ಸಮಯಕ್ಕೆ ಸಿಗದ ಆಂಬ್ಯುಲೆನ್ಸ್ ವೆಂಟಿಲೇಟರ್; ಉಸಿರು ನಿಲ್ಲಿಸಿದ 3 ತಿಂಗಳ ಮಗು
ಸರಿಯಾದ ಸಮಯಕ್ಕೆ ಸರ್ಕಾರಿ ವೆಂಟಿಲೇಟರ್ ಆಂಬ್ಯುಲೆನ್ಸ್ ಸಿಗದ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ 3 ತಿಂಗಳ ಗಂಡು ಮಗು ಮೃತಪಟ್ಟಿದೆ. ತಾಲೂಕಿನ ಕಿನ್ನರ ಮೂಲದ ರಾಜೇಶ್ ನಾಗೇಕರ್ ಎಂಬವರ ಮಗು ರಾಜನ್ ಮೃತಪಟ್ಟಿದೆ.
ರಾಜೇಶ್ ಅವರ ಮಗು ಕಫದಿಂದ ಬಳಲುತ್ತಿದ್ದ ಹಿನ್ನೆಲೆ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣಕ್ಕೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನದಿಂದ ಪಿಡಿಯಾಟ್ರಿಕ್ ಐಸಿಯೂನಲ್ಲಿ ವೆಂಟಿಲೇಟರ್ ಅಳವಡಿಸಿ ಮಗುವಿಗೆ ಚಿಕಿತ್ಸೆ ಕೊಡಲಾಗುತಿತ್ತು.
ಆದರೆ ಮಗುವಿಗೆ ಕಫ ಕಡಿಮೆಯಾಗದೆ ತೀವ್ರ ಅಸ್ವಸ್ಥಗೊಂಡಿದ್ದ ಕಾರಣಕ್ಕೆ ಮಗುವಿನ ಪಾಲಕರು ಚಿಕಿತ್ಸೆ ಸಾಧ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದರು. ಇದಕ್ಕೆ ಆಸ್ಪತ್ರೆಯವರು ಅನುಮತಿ ನೀಡಿದ್ದರಾದರೂ ಪಿಡಿಯಾಟ್ರಿಕ್ ವೆಂಟಿಲೇಟರ್ ಆಂಬ್ಯುಲೆನ್ಸ್ ಇಲ್ಲದ ಕಾರಣ ಉಡುಪಿಯ ಆಂಬುಲೆನ್ಸ್ ತರಿಸಲಾಗಿತ್ತು. ಆದರೆ ಆಂಬ್ಯುಲೆನ್ಸ್ ಬರುವ ವೇಳೆಗಾಗಲೇ ಮಗು ಕೊನೆಯುಸಿರೆಳೆದಿದೆ. ರಾಜೇಶ್ ದಂಪತಿಗೆ ಮದುವೆಯಾಗಿ 5 ವರ್ಷದ ಬಳಿಕ ಈ ಗಂಡು ಮಗು ಹುಟ್ಟಿತ್ತು. ಆದರೆ ಇದೀಗ ಮಗು ಕಳೆದುಕೊಂಡು ದಂಪತಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ಆಸ್ಪತ್ರೆ ವ್ಯವಸ್ಥೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳೀಯರ ಜತೆಗೂಡಿ ಪೋಷಕರು ಆಸ್ಪತ್ರೆ ಎದುರು ಮೃತ ಹಸುಗೂಸು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗುವಿಗೆ ಮೂರು ದಿನದಿಂದ ಪೀಡಿಯಾಟ್ರಿಕ್ಸ್ ಐಸಿಯುನಲ್ಲಿರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಂಪು ವಾತಾವರಣದಿಂದ ಮಗುವಿಗೆ ನ್ಯುಮೋನಿಯಾ ರೀತಿಯಲ್ಲಿ ಸಮಸ್ಯೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವೆಂಟಿಲೇಟರ್ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಆಂಬ್ಯುಲೆನ್ಸ್ ಕರೆಸಿ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ದುರದೃಷ್ಟವಶಾತ್ ಸಾವನ್ನಪ್ಪಿದೆ ಎಂದು ಜಿಲ್ಲಾಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಹೆಚ್‌ಓಡಿ ಡಾ. ರಾಜಕುಮಾರ ಮರೋಳ ತಿಳಿಸಿದ್ದಾರೆ.
Leave A Reply