ಸಿಲೆಂಡರ್ ಬೆಲೆ ಇಳಿದಾಗ ದರಗಳನ್ನು ಇಳಿಸುತ್ತಾರಾ?
ಗ್ಯಾಸ್ ಸಿಲೆಂಡರ್ ಬೆಲೆ ನೂರು ರೂಪಾಯಿಯಷ್ಟು ಇಳಿಕೆಯಾಗಿದೆ. ಈ ಬೆಲೆ ಇಳಿಕೆ ಕೇವಲ ವಾಣಿಜ್ಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಇದರಿಂದ ವ್ಯಾಪಾರಿ, ಹೋಟೇಲ್ ವರ್ಗದವರಿಗೆ ಬೆಲೆ ಇಳಿಕೆ ಕೊಂಚ ನೆಮ್ಮದಿಯನ್ನು ತಂದಿರಬಹುದು. ಭಾರತ್, ಇಂಡೇನ್, ಎಚ್ ಪಿಯಂತಹ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲೆಂಡರ್ ಬೆಲೆಯನ್ನು ಇಳಿಸಿವೆ. ಗೃಹ ಬಳಕೆಯ 14.2 ಕೆಜಿ ಸಿಲೆಂಡರ್ ಬೆಲೆ ಸ್ಥಿರವಾಗಿದೆ. ಕೊನೆಯ ಬಾರಿ ಮಾರ್ಚ್ ನಲ್ಲಿ ಸಿಲೆಂಡರ್ ಬೆಲೆ ಬದಲಾಗಿತ್ತು. ಸದ್ಯ 14.2 ಕೆಜಿ ಸಿಲೆಂಡರ್ ಬೆಲೆ 1,103 ರೂಪಾಯಿ ಇದೆ.
ಹಾಲಿನ ಬೆಲೆ ರಾಜ್ಯದಲ್ಲಿ ಮೂರು ರೂಪಾಯಿ ಲೀಟರಿಗೆ ಹೆಚ್ಚಿದ ಬೆನ್ನಲ್ಲೇ ಹೋಟೇಲುಗಳಲ್ಲಿ ಕಾಫಿ, ಟೀ ಬೆಲೆಯೂ ಎರಡರಿಂದ ಮೂರು ರೂಪಾಯಿ ಹೆಚ್ಚಿಸುವ ಕೆಲಸ ನಡೆದಿತ್ತು. ಅದೇ ರೀತಿಯಲ್ಲಿ ತಿಂಡಿಗಳಿಗೆ ಐದರಿಂದ ಏಳು ರೂಪಾಯಿ ಹಾಗೂ ಊಟಕ್ಕೆ ಹತ್ತರಿಂದ ಹದಿನೈದು ರೂಪಾಯಿ ಹೆಚ್ಚಿಸಲು ಹೋಟೇಲು ಮಾಲೀಕರ ಸಂಘ ನಿರ್ಧರಿಸಿದೆ. ಹಿಂದೆ ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳವಾದಾಗ ಕೇಂದ್ರ ಸರಕಾರವನ್ನು ಎಲ್ಲರೂ ದೂರುತ್ತಿದ್ದರು. ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳವಾಗಿರುವುದರಿಂದ ನಾವು ದರಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೋಟೇಲು ಮಾಲೀಕರು ಹೇಳುತ್ತಿದ್ದರು. ಈಗ ವಾಣಿಜ್ಯ ಸಿಲೆಂಡರ್ ಗಳಿಗೆ ನೂರು ರೂಪಾಯಿ ಇಳಿಸುವ ಮೂಲಕ ಹೋಟೇಲುಗಳ ಮಾಲೀಕರಿಗೆ ತಮ್ಮ ಆಹಾರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದಂತೆ ಕೇಂದ್ರ ಪರೋಕ್ಷ ಸಲಹೆ ನೀಡಿದಂತೆ ಆಗಿದೆ. ಆದರೆ ಯಾವುದೇ ವಸ್ತುಗಳ ಬೆಲೆ ಹೆಚ್ಚಳವಾಗುವಾಗ ತಮ್ಮ ದರಗಳನ್ನು ಕೂಡ ಅದೇ ರೀತಿಯಲ್ಲಿ ಹೆಚ್ಚಿಸುವ ಹೋಟೇಲಿನವರು ಅದೇ ಅಡುಗೆ ಅನಿಲ ಸಿಲೆಂಡರ್ ಬೆಲೆ ಇಳಿದಾಗ ದರಗಳನ್ನು ಇಳಿಸುತ್ತಾರಾ ಎನ್ನುವುದು ಜನಸಾಮಾನ್ಯರ ಪ್ರಶ್ನೆ.
Leave A Reply