅಲ್ಲೆಲ್ಲಾ ರಾಜಕಾಲುವೆ ಇದೆ. ಅದು ಹಿಂದೆ ಬೃಹತ್ ರಾಜಕಾಲುವೆಯ ರೂಪ ತಳೆದಿತ್ತು. ಈಗ ಬರುಬರುತ್ತಾ ಅದು ಸೊರಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಒತ್ತುವರಿ. ಆರು ಮೀಟರ್ ಇದ್ದ ರಾಜಕಾಲುವೆ ಮುಂದಕ್ಕೆ ಹೋಗುತ್ತಿದ್ದಂತೆ ಮೂರು ಮೀಟರ್ ಆಗುತ್ತದೆ. ಆಗ ಆ ಪ್ರದೇಶದಲ್ಲಿ ಕೃತಕ ನೆರೆ ಎನ್ನುವುದು ಗ್ಯಾರಂಟಿ. ಈ ಕೃತಕ ನೆರೆಗೆ ಇನ್ನೊಂದು ಕಾರಣ ಏನೆಂದು ನೋಡುವುದಾದರೆ ರಸ್ತೆಗೆ ಬಿದ್ದ ನೀರು ಇಳಿದು ಹೋಗಲು ಡ್ರೇನ್ ನಿರ್ಮಿಸಲಾಗಿದೆ. ಆದರೆ ರಸ್ತೆಯಿಂದ ಚರಂಡಿಗೆ ಹೋಗಲು ಇರುವ ಕಿಂಡಿಯಾಕಾರದ ವ್ಯವಸ್ಥೆ ರಸ್ತೆಯಿಂದ ಎರಡ್ಮೂರು ಅಡಿ ಎತ್ತರದಲ್ಲಿ ಇರುವುದರಿಂದ ರಸ್ತೆಗೆ ಬಿದ್ದ ನೀರು ಅಷ್ಟೇ ಎತ್ತರಕ್ಕೆ ಹರಿಯಲು ಶುರು ಮಾಡಿದಾಗ ಮಾತ್ರ ಈ ಕಿಂಡಿಯಿಂದ ಚರಂಡಿಗೆ ಇಳಿದು ಹೋಗಲು ಸಾಧ್ಯ. ಆದರೆ ಬಹುತೇಕ ಕಡೆ ಇಂತಹ ಕಿಂಡಿಗಳನ್ನು ಸ್ವಚ್ಚ ಮಾಡಲೇ ಇಲ್ಲ. ಅಲ್ಲಿ ಈಗ ಪ್ಲಾಸ್ಟಿಕ್ ಸಹಿತ ಕೆಲವು ವಸ್ತುಗಳು ಕಿಂಡಿಗೆ ಅಡ್ಡವಾಗಿ ನಿಂತು ಸಮಸ್ಯೆಯನ್ನು ದೊಡ್ಡದು ಮಾಡಿ ಬಿಡುತ್ತವೆ. ಇದರಿಂದ ನೀರು ಸರಾಗವಾಗಿ ಇಳಿಯಲು ಅಲ್ಲಿ ಅಡಚಣೆ ಇದೆ. ಅದರೊಂದಿಗೆ ಕೃತಕ ನೆರೆ ಉಂಟಾಗುವ ಪ್ರದೇಶದಲ್ಲಿ ರಾಜಕಾಲುವೆಯ ಹೂಳನ್ನು ಸಾಧ್ಯವಾದಷ್ಟು ಡೀಪಾಗಿ ತೆಗೆಯಬೇಕು. ಅದನ್ನು ಮಾಡಿರದ ಸಂದರ್ಭದಲ್ಲಿ ಸಮಸ್ಯೆ ಗ್ಯಾರಂಟಿ. ಈಗ ಪ್ಲೈ ಒವರ್ ಅವೈಜ್ಞಾನಿಕವಾಗಿ ನಿರ್ಮಿತವಾಗಿರುವುದರ ಜೊತೆಗೆ ಇಂತಹ ಸಮಸ್ಯೆಗಳು ಸೇರಿ ಅಲ್ಲಿ ಕೃತಕ ನೆರೆಯನ್ನು ಸೃಷ್ಟಿಸಿಬಿಡುತ್ತದೆ. ಹಾಗಾದರೆ ಇದನ್ನು ಸರಿಪಡಿಸುವುದು ಹೇಗೆ? ಮೂರು ಪ್ರದೇಶದ ಈ ಕೃತಕ ನೆರೆಯ ಸಮಸ್ಯೆ ಹೇಳಿ ಪರಿಹಾರವನ್ನು ಒಮ್ಮೆಲ್ಲೆ ಯೋಚಿಸೋಣ.
ಪಾಲಿಕೆ ಮೇಲ್ಮನವಿ ಸಲ್ಲಿಸಲೇ ಇಲ್ಲ!
