ಆಸ್ಪತ್ರೆಗಳಲ್ಲಿಯೂ ಗಣಪತಿಯ ಗುಡಿ ಇರುತ್ತದೆ!
ನೀವು ವಿಜ್ಞಾನಿಯಾಗಿದ್ದರೆ ಅಥವಾ ವೈದ್ಯರಾಗಿದ್ದರೆ ದೇವರನ್ನು ನಂಬಬಾರದು ಎನ್ನುವ ಅಲಿಖಿತ ನಿಯಮವನ್ನು ಎಡಪಂಥಿಯರು ಹೊರಡಿಸಿದ್ದಾರೆ. ಅವರ ಪ್ರಕಾರ ವಿಜ್ಞಾನಿಗಳು ದೇವರಿಗೆ ಕೈ ಮುಗಿಯುವುದು, ಪೂಜೆ ಮಾಡಿಸುವುದೇ ಅಪರಾಧ. ಅದರಲ್ಲಿಯೂ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಬರುವುದು ಎಂದರೆ ಸಂವಿಧಾನ ವಿರೋಧಿ ಎಂದು ತಮ್ಮನ್ನು ಪ್ರಗತಿಪರರು ಎಂದು ಅಂದುಕೊಂಡಿರುವ ಕೆಲವು ಬುದ್ಧಿ(ಇದ್ದರೆ)ಜೀವಿಗಳು ಅಂದುಕೊಂಡಿದ್ದಾರೆ. ಅಂತವರು ಒಂದು ಪತ್ರವನ್ನು ಬರೆದು ಖಂಡನೆ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಚಂದ್ರಯಾನ 3 ರ ಉಡಾವಣೆಯ ಮೊದಲು ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿರುವುದು ತಪ್ಪು ಎನ್ನುವುದು ಅಭಿಮತವಾಗಿದೆ. ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲದಿದ್ದರೆ ಮಾತ್ರ ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಕೃತ್ಯವನ್ನು ವಿಜ್ಞಾನಿಗಳು ಮಾಡಲು ಸಾಧ್ಯವಿದೆ ಎನ್ನುವ ಅರ್ಥದ ಬರಹವನ್ನು ಮುದ್ರಿಸಿ ಈ ನಡೆ ಖಂಡನೀಯ ಎಂದು ಹೇಳಲಾಗಿದೆ. ಇಲ್ಲಿ ಇರುವ ವಿಷಯ ಏನೆಂದರೆ ಚೀನಾ ಮಾನಸಿಕತೆಯ ಎಡಚರರಿಗೆ ಭಾರತ ಇಂತಹ ಒಂದು ದೊಡ್ಡ ಸಾಧನೆ ಮಾಡಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅವರು ವಿರೋಧವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅದು ಬಿಟ್ಟು ಇಸ್ರೋ ವಿಜ್ಞಾನಿಗಳು ಸರಕಾರದ ಸಂಬಳ ಪಡೆಯುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ದೇವಸ್ಥಾನಕ್ಕೆ ಹೋಗಿ ಚಂದ್ರಯಾನ ಯೋಜನೆ ಯಶಸ್ವಿಯಾಗಲು ಪ್ರಾರ್ಥಿಸಬಾರದು ಎನ್ನುವುದು ಸರಿಯಾ?
ಆಸ್ಪತ್ರೆಗಳಲ್ಲಿಯೂ ಗಣಪತಿಯ ಗುಡಿ ಇರುತ್ತದೆ!
