ನಂದಿನಿ ತುಪ್ಪದಿಂದ ಇನ್ನು ತಿರುಪತಿ ಲಡ್ಡು ಮಾಡಲಾಗುವುದಿಲ್ಲ!
ತಿರುಪತಿ ಲಡ್ಡುವಿನ ರುಚಿಗೆ ವೆಂಕಟರಮಣನ ಭಕ್ತರಲ್ಲಿ ಮಾರು ಹೋಗದವರು ಯಾರೂ ಇಲ್ಲ. ಒಂದು ಕಡೆ ಪರಮ ಭಕ್ತಿಭಾವದಿಂದ ಕಣ್ಣಿಗೆ ಒತ್ತಿಕೊಂಡು ಲಡ್ಡು ಪ್ರಸಾದವನ್ನು ಬಾಯಿಯಲ್ಲಿ ಹಾಕಿಕೊಂಡರೆ ಲಡ್ಡು ಕೂಡ ಅಷ್ಟೇ ರುಚಿಯಾಗಿ ನಮ್ಮ ದೇಹ, ಮನಸ್ಸನ್ನು ಹರ್ಷ ಉಲ್ಲಾಸಗೊಳಿಸುತ್ತಿತ್ತು. ಅದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಲಡ್ಡು ತಯಾರಿಕೆಯಲ್ಲಿ ಬಳಕೆಯಾಗುತ್ತಿದ್ದ ತುಪ್ಪ. ಆ ತುಪ್ಪ ಬೇರೆ ಎಲ್ಲಿಯದ್ದು, ಅಲ್ಲ, ನಮ್ಮದೇ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ. ಇನ್ನು ಮುಂದೆ ತಿರುಪತಿಯ ಲಡ್ಡುವಿಗೆ ನಂದಿನಿ ತುಪ್ಪ ಬಳಕೆಯಾಗುವುದಿಲ್ಲ.
ಈ ಕುರಿತು ಮಾಹಿತಿ ನೀಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಅವರು ಕೆಎಂಎಫ್ ಸಂಸ್ಥೆ ಬಿಡ್ ಮಾಡಿದ ಮೌಲ್ಯವನ್ನು ಟಿಟಿಡಿ ಅಂಗೀಕರಿಸಿಲ್ಲ. ಅದರ ಬದಲು ಕೆಎಂಎಫ್ ಗಿಂತ ಕಡಿಮೆ ಬಿಡ್ ಮಾಡಿದ ಕಂಪೆನಿಗೆ ಗುತ್ತಿಗೆಯನ್ನು ವಹಿಸಿಕೊಡಲಿದೆ. ನಂದಿನಿ ತುಪ್ಪದಿಂದ ಮಾಡುವ ಲಡ್ಡುಗಳು ತುಂಬಾ ರುಚಿಕರವಾಗಿರುತ್ತವೆ ಎನ್ನುವ ಭಕ್ತರ ಅಭಿಪ್ರಾಯಗಳ ಹೊರತಾಗಿಯೂ ಕಡಿಮೆ ದರಕ್ಕೆ ಲಡ್ಡುಗಳನ್ನು ತಯಾರಿಸಬಹುದು ಎನ್ನುವ ಕಾರಣಕ್ಕೆ ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ಅಗಸ್ಟ್ 1 ರಿಂದ ಕರ್ನಾಟಕದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರಗಳು ಹೆಚ್ಚಳವಾಗುತ್ತಿರುವುದರಿಂದ ಟಿಟಿಡಿಗೆ ಪೂರೈಸುತ್ತಿದ್ದ ತುಪ್ಪದ ಬೆಲೆಯನ್ನು ಕೂಡ ಕೆಎಂಎಫ್ ಹೆಚ್ಚಿಸಿತ್ತು. ಕೆಎಂಎಫ್ ತುಪ್ಪ ತನ್ನ ಗುಣಮಟ್ಟದಿಂದ ಅಂತರಾಷ್ಟ್ರೀಯ ಮಾನ್ಯತೆಯನ್ನು ಕೂಡ ಪಡೆದುಕೊಂಡಿದ್ದು, ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇನ್ನು ಮುಂದೆ ತಿರುಪತಿ ಲಡ್ಡುವಿನಲ್ಲಿ ಕೆಎಂಎಫ್ ತುಪ್ಪ ಬಳಕೆಯಾಗದೇ ಇರುವುದರಿಂದ ಲಡ್ಡುವಿನ ರುಚಿಯಲ್ಲಿ ಏನಾದರೂ ಬದಲಾವಣೆ ಆಗುತ್ತದಾ ಎನ್ನುವುದನ್ನು ಕಾದು ನೋಡಬೇಕು!
Leave A Reply