ಎರಡನೇಯದಾಗಿ ಕೊಟ್ಟಾರ ಚೌಕಿಯಲ್ಲಿ ಉಂಟಾಗುವ ಪರಂಪರಾಗತ ಕೃತಕ ನೆರೆಯ ಸಮಸ್ಯೆ. ಕೊಟ್ಟಾರ ಚೌಕಿಯಲ್ಲಿರುವ ರಾಜಕಾಲುವೆಯಲ್ಲಿಯೂ ಈ ಬಾರಿ ಡೀಪ್ ಆಗಿ ಹೂಳನ್ನು ತೆಗೆದಿಲ್ಲ. ಇನ್ನು ಕರಾವಳಿ ಕಾಲೇಜು ಬಳಿ ರಾಜಕಾಲುವೆಯ ಮೇಲೆ ಒಂದು ಸಂಪರ್ಕ ರಸ್ತೆ ಮಾದರಿಯಲ್ಲಿ ಕಿರು ಸೇತುವೆ ನಿರ್ಮಿಸಲಾಗಿದೆ. ಇದನ್ನು ಒತ್ತುವರಿ ಎಂದು ಜನರು ಹೇಳಿದರೆ ಅದಕ್ಕೆ ಸಂಬಂಧಪಟ್ಟವರು ಒತ್ತುವರಿ ಅಲ್ಲ ಎಂದು ಹೇಳುತ್ತಾರೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಾದ, ಪ್ರತಿವಾದಗಳು ನಡೆದು ನ್ಯಾಯಾಲಯದ ತೀರ್ಪು ಬಂದಿತ್ತು. ಆದರೆ ಆ ತೀರ್ಪಿನ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಮೇಲ್ಮನವಿ ಸಲ್ಲಿಸಲು ಹೋಗಲೇ ಇಲ್ಲ. ಇದರಿಂದ ಈ ಪ್ರದೇಶದಲ್ಲಿ ಈಗಲೂ ಕೃತಕ ನೆರೆ ಗ್ಯಾರಂಟಿ. ಕಾರಣ ಯಾರು? ಮೂರನೇ ಮತ್ತು ಕೊನೆಯ ಪ್ರದೇಶದ ಬರೆದು ಒಟ್ಟಿಗೆ ಆ ವಿಷಯಕ್ಕೆ ಬರೋಣ.
ರಾಜಕಾಲುವೆಗಳು ಸೊರಗುತ್ತಿವೆ!
ಅದು ಭೋಜರಾವ್ ಲೇನ್. ಅಳಕೆ, ಕುದ್ರೋಳಿ, ಮಣ್ಣಗುಡ್ಡೆಯ ಸೆರಗಿಗೆ ಅಂಟಿಕೊಂಡಿರುವ ಏರಿಯಾ ಇದು. ಇಲ್ಲಿ ರಾಜಕಾಲುವೆಗೆ ಬೃಹತ್ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಕಳೆದ ಆರು ತಿಂಗಳುಗಳಿಂದ ಈ ತಡೆಗೋಡೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆ ಕೆಲಸ ಮುಗಿಯದೇ ಇರುವುದರಿಂದ ಅಲ್ಲಿ ನೀರು ಹೋಗಲು ಸಮರ್ಪಕವಾದ ದಾರಿ ಇಲ್ಲ. ರಾಜ್ಯದ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಾಜಕಾಲುವೆಯ ತಡೆಗೋಡೆಯಿಂದ ಈ ರಾಜಕಾಲುವೆಯೇ ಕಿರಿದಾಗಿ ಹೋಗಿದೆ. ಈ ಬಗ್ಗೆ ಲಿಖಿತವಾಗಿ ದೂರು ಕೊಟ್ಟರೂ ಕ್ರಮ ತೆಗೆದುಕೊಳ್ಳಲು ಯಾರೂ ತಯಾರಿಲ್ಲ.
ಈ ಮೂರು ಪ್ರದೇಶಗಳಲ್ಲಿ ಭೋಜರಾವ್ ಲೇನ್ ಹಾಗೂ ಕೊಟ್ಟಾರ ಚೌಕಿಯ ಕೃತಕ ನೆರೆಗೆ ರಾಜಕಾಲುವೆಯನ್ನು ಕಿರಿದು ಮಾಡಿದ್ದೇ ಮುಖ್ಯ ಕಾರಣವಾಗಿದೆ. ಅದರೊಂದಿಗೆ ಪಂಪ್ ವೆಲ್ ಪ್ರದೇಶದಲ್ಲಿ ಸ್ಪೆಶಲ್ ಗ್ಯಾಂಗ್ ಅನ್ನು ಸರಿಯಾಗಿ ದುಡಿಸಿಕೊಂಡಿದ್ದರೆ ಸಮಸ್ಯೆಯನ್ನು ಪರಿಹರಿಸಬಹುದಿತ್ತು. ಮಳೆಗಾಲದಲ್ಲಿ ಪ್ರತಿ ತಿಂಗಳು ಸ್ಪೆಶಲ್ ಗ್ಯಾಂಗ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬಿಲ್ ತಯಾರಾಗುತ್ತದೆ. ಆದರೆ ಆ ಸ್ಪೆಶಲ್ ಗ್ಯಾಂಗ್ ಸರಿಯಾಗಿ ಕೆಲಸ ಮಾಡುತ್ತಾ? ಆ ಸ್ಪೆಶಲ್ ಗ್ಯಾಂಗ್ ಸರಿಯಾಗಿ ಕೆಲಸ ಮಾಡದೇ ಇರಲು ಪಾಲಿಕೆಯೇ ಕಾರಣವೇ? ಮಲಗಿರುವ ಪಾಲಿಕೆಯನ್ನು ಎಬ್ಬಿಸುವುದು ಯಾರು? ಸ್ಪೆಶಲ್ ಗ್ಯಾಂಗ್ ಬಿಲ್ ತಿಂದು ತೇಗುತ್ತಿರುವವರು ಪಂಪ್ ವೆಲ್, ಕೊಟ್ಟಾರ ಚೌಕಿ, ಭೋಜರಾವ್ ಲೇನ್ ಪರಿಸ್ಥಿತಿ ನೋಡಿಯೂ ಆರಾಮವಾಗಿದ್ದಾರೆ. ಹೆಸರು ಯಾರದ್ದೋ ಹಾಳಾಗುತ್ತಿದೆ!
Leave A Reply