ಒಂದು ಮಗು ಅದು ಯಾವುದೇ ಧರ್ಮದಲ್ಲಿ ಹುಟ್ಟಲಿ, ಬಾಲ್ಯದಿಂದಲೇ ಮಗುವಿನ ಪೋಷಕರು ತಮ್ಮ ಧರ್ಮದ ಬಗ್ಗೆ ನಂಬಿಕೆಯ ಭಾವನೆಯನ್ನು ಉಂಟು ಮಾಡಿ ಮಕ್ಕಳನ್ನು ಬೆಳೆಸುತ್ತಾರೆ. ಅದರಲ್ಲಿಯೂ ಹಿಂದೂಗಳಿಗೆ ಅವರ ಪೋಷಕರು ಆಸ್ತಿಕರಾಗಿದ್ದರೆ ಎಳೆಪ್ರಾಯದಲ್ಲಿಯೇ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವುದು, ಅಲ್ಲಿ ಪ್ರಾರ್ಥಿಸುವುದು ಹೇಳಿಕೊಟ್ಟಿರುತ್ತಾರೆ. ಯಾವುದಾದರೂ ಸಂಕಷ್ಟದ ಸನ್ನಿವೇಶದಲ್ಲಿ ದೇವರಿಗೆ ಪ್ರಾರ್ಥಿಸುವುದು, ಸ್ಮರಿಸುವುದು ಎಲ್ಲವನ್ನು ಮಕ್ಕಳು ಪೋಷಕರಿಂದ ನೋಡಿ ಕಲಿತುಕೊಳ್ಳುತ್ತಾರೆ. ಇದು ಎಲ್ಲಾ ಕಡೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಎಷ್ಟೋ ಕಡೆ ಆಸ್ಪತ್ರೆಯ ಆಪರೇಶನ್ ಥಿಯೇಟರ್ ನಲ್ಲಿ ದೇವರ ಫೋಟೋ ಇಟ್ಟಿರುತ್ತಾರೆ. ಆಸ್ಪತ್ರೆಗಳಲ್ಲಿ ಅದರ ವಿಸ್ತ್ರೀರ್ಣಕ್ಕೆ ತಕ್ಕಂತೆ ಸಣ್ಣ, ದೊಡ್ಡ ಗಣಪತಿಯ ಗುಡಿಗಳು ಇರುವುದು ಕಾಮನ್. ಹಾಗಂತ ಆಸ್ಪತ್ರೆಗಳಲ್ಲಿ ಗಣಪತಿಯ ಗುಡಿಗಳು ಯಾಕೆ? ವೈದ್ಯರಿಗೆ ತಮ್ಮ ಮೇಲೆ ನಂಬಿಕೆ ಇಲ್ವಾ? ತಮ್ಮ ಕೆಲಸದ ಮೇಲೆ ವಿಶ್ವಾಸ ಇಲ್ವಾ ಎನ್ನುವಂತಹ ಪ್ರಶ್ನೆಗಳನ್ನು ಬುದ್ಧಿ(ಗೆಟ್ಟ)ಜೀವಿಗಳು ಹಾಕಬಹುದು. ಬೇಕಾದರೆ ಕಮ್ಯೂನಿಸ್ಟರು ಅಂತಹ ಆಸ್ಪತ್ರೆಗೆ ಅಡ್ಮಿಟ್ ಆಗುವುದು ಬೇಡಾ. ಆದರೆ ಬಹುಸಂಖ್ಯಾತ ಜನರ ಭಾವನೆಗಳಿಗೆ ದಕ್ಕೆ ತರುವುದು ಯಾಕೆ? ಅದೇ ರೀತಿಯಲ್ಲಿ ಪೊಲೀಸ್ ಠಾಣೆಗಳಲ್ಲಿ ದೇವರ ಫೋಟೋವನ್ನು ಹಾಕಿದರೂ ಇವರು ಹೀಗೆ ಹೇಳಬಹುದು. ಪೊಲೀಸರಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಇಲ್ವಾ ಎಂದು ಕೇಳಬಹುದು. ಈ ಕಮ್ಯೂನಿಸ್ಟರ ಸಿದ್ಧಾಂತ ಏನೆಂದರೆ ಮನುಷ್ಯ ಹೆಚ್ಚೆಚ್ಚು ವಿದ್ಯಾರ್ಹತೆ ಹೊಂದುತ್ತಿದ್ದಂತೆ ಆತ ದೇವರನ್ನು ನಂಬಬಾರದು. ದೇವರಿಗೆ ಕೈ ಮುಗಿಯಬಾರದು. ದೇವರಿಗೆ ಪೂಜೆ ಸಲ್ಲಿಸುವುದು ಬಿಡಿ, ದೇವಸ್ಥಾನದ ಕಡೆ ತಲೆ ಹಾಕಿ ಮಲಗಬಾರದು ಎನ್ನುವ ಧೋರಣೆಯನ್ನು ಇಟ್ಟುಕೊಂಡಿರುತ್ತಾರೆ. ಹಾಗಂತ ಹೆಚ್ಚಿನ ಬಾರಿ ಇದು ಹೇಳಿಕೆಗೆ ಮಾತ್ರ ಸೀಮಿತವಾಗಿರುವುದು ಇದೆ.
ಕಮ್ಯೂನಿಸ್ಟರು ಕೂಡ ಗುಟ್ಟಾಗಿ ದೇವರನ್ನು ನಂಬುತ್ತಾರೆ!
ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಕಮ್ಯೂನಿಸ್ಟ್ ನಾಯಕ ಶ್ರೀಯಾನ್ ಅವರ ಮನೆಯಲ್ಲಿ ಕೋಲವನ್ನು ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೋಲ ಎಂದರೆ ತುಳುನಾಡಿನ ಜನರು ತಮ್ಮ ಮನೆಗಳಲ್ಲಿ ನಡೆಸುವ ದೈವದೇವರುಗಳ ಆರಾಧನೆಯ ಒಂದು ಭಾಗ. ಹಾಗಾದರೆ ಅವರು ದೈವಗಳನ್ನು ನಂಬುತ್ತಿದ್ದರು ಎಂದೇ ಅರ್ಥ ಅಲ್ಲವೇ? ವಿದೇಶಗಳಲ್ಲಿ ಕಮ್ಯೂನಿಸ್ಟರು ಹೇಗೆ ಬೇಕಾದರೆ ತಮ್ಮ ನಿಲುವನ್ನು ತೋರ್ಪಡಿಸಬಹುದು. ಆದರೆ ಸನಾತನ ಮಣ್ಣಿನಲ್ಲಿ ಹುಟ್ಟಿರುವವರು ಅಷ್ಟು ಬೇಗ ದೇವಸ್ಥಾನಗಳಿಗೆ ಹೋಗುವುದಕ್ಕೆ ವಿಜ್ಞಾನಿಗಳಿಗೆ ಆಕ್ಷೇಪ ಮಾಡಿರುವುದು ಸರಿಯಲ್ಲ. ಅಷ್ಟಕ್ಕೂ ಇಸ್ರೋ ವಿಜ್ಞಾನಿಗಳು ತಾವು ಏನೂ ಮಾಡದೇ ಕೇವಲ ದೇವರನ್ನು ಮಾತ್ರ ನಂಬಿ ಚಂದ್ರಯಾನ ಉಡಾವಣೆಗೆ ಮುಂದಾಗಿರಲಿಲ್ಲ. ಅವರು ತಮ್ಮ ಗರಿಷ್ಟ ಪ್ರಯತ್ನವನ್ನು ಮಾಡಿದ್ದಾರೆ. ಕೊನೆಗೆ ದೇವರಿಗೆ ಪ್ರಾರ್ಥಿಸಿದನ್ನು ಸಂವಿಧಾನ ವಿರೋಧಿ ಎಂದು ಹೇಳುವ ಮೂಲಕ ಎಡಪಂಥಿಯರು ಅಲ್ಲೂ ಕೂಡ ತಮ್ಮ ಕಡ್ಡಿ ಅಲ್ಲಾಡಿಸಿದ್ದಾರೆ. ಸದ್ಯ ಇಮೇಜ್ ಹಾಳಾಗಿರುವುದು ಅವರದ್ದೇ ವಿನ: ವಿಜ್ಞಾನಿಗಳದ್ದು ಅಲ್ಲ. ಇಷ್ಟಾಗಿಯೂ ಚಂದ್ರಯಾನ -3 ಯಶಸ್ವಿಯಾಗಿರುವುದರಿಂದ ಈ ಕ್ರೆಡಿಟ್ ಮೋದಿಗೆ ಅಥವಾ ವಿಜ್ಞಾನಿಗಳಿಗೆ ಕೊಡಲು ಆಗುವುದಿಲ್ಲ. ಅದನ್ನು ತಿರುಪತಿ ತಿಮ್ಮಪ್ಪನಿಗೆ ಕೊಡಬೇಕು ಎಂದು ಈ ಎಡಪಂಥಿಯರು ಬೇಕಾದರೆ ಹೇಳಿಕೊಳ್ಳಲಿ!
Leave A Reply